ಶಿವಮೊಗ್ಗ ಜಿಲ್ಲೆಯಲ್ಲಿ ಝೀಕಾ ವೈರಸ್‌ನಿಂದ ವ್ಯಕ್ತಿಯೋರ್ವರು ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ. ಇದು ರಾಜ್ಯದಲ್ಲಿನ ಮೊದಲ ಪ್ರಕರಣವಾಗಿದೆ.
ಶಿವಮೊಗ್ಗ ನಗರದ ಗಾಂಧಿನಗರದ ನಿವಾಸಿ 74 ವರ್ಷದ ವ್ಯಕ್ತಿ ಶುಕ್ರವಾರ ಮನೆಯಲ್ಲಿ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.
ತೀವ್ರ ಜ್ವರದಿಂದ ಬಳಲುತ್ತಿದ್ದ ಅವರನ್ನು ಜೂ.19ರಂದು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರನ್ನು ಜೂ. 21ರಂದು ಪರೀಕ್ಷಿಸಿದಾಗ ಝೀಕಾ ಸೋಂಕು ಇರುವುದು ಪತ್ತೆಯಾಗಿತ್ತು.
ಬಳಿಕ ರಾಷ್ಟ್ರೀಯ ರೋಗ ಸೂಕ್ಷ್ಮಾಣುಗಳ ವೈಜ್ಞಾನಿಕ ಅಧ್ಯಯನ ಸಂಸ್ಥೆಗೆ ರಕ್ತದ ಮಾದರಿಯನ್ನು ಕಳಿಸಿದ್ದು, ಅಲ್ಲಿಯೂ ಝೀಕಾ ಸೋಂಕು ಇರುವುದು ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಅವರಿಗೆ ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಮುಂದುವರಿಸಲಾಗಿತ್ತು.
ಇದನ್ನು ಓದಿದ್ದೀರಾ? ತುಮಕೂರು | ಯಾವ ಜೀವಿಯನ್ನೂ ದ್ವೇಷಮಾಡುವ ಹಕ್ಕು ಯಾರಿಗೂ ಇಲ್ಲ : ನಿಕೇತ್ ರಾಜ್ ಮೌರ್ಯ
ಗುರುವಾರ ಕುಟುಂಬಸ್ಥರು ಆಸ್ಪತ್ರೆಯಿಂದ ಡಿಸ್ಟಾರ್ಜ್ ಮಾಡಿಸಿಕೊಂಡು ಮನೆಗೆ ಕರೆದೊಯ್ದಿದ್ದರು. ಶುಕ್ರವಾರ ಅವರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಸಾವನ್ನಪ್ಪಿದ ವ್ಯಕ್ತಿ, ಜ್ವರ ಮಾತ್ರವಲ್ಲದೆ ವಿವಿಧ ಆರೋಗ್ಯ ಸಮಸ್ಯೆಯಿಂದ ಅವರು ಬಳಲುತ್ತಿದ್ದರು ಎಂದು ವರದಿಯಾಗಿದೆ.
ಈ ಕುರಿತು ಶಿವಮೊಗ್ಗ ಜಿಲ್ಲಾ ಆರೋಗ್ಯಾಧಿಕಾರಿ ಡಾ. ನಟರಾಜ್ ಸ್ಪಷ್ಟನೆ ನೀಡಿದ್ದು, “ಕೇವಲ ಝೀಕಾ ವೈರಸ್‌ನಿಂದ ವ್ಯಕ್ತಿ ಸಾಯಲು ಸಾಧ್ಯವಿಲ್ಲ. ನಿನ್ನೆ ಮೃತಪಟ್ಟಿರುವ 74 ವರ್ಷದ ವ್ಯಕ್ತಿ, ಬಹು ಅಂಗಾಂಗ ವೈಫಲ್ಯಗಳಿಂದ ಬಳಲುತ್ತಿದ್ದರು” ಎಂದು ತಿಳಿಸಿದ್ದಾರೆ.