ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯ 27ನೇ ವಾರ್ಡ್ ಬುದ್ಧನಗರ ಅವ್ಯವಸ್ಥೆಯ ಆಗರವಾಗಿದ್ದು, ಅಲ್ಲಿಯ ನಿವಾಸಿಗಳಿಗೆ ಮೂಲ ಸೌಕರ್ಯಗಳ ಮರೀಚಿಕೆಯಾಗಿದೆ.
ಯುಜಿಡಿ ವ್ಯವಸ್ಥೆ ಸಂಪೂರ್ಣ ಮಾಡಿಲ್ಲ. ಅರ್ಧಂಬರ್ದ ಕೆಲಸ ಮಾಡಿರುವುದರಿಂದ ಶೌಚಾಲಯದ ಕೊಳಕು ನೀರು ಸರಾಗವಾಗಿ ಹರಿಯುತ್ತಿಲ್ಲ. ನಿಂತಲ್ಲೇ ನಿಂತ ಕಾರಣ ಗಬ್ಬು ನಾರುತ್ತಿದ್ದು, ದುರ್ನಾತ ಕುಡಿದುಕೊಂಡೇ ನಿವಾಸಿಗಳು ನಿತ್ಯ ಓದ್ದಾಡುತ್ತಿದ್ದಾರೆ. ಯಾರ ಮನೆಯಲ್ಲಿಯೂ ಶೌಚಾಲಯದ ವ್ಯವಸ್ಥೆ ಇಲ್ಲ. ಕೆಲವರು ಶೀಟ್ ಮನೆಯಲ್ಲಿ ವಾಸಿಸುತ್ತಿದ್ದಾರೆ.
ಸ್ಥಳೀಯ ನಿವಾಸಿಗಳು ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಸುತ್ತ ಮುತ್ತ 10 ಅಡಿ ವ್ಯಾಪ್ತಿಯ ಮನೆಗಳಲ್ಲಿ ಬಡವರು, ಕೂಲಿ ಕಾರ್ಮಿಕರು, ಶ್ರಮಿಕ ವರ್ಗದ ಜನರು ವಾಸ ಮಾಡುತ್ತಿದ್ದು, ಇವರಿಗೆ ನಿತ್ಯ ಜೀವನ ಸಾಗಿಸುವುದೇ ಒಂದು ಕಷ್ಟದ ಕೆಲಸವಾಗಿದೆ. ಇದರ ಜತೆಗೆ ಬಟ್ಟೆ, ಪಾತ್ರೆ ತೊಳೆದ ನೀರೂ ಕೂಡ ಇಲ್ಲಿ ಶೇಖರಣೆಯಾಗಿ ಸುತ್ತಮುತ್ತಲಿನ ಮನೆಗಳಲ್ಲಿ ವಾಸಿಸುವ ನಿವಾಸಿಗಳಿಗೆ ಸಾಂಕ್ರಾಮಿಕ ರೋಗ ಹರಡುವ ಸಂಭವವಿದೆ. ಒಂದು ವೇಳೆ ಖಾಯಿಲೆ ಎದುರಾದರೆ ನಾವು ದುಡಿಯುವ ಅಲ್ಪ ಸ್ವಲ್ಪ ಹಣವನ್ನು ಆಸ್ಪತ್ರೆ, ಔಷಧಿಗೆ ಹಾಕಬೇಕು. ನಮ್ಮ ಜೀವನ ಹೀಗೆಯೇ ಆದರೆ ನಾವು ಬದುಕುವುದಾದರೂ ಹೇಗೆ” ಎಂದು ಅಲವತ್ತುಕೊಂಡರು.
