ಬೆಳಗಾವಿಯಲ್ಲಿ ಕಳೆದ ಡಿಸೆಂಬರ್ 27ರಂದು ನಡೆಯಬೇಕಿದ್ದ ಐತಿಹಾಸಿಕ ʼಗಾಂಧಿ ಭಾರತ್ʼ ಕಾರ್ಯಕ್ರಮವು ಮಾಜಿ ಪ್ರಧಾನಿ ʼಮನಮೋಹನ್ ಸಿಂಗ್ʼರವರ ನಿಧನದಿಂದ ರದ್ದಾಗಿತ್ತು. ಈ ಕಾರ್ಯಕ್ರಮವನ್ನು ಇದೇ ಜನವರಿ 21ರಂದು ಅದ್ದೂರಿಯಾಗಿ ನಡೆಸಲು ರಾಜ್ಯ ಕಾಂಗ್ರೆಸ್ ತೀರ್ಮಾನಿಸಿದೆ ಎಂದು ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.
ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಸಮಿತಿ ಮುಖಂಡರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, “ಗಾಂಧಿ ಭಾರತ ಸಮಾವೇಶದಲ್ಲಿ ಜಿಲ್ಲೆಯ ಕಾಂಗ್ರೆಸ್ ಮುಖಂಡರು, ಪದಾಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು, ಕಾರ್ಯಕರ್ತರು, ಅಭಿಮಾನಿಗಳು ಭಾಗವಹಿಸಿ ಕಾರ್ಯಕ್ರಮದ ಯಶಸ್ವಿಯಾಗಲೂ ಎಲ್ಲರೂ ಭಾಗಿಯಾಗಬೇಕು” ಎಂದು ತಿಳಿಸಿದರು.
“ಫೆಬ್ರವರಿ 4ರಂದು ನಡೆಯಲಿರುವ ʼಮಾಮ್‌ಕೋಸ್ ಚುನಾವಣೆʼಯನ್ನು ಅತ್ಯಂತ ಪ್ರತಿಷ್ಠೆಯಾಗಿ ಪರಿಗಣಿಸಲಾಗಿದೆ. ಇಂದಿನಿಂದಲೇ ಪಕ್ಷದ ಎಲ್ಲ ಮುಖಂಡರು ಕಾರ್ಯಕರ್ತರು ಸರಿಯಾದ ಮಾರ್ಗಸೂಚಿಯೊಂದಿಗೆ ಸಮರ್ಥ ಅಭ್ಯರ್ಥಿಗಳನ್ನು ನಿಲ್ಲಿಸಿ ಸಕ್ರಿಯವಾಗಿ ಚುನಾವಣೆಯಲ್ಲಿ ತೊಡಗಿಸಿಕೊಂಡು ತಮ್ಮ ಅಭ್ಯರ್ಥಿಗಳನ್ನ ಗೆಲ್ಲಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನದೊಂದಿಗೆ ಶ್ರಮಿಸಬೇಕು” ಎಂದು ಹೇಳಿದರು.
“ಬಿಜೆಪಿಯವರಿಗೆ ಚುನಾವಣಾ ಸಂದರ್ಭದಲ್ಲಿ ಮಾತ್ರ ರೈತರ ಸಮಸ್ಯೆಗಳ ಬಗ್ಗೆ ಜ್ಞಾನೋದಯವಾಗುತ್ತದೆ. ಇಂದು ಸಾಗರದಲ್ಲಿ ನಡೆಯುತ್ತಿರುವ ಅಡಕೆ ಬೆಳೆಗಾರರ ಸಮಾವೇಶವೂ ಕೂಡ ಮ್ಯಾಮ್‌ಕೋಸ್ ಚುನಾವಣೆಯ ಒಂದು ಪೂರ್ವಭಾವಿ ಸಭೆ ಅಷ್ಟೆ. 2014ರಲ್ಲಿ ತೀರ್ಥಹಳ್ಳಿಯಲ್ಲಿ ಅಮಿತ್ ಶಾ ಅಡಕೆ ಸಂಶೋಧನಾ ತೆರೆಯುವುದರೊಂದಿಗೆ 500 ಕೋಟಿ ಅನುದಾನವನ್ನು ಕೊಡುತ್ತೇನೆಂದು ಭರವಸೆ ನೀಡಿ ಮಾಯವಾದರು” ಎಂದು ಲೇವಡಿ ಮಾಡಿದರು.
