ಮಂಡ್ಯ ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ಲಿಥಿಯಂ ಸಂಪನ್ಮೂಲ ಇರುವುದನ್ನು ಪರಮಾಣು ಖನಿಜ ನಿರ್ದೇಶನಾಲಯ (ಎಎಂಡಿ) ಪತ್ತೆ ಹಚ್ಚಿದೆ ಎಂದು ಅಣುಶಕ್ತಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಜಿತೇಂದ್ರ ಸಿಂಗ್ ತಿಳಿಸಿದರು.
ರಾಜ್ಯಸಭೆಯಲ್ಲಿ ಗುರುವಾರ ಲಿಖಿತ ಉತ್ತರ ನೀಡಿರುವ ಜಿತೇಂದ್ರ ಸಿಂಗ್, ‘ಲಿಥಿಯಂ ಸಂಪನ್ಮೂಲಗಳನ್ನು ಗುರುತಿಸಲು ಮತ್ತು ಅಂದಾಜು ಮಾಡಲು ಯಾದಗಿರಿ ಜಿಲ್ಲೆಯಲ್ಲಿ ಪ್ರಾಥಮಿಕ ಸಮೀಕ್ಷೆ ಮತ್ತು ಸೀಮಿತ ಭೂಗರ್ಭದ ಅನ್ವೇಷಣೆಯನ್ನು ಕೈಗೊಳ್ಳಲಾಗಿದೆ. ಮಂಡ್ಯ ಜಿಲ್ಲೆಯ ಮರಳಗಾಲ – ಅಲ್ಲಾಪಟ್ಟಣ ಪ್ರದೇಶದಲ್ಲಿ 1600 ಟನ್‌ಗಳಷ್ಟು ಲಿಥಿಯಂ ನಿಕ್ಷೇಪ ಪತ್ತೆಯಾಗಿದೆ’ ಎಂದರು.
ಆಧುನಿಕ ತಂತ್ರಜ್ಞಾನದಲ್ಲಿ ಲಿಥಿಯಂ ಲೋಹವನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸಲಾಗುತ್ತದೆ. ಸೆರಾಮಿಕ್ಸ್, ಗ್ಲಾಸ್, ದೂರ ಸಂಪರ್ಕ ಹಾಗೂ ಏರೋಸ್ಪೇಸ್ ಉದ್ಯಮದಲ್ಲಿ ಇದನ್ನು ಬಳಸಲಾಗುತ್ತದೆ ಎಂದು ಅವರು ಮಾಹಿತಿ ನೀಡಿದರು.
ಈ ಸುದ್ದಿ ಓದಿದ್ದೀರಾ? ಕಾವಡ್ ಯಾತ್ರೆ ವೇಳೆ ಅಂಗಡಿ ಮಾಲೀಕರ ಹೆಸರುಳ್ಳ ಫಲಕ ಹಾಕಲು ಆದೇಶ; ‘ಸಂವಿಧಾನದ ಮೇಲಿನ ದಾಳಿ’ ಎಂದ ಪ್ರಿಯಾಂಕಾ
ಪರಮಾಣು ಶಕ್ತಿ ಇಲಾಖೆಯ ವಿಭಾಗವಾದ ಅನ್ವೇಷಣೆ ಮತ್ತು ಸಂಶೋಧನೆಯ ಪರಮಾಣು ಖನಿಜಗಳ ನಿರ್ದೇಶನಾಲಯ(ಎಎಂಡಿ) ಲಿಥಿಯಂಅನ್ನು ಪತ್ತೆ ಮಾಡಿದೆ ಎಂದು ಸಚಿವರು ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
ಛತ್ತೀಸ್‌ಗಢದ ಕೊರ್ಬಾ ಜಿಲ್ಲೆಯ ಭಾಗಗಳಲ್ಲಿನ ಸಂಭಾವ್ಯ ಭೂವೈಜ್ಞಾನಿಕ ಸ್ಥಳಗಳಲ್ಲಿ ಎಎಂಡಿ ಲಿಥಿಯಂಗಾಗಿ ಸಂಶೋಧನೆ ನಡೆಸುತ್ತಿದೆ. ರಾಜಸ್ಥಾನ, ಬಿಹಾರ ಮತ್ತು ಆಂಧ್ರಪ್ರದೇಶದಲ್ಲಿರುವ ಪ್ರಮುಖ ಸ್ಥಳಗಳು ಮತ್ತು ಒಡಿಶಾ, ಛತ್ತೀಸ್‌ಗಢ, ಕರ್ನಾಟಕದಲ್ಲಿನ ಕೆಲವು ಪ್ರದೇಶಗಳಲ್ಲಿ ಲಿಥಿಯಂ ಸಂಪನ್ಮೂಲಗಳಿವೆ ಎಂದು ಸಚಿವರು ತಿಳಿಸಿದ್ದಾರೆ.