ದರೋಡೆ ಪ್ರಕರಣವೊಂದರಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಆರೋಪಿಯೋರ್ವನ ಕಾಲಿಗೆ, ತೀರ್ಥಹಳ್ಳಿ ತಾಲೂಕು ಮಾಳೂರು ಠಾಣೆ ಪೊಲೀಸರು ಗುಂಡಿಕ್ಕಿ ಬಂಧಿಸಿದ ಘಟನೆ, ಶಿಕಾರಿಪುರ ಪಟ್ಟಣದ ಕೆಂಗುಡ್ಡೆ ಸಮೀಪದ ಟ್ಯಾಂಕ್ ಬಡ್ ಪ್ರದೇಶದಲ್ಲಿ ಏ.10 ರ ಮಧ್ಯಾಹ್ನ ನಡೆದಿದೆ.
ಶಿಕಾರಿಪುರ ಪಟ್ಟಣದ ಪ್ರಗತಿ ನಗರದ ನಿವಾಸಿ ಶ್ರೀನಿವಾಸ್ ಯಾನೆ ಸೀನಾ (25) ಗುಂಡೇಟಿಗೆ ತುತ್ತಾದ ಆರೋಪಿ ಎಂದು ಗುರುತಿಸಲಾಗಿದೆ. ಈತ ಮಾಳೂರು ಪೊಲೀಸ್ ಠಾಣಾ ವ್ಯಾಪ್ತಿಯ ಮಹಿಷಿ ಮಠದಲ್ಲಿ ನಡೆದಿದ್ದ ದರೋಡೆ ಪ್ರಕರಣದಲ್ಲಿ ಆರೋಪಿಯಾಗಿದ್ದ. ತಲೆಮರೆಸಿಕೊಂಡಿದ್ದ ಈತನ ಪತ್ತೆಗೆ ಪೊಲೀಸರು ಶೋಧ ಕಾರ್ಯಾಚರಣೆ ನಡೆಸುತ್ತಿದ್ದರು.
ಶಿಕಾರಿಪುರ ಪಟ್ಟಣದಲ್ಲಿರುವ ಮಾಹಿತಿ ಆಧಾರದ ಮೇಲೆ ಮಾಳೂರು ಠಾಣೆ ಸಬ್ ಇನ್ಸ್’ಪೆಕ್ಟರ್ ಸಂತೋಷ್ ಮತ್ತವರ ಸಿಬ್ಬಂದಿಗಳು, ಆತನ ಬಂಧನಕ್ಕೆ ಮುಂದಾಗಿದ್ದರು.
ಇದನ್ನೂ ಓದಿ: ಶಿವಮೊಗ್ಗ | ಈದ್ಗಾ ಮೈದಾನಕ್ಕೆ ಸಿಸಿಟಿವಿ ಕಣ್ಗಾವಲು
ಈ ವೇಳೆ ಆತ ಪಿಎಸ್ಐ ಹಾಗೂ ಸಿಬ್ಬಂದಿ ಸಂತೋಷ್ ಮೇಲೆ ದಾಳಿ ಮುಂದಾಗಿದ್ದ. ತಕ್ಷಣವೇ ಪಿಎಸ್ಐ ಆರೋಪಿ ಕಾಲಿಗೆ ಗುಂಡಿಕ್ಕಿ ವಶಕ್ಕೆ ಪಡೆದಿದ್ದಾರೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಜಿ ಕೆ ಮಿಥುನ್ ಕುಮಾರ್ ಅವರು ಮಾಧ್ಯಮ ಸಂದೇಶದಲ್ಲಿ ಮಾಹಿತಿ ನೀಡಿದ್ದಾರೆ.