ದಲಿತ ಸಮುದಾಯಕ್ಕೆ ಸೇರಿದ್ದ ವ್ಯಕ್ತಿಯೋರ್ವರು ಅನುಮಾನಾಸ್ಪದವಾಗಿ ಕಳೆದ ಆರು ತಿಂಗಳ ಹಿಂದೆ ಮೃತಪಟ್ಟಿದ್ದರು. ಮೃತಪಟ್ಟು ಆರು ತಿಂಗಳು ಕಳೆದಿದ್ದರೂ ಕೂಡ ಮೃತಪಟ್ಟ ವ್ಯಕ್ತಿಯ ಪತ್ನಿ ಕಚೇರಿಗಳನ್ನು ಅಲೆದಾಡುತ್ತಿರುವ ವಿಚಾರವೊಂದು ಶಿವಮೊಗ್ಗ ಜಿಲ್ಲೆಯ ಮೆಗ್ಗಾನ್ ಸರ್ಕಾರಿ ಜಿಲ್ಲಾ ಆಸ್ಪತ್ರೆಯಲ್ಲಿ ಬೆಳಕಿಗೆ ಬಂದಿದೆ.
ಚಿಕ್ಕಮಗಳೂರು ಜಿಲ್ಲೆ ಎನ್ ಆರ್ ಪುರ ತಾಲೂಕಿನ ಮುತ್ತಿನಕೊಪ್ಪದ ಕೊರಲುಕೊಪ್ಪ ಗ್ರಾಮದ ನಿವಾಸಿ ಮಂಜುನಾಥ್ (42) ಎಂಬುವವರು 2024ರ ಮೇ 18ರಂದು ಶಿವಮೊಗ್ಗಕ್ಕೆ ತೆರಳುವುದಾಗಿ ಹೇಳಿ ಮನೆಬಿಟ್ಟಿದ್ದರು. ಆ ಬಳಿಕ ನಾಪತ್ತೆಯಾಗಿದ್ದರು. ಈ ಬಗ್ಗೆ ಮಂಜುನಾಥ್ ಅವರ ಪತ್ನಿ ಅನುಪಮ ಎಂಬುವವರು ಎನ್ ಆರ್ ಪುರ ಠಾಣೆಯಲ್ಲಿ ಕಾಣೆಯಾಗಿದ್ದಾರೆ ಎಂದು ಠಾಣಾಧಿಕಾರಿಗಳಿಗೆ ದೂರು ನೀಡಿದ್ದರು. ಬಳಿಕ 2024ರ ಮೇ 21ರಂದು ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.
ಆ ಬಳಿಕ ಟ್ಯಾಂಕರ್ ಚಾಲಕನ ಅಜಾಗರೂಕತೆ ಹಾಗೂ ವೇಗದ ಚಾಲನೆಯ ಪರಿಣಾಮ ಪಾದಚಾರಿಯಾಗಿದ್ದ ಮಂಜುನಾಥ್ ಅವರಿಗೆ ಡಿಕ್ಕಿ ಹೊಡೆದು ವಾಹನ ನಿಲ್ಲಿಸದೆ ಪರಾರಿಯಾಗಿದ್ದ. ಈ ಸಮಯದಲ್ಲಿ ಮಂಜುನಾಥ್ ಎಂಬ ವ್ಯಕ್ತಿಯ ತಲೆಗೆ ತೀವ್ರ ಸ್ವರೂಪದ ರಕ್ತದ ಗಾಯ ಆದ ಕಾರಣ ವ್ಯಕ್ತಿ ಮಾತಾಡುವ ಪರಿಸ್ಥಿತಿಯಲ್ಲಿ ಇರಲಿಲ್ಲ. ಅರೆ ಪ್ರಜ್ಞಾವಸ್ಥೆಯಲ್ಲೇ ಶಿವಮೊಗ್ಗ ಜಿಲ್ಲಾ ಮೆಗ್ಗಾನ್ ಆಸ್ಪತ್ರೆಗೆ ಒಳ ರೋಗಿಯಾಗಿ ದಾಖಲಾಗಿದ್ದರು. ಅಪರಿಚಿತರು 108 ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಿದ್ದರು. ಬಳಿಕ ಮಂಜುನಾಥ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು.

