ಯಾರೂ ಕೂಡ ಅರಗಿಸಿಕೊಳ್ಳಲಾಗದಂತಹ ಗುಡ್ಡ ಕುಸಿತ ಭೀಕರ ದುರಂತ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ ಶಿರೂರು ರಾಷ್ಟ್ರೀಯ ಹೆದ್ದಾರಿ ನಲ್ಲಿ ಕಳೆದ ಜುಲೈ 16ರಂದು ನಡೆದಿದೆ.
ಘಟನೆ ನಡೆದು 11 ದಿವಸ ಕಳೆದಿದ್ದು, ಕಾರ್ಯಾಚರಣೆಯು ಯಾವುದೇ ನಿರೀಕ್ಷಿತ ಪ್ರಮಾಣದ ಬೆಳವಣಿಗೆ ನಡೆದಿಲ್ಲ. ಇದುವರೆಗೆ 8 ಜನರ ಮೃತದೇಹ ಪತ್ತೆಯಾಗಿದ್ದು, ಕೇರಳ ಮೂಲದ ಲಾರಿ ಚಾಲಕ ಅರ್ಜುನ್ ಮತ್ತು ಇತರ ಇಬ್ಬರು ವ್ಯಕ್ತಿಗಳು ಇನ್ನೂ ಪತ್ತೆಯಾಗಿಲ್ಲ.
ದುರಂತ ಸಂಭವಿಸಿದ ಸ್ಥಳದಲ್ಲಿ ಪೊಲೀಸ್ ಇಲಾಖೆ, ಸ್ಥಳೀಯರು, ಅಗ್ನಿಶಾಮಕದಳ, ರಕ್ಷಣಾ ತಂಡಗಳು, ಎನ್ ಡಿ ಆರ್ ಎಫ್, ಎಸ್ ಡಿ ಆರ್ ಎಫ್ ಪಡೆ ನಂತರ ಸೇನೆಯನ್ನೂ ಕರೆಸಿ ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ. ನಿರೀಕ್ಷಿತ ಪ್ರಮಾಣದಲ್ಲಿ ಕಾರ್ಯಾಚರಣೆ ಫಲ ಕಾಣದ ಹಿನ್ನೆಲೆಯಲ್ಲಿ ಜನರು ನಿರಾಶೆಗೆ ಒಳಗಾಗಿದ್ದಾರೆ.
ಇದೀಗ ಲಾರಿ ಇದೆ ಎಂದು ಶಂಕಿಸಲಾದ ಸ್ಥಳದಲ್ಲಿ ಲಾರಿ ಇರುವಿಕೆಯನ್ನು ಖಾತ್ರಿ ಪಡಿಸಲು ಮತ್ತು ಲಾರಿ ಒಳಗಡೆ ಇರಬಹುದು ಎಂದು ಶಂಕೆ ಇರುವ ಕೇರಳದ ಚಾಲಕ ಅರ್ಜುನ್ ಅವರನ್ನು ಹೊರತೆಗೆಯಲು ಮುಳುಗು ತಜ್ಞ ಹಾಗೂ ಸಾಮಾಜಿಕ ಕಾರ್ಯಕರ್ತ ಈಶ್ವರ್ ಮಲ್ಪೆಯವರಿಗೆ ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಗಳಿಂದ ಕರೆ ಹೋಗಿದೆ. ಈ ಸುದ್ದಿಯನ್ನು ಖುದ್ದು ಈಶ್ವರ್ ಮಲ್ಪೆ ತಂಡ ಈ ದಿನ.ಕಾಮ್ಗೆ ಖಾತ್ರಿ ಪಡಿಸಿದೆ.
ಈಶ್ವರ್ ಮಲ್ಪೆ ಮತ್ತು ತಂಡ ಮಧ್ಯರಾತ್ರಿ ಮಲ್ಪೆಯಿಂದ ಹೊರಟು, ಶನಿವಾರ ಬೆಳಗ್ಗೆ 7.30ಕ್ಕೆ ಶಿರೂರಿಗೆ ತಲುಪಿ ಕಾರ್ಯಾಚರಣೆ ನಡೆಸಲಿದೆ ಎಂದು ತಿಳಿದುಬಂದಿದೆ.
