ಈ ದಿನ ಸಂಪಾದಕೀಯ | ಕಾರ್ಯಕರ್ತರನ್ನು ಕಡೆಗಣಿಸಿದ ಬಿಜೆಪಿ ‘ಗೋ ಬ್ಯಾಕ್’ ಘೋಷಣೆಗೆ ಬೆಚ್ಚಿತೇ?

Date:

ಮತ್ತೊಮ್ಮೆ ಪ್ರಧಾನಿಯಾಗಲು ತುದಿಗಾಲ ಮೇಲೆ ನಿಂತಿರುವ ಮೋದಿಯವರಿಗೆ ಬಿಜೆಪಿ ಕಾರ್ಯಕರ್ತರ ‘ಗೋ ಬ್ಯಾಕ್’ ಘೋಷಣೆ ಮಂಡೆ ಬಿಸಿ ಮಾಡಿದೆ. ಹಾಗೆಯೇ ಕಳೆದ ಐದು ವರ್ಷದ ಬಿಜೆಪಿಯ ಕೇಂದ್ರ ಸರ್ಕಾರದ ಆಡಳಿತವನ್ನು, ಕಾರ್ಯವೈಖರಿಯನ್ನು ಬಯಲು ಮಾಡಿದೆ. ಮೋದಿಯನ್ನು ಮುಂದಿಟ್ಟು, ಅವರ ಮರೆಯಲ್ಲಿ ಗೆದ್ದುಹೋಗುತ್ತಿದ್ದ ಸಂಸದರ ‘ತಾಕತ್ತ’ನ್ನು ತೆರೆದಿಡುತ್ತಿದೆ. 

ಭಾರತೀಯ ಜನತಾ ಪಕ್ಷ ಸದ್ಯಕ್ಕೆ ಸಂದಿಗ್ಧಕ್ಕೆ ಸಿಲುಕಿದೆ. ರಾಜ್ಯದ 28 ಲೋಕಸಭಾ ಸದಸ್ಯರಲ್ಲಿ 27 ಸ್ಥಾನಗಳನ್ನು ಗೆದ್ದಿರುವ ಬಿಜೆಪಿ, ಈಗ ಮತ್ತದೇ ಗೆಲುವನ್ನು ತನ್ನದಾಗಿಸಿಕೊಳ್ಳುವ ತವಕದಲ್ಲಿದೆ. ಮೂರನೇ ಬಾರಿಗೆ ಮೋದಿಯವರನ್ನು ಪ್ರಧಾನಿಯನ್ನಾಗಿ ಮಾಡುವಲ್ಲಿ ಕಲಿತ ಬುದ್ಧಿಯನ್ನು, ಗಳಿಸಿದ ಗಂಟನ್ನು ಖರ್ಚು ಮಾಡುತ್ತಿದೆ. ಮೋದಿ ಎಂಬ ಬ್ರ್ಯಾಂಡ್ ಒಂದೇ ಸಾಕು ಎಂದು ಎದೆಯುಬ್ಬಿಸಿ ಹೇಳುತ್ತಿದ್ದರೂ, ಬಿಜೆಪಿಯ ದಿಲ್ಲಿ ನಾಯಕರು, ಮೇಲಿಂದ ಮೇಲೆ ಸಭೆಗಳನ್ನು ನಡೆಸುತ್ತ, ಅಭ್ಯರ್ಥಿಗಳ ಆಯ್ಕೆಯನ್ನು ಮುಂದೂಡುತ್ತಲೇ ಇದ್ದಾರೆ.