ಆಸ್ಪತ್ರೆಗೆ ದಾಖಲಾದ ಸಮಯದಲ್ಲಿ ಮಂಜುನಾಥ್ ಎಂಬ ಹೆಸರಿನ ಬದಲಾಗಿ ಮಹಾಂತೇಶ್ ಎಂಬ ಹೆಸರು ಶಿವಮೊಗ್ಗ ಮೆಗ್ಗಾನ್ ಜಿಲ್ಲಾಸ್ಪತ್ರೆಯಲ್ಲಿ ನಮೂದಾಗಿದ್ದು, ಯಾರು ಈ ಹೆಸರು ನೀಡಿದರು ಎಂಬ ಮಾಹಿತಿ ಪತ್ನಿ ಅನುಪಮಾ ಅವರಿಗೆ ಇಲ್ಲದಾಗಿತ್ತು.
ತದ ನಂತರ 26 ಮೇ 2024 ರಂದು ಎನ್ ಆರ್ ಪುರ ಠಾಣೆಯ ಈಶ್ವರ್ ಎಂಬ ಪೊಲೀಸ್ ಕಾನ್ಸ್ಟೇಬಲ್ ಒಬ್ಬರು ಕರೆ ಮಾಡಿ ಮಂಜುನಾಥ್ ಅವರ ಫೊಟೋವನ್ನು ಕಳಿಸಿದ್ದರು. ಗುರುತು ಪತ್ತೆ ಹಚ್ಚಿದ್ದರೂ ದೇಹ ನೋಡಲು ಬರುವುದಕ್ಕೂ ಮೊದಲೇ ಪತಿಯ ಮೃತದೇಹವನ್ನು ಆತುರಾತುರವಾಗಿ ದಫನ ಮಾಡಲಾಗಿತ್ತು. ನಮಗೆ ಪತಿಯ ದೇಹ ನೋಡಲು ಸಹ ಅವಕಾಶವಿಲ್ಲದಾಯಿತು ಎಂದು ಅನುಪಮಾ ಆರೋಪಿಸಿದ್ದಾರೆ.
ಇಷ್ಟೆಲ್ಲಾ ಆದ ಬಳಿಕ ಹೊನ್ನಾಳಿ ಠಾಣೆ ಪೊಲೀಸರೊಬ್ಬರು ಮೆಗ್ಗಾನ್ ಆಸ್ಪತ್ರೆ ವೈದ್ಯರಾದ ಗಿರೀಶ್ ಅವರಿಗೆ ಇವರ ಹೆಸರು ತಪ್ಪಾಗಿ ನಮೂದಾಗಿದೆ. ಇದನ್ನು ಮಹಾಂತೇಶ್ ಬದಲು ಮಂಜುನಾಥ್ ಎಂದು ಬದಲಾವಣೆ ಮಾಡಲು ತಿಳಿಸಿದ್ದಾರೆ. ಇದರಿಂದ ‘ಡೆತ್ ಸರ್ಟಿಫಿಕೇಟ್’ ದೊರೆಯಲಿದೆ ಎಂದು ತಿಳಿಸಿದ್ದರು. ಅದರಂತೆ ವೈದ್ಯರಾದ ಗಿರೀಶ್ ಅವರು ಮಂಜುನಾಥ್ ಎಂದು ಹೆಸರು ಬದಲಾವಣೆ ಮಾಡಿಕೊಟ್ಟಿದ್ದಾರೆ, ಅಲ್ಲದೇ ಇದರ ಪ್ರತಿ ಸಹ ನೀಡಿದ್ದಾರೆ.
ಆ ಬಳಿಕ ಶಿವಮೊಗ್ಗ ಜಿಲ್ಲಾ ಸರ್ಜನ್ ಸಿದ್ದನ ಗೌಡ ಅವರು ಹೆಸರು ಬದಲಾವಣೆ ಮಾಡುವುದು ಆಗಲ್ಲ. ನೀವು 21 ದಿನ ನಂತರ ಆಸ್ಪತ್ರ ಗೆ ಮರಣ ಪ್ರಮಾಣ ಪತ್ರ ಕೇಳಲು ಬಂದಿರುವ ಕಾರಣ ‘ಡೆತ್ ಸರ್ಟಿಫಿಕೇಟ್’ ನೀಡಲು ಆಗಲ್ಲ. ಹಾಗಾಗಿ ನಿಮಗೆ ‘ಡೆತ್ ಸರ್ಟಿಫಿಕೇಟ್’ ಪಡೆಯಲು ನೀವು ಹೊನ್ನಾಳಿ ಪೊಲೀಸ್ ಠಾಣೆಯಿಂದ ಪತ್ರ ತೆಗೆದುಕೊಂಡು ಬನ್ನಿ ಹೆಸರು ಬದಲಾವಣೆ ಮಾಡಿ ಕೊಡುತ್ತೇನೆ ಎಂದು ತಿಳಿಸಿದ್ದಾರೆ ಎಂಬುದು ಅನುಪಮಾ ಅವರ ಆರೋಪ.

ಆ ಬಳಿಕ ಹೊನ್ನಾಳಿ ಠಾಣೆಯಿಂದ ಕಳೆದ ಆಗಸ್ಟ್ 27ರಂದು ಅನುಪಮಾ ಹೆಸರು ಬದಲಾವಣೆ ಪತ್ರ ತಂದ ನಂತರ, ಇದು ಆಗಲ್ಲ, ದಾವಣಗೆರೆ ಜಿಲ್ಲಾ ಎಸ್‌ಪಿ ಅವರಿಂದ ಲೆಟರ್ ತರಬೇಕು ಎಂದು ಸಿದ್ದನಗೌಡ ತಾಕೀತು ಮಾಡಿದ್ದಾರೆ. ಬಳಿಕ ದಾವಣಗೆರೆ ಎಸ್ಪಿ ಉಮಾ ಪ್ರಶಾಂತ್ ಅವರಿಂದಲೂ ಆಗಸ್ಟ್ 29ರಂದು ‘ಹೆಸರು ಬದಲಾವಣೆ ಪತ್ರ’ ತಂದಿದ್ದರು.
ಆ ಬಳಿಕವೂ ಒಪ್ಪದ ಶಿವಮೊಗ್ಗ ಜಿಲ್ಲಾ ಸರ್ಜನ್ ಸಿದ್ದನ ಗೌಡ, ನ್ಯಾಯಾಲಯದ ಆದೇಶ ಪ್ರತಿ ತೆಗೆದುಕೊಂಡು ಬರಬೇಕು. ನಂತರ ಮರಣ ಪ್ರಮಾಣ ಪತ್ರ ಮಾಡಿಸಿಕೊಳ್ಳಿ ಎಂದು ತಿಳಿಸಿ, ಕಚೇರಿಯಿಂದ ಕಚೇರಿಗೆ ಅಲೆದಾಡುವಂತೆ ಮಾಡುತ್ತಿರುವುದಾಗಿ ನೊಂದ ಸಂತ್ರಸ್ತ ಮಹಿಳೆ ಅನುಪಮಾ ಈ ದಿನ ಡಾಟ್ ಕಾಮ್ ಜೊತೆಗೆ ತಮ್ಮ ನೋವು ತೋಡಿಕೊಂಡಿದ್ದಾರೆ.
