ಮಲೆನಾಡು ಭಾಗದಲ್ಲಿ ಸರ್ಕಾರಿ ಬಸ್ಗಳು ಓಡಾಡುವುದು ಕಡಿಮೆ. ಅಂತಹದರಲ್ಲಿ ಓಡಾಡುವ ಕೆಲವು ಬಸ್ಗಳ ಚಾಲಕರ ಮೇಲೆ ಖಾಸಗಿ ಬಸ್ ಮಾಲೀಕರು ದರ್ಪ ತೋರುತ್ತಿದ್ದು, ಕೆಎಸ್ಆರ್ಟಿಸಿ ಚಾಲಕ ಮತ್ತು ನಿರ್ವಾಹಕರ ಮೇಲೆ ಹಲ್ಲೆ ನಡೆಸಿರುವ ಘಟನೆ ನಡೆದಿದೆ.
ಶನಿವಾರ ಬೆಳಿಗ್ಗೆ 9ರ ಸುಮಾರಿಗೆ ಶಿವಮೊಗ್ಗದಿಂದ ತೀರ್ಥಹಳ್ಳಿಯ ಮುಖ್ಯ ಬಸ್ ನಿಲ್ದಾಣಕ್ಕೆ ಕೆಎಸ್ಆರ್ಟಿಸಿ ಬಸ್ ಬಂದಿದೆ. ತೀರ್ಥಹಳ್ಳಿಯ ಬಸ್ ನಿಲ್ದಾಣದಲ್ಲಿ ಖಾಸಗಿ ಬಸ್ಸಿನ ಮಾಲೀಕ ಮಧು ಎಂಬಾತ ಕೆಎಸ್ಆರ್ಟಿಸಿ ಬಸ್ ಅಡ್ಡಗಟ್ಟಿ ಚಾಲಕನನ್ನು ಕೆಳಗಿಳಿಸಿ ಬಸ್ನ ಕೀ ತೆಗೆದುಕೊಂಡು ಡ್ರೈವರ್ ಹಾಗೂ ಕಂಡಕ್ಟರ್ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು, ಶಕ್ತಿಯೋಜನೆ ಉಪಯೋಗಿಸಿಕೊಂಡು ನಮ್ಮ ಬಸ್ಗಳಿಗೆ ನಷ್ಟ ಉಂಟು ಮಾಡುತ್ತಿದ್ದೀರಾ ಎಂದು ರಂಪಾಟ ಮಾಡಿ ಹಲ್ಲೆ ನಡೆಸಿದ್ದಾರೆ.
“ಬಡವರು ಮತ್ತು ಕೆಲಸ ಮಾಡುವ ಮಹಿಳೆಯರು ಸೇರಿದಂತೆ ಶಾಲೆ ಕಾಲೇಜು ವಿದ್ಯಾರ್ಥಿನಿಯರಿಗೆ ಅನುಕೂಲವಾಗಲೆಂದು ಕಾಂಗ್ರೆಸ್ ಸರ್ಕಾರ ಶಕ್ತಿ ಯೋಜನೆಯನ್ನು ಜಾರಿಗೆ ತಂದಿದೆ. ಖಾಸಗಿ ಮಾಲೀಕರಿಗೆ ನಷ್ಟ ಉಂಟಾಗುತ್ತಿದೆ ಎಂಬ ಕಾರಣಕ್ಕೆ ಆ ಕೋಪವನ್ನು ಕೆಎಸ್ಆರ್ಟಿಸಿ ಬಸ್ ಡ್ರೈವರ್ ಮತ್ತು ಕಂಡಕ್ಟರ್ಗಳ ಮೇಲೆ ತೋರಿಸುವುದು ಯಾವ ನ್ಯಾಯ” ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ವಿಜಯಪುರ | ʼಕರ್ನಾಟಕದ ಸಾಮಾಜಿಕ ನ್ಯಾಯಕ್ಕಾಗಿ ಚಲೋ ಬೆಳಗಾವಿʼ
ಈ ಘಟನೆ ಕುರಿತು ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಖಾಸಗಿ ಬಸ್ ಮಾಲೀಕನ ವಿರುದ್ಧ ಸರ್ಕಾರಿ ಉದ್ಯೋಗಿಯ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ.