ಪಾಸ್‌ಪೋರ್ಟ್ ನೀಡುವ ವಿಚಾರವಾಗಿ ಏರ್‌ಪೋರ್ಟ್ ವಿಭಾಗದ ಅಧಿಕಾರಿಗಳು ಅನಗತ್ಯ ಗೊಂದಲ ಮಾಡುತ್ತಿದ್ದು, ತಮಗೆ ಪಾಸ್‌ಪೋರ್ಟ್ ನೀಡಲು ನಿರಾಕರಿಸಿದ್ದಾರೆ ಎಂದು ಆರೋಪಿಸಿ ತೀರ್ಥಹಳ್ಳಿಯ ಪ್ರಖ್ಯಾತ ವಾಸ್ತುಶಿಲ್ಪಿ ಕೆ ಜಿ ಶ್ರೀಧರ್ ಏಕಾಂಗಿ ಧರಣಿ ನಡೆಸುತ್ತಿದ್ದಾರೆ.
ಶಿವಮೊಗ್ಗ ನಗರದ ಪೋಸ್ಟ್ ಆಫೀಸ್ ಕಚೇರಿ ಆವರಣದಲ್ಲಿನ ಪಾಸ್‌ಪೋರ್ಟ್ ಕಚೇರಿ ಮುಂದೆ ಶ್ರೀಧರ್ ಧರಣಿ ಕುಳಿತಿದ್ದಾರೆ. ಕೈಯಲ್ಲಿ “ನಾನು ಸಲ್ಲಿಸಿದ ಪಾಸ್‌ಪೋರ್ಟ್ ಅರ್ಜಿಯನ್ನು ನಿರಾಕರಿಸುವಾಗ ಹೆಸರು ಬದಲಾವಣೆಯ ಪ್ರಕಟಣೆಯನ್ನು ಇಂಗ್ಲೀಷ್ ಪತ್ರಿಕೆಯಲ್ಲಿ ಪ್ರಕಟಿಸಿದ್ದೇನೆ ಎಂಬಂತಹ ನಿಯಮ ಇರುವುದನ್ನು ಏರ್‌ಪೋರ್ಟ್ ವಿಭಾಗದ ಅಧಿಕಾರಿಗಳು ನನಗೆ ಬರೆದುಕೊಡಬೇಕು” ಎಂದು ಆಗ್ರಹಿಸಿ ಪೋಸ್ಟರ್‌ವೊಂದನ್ನು ಹಿಡಿದಿದ್ದಾರೆ.
ಧರಣಿ ಕುಳಿತ ಶ್ರೀಧರ್ ಅವರು ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಪಾಸ್ ಪೋರ್ಟ್ ಮತ್ತು ಆಧಾರ್ ಕಾರ್ಡ್‌ನಲ್ಲಿ ಹೆಸರು ಬದಲಾಗಿದೆಯೆಂದು ಪಾಸ್‌ಪೋರ್ಟ್ ತಿರಸ್ಕರಿಸಿದ್ದರು. ಹಾಗಾಗಿ ನಾನು ಹೊಸ ಪಾಸ್‌ಪೋರ್ಟ್ ಮಾಡಿಸುವ ಸಲುವಾಗಿ ನನ್ನ ಹೆಸರನ್ನು ಲಾಯರ್ ಅಫಿಡವಿಟ್ ಮಾಡಿ ಆಧಾರ್‌ನಲ್ಲಿರುವಂತೆಯೇ ಹೆಸರು ಸರಿಪಡಿಸಿಕೊಂಡಿದ್ದೇನೆ. ಈಗ ಬಂದು ಕೇಳಿದರೆ, ಹೆಸರು ಬದಲಾವಣೆಯ ಪ್ರಕಟಣೆಯನ್ನು ಇಂಗ್ಲೀಷ್ ಪತ್ರಿಕೆಯಲ್ಲಿ ಪ್ರಕಟಿಸಿರಬೇಕೆಂದು ಹೇಳುತ್ತಿದ್ದಾರೆ” ಎಂದು ಆರೋಪಿಸಿದರು.