“ನನಗೆ ಈಗ ಎಲ್ಲದಕ್ಕೂ ನನ್ನ ಪತಿಯ ‘ಡೆತ್ ಸರ್ಟಿಫಿಕೇಟ್’ ಅಗತ್ಯವಿದೆ. ನಾವು ಕಡು ಬಡವರು. ನನ್ನ ಗಂಡ ಕೂಲಿ ಮಾಡುತ್ತಿದ್ದರು. ನನಗೆ ಒಬ್ಬ ಮಗ ಇದ್ದಾನೆ. ಆತನಿಗೆ ವಿದ್ಯಾಭ್ಯಾಸ ಮಾಡಿಸಲು ಕಷ್ಟವಾಗುತ್ತಿದೆ. ಆದರೆ, ಶಿವಮೊಗ್ಗ ಜಿಲ್ಲಾ ಸರ್ಜನ್ ಸಿದ್ದನ ಗೌಡ ಅವರು ನನ್ನನ್ನು ಕಚೇರಿಯಿಂದ ಕಚೇರಿಗೆ ಅಲೆದಾಡಿಸಿ, ಸತಾಯಿಸುತ್ತಿದ್ದಾರೆ” ಎಂದು ತಮ್ಮ ನೋವು ತೋಡಿಕೊಂಡಿದ್ದಾರೆ.

ಶಿವಮೊಗ್ಗ ಜಿಲ್ಲಾ ಪಂಚಾಯತ್ ಸಿ ಇ ಓ ಹೇಮಂತ್ ಅವರ ಬಳಿ ಅನುಪಮಾ ಈ ದಿನ ಡಾಟ್ ಕಾಮ್ ನೊಂದಿಗೆ ತೆರಳಿ ಪತಿಯ ‘ಡೆತ್ ಸರ್ಟಿಫಿಕೇಟ್’ ಕೊಡಿಸಿಕೊಡಬೇಕಾಗಿ ಮನವಿ ಮಾಡಿದ್ದು, ಎರಡು ದಿನ ಕಾಲವಕಾಶ ನೀಡಿ ಶಿವಮೊಗ್ಗ ಜಿಲ್ಲಾಸ್ಪತ್ರೆ ಸರ್ಜನ್ ರೊಂದಿಗೆ ಮಾಹಿತಿ ಪಡೆದು ತಿಳಿಸುತ್ತೇನೆ ಎಂದಿದ್ದಾರೆ. ಆದರೆ ಇದಾದ ನಂತರ ಶಿವಮೊಗ್ಗ ಜಿಲ್ಲಾ ಪಂಚಾಯತ್ ಸಿ ಇ ಓ ಸಂಪರ್ಕಕ್ಕೆ ಸಿಕ್ಕಿಲ್ಲ.
ಶಿವಮೊಗ್ಗ ಜಿಲ್ಲಾ ಮೆಗ್ಗಾನ್ ಆಸ್ಪತ್ರೆಯ ಎಂ ಎಸ್(Superintendent) ತಿಮ್ಮಪ್ಪ ಹಾಗೂ ಸರ್ಕಾರಿ ವೈದ್ಯಕೀಯ ಕಾಲೇಜಿನ (ಡೀನ್) ಅಧಿಕ್ಷಕರು ವಿರೂಪಾಕ್ಷಪ್ಪ ಈ ದಿನ ಡಾಟ್ ಕಾಮ್ ಜೊತೆಗೆ ಮಾತನಾಡಿ, ಶಿವಮೊಗ್ಗ ಜಿಲ್ಲಾಸ್ಪತ್ರೆ ಸರ್ಜನ್ ಬಳಿ ಮಾಹಿತಿ ಪಡೆಯುತ್ತೇವೆ. ಕಾನೂನು ರೀತಿಯಲ್ಲಿ ಅವಕಾಶ ಏನು ಇರಲಿದೆ. ಆ ರೀತಿಯಲ್ಲಿ ಬಗೆಹರಿಸಿ ಕೊಡುವ ಪ್ರಯತ್ನದ ಭರವಸೆ ನೀಡಿದ್ದರು. ನಂತರ ಶಿವಮೊಗ್ಗ ಜಿಲ್ಲಾಸ್ಪತ್ರೆ ಸರ್ಜನ್ ಸಿದ್ದನ ಗೌಡ ಅವರು ನಮ್ಮ ಸಂಪರ್ಕಕ್ಕೆ ಲಭ್ಯವಾಗಲಿಲ್ಲ.