“ಸುಮಾರು ಎರಡು ವರ್ಷಗಳ ಹಿಂದೆ ಬಂದು ಯುಜಿಡಿ ಗುಂಡಿ ಮಾಡಿ ಹೋಗಿದ್ದಾರೆ. ಆದರೆ ಅದನ್ನು ಈವರೆಗೆ ಮುಚ್ಚಿಲ್ಲ. ನಿವಾಸಿಗಳೇ ನಮ್ಮಗಳ ಹಣ ಖರ್ಚು ಮಾಡಿ ಎಷ್ಟು ಸಾಧ್ಯವಾಗುತ್ತದೋ ಅಷ್ಟು ಅಕ್ಕಪಕ್ಕ ಸ್ವಚ್ಛ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೇವೆ. ಆದರೂ ಸಂಪೂರ್ಣ ಬಗೆಹರಿದಿಲ್ಲ. ಇದರ ಸಂಬಂಧ ಮಹಾನಗರ ಪಾಲಿಕೆ ಸದಸ್ಯ ವಿಶ್ವನಾಥ್ ಅವರಿಗೂ ಮನವಿ ಪತ್ರ ಸಲ್ಲಿಸಿದ್ದೇವೆ. ಅವರು ಸರಿಪಡಿಸುವುದಾಗಿ ಭರವಸೆ ನೀಡಿದ್ದರಾದರೂ ಈವರೆಗೆ ಯಾವುದೇ ಸ್ಪಂದನೆ ದೊರೆತಿಲ್ಲ. ಈ ವಾರ್ಡಿಗೆ ಬಂದು ಪರಿಶೀಲನೆಯನ್ನೂ ಮಾಡಿಲ್ಲ” ಎಂದು ನಿವಾಸಿಗಳು ಆರೋಪಿಸಿದರು.
ಎಲ್ಲ ಸಮಸ್ಯೆಗಳ ನಡುವೆ ಒಂದು ವಿದ್ಯುತ್ ಕಂಬ ಕೂಡಾ ಇದೆ. ಇದರಿಂದ ನಿವಾಸಿಗಳನ್ನು ಇನ್ನಷ್ಟು ಆತಂಕಕ್ಕೀಡು ಮಾಡಿದೆ. ಭಯ ಭೀತಿಯಿಂದ ಜೀವ ಕೈಯಲ್ಲಿ ಹಿಡಿದುಕೊಂಡು ವಾಸಿಸುವ ಪರಿಸ್ಥಿತಿ ಎದುರಾಗಿದೆ. ಚಿಕ್ಕ ಮಕ್ಕಳು ಸೇರಿದಂತೆ ಯಾರಾದರೂ ಸ್ವಲ್ಪ ಆಕಡೆ ಈಕಡೆ ಓಡಾಡುವಾಗ ಏನಾದರು ಹೆಚ್ಚು ಕಡಿಮೆ ಆದರೆ ಪ್ರಾಣಾಪಾಯಕ್ಕೆ ತುತ್ತಾಗುವ ಭೀತಿಯಲ್ಲಿದ್ದೇವೆ” ಎಂದು ಅಲವತ್ತುಕೊಂಡರು.
“ಮಳೆಗಾಲದ ಸಮಯದಲ್ಲಿ ಇಲ್ಲಿಯ ಪರಿಸ್ಥಿತಿ ಹೇಳದಂತಾಗುತ್ತದೆ. ಮಳೆ ನೀರು, ತ್ಯಾಜ್ಯ ನೀರು ತುಂಬಿಕೊಂಡು ವಾಸಕ್ಕೆ ಯೋಗ್ಯವಿಲ್ಲದ ಪರಿಸ್ಥಿತಿ ಉಂಟಾಗುತ್ತದೆ. ಇಷ್ಟೆಲಾ ಸಮಸ್ಯೆ ಉಂಟಾಗುತ್ತಿದ್ದರೂ ಕೂಡ ಯಾರೂ ನಮಗೆ ಸ್ಪಂದಿಸುತ್ತಿಲ್ಲ” ಎಂದರು.
