ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರು ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಳೆದ ಜುಲೈ 16ರಂದು ನಡೆದ ಗುಡ್ಡ ಕುಸಿತ ಘಟನೆಗೆ ಸಂಬಂಧಿಸಿದಂತೆ ನಾಪತ್ತೆಯಾಗಿದ್ದ ತಮಿಳುನಾಡು ಮೂಲದ ಲಾರಿ ಚಾಲಕ ಶರವಣನ್ ಮೃತದೇಹ ಪತ್ತೆಯಾಗಿದ್ದು, ನದಿಯಲ್ಲಿ ಸಿಕ್ಕಿದ್ದ ಅರ್ಧ ಮೃತದೇಹವು ಅವರದ್ದೆಂದು ಜಿಲ್ಲಾಡಳಿತ ದೃಢೀಕರಿಸಿದೆ.
ನದಿಯಲ್ಲಿ ಸಿಕ್ಕಿದ್ದ ಅರ್ಧ ಮೃತದೇಹದ ಡಿಎನ್‌ಎ ವರದಿ ಬಂದಿದ್ದು, ಅದು ತಮಿಳುನಾಡಿನ ಗ್ಯಾಸ್ ಟ್ಯಾಂಕರ್ ಚಾಲಕ ಶರವಣನ್ ಅವರ ಮೃತದೇಹ ಎಂದು ತಿಳಿದುಬಂದಿದೆ.
ಕಾರ್ಯಾಚರಣೆ ವೇಳೆ ಕಳೆದ ನಾಲ್ಕು ದಿನಗಳ ಹಿಂದೆ ಗಂಗೆಕೊಳ್ಳದಲ್ಲಿ ಹೊಟ್ಟೆಯ ಕೆಳಭಾಗದ ದೇಹ ಮಾತ್ರ ಪತ್ತೆಯಾಗಿತ್ತು. ಚಾಲಕ ಶರವಣನ್ ಅವರ ತಾಯಿಯ ಡಿಎನ್‌ಎ ಹಾಗೂ ಸಿಕ್ಕಿದ್ದ ಮೃತದೇಹವನ್ನು ಪರೀಕ್ಷೆ ನಡೆಸಲಾಗಿತ್ತು. ಇಬ್ಬರ ಡಿಎನ್‌ಎ ಹೊಂದಾಣಿಕೆಯಾಗಿರುವ ಹಿನ್ನೆಲೆಯಲ್ಲಿ ತಮಿಳುನಾಡು ಮೂಲದ ಲಾರಿ ಚಾಲಕ ಶರವಣನ್ ಮೃತದೇಹ ಎಂದು ದೃಢಪಡಿಸಲಾಗಿದೆ ಎಂದು ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ್ ತಿಳಿಸಿದ್ದಾರೆ.
ರಾತ್ರಿ ಶೋಧ ಕಾರ್ಯಾಚರಣೆ ಮುಂದುವರೆದಿದೆ.. @DgpKarnataka @Rangepol_WR @KarnatakaCops pic.twitter.com/4mVYqDhOeb
— SP Karwar (@spkarwar) July 25, 2024
ಗುಡ್ಡ ಕುಸಿತವಾದ ಪಕ್ಕದಲ್ಲೆ ಚಾಲಕ ಶರವಣನ್ ಚಲಾಯಿಸುತ್ತಿದ್ದ ಟ್ಯಾಂಕರ್ ಇತ್ತು. ಅದನ್ನು ಜಿಲ್ಲಾಡಳಿತದವರು ಬೇರೆ ಕಡೆ ಸ್ಥಳಾಂತರ ಮಾಡಿದ್ದರು. ಈ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆ ಚಾಲಕ ಶರವಣನ್ ನಾಪತ್ತೆ ಆಗಿದ್ದಾರೆ ಎಂದು ಅವರ ಮಾವ ಸೆಂಥಿಲ್ ಎಂಬುವವರು ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಇದೀಗ ನಾಲ್ಕು ದಿನದ ಹಿಂದೆ ಸಿಕ್ಕಿದ್ದ ಅರ್ಧ ದೇಹ, ಶರವಣನ್ ಅವರದ್ದಾಗಿದೆ ಎಂದು ಎಸ್‌ಪಿ ಖಚಿತಪಡಿಸಿದ್ದಾರೆ.