ಇತ್ತ, ರಾಜ್ಯ ಬಿಜೆಪಿಯ ಸ್ಥಳೀಯ ಕಾರ್ಯಕರ್ತರು ಮಹಾನ್ ಮೋದಿಯನ್ನೂ ಮೂಲೆಗೆ ತಳ್ಳಿ, ತಾವೇ ಗೆಲ್ಲಿಸಿ ಕಳುಹಿಸಿದ ಸಂಸದರ ವಿರುದ್ಧ ತಿರುಗಿ ಬಿದ್ದಿದ್ದಾರೆ. ಕ್ಷೇತ್ರಕ್ಕೆ ಕಾಲಿಡದಂತೆ ಕಟ್ಟಾಜ್ಞೆ ವಿಧಿಸಿದ್ದಾರೆ. ಕಳೆದ ಐದು ವರ್ಷಗಳ ಕಾಲ ಕೈಗೆ ಕಾಲಿಗೆ ಸಿಗುವುದಿರಲಿ, ಮುಖ ಕೂಡ ತೋರಿಸದ ಸಂಸದರ ವಿರುದ್ಧ ಸೆಟೆದು ನಿಂತಿದ್ದಾರೆ. ಸಹಿಸಿಕೊಂಡಿದ್ದ ಸಿಟ್ಟನ್ನೆಲ್ಲ ಒಟ್ಟಿಗೇ ಹೊರಹಾಕಿ ‘ಗೋ ಬ್ಯಾಕ್’ ಘೋಷಣೆ ಕೂಗುತ್ತಿದ್ದಾರೆ. ವಶೀಲಿಬಾಜಿ ಮಾಡಲು ಬಂದ ರಾಜ್ಯ ಬಿಜೆಪಿ ನಾಯಕರಿಗೆ ನೀರಿಳಿಸುತ್ತಿದ್ದಾರೆ.

2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಗೆದ್ದ 25 ಸಂಸದರಲ್ಲಿ 14 ಸಂಸದರು, ಈ ‘ಗೋ ಬ್ಯಾಕ್’ ಅಭಿಯಾನಕ್ಕೆ ಗುರಿಯಾಗಿದ್ದಾರೆ. ಬಿಜೆಪಿಯ ಕಾರ್ಯಕರ್ತರಿಗೇ ಬೇಡವಾಗಿ ‘ಇವರಿಗೆ ಟಿಕೆಟ್ ಕೊಡಬಾರದು’ ಎಂದು ಪಕ್ಷದ ಹೈಕಮಾಂಡ್ ಮೇಲೆ ಒತ್ತಡ ಹಾಕುತ್ತಿದ್ದಾರೆ. ‘ಅಕಸ್ಮಾತ್, ನಮ್ಮನ್ನು ಕಡೆಗಣಿಸಿ ಟಿಕೆಟ್ ಕೊಟ್ಟರೆ ಸೋಲಿಸುವುದು ಗ್ಯಾರಂಟಿ’ ಎನ್ನುವ ಸಂದೇಶವನ್ನು ಕೂಡ ರವಾನಿಸುತ್ತಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಇದು ಮತ್ತೊಮ್ಮೆ ಪ್ರಧಾನಿಯಾಗಲು ತುದಿಗಾಲ ಮೇಲೆ ನಿಂತಿರುವ ಮೋದಿಯವರ ಮಂಡೆ ಬಿಸಿ ಮಾಡಿದೆ. ಹಾಗೆಯೇ ಕಳೆದ ಐದು ವರ್ಷದ ಬಿಜೆಪಿಯ ಕೇಂದ್ರ ಸರ್ಕಾರದ ಆಡಳಿತವನ್ನು, ಕಾರ್ಯವೈಖರಿಯನ್ನು ಬಯಲು ಮಾಡಿದೆ. ಮೋದಿಯನ್ನು ಮುಂದಿಟ್ಟು, ಅವರ ಮರೆಯಲ್ಲಿ ಗೆದ್ದುಹೋಗುತ್ತಿದ್ದ ಸಂಸದರ ‘ತಾಕತ್ತ’ನ್ನು ತೆರೆದಿಡುತ್ತಿದೆ.

