ಶಿವಮೊಗ್ಗ ಜಿಲ್ಲಾ ಸರ್ಕಾರಿ ನೌಕರರ ಸಂಘದ ಕಾರ್ಯಕಾರಿ ಸಮಿತಿ ನಿರ್ದೇಶಕರ ಚುನಾವಣೆ ಕಾವೇರಿದೆ. ಈ ನಡುವೆ ಬಣ ರಾಜಕಾರಣ ಜೋರಾಗಿದೆ. ಭಾರೀ ಹೈಡ್ರಾಮಾಕ್ಕೆ ವೇದಿಕೆ ನಿರ್ಮಾಣವಾಗಿದೆ. ಇದಕ್ಕೆ ಸಾಕ್ಷಿ ಎಂಬಂತೆ, ಚುನಾವಣೆಗೆ ಸ್ಪರ್ಧಿಸಿದ್ದ ಶಿವಮೊಗ್ಗ ತಹಶೀಲ್ದಾರ್ ಬಿ ಎನ್ ಗಿರೀಶ್ ಅವರನ್ನು ದಿಡೀರ್ ವರ್ಗಾವಣೆ ಮಾಡಲಾಗಿದೆ.
ಬಿ ಎನ್ ಗಿರೀಶ್ ಅವರು ಶಿವಮೊಗ್ಗ ತಾಲೂಕು ಕಂದಾಯ ವಿಭಾಗದಿಂದ ಚುನಾವಣೆಗೆ ಸ್ಪರ್ಧಿಸಿದ್ದರು. ಇದೇ ವಿಭಾಗದಿಂದ ಶಿವಮೊಗ್ಗ ಉಪ ವಿಭಾಗದ ಉಪವಿಭಾಗಾಧಿಕಾರಿ ಸತ್ಯನಾರಾಯಣ ಜಿ ಹೆಚ್ ಅವರು ಸ್ಪರ್ಧಿಸಿದ್ದರು. ಇಬ್ಬರ ನಡುವೆ ಭಾರೀ ಪೈಪೋಟಿ ಕಂಡುಬಂದಿತ್ತು.
ಈ ನಡುವೆ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ ಎಸ್ ಷಡಕ್ಷರಿ ಗುಂಪಿನಲ್ಲಿ ಗುರುತಿಸಿಕೊಂಡಿದ್ದ ಮೋಹನ್ ಕುಮಾರ್ ಅವರು, ಸಿ ಎಸ್ ಷಡಾಕ್ಷರಿ ಬಣದಿಂದ ಹೊರಬಂದು ಪ್ರತ್ಯೇಕ ಗುಂಪು ರಚಿಸಿಕೊಂಡಿದ್ದರು. ಬೆಂಗಳೂರಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರನ್ನು ಭೇಟಿಯಾಗಿದ್ದರು. ಸದರಿ ಮೋಹನ್ ಕುಮಾರ್ ಗಂಪಿನಲ್ಲಿ ಸತ್ಯನಾರಾಯಣ ಜಿ ಹೆಚ್ ಅವರು ಕೂಡ ಕಾಣಿಸಿಕೊಂಡಿದ್ದರು.
ಈ ನಡುವೆ ಸತ್ಯನಾರಾಯಣ ಅವರ ಎದುರಾಳಿಯಾಗಿ ಕಣಕ್ಕಿಳಿದಿದ್ದ, ತಹಶೀಲ್ದಾರ್ ಬಿ ಎನ್ ಗಿರೀಶ್ ಅವರನ್ನು ನ. 14ರಂದು ವರ್ಗಾವಣೆಗೊಳಿಸಲಾಗಿದೆ. ಅವರ ಸ್ಥಾನಕ್ಕೆ ರಾಜೀವ್ ಎಂಬುವರನ್ನು ನಿಯೋಜಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಚುನಾವಣೆಗೆ ಸ್ಪರ್ಧಿಸಿದ್ದ ಕಾರಣದಿಂದಲೇ ಬಿ ಎನ್ ಗಿರೀಶ್ ಅವರನ್ನು ವರ್ಗಾವಣೆಗೊಳಿಸಲಾಗಿದೆ. ಇದು ರಾಜಕೀಯ ಪ್ರೇರಿತ ಎಂಬ ಮಾತುಗಳು ಕೇಳಿಬರಲಾರಂಭಿಸಿವೆ.
ಇದನ್ನು ಓದಿದ್ದೀರಾ? ತನಗೆ ಏಡ್ಸ್ ರಕ್ತ ಇಂಜೆಕ್ಟ್ ಮಾಡಲು ಸಂಚು ಹೂಡಿದ್ದ ಮುನಿರತ್ನ; ದೇಶವನ್ನೇ ತೊರೆಯಲು ನಿರ್ಧರಿಸಿದ್ದ ಆರ್ ಅಶೋಕ್
ಒಟ್ಟಾರೆ, ಶಿವಮೊಗ್ಗ ಜಿಲ್ಲೆಯ ಸರ್ಕಾರಿ ನೌಕರರ ಸಂಘದ ಚುನಾವಣೆಯು ದಿನಕ್ಕೊಂದು ತಿರುವು ಪಡೆದುಕೊಳ್ಳಲಾರಂಭಿಸಿದ್ದು, ರಾಜಕೀಯ ಬಣ್ಣ ಪಡೆದುಕೊಳ್ಳಲಾರಂಭಿಸಿದೆ. ಮುಂದಿನ ದಿನಗಳಲ್ಲಿ ಯಾವೆಲ್ಲ ಅಧಿಕಾರಿಗಳು ಗುರಿ ಆಗಲಿದ್ದಾರೆ? ಯಾವ ಬಣದ ಕೈ ಮೇಲಾಗಲಿದೆ? ಎಂಬುವುದನ್ನು ಕಾದು ನೋಡಬೇಕಾಗಿದೆ.
