“ನಾವು ಉಸಿರಾಡುವ ಆಮ್ಲಜನಕವನ್ನು ಮರಗಿಡಗಳು ಮಾತ್ರ ನೀಡಲು ಸಾಧ್ಯ. ಆದ್ದರಿಂದ ಪ್ರತಿಯೊಬ್ಬರೂ ಪ್ರತಿವರ್ಷ ಐದು ಸಸಿಗಳನ್ನು ಹಾಕಿ ಬೆಳೆಸುವ ಪ್ರತಿಜ್ಞೆ ಮಾಡಬೇಕಿದೆ. ಪರಿಸರಕ್ಕೆ ಹಾನಿಯಾಗುವಂತಹ ವಸ್ತುಗಳ ಬಳಕೆ ನಿಲ್ಲಿಸಬೇಕಿದೆ. ಆ ಮೂಲಕ ಪರಿಸರ ಉಳಿಸುವ ಬದ್ಧತೆಗೆ ಎಲ್ಲರೂ ಕೈ ಜೋಡಿಸಬೇಕಾದ ಅಗತ್ಯವಿದೆ ಎಂದು ರಾಜ್ಯ ರೈತ ಸಂಘ, ಹಸಿರು ಸೇನೆ ಅಧ್ಯಕ್ಷ ಎಚ್.ಆರ್.ಬಸವರಾಜಪ್ಪ ಹೇಳಿದರು.
ಶಿವಮೊಗ್ಗದಲ್ಲಿ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಹಾಗೂ ರೋಟರಿ ಕ್ಲಬ್ ಸೆಂಟ್ರಲ್ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಹಸಿರು ಮತ್ತು ನೀರು ಜಾಗೃತಿ ಕಾರ್ಯಕ್ರಮ ಮತ್ತು ಪ್ರಗತಿಪರ ರೈತರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

“ಹಸಿರು ಮತ್ತು ನೀರಿನ ಬಗ್ಗೆ ಜಾಗೃತಿ ಮೂಡಿಸುವ ಈ ಕಾರ್ಯಕ್ರಮ ತುಂಬಾ ಒಳ್ಳೆಯ ವಿಷಯ. ಇವೆರಡು ನಮ್ಮ ಜೀವನದಲ್ಲಿ ಅತ್ಯವಶ್ಯಕ. ಪ್ರಕೃತಿಯನ್ನು ಕಾಪಾಡಿಕೊಳ್ಳಬೇಕು. ಅಭಿವೃದ್ಧಿ ಹೆಸರಿನಲ್ಲಿ ನಾಶ ಮಾಡುವಷ್ಟು ಮರಗಿಡಗಳನ್ನ ಮತ್ತೆ ಬೆಳೆಸುತ್ತಿಲ್ಲ. ನಾವು ಉಸಿರಾಡುವ ಆಮ್ಲಜನಕವನ್ನು ಮರಗಿಡಗಳು ಮಾತ್ರ ನೀಡಲು ಸಾಧ್ಯ. ಹಿಂದಿನ ಕಾಲದಲ್ಲಿ ನಾವುಗಳು ಯಾವುದೇ ರಾಸಾಯನಿಕ ಗೊಬ್ಬರವನ್ನು ಹಾಕದೆ ಬೆಳೆ ಬೆಳೆದು ದೇಶದ ಜನರಿಗೆ ಕೊಡುತ್ತಿದ್ದೆವು. ಈಗ ಮತ್ತೇ ಆ ಸಾವಯವ ಪದ್ದತಿಯನ್ನು ಅನುಸರಿಸಿ ಬೆಳೆ ಬೆಳೆಯಬೇಕು ಈ ಸಂಸ್ಕೃತಿಯನ್ನ ಪ್ರತಿಯೊಬ್ಬರೂ ರೂಢಿಸಿಕೊಳ್ಳಬೇಕು” ಎಂದು ಕರೆ ನೀಡಿದರು.