ನಂತರ ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿಯಲ್ಲಿ ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್ ಶಿವಮೊಗ್ಗ ಜಿಲ್ಲಾ ಪ್ರಗತಿ ಪರಿಶೀಲನೆ ಸಭೆಯ ವೇಳೆ ಪತ್ರಕರ್ತರು ಸಿದ್ದನ ಗೌಡರನ್ನ ಭೇಟಿಯಾಗಿ ವಿಚಾರಿಸಿದಾಗ, ಉಡಾಫೆಯಿಂದ ಉತ್ತರಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಹಲವು ಪ್ರಶ್ನೆಗಳನ್ನು ಎತ್ತಿರುವ ಸಂತ್ರಸ್ತ ಮಹಿಳೆ
‘ಹಿಟ್ ಅಂಡ್ ರನ್ ಆರೋಪ’ ಕೇಳಿ ಬಂದಿದೆ. ಪ್ರಕರಣಕ್ಕೆ ಸಂಬಂಧಪಟ್ಟ ವಾಹನ ಯಾರದು? ಡಿಕ್ಕಿ ಹೊಡೆದ ವಾಹನ ಯಾರದು ಏನು ಎಂಬ ಮಾಹಿತಿ ಪೊಲೀಸ್ ಇಲಾಖೆಗೆ ಮಾಹಿತಿ ಇಲ್ಲವೇ? ಎಂಬ ಪ್ರಶ್ನೆಯನ್ನು ಮಂಜುನಾಥ್ ಕುಟುಂಬ ಎತ್ತಿದೆ.
ಇದನ್ನು ಓದಿದ್ದೀರಾ? ‘ಈದಿನ’ದ ಜವಾಬ್ದಾರಿ ಮತ್ತಷ್ಟು ಹೆಚ್ಚಿಸಿದ ‘ಓದುಗರ ಸಮಾವೇಶ’
ಶವವನ್ನು ನಮಗೆ ಹಸ್ತಾಂತರ ಮಾಡದೇ ಆತುರ ಆತುರವಾಗಿ ದಫನ ಮಾಡಿದ್ದು ಯಾಕೆ? ದಫನ ಆದ ಕೆಲವೇ ನಿಮಿಷದಲ್ಲಿ ನಮಗೆ ಮಾಹಿತಿ ನೀಡಲು ಹೇಗೆ ಸಾಧ್ಯವಾಯಿತು? ‘ಡೆತ್ ಸರ್ಟಿಫಿಕೇಟ್’ ಕೊಡಬೇಕಾದ ಸಿದ್ದನ ಗೌಡರವರು ಸತಾಯಿಸುತ್ತಿರುವುದು ಯಾಕೆ? ಪ್ರಕರಣ ಬಹಳಷ್ಟು ಅನುಮಾನದಿಂದ ಕೂಡಿದ್ದು ಇದರ ಸಂಬಂಧ ಉನ್ನತ ಮಟ್ಟದಲ್ಲಿ ತನಿಖೆ ಮಾಡುವ ಅವಶ್ಯಕತೆ ಇದೆ ಎಂದು ಅನಿಸುತ್ತಿದೆ ಎಂದು ಮಂಜುನಾಥ್ ಅವರ ಪತ್ನಿ ಅನುಪಮಾ ಅವರು ತಮ್ಮ ಅನುಮಾನಗಳನ್ನು ಹೊರಹಾಕಿದ್ದಾರೆ.