11ನೇ ದಿನಕ್ಕೆ ಮುಂದುವರಿದ ಕಾರ್ಯಾಚರಣೆ
ಶಿರೂರಿನಲ್ಲಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಜುಲೈ 16ರಂದು ಗುಡ್ಡ ಕುಸಿತ ಉಂಟಾದ ಸ್ಥಳದಲ್ಲಿನ ಮಣ್ಣು ತೆರವು ಮತ್ತು ಕೇರಳದ ಲಾರಿ ಚಾಲಕ ಅರ್ಜುನ ಸೇರಿದಂತೆ ಇತರರಿಗಾಗಿ ನಡೆಸಲಾಗುತ್ತಿದ್ದ ಶೋಧ ಕಾರ್ಯಾಚರಣೆಯನ್ನು 11ನೇ ದಿನವೂ ಮುಂದುವರಿಸಲಾಗಿದೆ.
ಶಿರೂರಿನಲ್ಲಿ ಕುಸಿತವಾಗಿರುವ ಗುಡ್ಡ ಹರಿದು ಗಂಗಾವಳಿ ನದಿ ತಳಭಾಗದಲ್ಲಿ ಅರ್ಜುನ್ ಸಂಚರಿಸುತ್ತಿದ್ದ ಲಾರಿ ಅವಶೇಷ ಪತ್ತೆ ಮಾಡಲಾಗಿದೆ ಎಂದು ಉತ್ತರ ಕನ್ನಡ ಜಿಲ್ಲಾಧಿಕಾರಿ ಲಕ್ಷ್ಮಿ ಪ್ರಿಯಾ ಸೇರಿದಂತೆ ಕಾರ್ಯಾಚರಣೆ ನಡೆಸುತ್ತಿರುವ ತಂಡವು ಖಚಿತಪಡಿಸಿದೆ. ಅದನ್ನು ಮೇಲೆತ್ತಲು ಎಲ್ಲಾ ರೀತಿಯ ಪ್ರಯತ್ನ ಮುಂದುವರೆದಿದೆ. ಮಿಲಿಟರಿ ಪಡೆಯವರು ಲಾರಿ ಮೇಲೆತ್ತಲು ಶ್ರಮಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಗಂಗಾವಳಿ ನದಿ ಮೇಲ್ಬಾಗದಲ್ಲಿ ನೇವಿ ಹಾಗೂ ಮಿಲಿಟರಿ ಪಡೆಯ ಹೆಲಿಕಾಪ್ಟರ್ ಮೂಲಕ ಪರಿಶೀಲನೆ ಕೈಗೊಳ್ಳಲಾಗಿದೆ. ನದಿ ಅಂಚಿನ ಪ್ರದೇಶಗಳಲ್ಲಿ ಡೋನ್ ಮೂಲಕ ಸುತ್ತಮುತ್ತಲಿನ ಮಾಹಿತಿ ಪಡೆಯಲಾಗುತ್ತಿದೆ. ಸ್ಥಳದಲ್ಲಿ ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿದ್ದು, ಮೊಬೈಲ್ ಸಿಗ್ನಲ್‌ನಿಂದ ಕಾರ್ಯಾಚರಣೆಗೆ ಅಡ್ಡಿ ಆಗುವ ಆತಂಕದ ಹಿನ್ನಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ನದಿ ಆಳದಲ್ಲಿರುವ ಲಾರಿ ಮೇಲೆತ್ತುವುದು ರಕ್ಷಣಾ ಕಾರ್ಯಪಡೆಗೆ ಬಹುದೊಡ್ಡ ಸವಾಲಾಗಿದೆ. 600ಕ್ಕೂ ಅಧಿಕ ರಕ್ಷಣಾ ಸಿಬ್ಬಂದಿ ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ.