ಶಿವಮೊಗ್ಗದಲ್ಲಿ ಗುಡುಗು ಸಹಿತ ಭಾರೀ ಮಳೆಯಾಗಿದ್ದು, ಹಲವು ಪ್ರದೇಶಗಳು ಜಲಾವೃತವಾಗಿವೆ. ಪರಿಣಾಮ, ನಗರದ ಜನರು ಹೈರಾಗಿದ್ದಾರೆ.
ನಗರದ ಆಲ್ಕೊಳದಲ್ಲಿರುವ ಎಸ್.ಹೆಚ್ ಲೇಔಟ್‌ನ ಕೆರೆ ಸಂಪೂರ್ಣವಾಗಿ ತುಂಬಿದೆ. ಕೆರೆ ನೀರು ಕೋಡಿ ಬಿದ್ದು, ಲೇಔಟ್‌ಗೆ ನೀರು ನುಗ್ಗಿದೆ. ಹಲವಾರು ಪ್ರದೇಶಗಳು ಜಲಾವೃತವಾಗಿದ್ದು, ಮನೆಗಳಿಗೂ ನೀರು ನುಗ್ಗಿದೆ.
ಗೋಪಾಳದ ‘ಸಿ ಬ್ಲಾಕ್’ ಮತ್ತು ಶಿಪುರದ ತಮಿಳು ಕ್ಯಾಂಪ್‌ನಲ್ಲಿ ಹಲವಾರು ಮನೆಗಳಿಗೆ ಮಳೆ ನೀರು ನುಗ್ಗಿದೆ. ಲಕ್ಕಿನಕೊಪ್ಪ ಸರ್ಕಲ್ ಬಳಿಯಿರುವ ಹೊಸಕೆರೆ ಕೂಡ ಕೋಡಿ ಬಿದಿದ್ದು, ರಸ್ತೆಯಲ್ಲಿ ಹೆಚ್ಚಿನ ನೀರು ಹರಿಯುತ್ತಿದೆ. ಪರಿಣಾಮ, ಬಸ್ ಸಂಚಾರವೂ ಅಸ್ತವ್ಯಸ್ತಗೊಂಡಿದೆ. ಕೆಲಸಕ್ಕೆ ಹೋಗುವರು ತೊಂದರೆ ಅನುಭವಿಸುವಂತಾಗಿದೆ.
ಆರ್.ಎಲ್ ನಗರ, ಟಿಪ್ಪು ನಗರ, ಮಂಜುನಾಥ ಬಡಾವಣೆ, ಇಮಾಮ್ ಬಡಾವಣೆಯಲ್ಲಿ ಮಳೆಯು ಸಾಕಷ್ಟು ಸಂಕಷ್ಟ ತಂದೊಡ್ಡಿದೆ. ಚರಂಡಿಗಳು ಉಕ್ಕಿ ಹರಿಯುತ್ತಿದ್ದು, ಕೊಳಚೆ ನೀರು ಮಳೆ ನೀರಿನೊಂದಿಗೆ ರಸ್ತೆಯಲ್ಲಿ ಹರಿಯುತ್ತಿದೆ.
ಶಿವಮೊಗ್ಗ ಜಿಲ್ಲೆಯ ಶಿವಮೊಗ್ಗ ನಗರ, ಭದ್ರಾವತಿ, ಸಾಗರ, ಹೊಸನಗರ, ಶಿಕಾರಿಪುರ ಹಾಗೂ ಸೊರಬ ತಾಲೂಕುಗಳಲ್ಲಿ ಭಾರಿ ಮಳೆಯಾಗುತ್ತಿದೆ. ಭಾನುವಾರವೂ ಮಳೆ ಮುಂದುವರೆಯುವ ಸಾಧ್ಯತೆ ಇದೆ.