ಶಿವಮೊಗ್ಗ ನಗರದ ಕಾಶಿಪುರ ಫ್ಲೈಓವರ್ ಕಾಮಗಾರಿ ಕೊನೆಗೂ ಪೂರ್ಣಗೊಂಡಿದ್ದು, ಸಾರ್ವಜನಿಕ ವಾಹನಗಳ ಓಡಾಟಕ್ಕೆ ಅವಕಾಶ ಕಲ್ಪಿಸಿದ್ದಾರೆ.
ಕಳೆದ ಎರಡೂವರೆ ವರ್ಷಗಳ ಹಿಂದೆ, ಕಾಶೀಪುರ ರೈಲ್ವೆ ಗೇಟ್ ಬಳಿ ಫ್ಲೈಓವರ್ ನಿರ್ಮಾಣ ಕಾರ್ಯ ಆರಂಭಿಸಲಾಗಿತ್ತು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಹಭಾಗಿತ್ವದಲ್ಲಿ, ಅಂದಾಜು ₹29 ಕೋಟಿ ವೆಚ್ಚದಲ್ಲಿ ಮೇಲ್ಸೇತುವೆ ನಿರ್ಮಾಣವಾಗಿದೆ.
ಒಂದು ವರ್ಷದಲ್ಲಿ ಕಾಮಗಾರಿ ಪೂರ್ಣಗೊಳ್ಳಬೇಕಾಗಿತ್ತು. ಆದರೆ ಕೊರೊನಾ, ಲಾಕ್‌ಡೌನ್ ಹಾಗೂ ನಿರ್ಮಾಣ ಸಂಸ್ಥೆಯ ವಿಳಂಬಗತಿಯ ಕಾಮಗಾರಿ ಸೇರಿದಂತೆ ಹಲವು ಕಾರಣಗಳಿಂದ ಫ್ಲೈಓವರ್ ನಿರ್ಮಾಣ ಕಾರ್ಯ ವಿಳಂಬವಾಗಿತ್ತು.
ಗೆಜ್ಜೇನಹಳ್ಳಿ ರೈಲ್ವೆ ಸ್ಟೇಷನ್ ಬಳಿ ಕೋಚಿಂಗ್ ಡಿಪೋ ನಿರ್ಮಾಣ ಮಾಡಲಾಗುತ್ತಿದೆ. ಇದರಿಂದ ಮುಂದಿನ ದಿನಗಳಲ್ಲಿ ಈ ಮಾರ್ಗದಲ್ಲಿ ರೈಲುಗಳ ಸಂಚಾರ ದಟ್ಟಣೆ ಹೆಚ್ಚಾಗಲಿದೆ. ಈ ಕಾರಣದಿಂದ ಕಾಶಿಪುರ ರೈಲ್ವೆ ಗೇಟ್ ಬಳಿ ಫ್ಲೈಓವರ್ ನಿರ್ಮಾಣಗೊಂಡಿದೆ.
ಈ ಸುದ್ದಿ ಓದಿದ್ದೀರಾ? ಮಂಡ್ಯ | ತರಕಾರಿಗಳ ಬೆಲೆ ದುಬಾರಿ; ಗ್ರಾಹಕರ ಜೇಬಿಗೆ ಕತ್ತರಿ
ಫ್ಲೈಓವರ್ ನಿರ್ಮಾಣಕ್ಕೂ ಮುನ್ನ ಸದರಿ ರೈಲ್ವೆ ಗೇಟ್ ಬಳಿ ವಾಹನ ಸಂಚಾರ ದುಸ್ತರವಾಗಿ ಪರಿಣಮಿಸಿತ್ತು. ಫ್ಲೈಓವರ್ ನಿರ್ಮಾಣದ ಬಳಿಕ, ಸದರಿ ಸ್ಥಳದಲ್ಲಿ ಸುಗಮ ವಾಹನ ಸಂಚಾರಕ್ಕೆ ಅನುಕೂಲವಾಗಿದ್ದು, ಸಾರ್ವಜನಿಕರ ಗಮನ ಸೆಳೆಯುತ್ತಿದೆ.