ಈ ಸುದ್ದಿ ಓದಿದ್ದೀರ? ಬೀದರ್ | ಪಶು ಮೇಳ: ಬೆರಗುಗೊಳಿಸಿದ 90 ಕೆಜಿ ತೂಕದ ಮೇಕೆ, ₹9 ಲಕ್ಷದ ಗಿರ್ ತಳಿ ಎತ್ತು
“ಬಿಜೆಪಿ ಅಡಕೆ ಬೆಳೆಗಾರರ ಕುರಿತು ಒಮ್ಮೆಯೂ ಕೂಡ ಚಕಾರವೆತ್ತುತ್ತಿಲ್ಲ. ಅಡಕೆಯಿಂದ ಕ್ಯಾನ್ಸರ್ ಬರುತ್ತದೆಂದು ಬಿಜೆಪಿಯ ಕೇಂದ್ರದ ಆರೋಗ್ಯ ಸಚಿವರೇ ಹೇಳಿದ್ದಾರೆ. ಮೊದಲು ಅಡಕೆಯಿಂದ ಕ್ಯಾನ್ಸರ್ ಹೇಗೆ ಬರುತ್ತದೆಂದು ಸ್ಪಷ್ಟೀಕರಣ ಕೊಡಲಿ. ವಿದೇಶಿ ಅಡಕೆಯ ಮುಕ್ತ ಆಮದಿಗೆ ಅವಕಾಶಕೊಟ್ಟ ಬಿಜೆಪಿಗರು, ನಮ್ಮ ಅಡಕೆ ಬೆಳೆಗಾರರ ಭವಿಷ್ಯದ ಮೇಲೆ ಕೇಂದ್ರ ಸರ್ಕಾರ ಚೆಲ್ಲಾಟವಾಡುತ್ತಿದೆ” ಎಂದು ಕಿಡಿಕಾರಿದರು.
“ಶಿವಮೊಗ್ಗ ಜಿಲ್ಲೆಯ ಅಡಕೆ ಬೆಳೆಗಾರರು ಈಗಲಾದರೂ ಎಚ್ಚರಗೂಳ್ಳಬೇಕು. ಮ್ಯಾಮ್‌ಕೋಸ್ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳನ್ನು ಗೆಲ್ಲಿಸುವ ಮುಖಾಂತರ ಬದಲಾವಣೆಗೆ ಸಹಕರಿಸಬೇಕು. ಮುಖಂಡರು ಹಾಗೂ ಕಾರ್ಯಕರ್ತರು ಚುನಾವಣೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು” ಎಂದು ಮನವಿ ಮಾಡಿದರು.
ಈ ಪೂರ್ವಭಾವಿ ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್ ಪ್ರಸನ್ನ ಕುಮಾರ್, ಭೋವಿ ನಿಗಮದ ಅಧ್ಯಕ್ಷ ಎನ್ ರವಿಕುಮಾರ್, ಸೂಡಾ ಅಧ್ಯಕ್ಷ ಎಚ್ ಎಸ್ ಸುಂದರೇಶ್, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್ ಎಂ ಮಂಜುನಾಥ್ ಗೌಡ್ರು, ಚಿಕ್ಕಮಗಳೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾಕ್ಟರ್ ಅಂಶುಮತ್, ಮಾಜಿ ಲೋಕಸಭಾ ಸದಸ್ಯ ಆಯನೂರು ಮಂಜುನಾಥ್, ಜಿಲ್ಲಾ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಅಧ್ಯಕ್ಷ ಚಂದ್ರಭೂಪಾಲ, ಮುಖಂಡರಾದ ಎಸ್ ಕೆ ಮರಿಯಪ್ಪ, ಇಸ್ಮಾಯಿಲ್ ಖಾನ್ ಕಲಗೋಡು ರತ್ನಾಕರ್, ಪದ್ಮನಾಭ ನಾಗರಾಜ್ ಗೌಡ್ರು, ಎಚ್ ಸಿ ಯೋಗೇಶ್, ಕಡತೂರು ದಿನೇಶ್, ಜಿ ಡಿ ಮಂಜುನಾಥ್ ಸೇರಿದಂತೆ ಬಹುತೇಕರು ಇದ್ದರು.