ಶಿವಮೊಗ್ಗ ನಗರದಲ್ಲಿ ಮಾರಕಾಸ್ತ್ರ ಹಿಡಿದು ರಸ್ತೆಯುದ್ದಕ್ಕೂ ಬೈಕ್‌ನಲ್ಲಿ ಓಡಾಡಿದ್ದು, ಸಾರ್ವಜನಿಕರಿಗೆ ಭಯ ಹುಟ್ಟಿಸುವಂತೆ ಮಾಡಿ, ತಮ್ಮ ಬೈಕ್ ದಾಟದಂತೆ ಬೆದರಿಕೆ ಹಾಕುತ್ತಿದ್ದ ಮೂವರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಶಿವಮೊಗ್ಗ ನಗರದ ಮಿಳಘಟ್ಟ ಮುಖ್ಯ ರಸ್ತೆಯಿಂದ ಅಣ್ಣಾನಗರದ ಕಡೆ ಹೋಗುವ ಮಾರ್ಗದಲ್ಲಿ ಜನವರಿ 13ರ ಸಂಜೆ ಸುಮಾರು 5:30ರಿಂದ 5:45ರ ಸಮಯದಲ್ಲಿ ಅಶೋಕನಗರ ರೆಹಮಾನ್, ಲಷ್ಕರ್ ಮೊಹಲಾ ವಾಸಿ ಮುಸ್ತಫಾ ಮತ್ತು ಜೆ ಪಿ ನಗರ ವಾಸಿ ಜಾಫರ್ ಬೈಕ್‌ನಲ್ಲಿ ಹೋಗುತ್ತಿದ್ದರು.
ಬೈಕ್‌ನಲ್ಲಿ ಹೋಗುವಾಗ ಈ ಮೂವರು ಕೈಗಳಲ್ಲಿ ಅಪಾಯಕಾರಿ ಆಯುಧಗಳನ್ನು ಹಿಡಿದುಕೊಂಡು ಸಾರ್ವಜನಿಕರಿಗೆ ಭಯವನ್ನುಂಟು ಮಾಡುತ್ತ, ತಮ್ಮ ಬೈಕನ್ನು ಓವರ್ ಟೇಕ್ ಮಾಡಿಕೊಂಡು ಮುಂದೆ ಹೋಗದಂತೆ ಹಿಂಬದಿ ಬರುವ ವಾಹನ ಸವಾರರಿಗೂ ಬೆದರಿಕೆ ಹಾಕುತ್ತಿರುವುದು ದೊಡ್ಡಪೇಟೆ ಪೊಲೀಸರಿಗೆ ಮಾಹಿತಿ ಬಂದಿದೆ.
ಮಾಹಿತಿ ತಿಳಿದ ಪೊಲೀಸರು ಅಣ್ಣಾನಗರದ ಬಳಿ ಹೋಗುವಾಗ ನಾಲ್ಕನೇ ಕ್ರಾಸ್ ಬಳಿ ಮಾರಕಾಸ್ತ್ರ ಹಿಡಿದುಕೊಂಡು ಹೋಗುತ್ತಿದ್ದ ಆರೋಪಿಗಳು ಸಮವಸ್ತ್ರದಲ್ಲಿದ್ದ ಪೊಲೀಸರನ್ನು ನೋಡಿ ವೇಗವಾಗಿ ಬೈಕ್ ಚಾಲನೆ ಮಾಡಿಕೊಂಡು ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ.
ಈ ಸುದ್ದಿ ಓದಿದ್ದೀರ ? ಶಿವಮೊಗ್ಗ ನಗರದಲ್ಲಿ ಚಾಕು ಇರಿತ ಪ್ರಕರಣ; ಓರ್ವನ ಬಂಧನದ ಕುರಿತು ಎಸ್‌ಪಿ ಪ್ರತಿಕ್ರಿಯೆ
ಆರೋಪಿಗಳು ಮಿಳಘಟ್ಟ ಮುಖ್ಯ ರಸ್ತೆಯಿಂದಲೂ ಮಾರಕಾಸ್ತ್ರ ಹಿಡಿದು ಜನರಿಗೆ ತೋರಿಸುತ್ತ ಭಯವನ್ನುಂಟುಮಾಡಿದ್ದರು. ಅಲ್ಲದೆ ಹಿಂಬಾಗ ಬರುವ ವಾಹನ ಸವಾರಿಗೆ ಮುಂದೆ ಹೋಗದಂತೆ ತಡೆಯುತ್ತ ತೊಂದರೆ ನೀಡಿದ ಮೂವರ ವಿರುದ್ಧ ದೂರು ದಾಖಲಾಗಿದೆ.