ಒಂದು ವರ್ಷದ ಹಿಂದೆ, ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ರಾಜ್ಯ ಬಿಜೆಪಿಯಲ್ಲಿ ಭಾರೀ ಬದಲಾವಣೆಗಳಾಗಿದ್ದವು. ಬೇರು ಮಟ್ಟದಿಂದ ಬಿಜೆಪಿಯನ್ನು ಕಟ್ಟಿ ಬೆಳೆಸಿದ್ದ ಯಡಿಯೂರಪ್ಪನವರನ್ನು ಕುರ್ಚಿಯಿಂದ ಕೆಳಗಿಳಿಸಿ, ಕಣ್ಣಲ್ಲಿ ನೀರು ತರಿಸಿ, ಮೂಲೆಗೆ ತಳ್ಳಲಾಗಿತ್ತು. ಸಂಘ ಪರಿವಾರ ಮುನ್ನೆಲೆಗೆ ಬಂದಿತ್ತು. ರಾಜ್ಯ ಬಿಜೆಪಿಯನ್ನು ಹಿಡಿತದಲ್ಲಿಟ್ಟುಕೊಂಡು, ಬಸವರಾಜ ಬೊಮ್ಮಾಯಿ ಎಂಬ ಬೊಂಬೆಯನ್ನು ಆಡಿಸಿತ್ತು. ರಾಜ್ಯದ ಅಭಿವೃದ್ಧಿಯನ್ನು ಹಳ್ಳ ಹಿಡಿಸಿತ್ತು. ಹಾಗೆಯೇ ಬಿಜೆಪಿ ಬಹುಸಂಖ್ಯಾತರಾದ ಲಿಂಗಾಯತರ ಅವಕೃಪೆಗೂ ಒಳಗಾಗಿತ್ತು.

ಪಕ್ಷ ಕಟ್ಟಿ ಬೆಳೆಸಿದವರನ್ನು ಅಧಿಕಾರಕ್ಕೇರಿದ ನಂತರ ನಗಣ್ಯಗೊಳಿಸುವುದು, ಅವರನ್ನು ತುಳಿದು ಮೇಲೆ ಹೋಗುವುದು ಬಿಜೆಪಿಯ ಜಾಯಮಾನ. ಸಂಘಪರಿವಾರದ ಅಜೆಂಡ. ಗೆಲ್ಲುವವರೆಗೆ ಶೂದ್ರರು, ಗೆದ್ದ ನಂತರ ಸಂಘೀಗಳು ಎಂಬ ಬಿಜೆಪಿಯ ನರಿ ನ್ಯಾಯವನ್ನು ಯಡಿಯೂರಪ್ಪ, ಈಶ್ವರಪ್ಪ, ಜಗದೀಶ್ ಶೆಟ್ಟರ್ ವಿಷಯದಲ್ಲಿ ಕರ್ನಾಟಕದ ಜನ ಕಂಡಿದ್ದಾರೆ.

ಈಗ, ಲೋಕಸಭಾ ಚುನಾವಣೆ ಎದುರಾಗಿರುವ ಸಂದರ್ಭದಲ್ಲಿ ಬಿಜೆಪಿಗೆ ಲಿಂಗಾಯತರ ನೆನಪಾಗಿದೆ. ಯಡಿಯೂರಪ್ಪನವರಿಗೆ ಮತ್ತೆ ಮಣೆ ಹಾಕಲಾಗಿದೆ. ಪುತ್ರನಿಗೆ ರಾಜ್ಯಾಧ್ಯಕ್ಷನ ಪಟ್ಟ ಕಟ್ಟಲಾಗಿದೆ. ಯಡಿಯೂರಪ್ಪನವರು ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಲು, ತಮ್ಮವರನ್ನು ತವರಿಗೆ ಕರೆತರಲು ಮುಂದಾಗಿದ್ದಾರೆ. ಇದು ಸಹಜವಾಗಿಯೇ ಸಂಘೀಗಳನ್ನು ಕೆರಳಿಸಿದೆ.

ಶೋಭಾ ಕರಂದ್ಲಾಜೆ, ಜಗದೀಶ್ ಶೆಟ್ಟರ್, ಸೋಮಣ್ಣ, ರೇಣುಕಾಚಾರ್ಯ, ಯದುವೀರ್ ಒಡೆಯರ್ ಪರ ಯಡಿಯೂರಪ್ಪನವರ ಒಲವು, ಸಂಘಪರಿವಾರದ ‘ಸಂತೋಷ’ಕ್ಕೆ ಕಲ್ಲು ಹಾಕಿದೆ. ಸಿ.ಟಿ.ರವಿ, ಬಸವರಾಜ ಬೊಮ್ಮಾಯಿ, ಮಾಧುಸ್ವಾಮಿ, ಸಿದ್ದೇಶ್ವರ್ ಮತ್ತು ಪ್ರತಾಪ್ ಸಿಂಹ ಸೆಟೆದು ನಿಲ್ಲುವಂತೆ ಮಾಡಿದೆ. ಒಂದು ಕಡೆ ಪಕ್ಷದ ಹಿಡಿತಕ್ಕಾಗಿ ಜಟಾಪಟಿ. ಮತ್ತೊಂದು ಕಡೆ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿ ಮಾಡುವ ಮಹದಾಸೆ. ನಡುವೆ ಕಾರ್ಯಕರ್ತನ ‘ಗೋ ಬ್ಯಾಕ್’ ಘೋಷಣೆ.

