ಕೃಷಿಗೆ ಸಂಬಂಧಿಸಿ ವಿಶ್ವವಿದ್ಯಾಲಯಗಳಲ್ಲಿ ಸಾಕಷ್ಟು ಸಂಶೋಧನೆಗಳು ನಡೆಯುತ್ತಿವೆ. ರೈತರು ಅವುಗಳ ಉಪಯೋಗ ಪಡೆದುಕೊಳ್ಳಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ರಾಜ್ಯಾಧ್ಯಕ್ಷರಾದ ಹೆಚ್.ಆರ್ ಬಸವರಾಜಪ್ಪ ಕರೆ ನೀಡಿದರು.
ಶಿವಮೊಗ್ಗದಲ್ಲಿ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಶಿವಮೊಗ್ಗ ಇವರು ಹಮ್ಮಿಕೊಂಡಿದ್ದ ಕೃಷಿ-ತೋಟಗಾರಿಕಾ ಮೇಳ-2024 ರ ಮೊದಲ ದಿನವಾದ ಇಂದು ತಾಂತ್ರಿಕ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು.

“ಇವತ್ತು ವಿಶ್ವವಿದ್ಯಾಲಯದವರು ಕೃಷಿಮೇಳದಲ್ಲಿ ತಾಂತ್ರಿಕ ಸಮಾವೇಶವನ್ನು ಹಮ್ಮಿಕೊಂಡಿರುವುದು ಸಂತಸದ ಸಂಗತಿ. ಪೌಷ್ಟಿಕ ಆಹಾರವನ್ನು ನಾವು ಊಟ ಮಾಡಬೇಕು. ಜೊತೆಯಲ್ಲಿರುವವರಿಗೂ ಕೊಡುವ ಕೆಲಸ ಮಾಡಬೇಕು. ಹಿಂದಿನ ಒಕ್ಕಲುತನದಲ್ಲಿನ ಕೃಷಿ ಜ್ಞಾನವನ್ನ ಬಳುವಳಿಯಾಗಿ ಪಡೆದುಕೊಂಡು ಸುಸ್ಥಿರ ಕೃಷಿ ಮಾಡುತ್ತಿದ್ದೇವು. ಕೃಷಿ ಸಂಸ್ಕೃತಿಯನ್ನ ಸಂತೋಷದಿಂದ ಮಾಡುತ್ತಾ ಒಳ್ಳೆಯ ಆಹಾರವನ್ನು ನೀಡುತ್ತಿದ್ದೆವು. ರಾಸಾಯನಿಕ, ಕೀಟನಾಶಕ ಉಪಯೋಗಿಸದೆ ಬೆಳೆ ಬೆಳೆಯುತ್ತಿದ್ದೆವು. ಆದರೆ ಇತ್ತೀಚಿನ ದಿನಗಳಲ್ಲಿ ದೇಶದ ಜನತೆಗೆ ಆಹಾರ ಒದಗಿಸುವ ನಿಟ್ಟಿನಲ್ಲಿ ಸರ್ಕಾರಗಳು ಹೈಬ್ರೀಡ್ ತಳಿಗಳನ್ನ ಪರಿಹಾರವಾಗಿ ಕಂಡುಕೊಂಡು ಬಿಟ್ಟಿರುವುದು ದುರ್ದೈವ ಎಂದರು.
ಸರ್ಕಾರಗಳು ಹೈಬ್ರಿಡ್ ತಳಿಗಳನ್ನ ಪರಿಹಾರವಾಗಿ ಕಂಡುಕೊಟ್ಟು ಅದಕ್ಕೆ ಬೇಕಾದ ಸವಲತ್ತುಗಳನ್ನು ಕೊಟ್ಟರು. ನಾವು ಬೆಳೆ ಬೆಳೆದೆವು, ಇದರಿಂದ ನಮ್ಮ ಆರೋಗ್ಯದ ಜೊತೆಗೆ ದೇಶದ ಜನರ ಆರೋಗ್ಯ ಕೆಡಲು ಶುರುವಾಯಿತು. ಈಗ ಮತ್ತೆ ನಾವು ಹಿಂದಿನ ಪದ್ದತಿಯ ಕಡೆ ತಿರುಗಿ ನೋಡುತ್ತಿದ್ದೇವೆ. ಸಾವಯವ ಕೃಷಿ ಅನುಸರಿಸುವ ಬಗ್ಗೆ ಮುಖ ಮಾಡುತ್ತಿದ್ದೇವೆ. ರೈತರು ಬೆಳೆ ಬೆಳೆಯುವ ವಿಧಾನದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಇಂತಹ ತಾಂತ್ರಿಕ ಸಮಾವೇಶಗಳ ಮೂಲಕ ಪಡೆದುಕೊಳ್ಳಬೇಕು ಎಂದು ಹೆಚ್.ಆರ್ ಬಸವರಾಜಪ್ಪ ತಿಳಿಸಿದರು.
ಈ ಸಂದರ್ಭದಲ್ಲಿ ಕುಲಪತಿಗಳಾದ ಜಗದೀಶ್, ಸಂಪನ್ಮೂಲ ವ್ಯಕ್ತಿಗಳಾದ ಡಾ. ವಿನಾಯಕ ಹೆಗ್ಡೆ, ಎ ಬಿ ಪಾಟೀಲ್, ಶ್ರೀಕಾಂತ್ ಬರುವೆ, ಮಲ್ಲಿಕಾರ್ಜುನ ಯಲವಟ್ಟಿ ಮೊದಲಾದವರು ಹಾಜರಿದ್ದರು.

