ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯಲ್ಲಿನ ಕೇಂದ್ರ ಮುಖ್ಯ ಅಂಚೆ ಕಚೇರಿ ಎದುರು ಪ್ರತಿದಿನ ಆಧಾರ್ ತಿದ್ದುಪಡಿಗಾಗಿ ಜನರು ಸರತಿ ಸಾಲಲ್ಲಿ ನಿಂತಿರುವುದು ಸಾಮಾನ್ಯವೆಂಬಂತಾಗಿದೆ. ಸರ್ಕಾರದ ವಿವಿಧ ಸೌಲಭ್ಯ ಪಡೆಯಲು ಆಧಾರ್ ತಿದ್ದುಪಡಿ ಕಡ್ಡಾಯವಾಗಿದೆ. ಆದರೆ, ಇದರಿಂದಾಗಿ ಸಾರ್ವಜನಿಕರು ನಿತ್ಯವೂ ಆಧಾರ್ ತಿದ್ದುಪಡಿಗಾಗಿ ಪರದಾಡುವಂತಾಗಿದೆ.
ಇಲ್ಲಿ ಇದೊಂದೇ ತಿದ್ದುಪಡಿ ಕೇಂದ್ರ ಇರುವುದರಿಂದ ಜನರ ಅಲೆದಾಟ ತಪ್ಪುತ್ತಿಲ್ಲ. ತಾಲೂಕು ಕಚೇರಿ, ನಾಡಕಚೇರಿ, ಕರ್ನಾಟಕ ಗ್ರಾಮೀಣ ಬ್ಯಾಂಕ್‌ಗಳಲ್ಲಿ ಈ ಹಿಂದೆ ತಿದ್ದುಪಡಿಗೆ ಅವಕಾಶ ಕಲ್ಪಿಸಲಾಗಿತ್ತು. ಈಗ ಮುಖ್ಯ ಅಂಚೆ ಕಚೇರಿಯಲ್ಲಿ ಮಾತ್ರ ತಿದ್ದುಪಡಿಗೆ ಅವಕಾಶ ಕಲ್ಪಿಸಲಾಗಿದೆ. ಇದಕ್ಕೆ ಒಬ್ಬ ಸಿಬ್ಬಂದಿ ನಿಯೋಜನೆಗೊಂಡಿದ್ದು ದಿನವೊಂದಕ್ಕೆ 30ಕ್ಕಿಂತ ಅಧಿಕ ತಿದ್ದುಪಡಿ ಸಾಧ್ಯವಾಗುತ್ತಿಲ್ಲ. ಸೌಲಭ್ಯ ವಂಚಿತರು ಅಂಗಲಾಚಿದರೂ ತಿದ್ದುಪಡಿಗೆ ಅವಕಾಶ ಸಿಗುತ್ತಿಲ್ಲ.
ಸಾರ್ವಜನಿಕರು ಬೆಳಿಗ್ಗೆ 6ಗಂಟೆಯಿಂದಲೇ ಸರತಿ ಸಾಲಿನಲ್ಲಿ ನಿಲ್ಲಬೇಕಾಗಿದೆ. ಕಚೇರಿ ತೆರೆಯುವುದರೊಳಗೆ ಆ ದಿನದ ತಿದ್ದುಪಡಿ ಕೋಟಾ ಮುಕ್ತಾಯಗೊಳ್ಳುತ್ತಿದೆ. ಹಳ್ಳಿಗಳಿಂದ ಮುಂಜಾನೆ ಬರಲು ಸಮರ್ಪಕ ಬಸ್ ಸೌಲಭ್ಯ ಇಲ್ಲದ ಕಾರಣ ಗ್ರಾಮೀಣ ಪ್ರದೇಶದ ಜನರು ಆಧಾರ್ ತಿದ್ದುಪಡಿಗೆ ತೊಂದರೆ ಎದುರಿಸುತ್ತಿದ್ದಾರೆ.