ಕುತೂಹಲಕರ ಸಂಗತಿ ಎಂದರೆ, ಬಿಜೆಪಿಯ ಬುಡಕ್ಕೆ ಬಿಸಿ ನೀರು ಹಾಕುತ್ತಿರುವವರು ಮತದಾರರಲ್ಲ, ಪಕ್ಷದ ನಿಷ್ಠಾವಂತ ಕಾರ್ಯಕರ್ತರು. ಬಿಜೆಪಿಯ ಬಂಡವಾಳವನ್ನು ಪಕ್ಷದ ಕಾರ್ಯಕರ್ತರೇ ‘ಗೋ ಬ್ಯಾಕ್’ ಘೋಷಣೆಯ ಮೂಲಕ ಬಯಲು ಮಾಡುತ್ತಿದ್ದಾರೆ. ಬಿಜೆಪಿ ಕತೆ ಇಷ್ಟೇ ಎಂದು ಸಾರಿ ಹೇಳುತ್ತಿದ್ದಾರೆ.

ಕಾರ್ಯಕರ್ತರನ್ನೇ ಕಡೆಗಣಿಸಿದ ಬಿಜೆಪಿ ಸಂಸದರು, ಮತದಾರರ ಕಷ್ಟ-ಸುಖ ಕೇಳುತ್ತಾರೆಯೇ? ಐದು ವರ್ಷಕ್ಕೊಮ್ಮೆ ಮತದಾರರಿಗೆ ಮುಖ ತೋರಿಸುವ ಸಂಸದರು, ಮೋದಿಯವರಿಗೆ ಮುಖ ಕೊಟ್ಟು ನಿಂತು ಮಾತನಾಡಿದ್ದೇ ಇಲ್ಲ. ಇನ್ನು ರಾಜ್ಯಕ್ಕೆ ಬರಬೇಕಿದ್ದ ತೆರಿಗೆಯನ್ನು ಕೇಳುತ್ತಾರೆಯೇ? ದೇಶದ ಅಭಿವೃದ್ಧಿ ಕುರಿತು ಯೋಚಿಸುತ್ತಾರೆಯೇ? ಕೋಟ್ಯಂತರ ರೂಪಾಯಿ ಸುರಿದು ರಾಮಮಂದಿರ ನಿರ್ಮಾಣ ಮಾಡಿದ್ದಾರೆ. ಓದಿದ ಮಕ್ಕಳಿಗೆ ಉದ್ಯೋಗ ಕೊಡದೆ ರಾಮನ ಭಜನೆ ಮಾಡಿ ಎನ್ನುತ್ತಿದ್ದಾರೆ. ಬಡವರನ್ನು ಬದುಕಲೂ ಬಿಡದೆ ಅವರಿಗೆ ಬೆಲೆ ಏರಿಕೆಯ ಬರೆ ಹಾಕಿದ್ದಾರೆ. ಕಾಗೆ ಕೂರುವ ಪ್ರತಿಮೆಗಳನ್ನು ನಿರ್ಮಿಸಿ ದೇಶದ ಜನತೆಯ ತಲೆ ಮೇಲೆ ಲಕ್ಷಗಟ್ಟಲೆ ಸಾಲ ಹೊರಿಸಿದ್ದಾರೆ.