“ನೀರಿಗಾಗಿ ಈಗಾಗಲೇ ಹೊಡೆದಾಟ ಶುರುವಾಗಿದೆ ಅಂದರೆ ನೀರು ನಮಗೆ ಎಷ್ಟು ಮಹತ್ವವಿದೆ ಎಂಬುದನ್ನ ಅರಿಯಬೇಕಿದೆ. ಸಾವಿರಾರು ಕೆರೆಗಳನ್ನ ಮುಚ್ಚಿಹಾಕಿ ಅಭಿವೃದ್ಧಿ ಮಾಡುತ್ತಿದ್ದೇವೆ. ನೀರನ್ನು ಭೂಮಿಯಲ್ಲಿ ಇಂಗಿಸುವ ಕೆಲಸ ಮಾಡಬೇಕಿದೆ. ನಮ್ಮ ಮಲೆನಾಡಿನ ಕೆರೆಕಟ್ಟೆಗಳ ವಿಶೇಷವೆಂದರೆ, ಒಂದು ಕರೆ ಕೋಡಿ ಬಿದ್ದರೆ ಇನ್ನೊಂದು ಕೆರೆಗೆ ಹೋಗಿ ಸೇರುತ್ತದೆ. ಇಂತಹ ಒಂದು ವಿಜ್ಞಾನವನ್ನು ಆಗಿನ ಕಾಲದಲ್ಲಿ ರೈತರು ಕಂಡುಹಿಡಿದಿದ್ದರು. ಈ ಕೆರೆಕಟ್ಟೆಗಳನ್ನು ಉಳಿಸಿಕೊಳ್ಳುವ ಕೆಲಸ ಮಾಡಬೇಕಿದೆ” ಎಂದು ಎಚ್.ಆರ್.ಬಸವರಾಜಪ್ಪ ತಿಳಿಸಿದರು.

ಸಾವಯವ ಕೃಷಿ ಪದ್ದತಿಯನ್ನು ಅನುಸರಿಸಿ ವ್ಯವಸಾಯ ಮಾಡುತ್ತಿರುವ ರೈತ ಸಂಘದ ರಾಜ್ಯ ಉಪಾಧ್ಯಕ್ಷರಾದ ಹಿಟ್ಟೂರು ರಾಜು, ಜಿಲ್ಲಾಧ್ಯಕ್ಷರಾದ ಕೆ. ರಾಘವೇಂದ್ರ, ಜಿಲ್ಲಾ ಕಾರ್ಯಾಧ್ಯಕ್ಷರಾದ ಪಿ.ಡಿ ಮಂಜಪ್ಪ, ಹನುಮಂತಾಪುರ ದೇವೇಂದ್ರಪ್ಪ ಇನ್ನೂ ಹಲವರಿಗೆ ಸನ್ಮಾನಿಸಲಾಯಿತು.
ಇದನ್ನು ಓದಿದ್ದೀರಾ? ಕ್ಷೇತ್ರದ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ: ತಮ್ಮದೇ ಸರ್ಕಾರದ ವಿರುದ್ಧ ಹರಿಹಾಯ್ದ ಶಾಸಕ ರಾಜು ಕಾಗೆ
ಈ ಸಂದರ್ಭದಲ್ಲಿ ಶಿವಮೊಗ್ಗ ಬಸವ ಕೇಂದ್ರದ ಬಸವ ಮರುಳಸಿದ್ದ ಸ್ವಾಮೀಜಿಯವರು ದಿವ್ಯಸಾನಿಧ್ಯವನ್ನು ವಹಿಸಿದ್ದರು. ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ಅಧ್ಯಕ್ಷ ಕಿರಣ್ ಕುಮಾರ್, ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಆರ್ ಸಿ ಜಗದೀಶ್, ರೋಟರಿ ಜಿಲ್ಲೆ 3182 ಜಿಲ್ಲಾ ಗವರ್ನರ್ ಸಿಎ ದೇವಾನಂದ್ ಹಲವರು ಉಪಸ್ಥಿತರಿದ್ದರು.