ಈ ಸಂಬಂಧ ಈ ದಿನ.ಕಾಮ್ ಮಹಾನಗರ ಪಾಲಿಕೆ ಸದಸ್ಯ ವಿಶ್ವನಾಥ್ ಅವರನ್ನು ಸಂಪರ್ಕಿಸಿದ್ದು, “ನಾವು ಕೆಲಸ ಮಾಡಲು ಹೋದಾಗ ಅಲ್ಲಿನ ನಿವಾಸಿಗಳು ತುಂಬಾ ಕಿರಿಕ್ ಮಾಡಿದ್ದರು. ಅಲ್ಲಿ ಯುಜಿಡಿ ಕೆಲಸ ಪೂರ್ತಿ ಮಾಡಿದ್ದೇವೆ. ಪೈಪ್ ಹಾಕಿ ನಂತರ ಪೈಪ್ ಮುಚ್ಚಲು ಸಿಮೆಂಟ್ ಹಾಕಿ ಕೆಲಸ ಮಾಡಿಸಲು ಲೇಬರ್ ಕರೆದುಕೊಂಡು ಹೋದಾಗ ಕಾಮಗಾರಿ ವಸ್ತು(ಮೆಟೀರಿಯಲ್)ಗಳನ್ನೇ ಕಳ್ಳತನ ಮಾಡಿದ್ದರು. ಕರೆದುಕೊಂಡು ಬಂದ ಲೇಬರ್‌ಗೆ ಹಲ್ಲೆ ಮಾಡಲು ಬಂದು ತುಂಬಾ ಗಲಾಟೆ ಮಾಡಿದರು” ಎಂದು ಹೇಳಿದರು.
“ಕುಡಿದು ಬಂದು ರಾದ್ದಾಂತ ಮಾಡಿದ್ದರು. ನಾವು ಕಾಮಗಾರಿ ಪೂರ್ಣಕ್ಕೆ ಪ್ರಯತ್ನ ಮಾಡಿ ಸಾಕಾಯ್ತು. ಸಿಮೆಂಟ್ ಮತ್ತೆ ಮೆಟೀರಿಯಲ್ ಕಳೆದುಕೊಂಡ ನಂತರ ಕೆಲಸಗಾರರು ಬರಲ್ಲ, ಕೆಲಸ ಮಾಡಲ್ಲ ಅಂದರು. ಮತ್ತೊಬ್ಬರನ್ನು ಕರೆದುಕೊಂಡು ಬಂದರೆ ಅವರೊಟ್ಟಿಗೂ ಕಿರಿಕ್ ಮಾಡಿ ಜಗಳ ಮಾಡಿ ಓಡಿಸಿದರು. ಹೀಗೆ ಮಾಡಿದರೆ ಕೆಲಸ ಮಾಡಿಸುವುದಾದರೂ ಹೇಗೆ?” ಎಂದರು.
“ನಾನು ವಾರ್ಡ್ ಅಭಿವೃದ್ಧಿಗೆ ಶ್ರಮ ಹಾಕಿದ್ದೇನೆ. ಅಲ್ಲಿ ರಸ್ತೆ ಮಾಡಲು ಹೋದಾಗ ಅಕ್ಕಪಕ್ಕ ಗಿಡಗಂಟಿಗಳು ಬೆಳೆದಿದ್ದೆವು. ಅದನ್ನೆಲ್ಲ ಸ್ವಚ್ಛಗೊಳಿಸಿ ಕಾಮಗಾರಿ ಮಾಡಿ ರಸ್ತೆ ವ್ಯವಸ್ಥೆ ಮಾಡಿಸಿದ್ದೇನೆ. ಆದರೆ ಪ್ರಸ್ತುತ ನನ್ನ ಅವಧಿ ಮುಗಿದಿದೆ. ಹಾಗಾಗಿ ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತರ ಬಳಿ ಮಾತನಾಡಿ ಅವರಿಗೆ ವಿಷಯ ತಿಳಿಸೋಣ. ಅವರು ಮಾಡುವುದಾದರೆ ಮಾಡಿಕೊಡಲಿ ನನ್ನದೇನೂ ಅಭ್ಯಂತರವಿಲ್ಲ. ಒಟ್ಟರೆಯಾಗಿ ವಾರ್ಡ್ ಅಭಿವೃದ್ಧಿ ಆಗಬೇಕು” ಎಂದು ಹೇಳಿದರು.