ಇಂತಹ ಸಂಸದರು ಮತ್ತು ಆ ಸಂಸದರಿಂದ ಪ್ರಧಾನಿಯಾಗಲಿವರು ಮೋದಿಯವರು- ನಮಗೆ ಬೇಕೆ ಎಂಬ ಪ್ರಶ್ನೆ ಕೇಳಿಕೊಳ್ಳುವ ತುರ್ತು ಈಗ ಬಂದಿದೆ. ಗಾಂಧಿ ಕೊಟ್ಟ ಸ್ವಾತಂತ್ರ್ಯ, ಅಂಬೇಡ್ಕರ್ ರಚಿಸಿದ ಸಂವಿಧಾನ, ಪ್ರಜಾಪ್ರಭುತ್ವ ಕಲ್ಪಿಸಿದ ಮತದಾನದ ಮಹತ್ವವನ್ನು ಅರಿಯಬೇಕಿದೆ. ಬಿಜೆಪಿ ಕಾರ್ಯಕರ್ತರು ಕೂಗುತ್ತಿರುವ ‘ಗೋ ಬ್ಯಾಕ್’ ಘೋಷಣೆಯನ್ನು ಮೋದಿಯವರಿಗೇ ಹೇಳಿ, ಈ ದೇಶವನ್ನು ಉಳಿಸಿಕೊಳ್ಳಬೇಕಾಗಿದೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ವರ್ಷದಿಂದ ನಡೆಯುತ್ತಲೇ ಇರುವ ಅಂಬಾನಿ ಮದುವೆಯೂ, ಪೌಷ್ಟಿಕ ಆಹಾರ ಸಿಗದ 67 ಲಕ್ಷ ಶಿಶುಗಳೂ…

ಆಹಾರ ಕ್ಷೇತ್ರ ಕಾರ್ಪೊರೇಟ್‌ ಕುಳಗಳ ಕೈವಶವಾದ ನಂತರ ನಿರಂತರವಾಗಿ ಅಗತ್ಯ ವಸ್ತುಗಳ...

ಈ ದಿನ ಸಂಪಾದಕೀಯ | ಮತ್ತೆ ಮಳೆ ಹೊಯ್ಯುತಿದೆ, ಡೆಂಘೀ ಹರಡುತಿದೆ- ಆರೋಗ್ಯ ಇಲಾಖೆ ಏನು ಮಾಡುತ್ತಿದೆ?

ರಾಜ್ಯದಲ್ಲಿ ಮಳೆ ಹೆಚ್ಚಾಗುತ್ತಿದ್ದಂತೆಯೇ ಡೆಂಘೀ ಜ್ವರದಿಂದ ಬಳಲುತ್ತಿರುವವರ ಸಂಖ್ಯೆಯೂ ಜಾಸ್ತಿಯಾಗುತ್ತಿದೆ. ಅಧಿಕಾರಿಗಳು,...

ಈ ದಿನ ಸಂಪಾದಕೀಯ | ಗಾಯ ನೆಕ್ಕಿಕೊಳ್ಳುತ್ತಿರುವ ಮೋದಿ ಎಚ್ಚರಿಕೆ- ಹೊಸ ದಮನ ದಾಳಿ ದಸ್ತಗಿರಿಗಳ ಮುನ್ಸೂಚನೆ

ಮೋದಿಯವರು ಚುನಾವಣಾ ಭಾಷಣಗಳಲ್ಲಿ ಕಾರಿದ್ದ ಮುಸ್ಲಿಮ್ ದ್ವೇಷವನ್ನೂ ಅವರಿಗೆ ತಿರುಗುಬಾಣವಾಗಿ ಹೂಡಲಾಗಿದೆ....

ಈ ದಿನ ಸಂಪಾದಕೀಯ | ಮೊದಲ ಭಾಷಣದಲ್ಲೇ ಬಿಜೆಪಿಗರ ಬೆವರಿಳಿಸಿದ ರಾಹುಲ್ ಮತ್ತು ಮಹುವಾ

ಆಡಳಿತ ಪಕ್ಷ ದಾರಿ ತಪ್ಪಿ ನಡೆದಾಗ ಎಚ್ಚರಿಸುವ, ಜನಕಲ್ಯಾಣದ ವಿಷಯದಲ್ಲಿ ಜಾಣನಿದ್ರೆಗೆ...