ಕೆಲವು ತಿಂಗಳ ಹಿಂದೆ ಕೋಮು ಸಂಘರ್ಷದ ಕಾರಣಕ್ಕೆ ಸುದ್ದಿಯಾಗಿದ್ದ ಶಿವಮೊಗ್ಗ ಜಿಲ್ಲೆಯ ರಾಗಿಗುಡ್ಡವು ಈ ಬಾರಿ ಸೌಹಾರ್ದತೆಗೆ ಸಾಕ್ಷಿಯಾಗಿದೆ.
ಹೌದು. ಶಿವಮೊಗ್ಗ ನಗರದ ಹೊರವಲಯ ರಾಗಿಗುಡ್ಡ ಬಡಾವಣೆಯಲ್ಲಿ ಪ್ರತಿಷ್ಠಾಪಿಸಲಾಗಿರುವ ಗಣೇಶ ಮೂರ್ತಿಗಳಿಗೆ, ಹಿಂದೂ ಹಾಗೂ ಮುಸ್ಲಿಂ ಸಮಾಜದ ಮುಖಂಡರು ಒಟ್ಟಾಗಿ ಪೂಜೆ ಸಲ್ಲಿಸಿ, ಸೌಹಾರ್ದತೆಯ ಸಂದೇಶ ಸಾರಿದ್ದಾರೆ.
ಮಂಗಳವಾರ ಸಂಜೆ ಸೌಹಾರ್ದತೆಯ ಸನ್ನಿವೇಶಕ್ಕೆ ರಾಗಿಗುಡ್ಡದ ವಿವಿಧ ಗಣೇಶ ಮೂರ್ತಿಗಳು ಪ್ರತಿಷ್ಠಾಪನೆಯಾಗಿದ್ದ ಸ್ಥಳಗಳು ಸಾಕ್ಷಿಯಾದವು. ಈ ವೇಳೆ ರಾಗಿಗುಡ್ಡ ಶಾಂತಿ ಪಡೆ ಸಮಿತಿ ಸದಸ್ಯರು, ಪೊಲೀಸ್ ಅಧಿಕಾರಿ, ಸಿಬ್ಬಂದಿಗಳು ಉಪಸ್ಥಿತರಿದ್ದರು.
ಈ ವೇಳೆ ರಾಗಿಗುಡ್ಡದ ಹಿಂದೂ ಹಾಗೂ ಮುಸ್ಲಿಂ ಸಮಾಜದ ಮುಖಂಡರು ಮಾತನಾಡಿ, “ಹಿಂದೂ ಮತ್ತು ಮುಸ್ಲಿಮರ ಭಾವೈಕ್ಯತೆಯ ಸಂಕೇತವಾಗಿ, ಒಟ್ಟಿಗೆ ಸೇರಿ ಗಣೇಶ ಪೂಜೆ ನಡೆಸಿದ್ದೇವೆ. ನಮ್ಮ ದೇಶದಲ್ಲಿ ವಿವಿಧ ಜಾತಿ, ಧರ್ಮ ಮತ್ತು ಜನಾಂಗದವರಿದ್ದಾರೆ. ವಿವಿಧತೆಯಲ್ಲಿ ಏಕತೆ ಸಾರುವ ದೇಶವಾಗಿದೆ. ಗಣೇಶ ಹಾಗೂ ಮೀಲಾದುನ್ನಬಿ ಹಬ್ಬಗಳು ಪ್ರಮುಖವಾದ ಹಬ್ಬಗಳಾಗಿವೆ. ನಮ್ಮೆಲ್ಲರ ಭಾವೈಕ್ಯತೆ ಮತ್ತು ಒಗ್ಗಟ್ಟು ತೋರಿಸಲು ಈ ಸಂದರ್ಭ ಒದಗಿ ಬಂದಿದೆ” ಎಂದರು.

“ರಾಗಿಗುಡ್ಡದಲ್ಲಿ ಸೌಹಾರ್ದತೆ ಗಟ್ಟಿ ಮಾಡುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯು ಎಲ್ಲ ರೀತಿಯ ಸಹಕಾರ ನೀಡಿದೆ. ರಾಗಿಗುಡ್ಡದ ಸಾರ್ವಜನಿಕರೊಂದಿಗೆ ನಿರಂತರ ಸಂಪರ್ಕದಲ್ಲಿದೆ. ಹಬ್ಬದ ಆಚರಣೆ ಮತ್ತು ಇತರೆ ಕಾರ್ಯಕ್ರಮಗಳು ಯಶಸ್ವಿಯಾಗಲೂ ಕಾರಣಕರ್ತರಾಗಿದ್ದಾರೆ. ಪೊಲೀಸ್ ಇಲಾಖೆಯ ಅವಿರತ ಸೇವೆಯು ಶ್ಲಾಘನೀಯವಾಗಿದೆ” ಎಂದು ತಿಳಿಸಿದರು.
“ಹಬ್ಬದ ಯಶಸ್ಸಿನಲ್ಲಿ ನಮ್ಮೆಲ್ಲರ ಸಹಮತ ಮುಖ್ಯವಾಗಿರುತ್ತದೆ. ಯಾರೋ ಕೆಲ ಕಿಡಿಗೇಡಿತನದಿಂದ ಮತ್ತು ಯಾವುದೋ ಸನ್ನಿವೇಶದಲ್ಲಿ ಕಳೆದ ಬಾರಿ ಕಹಿ ಘಟನೆಗಳು ಜರುಗಿರುತ್ತವೆ. ಆದರೆ ಅದೆಲ್ಲವನ್ನು ಮರೆತು ಯಾವುದೇ ವೈಮನಸ್ಸು ಮತ್ತು ಸಮಸ್ಯೆಗಳಿದ್ದಲ್ಲಿ ಬಗೆಹರಿಸಿಕೊಂಡು ಒಟ್ಟಾಗಿ ಮುಂದೆ ಸಾಗುತ್ತೇವೆ” ಎಂದು ತಿಳಿಸಿದರು.
ಮುಂದಿನ ದಿನಗಳಲ್ಲಿ ಹಳೆಯ ರೀತಿಯ ಘಟನೆಗಳು ಜರುಗದಂತೆ ನಾವೆಲ್ಲರೂ ಶ್ರಮಿಸುತ್ತೇವೆ. ಸಹೋದರತ್ವದ ಮನೋಭಾವದೊಂದಿಗೆ, ಎಲ್ಲ ಧರ್ಮದ ಹಬ್ಬಗಳಲ್ಲಿ ಒಟ್ಟಾಗಿ ಭಾಗವಹಿಸಿ ಹಬ್ಬಗಳನ್ನು ಸೌಹಾರ್ದತೆಯಿಂದ ವಿಜೃಂಭಣೆಯಾಗಿ ಆಚರಿಸಲು ನಿರ್ಧರಿಸಿದ್ದೇವೆ. ಹಿಂದಿನ ವರ್ಷ ಈ ಪ್ರದೇಶದಲ್ಲಿ ಜರುಗಿದ ಕಳಂಕ ತೊಳೆಯಬೇಕಿದೆ. ನಮ್ಮ ಮುಂದಿನ ಪೀಳಿಗೆಗೆ, ಮಕ್ಕಳಿಗೆ ಮತ್ತು ಸಮಾಜದ ಇತರರಿಗೆ ಉತ್ತಮ ಸಂದೇಶ ಸಾರುವ ಮುಖಾಂತರ ಮಾದರಿಯಾಗಬೇಕಿದೆ” ಎಂದು ಎರಡೂ ಧರ್ಮಗಳ ಮುಖಂಡರು ಕರೆ ನೀಡಿದ್ದಾರೆ.
ಇದನ್ನು ಓದಿದ್ದೀರಾ? ರಾಯಚೂರು | ಬಿಜೆಪಿ ಶಾಸಕ ಹರೀಶ್ ಪೂಂಜಾಗೆ ಕಾಂಗ್ರೆಸ್ ನಾಯಕರಿಂದ ಸ್ವಾಗತ!
ಈ ಸಂದರ್ಭದಲ್ಲಿ ರಾಗಿಗುಡ್ಡದ ನಿವಾಸಿಗಳಾದ ನೂರ್ ಮಸೀದಿ ಅಧ್ಯಕ್ಷ ಭಾಷಾ ಸಾಬ್, ವಕೀಲರಾದ ರಾಮಚಂದ್ರ, ದೇವಸ್ಥಾನ ಸಮಿತಿ ಸದಸ್ಯರಾದ ಗಾರೆ ನಾಗಣ್ಣ, ನೂರ್ ಮಸೀದಿ ಉಪಾಧ್ಯಕ್ಷರಾದ ಸಾದಿಕ್, ಸ್ಥಳೀಯ ಪ್ರಮುಖರುಗಳಾದ ಬಸವರಾಜ್, ನಾಗರತ್ನಮ್ಮ, ರುದ್ರೋಜಿ ರಾವ್, ಮಾರುತಿ, ಭಾಷಾ ಸಾಬ್, ಸಯ್ಯದ್ ಅಕ್ರಮ್, ಗ್ರಾಮಾಂತರ ಠಾಣೆಯ ಇನ್ಸ್‌ಪೆಕ್ಟರ್ ಸತ್ಯನಾರಾಯಣ, ಸಬ್ ಇನ್ಸ್‌ಪೆಕ್ಟರ್ ಸ್ವಪ್ನ ಮತ್ತು ಇತರೆ ಪೊಲೀಸ್ ಸಿಬ್ಬಂದಿ ಉಪಸ್ಥಿತರಿದ್ದರು.


ಇದೇ ಬೇಕು ನಮ್ಮ ಊರಿನಲ್ಲಿ , ನಮ್ಮ ರಾಜ್ಯದಲ್ಲಿ , ನಮ್ಮ ದೇಶದಲ್ಲಿ ಹ್ಯಾಟ್ಸಪ್ 🙏 👍
ಇದೇ ಬೇಕು ನಮ್ಮ ಊರಿನಲ್ಲಿ , ನಮ್ಮ ರಾಜ್ಯದಲ್ಲಿ , ನಮ್ಮ ದೇಶದಲ್ಲಿ ಹ್ಯಾಟ್ಸಪ್ 🙏 👍