ಶಿವಮೊಗ್ಗ ಮೆಸ್ಕಾಂ ಅಧಿಕಾರಿ ರಮೇಶ್ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಇದು ಸ್ಮಾರ್ಟ್ ಸಿಟಿ ಅಥವಾ ನಾವು ಮಾಡಬೇಕು. ವಿದ್ಯುತ್ ಕಂಬದಿಂದ ಅಷ್ಟು ಸುಲಭವಾಗಿ ತೊಂದರೆ ಉಂಟಾಗುವ ಸಂಭವವಿಲ್ಲ. ಕರೆಂಟ್ ಹೊಡೆಯುವುದಂತೆ ತುಂಬಾ ಎಚ್ಚರ ವಹಿಸಿರುತ್ತೇವೆ” ಎಂದರು.
“ಪ್ರತಿ ವರ್ಷ ಸಾರ್ಟ್ ಸಿಟಿಗೆ ಪ್ರಪೋಸಲ್ ಕಳುಹಿಸುತ್ತೇವೆ. ಶಿವಮೊಗ್ಗ ಜಿಲ್ಲಾ ಕೇಂದ್ರವಾಗಿರುವುದರಿಂದ ಪ್ರತಿವರ್ಷದಂತೆ ಈ ವರ್ಷವೂ ಕಳುಹಿಸುತ್ತೇವೆ. ಅವರು ಎಷ್ಟು ಹಣ ಬಿಡುಗಡೆ ಮಾಡುತ್ತಾರೋ ಅದನ್ನು ನೋಡಿಕೊಂಡು ಎಲ್ಲೆಲ್ಲಿ ಕಾಮಗಾರಿ ಮಾಡಬೇಕೆಂದು ತೀರ್ಮಾನಿಸುತ್ತೇವೆ. ನೆಲಮಾಳಿಗೆಯೊಳಗೆ ಕೇಬಲ್ ಕನೆಕ್ಷನ್ ಮಾಡಬೇಕೆಂದರೆ ಒಂದು ಕಡೆ ಮಾಡುವುದಕ್ಕೆ ಬರುವುದಿಲ್ಲ. ಒಂದು ಭಾಗಕ್ಕೆ ಮಾಡಬೇಕೆಂದರೆ ಅಲ್ಲಿಯ ನಿವಾಸಿಗಳೇ ತಮ್ಮ ಸ್ವಂತ ಖರ್ಚಿನಲ್ಲಿ ಮಾಡಿಸಿಕೊಳ್ಳಬಹುದು” ಎಂದರು.
ಇದನ್ನೂ ಓದಿದ್ದೀರಾ? ದಾವಣಗೆರೆ | ರೈತರ ಜಾಗ ಕಬಳಿಸಲು ದಿದ್ದಿಗೆ ಗ್ರಾಮ ಪಂಚಾಯಿತಿ ಹುನ್ನಾರ; ಆರೋಪ
“ಅಲ್ಲಿಯ ಸುತ್ತಮುತ್ತಲಿನ ಪ್ರದೇಶದ ಎಲ್ಲ ಕಂಬಗಳನ್ನು ತೆರವುಗೊಳಿಸಬೇಕೆಂದರೆ ಇದಕ್ಕೆ ಸಾಕಷ್ಟು ಹಣ ಬೇಕಾಗುತ್ತದೆ. ಹಾಗಾಗಿ ಈ ವರ್ಷವೂ ₹4 ಕೋಟಿ ವೆಚ್ಚದ ಪ್ರಾಜೆಕ್ಟ್ ಮಾಡಲು ವರದಿ ಕಳುಸುತ್ತಿದ್ದೇವೆ. ಅನುದಾನ ಬಂದರೆ ಖಂಡಿತ ಮಾಡಿಕೊಡುತ್ತೇವೆ” ಎಂದು ತಿಳಿಸಿದ್ದಾರೆ.
ಎಂಜಿನಿಯರ್ ಸುಧೀರ್ ಅವರನ್ನು ಈ ದಿನ.ಕಾಮ್ ಸಂಪರ್ಕಿಸಿದೆಯಾದರೂ ಅವರು ಕರೆಗೆ ಲಭ್ಯವಾಗಿಲ್ಲ.