ವಿಳಾಸ, ಫೋಟೊ, ಜನನ ಪ್ರಮಾಣಪತ್ರ, ಮೊಬೈಲ್ ಸಂಖ್ಯೆ, ಹೆಸರು ಬದಲಾವಣೆ, ಲಿಂಗ, ಬಯೊಮೆಟ್ರಕ್ ಸೇರಿದಂತೆ 10ವರ್ಷ ಮೇಲ್ಪಟ್ಟವರ ಎಲ್ಲಾ ಕಾರ್ಡ್‌ಗಳನ್ನು ನವೀಕರಿಸಬೇಕಿದೆ. ಇಲ್ಲದಿದ್ದರೆ ಪಡಿತರ ಸೌಲಭ್ಯ, ಗೃಹಲಕ್ಷ್ಮಿ ಯೋಜನೆ, ಉಚಿತ ಬಸ್, ಬ್ಯಾಂಕ್ ಖಾತೆ, ಪ್ಯಾನ್ ಕಾರ್ಡ್, ಮತದಾರರ ಚೀಟಿ ನವೀಕರಣ, ವ್ಯಾಸಂಗ ದೃಢೀಕರಣ ಮುಂತಾದ ಸೌಲಭ್ಯಗಳಿಂದ ವಂಚಿತರಾಗುವಂತಾಗುತ್ತಿದೆ.
ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ ಈಚೆಗೆ ತೆರೆದ ಕರ್ನಾಟಕ ಒನ್ ಕೇಂದ್ರ ಕೆಲಸ ಮಾಡುತ್ತಿಲ್ಲ. ತಾಲೂಕು ಆಡಳಿತದಲ್ಲೂ ಸಿಬ್ಬಂದಿ ಕೊರತೆ ಹೆಚ್ಚಿದ್ದು ಸೇವೆ ನೀಡಲು ತೊಂದರೆಯಾಗುತ್ತಿದೆ. ಮೇಗರವಳ್ಳಿ, ದೇವಂಗಿ, ಬೆಜ್ಜವಳ್ಳಿ ಅಟಲ್ ಜನಸ್ನೇಹಿ ಕೇಂದ್ರ (ನಾಡಕಚೇರಿ)ಯಲ್ಲಿ ಆಧಾರ್ ತಿದ್ದುಪಡಿಯಾಗುತ್ತಿಲ್ಲ. ಕೋಣಂದೂರು ನಾಡಕಚೇರಿಯಲ್ಲಿ ಮಾತ್ರ ಈ ಸೌಲಭ್ಯ ಇದೆ. ವಿದ್ಯುತ್ ಸಮಸ್ಯೆ, ಸರ್ವರ್ ಸಮಸ್ಯೆ ಹೆಚ್ಚಿದ್ದು ಜನರು ತೊಂದರೆಗೆ ಸಿಲುಕಿದ್ದಾರೆ. ಅಲ್ಲದೇ 20 ಕಿ.ಮೀ. ದೂರದಿಂದ ತಾಲ್ಲೂಕು ಕೇಂದ್ರಕ್ಕೆ ದಿನವಿಡೀ ಅಲೆಯುವಂತಾಗಿದೆ ಎಂದು ಸಾರ್ವಜನಿಕರು ತಮ್ಮ ಅಸಮಾಧಾನ ತೋಡಿಕೊಳ್ಳುತ್ತಿದ್ದಾರೆ.
ಸಾಮಾನ್ಯ ಕೇಂದ್ರಗಳಲ್ಲೂ ನಿರೀಕ್ಷಿತ ಪ್ರಮಾಣದ ಕೆಲಸ ಮಾಡಿಕೊಳ್ಳಲು ಸಾಧ್ಯವಾಗದೆ ಸಾರ್ವಜನಿಕರು ಪರದಾಡುತ್ತಿದ್ದು ಇದಕ್ಕೆಲ್ಲಾ ಒಂದು ಪರಿಹಾರ ನೀಡಿ ಎಂದು ಆಗ್ರಹಿಸುತ್ತಿದ್ದಾರೆ.