ಮನೆಯ ಮುಂದೆ ರಸ್ತೆಯಲ್ಲಿ ಗಲಾಟೆ ಮಾಡುತ್ತಿದ್ದ ಯುವಕರ ಗುಂಪಿಗೆ ಇಲ್ಲಿ ಗಲಾಟೆ ಮಾಡಬೇಡಿ ಎಂದು ಬುದ್ದಿವಾದ ಹೇಳಿದ್ದಕ್ಕೆ 15 ಮಂದಿ ಯುವಕರ ಗುಂಪು ಮೂವರ ಮೇಲೆ ಮರಣಾಂತಿಕ ಹಲ್ಲೆ ನಡೆಸಿದ ಘಟನೆ ಶಿವಮೊಗ್ಗ ಜಿಲ್ಲೆಯ ಗೋಪಾಲ ಬಡಾವಣೆಯಲ್ಲಿ ನಡೆದಿದೆ.
15 ಮಂದಿ ಇದ್ದ ಯುವಕರ ಗುಂಪು ಯಾರನ್ನೋ ಹುಡುಕುತ್ತಾ ಗಲಾಟೆ ಮಾಡಲು ಶುರು ಮಾಡಿತ್ತು. ಈ ವೇಳೆ ತಿಮ್ಮಪ್ಪ ಎನ್ನುವವರು ಗಲಾಟೆ ಮಾಡಬೇಡಿ ಇಲ್ಲಿಂದ ಹೋಗಿ ಎಂದು ಯುವಕರಿಗೆ ಬುದ್ಧಿ ಹೇಳಿದ್ದಾರೆ. ಇದಕ್ಕೆ ಕೋಪಗೊಂಡ ಯುವಕರು ತಿಮ್ಮಪ್ಪ ಅವರನ್ನು ಹಿಗ್ಗಾಮುಗ್ಗಾ ಥಳಿಸಿದ್ದು, ದೊಣ್ಣೆಯಿಂದ ತಲೆಗೆ ಹೊಡೆದಿದ್ದಾರೆ. ಈ ವೇಳೆ ಬಿಡಿಸಲು ಬಂದ ತಿಮ್ಮಪ್ಪ ಅವರ ಮಗ ದರ್ಶನ್ ಹಾಗೂ ಮನು ಎಂಬುವವರ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಅತ್ಯಾಚಾರ ಪ್ರಕರಣದ ಆರೋಪಿ; ಜೈಲು ಗೋಡೆ ಹಾರಿ ಪರಾರಿ
ದುಷ್ಕರ್ಮಿಗಳು ದರ್ಶನ್‌ನ ತೋಳಿನ ಭಾಗಕ್ಕೆ ಮಾರಕಾಸ್ತ್ರದಿಂದ ಇರಿದಿದ್ದು, ಮತ್ತೊಬ್ಬ ಯುವಕ ಮನು ಎಂಬಾತನ ಮೇಲೂ ಹಲ್ಲೆ ನಡೆಸಿದ್ದಾರೆ. ತಂದೆ ಮಗ ಸೇರಿದಂತೆ ಮೂವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.
ಘಟನಾ ಸ್ಥಳಕ್ಕೆ ತುಂಗಾನಗರ ಪೊಲೀಸರು ಧಾವಿಸಿದ್ದು, ದೂರು ದಾಖಲಿಸಿಕೊಂಡಿದ್ದಾರೆ. ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಅನಿಲ್ ಕುಮಾರ್ ನೇತೃತ್ವದಲ್ಲಿ ಘಟನಾ ಸ್ಥಳದಲ್ಲಿ ಭದ್ರತೆ ಕೈಗೊಳ್ಳಲಾಗಿದ್ದು, ಹಲ್ಲೆ ಆರೋಪಿಗಳ ಪತ್ತೆಗೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.