“ಪ್ರತಿ ಬಾರಿ ಬಂದು ಕೇಳುವಾಗಲೂ ಒಂದೊಂದು ಕಾರಣ ಹೇಳುತ್ತಾರೆ. ಅವರ ಹತ್ತಿರ ಹೋಗಿ, ಇವರ ಹತ್ತಿರ ಹೋಗಿ ಸರಿಮಾಡಿಸಿಕೊಂಡು ಬನ್ನಿ ಅಂತ ಹೇಳುತ್ತಾರೆ. ಯಾರೂ ಮಾಡುವುದಿಲ್ಲ. ಇವರೆಲ್ಲ ಒಂದು ನೆಟ್ವರ್ಕ್ ಮಾಡಿಕೊಂಡಿದ್ದಾರೆ ಅನ್ನಿಸುತ್ತಿದೆ. ಗ್ರಾಹಕರ ಸಂಪರ್ಕಕ್ಕೆಂದು ಒಂದು ನಂಬರ್ ಹಾಕಿದ್ದಾರೆ. ಅದಕ್ಕೆ ಕಾಲ್ ಮಾಡಿದರೆ ನಂಬರ್ ಚಾಲ್ತಿಯಲ್ಲಿ ಇಲ್ಲ ಎಂದು ಬರುತ್ತಿದೆ. ಇವರು ಜನಗಳಿಗೆ ತಪ್ಪು ಮಾಹಿತಿ ಕೊಡುತ್ತಿದ್ದಾರೆ” ಎಂದು ದೂರಿದರು.
“ಇವರು ಜನರ ಸೇವೆ ಮಾಡುತ್ತಿಲ್ಲ, ಜನರು ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು, ಹಣ ಖರ್ಚು ಮಾಡಿ, ಸಮಯ ಮೀಸಲಿಟ್ಟಿರುತ್ತಾರೆಂಬ ಯಾವುದೇ ಗೋಜಿಲ್ಲ. ಅಧಿಕಾರಿಗಳು ತುಂಬಾ ಉದಾಸೀನ ತೋರುತ್ತಾರೆ. ಸುಮ್ಮನೆ ಅಲ್ಲಿಂದ ಇಲ್ಲಿ, ಇಲ್ಲಿಂದ ಅಲ್ಲಿ ತಿರುಗಿಸುತ್ತಿದ್ದಾರೆ. ಹೆಸರು ಬದಲಾವಣೆ ಕುರಿತು ಇಂಗ್ಲಿಷ್ ಪತ್ರಿಕೆಯಲ್ಲಿ ಪ್ರಕಟಿಸಬೇಕೆಂಬುದನ್ನು ನನಗೆ ಅಕ್ಷರಗಳಲ್ಲಿ ಬರೆದು ಕೊಡಬೇಕು, ನನಗೆ ಇವರು ಕ್ಲಾರಿಟಿ ಕೊಡಬೇಕು. ಹಾಗಾಗಿ ನಾನು ಧರಣಿ ಕೂತಿದ್ದೀನಿ” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಧಾರವಾಡ | ವಕ್ಫ್ ಆಸ್ತಿ ವಿವಾದ: ಕಾಂಗ್ರೆಸ್ ವಿರುದ್ಧ ಬಿಜೆಪಿ ಪ್ರತಿಭಟನೆ
“ಇದು ಕೇಂದ್ರ ಸರ್ಕಾರದ ಕಾನೂನು ಅಲ್ಲವೇ, ಎಂಪಿಯವರೇ ಬಂದು ಇಲ್ಲಿಯ ವ್ಯವಸ್ಥೆಯನ್ನೊಮ್ಮೆ ಪರಿಶೀಲಿಸಲಿ. ಅವರೇ ನನಗೆ ಈ ಕಾನೂನಿನ ಕುರಿತು ನ್ಯಾಯ ನೀಡಲಿ” ಎಂದು ಕೆ ಜಿ ಶ್ರೀಧರ್ ಪಟ್ಟುಹಿಡಿದಿದ್ದಾರೆ.
ಈ ದಿನ.ಕಾಮ್ ಸ್ಥಳದಲ್ಲಿರುವುದನ್ನು ಕಂಡ ಮಹೇಶ್ ಎಂಬ ಅಧಿಕಾರಿಯೊಬ್ಬರು, “ಯಾರು ಸುದ್ದಿ ಮಾಧ್ಯಮದವರು, ಇಲ್ಲಿ ಬರುವಂತಿಲ್ಲ. ನೀವು ಪೊಲೀಸರನ್ನು ಕರೆತಂದು ಸಮಸ್ಯೆ ಬಗೆಹರಿಸಿಕೊಳ್ಳಿ” ಎಂದು ವರದಿಗಾರರ ಮೇಲೆ ದರ್ಪದ ಮಾತುಗಳನ್ನು ಆಡಿದರು.