ಈ ಕಾರ್ಯಾಚರಣೆಯು ನಾವೆಣಿಸಿದಷ್ಟು ಸುಲಭವಿಲ್ಲ. ಜೀವದ ಹಂಗನ್ನು ತೊರೆದು ನೀರಿನಾಳದಲ್ಲಿ ಹುಡುಕಾಟ ನಡೆಸಬೇಕಾಗಿದೆ. ಮಡಿಕೇರಿಯ ಕುಶಾಲನಗರದ ಕಾವೇರಿ ನದಿಯಲ್ಲಿ ಕಳೆದ ಐದು ದಿನಗಳಿಂದ ಹುಡುಕಾಟ ನಡೆಸುತ್ತಿದ್ದ ಮೃತದೇಹವನ್ನು ಪತ್ತೆಹಚ್ಚಿ ಸಂಬಂಧಪಟ್ಟವರಿಗೆ ಹಸ್ತಾಂತರ ಮಾಡಿ ಈಗ ಶಿರೂರಿಗೆ ಬರುತ್ತಿದ್ದೇವೆ ಎಂದು ಈಶ್ವರ್ ಮಲ್ಪೆ ತಂಡ ಹೇಳಿಕೊಂಡಿದೆ.
ಈ ದಿನ.ಕಾಮ್ ಜೊತೆ ಮಾತನಾಡಿದ ಈಶ್ವರ ಮಲ್ಪೆ ತಂಡದ ರಕ್ಷಿತ್, “ಸದ್ಯ ನಮ್ಮ ತಂಡದಲ್ಲಿ ಎಂಟು ಮಂದಿ ಇದ್ದೇವೆ. ಈಶ್ವರ್ ಮಲ್ಪೆಯವರ ನೇತೃತ್ವದಲ್ಲಿ ನಮ್ಮ ತಂಡ ಹಲವೆಡೆ ಕಾರ್ಯಾಚರಣೆ ನಡೆಸಿದೆ. ಶಿರೂರಿಗೆ ಬರುವಂತೆ ನಮಗೂ ಕರೆ ಬಂದಿದೆ. ಬೆಳಗ್ಗೆ 7.30ರ ಸುಮಾರಿಗೆ ಘಟನಾ ಸ್ಥಳಕ್ಕೆ ತೆರಳಿ, ಅಲ್ಲಿದ್ದವರಿಂದ ಎಲ್ಲ ಮಾಹಿತಿಗಳನ್ನು ಪಡೆದ ನಂತರ ನಮ್ಮ ಕಾರ್ಯಾಚರಣೆಯು ನಡೆಯಲಿದೆ. ಆದಷ್ಟು ಬೇಗನೆ ಕಾರ್ಯಾಚರಣೆ ಯಶಸ್ವಿಯಾಗಲು ಜನರ ಪ್ರಾರ್ಥನೆ ಇರಲಿ” ಎಂದು ಹೇಳಿದರು.
ಇವರು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ವೇಣೂರು ಸಮೀಪದವರು. ಕಳೆದ 13 ವರ್ಷಗಳಿಂದ ಪತ್ರಿಕೋದ್ಯಮದಲ್ಲಿದ್ದು, ವಾರ್ತಾಭಾರತಿ ದಿನಪತ್ರಿಕೆ, ಸಂಜೆ ವಾಣಿ, ಕೋಸ್ಟಲ್ ಡೈಜೆಸ್ಟ್ ಹಾಗೂ ಸನ್ಮಾರ್ಗ ವಾರಪತ್ರಿಕೆಯಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಸದ್ಯ ಈದಿನ ಡಾಟ್ ಕಾಮ್‌ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ.