ಪಕ್ಷಕ್ಕಾಗಿ ಪ್ರಾಮಾಣಿಕವಾಗಿ ದುಡಿದಂತಹ ಕಾರ್ಯಕರ್ತರನ್ನು ಕಡೆಗಣಿಸುತ್ತಿದ್ದಾರೆ ಎಂಬುದು ಕಾಂಗ್ರೆಸ್ ಕಾರ್ಯಕರ್ತರಲ್ಲಿ ಆಕ್ರೋಶ ಭುಗಿಲೆದ್ದಿದ್ದು, ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.
ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಕಾರ್ಯಕರ್ತರನ್ನು ಸರಿಯಾಗಿ ಬಳಸಿಕೊಳ್ಳದೆ, ಸ್ಪಂದನೆ ನೀಡದೆ ನಡಿಸಿಕೊಂಡಿರುವುದೂ ಕೂಡ ಈ ಬಾರಿ ಬಿಜೆಪಿ ಅಭ್ಯರ್ಥಿ ಅತಿಹೆಚ್ಚು ಲೀಡ್‌ನಿಂದ ಗೆಲ್ಲಲು ಒಂದು ಬಹುಮುಖ್ಯ ಕಾರಣ ಎನ್ನಲಾಗುತ್ತಿದೆ.
ಕಾಂಗ್ರೆಸ್ ಪಕ್ಷದ ಬಹುತೇಕ ಕಾರ್ಯಕರ್ತರು ಈ ದಿನ.ಕಾಮ್‌ನೊಂದಿಗೆ ತಮ್ಮ ಅಸಮಾಧಾನ ಹಾಗೂ ಆಕ್ರೋಶ ಹೊರ ಹಾಕಿದ್ದು, “ಸರ್ಕಾರ ಬಂದು ಒಂದು ವರ್ಷ ಕಳೆದರೂ ಕೂಡಾ ಕಾರ್ಯಕರ್ತರಿಗೆ ಸರಿಯಾದ ಸ್ಥಾನಮಾನ ನೀಡದೆ ಇರುವುದು ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ” ಎಂದು ತಿಳಿಸಿದ್ದಾರೆ.
“ನಿಗಮ ಮಂಡಳಿ, ಎಂಎಲ್‌ಸಿ ಚುನಾವಣೆ ಮತ್ತೊಂದು ಮಗದೊಂದು ಎಲ್ಲವೂ ಮುಗಿದರು ಕಾರ್ಯಕರ್ತರಿಗೆ ಶಾಸಕರಾಗಲಿ, ಸಚಿವರಾಗಲೀ ಹಾಗೂ ಯಾವೊಬ್ಬ ನಾಯಕರೂ ಕೂಡಾ ಸ್ಪಂದಿಸುತ್ತಿಲ್ಲ. ಕ್ಯಾರೇ ಎನ್ನದ ಪರಿಸ್ಥಿತಿ ಎದುರಾಗಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ಪಕ್ಷಕ್ಕೋಸ್ಕರ ಸರ್ಕಾರ ರಚನೆಯಿಂದ ಈವರೆಗೂ ಇಷ್ಟೆಲ್ಲ ಪ್ರಾಮಾಣಿಕ ಕೆಲಸ ಮಾಡಿದರೂ ಕೂಡ ನಮ್ಮನ್ನು ಕಡೆಗಣಿಸುತ್ತಿದ್ದಾರೆ. ಹಾಗಾಗಿ ಶಿವಮೊಗ್ಗ ಹಾಗೂ ರಾಜ್ಯದಲ್ಲಿಯೂ ಕಾರ್ಯಕರ್ತರಿಗೆ ಅನ್ಯಾಯವಾಗುತ್ತಿದೆ” ಎಂದು ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಅವಲತ್ತುಕೊಂಡಿದ್ದಾರೆ.
“ಪಕ್ಷದಲ್ಲಿ ಆಂತರಿಕ ಕಲಹ ಹಾಗೂ ಗುಂಪುಗಾರಿಕೆ ಹೆಚ್ಚಾಗಿದ್ದು, ಮುಂಬರುವ ಮಹಾನಗರ ಪಾಲಿಕೆ ಚುನಾವಣೆ ಆಗಿರಬಹುದು, ನಗರಸಭೆ ಚುನಾವಣೆ, ಪುರಸಭೆ ಚುನಾವಣೆ, ಪಟ್ಟಣ ಪಂಚಾಯತ್ ಚುನಾವಣೆ ವೇಳೆ ಮುಂದಿನ ದಿನಗಳಲ್ಲಿ ಇದು ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಮಟ್ಟದ ಹಾನಿಯಾಗುವ ಸಂಭವವಿದೆ” ಎಂದು ಎಚ್ಚರಿಕೆ ನೀಡಿದರು.
“ಪಕ್ಷದ ಅಧ್ಯಕ್ಷರು ಈ ಒಳ ಬೇಗುದಿ ಶಮನ ಮಾಡಿ ಇದರ ಕುರಿತು ಈ ಕೂಡಲೇ ಗಮನ ಹರಿಸಿ ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ಅನ್ಯಾಯವಾಗದಂತೆ ಸರಿಪಡಿಸಿಕೊಡಬೇಕು” ಎಂದು ಕಾಂಗ್ರೆಸ್‌ನ ನಿಷ್ಠಾವಂತ ಕಾರ್ಯಕರ್ತರು ಆಗ್ರಹಿಸಿದರು.
“ಎಲ್ಲ ಸ್ಥಾನ-ಮಾನಗಳನ್ನು ಹಾಲಿ ಸ್ಥಾನದಲ್ಲಿರುವವರು ಮತ್ತೆ ಮತ್ತೆ ಒಂದು ಸ್ಥಾನ ಇದ್ದವರಿಗೆ ಮತ್ತೆ ಎರಡು ಮೂರು ಸ್ಥಾನಗಳ ಅವಕಾಶ ಮಾಡಿಕೊಟ್ಟರೆ, ಇತರೆ ನಿಷ್ಠಾವಂತ ಕಾರ್ಯಕರ್ತರಿಗೆ ಅನ್ಯಾಯವಾಗುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ಅಬ್ಬಿಫಾಲ್ಸ್‌ನಲ್ಲಿ ನೀರು ಪಾಲಾದ ಯುವಕ
“ರಾಜ್ಯ, ರಾಷ್ಟದ ನಾಯಕರೂ ಕೂಡ ಇದಕ್ಕೆ ಸರಿಯಾಗಿ ಅನುಕೂಲ ಮಾಡಿಕೊಡದಿದ್ದರೆ ಇದು ಮುಂದಿನ ದಿನಗಳಲ್ಲಿ ಪಕ್ಷಕ್ಕೆ ಬಲವಾಗಿ ಪೆಟ್ಟು ಬೀಳುವ ಸಾಧ್ಯತೆ ಹೆಚ್ಚಾಗಿದೆ. ಕಾರ್ಯಕರ್ತರು ಅವಕಾಶ ವಂಚಿತರಾಗದಂತೆ ಪಕ್ಷ ಸ್ಪಂದಿಸಬೇಕು. ʼಪಕ್ಷದ ಕಾರ್ಯಕರ್ತರೇ ಪಕ್ಷದ ಶಕ್ತಿʼ ಎಂದು ಹೇಳುತ್ತಾರೆ. ಆದರೆ ಕಾರ್ಯಕರ್ತರಿಗೆ ಏನೂ ಅನುಕೂಲವಾಗುತ್ತಿಲ್ಲ” ಎಂದು ಬೇಸರ ವ್ಯಕ್ತಪಡಿಸಿದರು.
