ಶಿವಮೊಗ್ಗ ಮಹಾನಗರ ಪಾಲಿಕೆ ವತಿಯಿಂದ ನಡೆಯುವ ದಸರಾದಲ್ಲಿ ಯುವ ದಸರಾ ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ ನಟ, ನಿರ್ದೇಶಕ, ನಿರ್ಮಾಪಕ, ಸಂಗೀತ ನಿರ್ದೇಶಕ, ವಿತರಕ ಕ್ರೇಜಿಸ್ಟಾರ್ ವಿ.ರವಿಚಂದ್ರನ್ ಅವರು ಶಿವಮೊಗ್ಗ ದಸರಾಗಾಗಿಯೇ ಒಂದು ಭಕ್ತಿಪ್ರಧಾನ ಗೀತೆ ರಚನೆ ಮಾಡಿ, ವೇದಿಕೆಯಲ್ಲಿಯೇ ಅದನ್ನು ಪ್ರದರ್ಶನ ಮಾಡಿಸಿದರು.
ನಗರದ ಅಲ್ಲಮ ಪ್ರಭು ಮೈದಾನದಲ್ಲಿ ಮಹಾನಗರ ಪಾಲಿಕೆಯ ದಸರಾದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. ಮಂಗಳವಾರ ನಡೆದ ಯುವ ದಸರಾ ಕಾರ್ಯಕ್ರಮದ ಉದ್ಘಾಟನೆ ಮಾಡಿ ಮಾತನಾಡಿದ ಅವರು, ನಾಡ ದೇವತೆ ಚಾಮುಂಡೇಶ್ವರಿ ಈ ವರ್ಷ ನನ್ನ ಮೇಲೆ ಕಣ್ಣು ಬಿಟ್ಟಿದ್ದಾಳೆ. ಇದರಿಂದ ನಾನು ರಾಜ್ಯವನ್ನು ಸುತ್ತುತ್ತಿದ್ದೇನೆ. ದಸರಾವನ್ನು ಎಲ್ಲರೂ ಸೇರಿ ವಿಜೃಂಭಣೆಯಿಂದ ಆಚರಿಸೋಣ. ಮನೆಯಲ್ಲಿ ಪ್ರತಿ ದಿನ ಹೆಣ್ಣು ಮಕ್ಕಳು ಲವಲವಿಕೆಯಿಂದ ಓಡಾಡುತ್ತಿದ್ದರೆ, ನಿಮ್ಮ ಮನೆಯ ಹೆಣ್ಣು ಮಕ್ಕಳಿಗೆ ಗೌರವ ನೀಡಿದರೆ ಅದೇ ಹಬ್ಬ ಎಂದರು.
ನಾನು ದೇವರ ಬಳಿ ಪ್ರತಿ ದಿನ ಮುನ್ನಗ್ಗುವ ಧೈರ್ಯ, ಒಳ್ಳೆಯ ದಾರಿಯಲ್ಲಿ ನಡೆಯಲು ವಿವೇಕ ಹಾಗೂ ಇನ್ನೊಬ್ಬರ ಕಷ್ಟ ಅರಿಯುವ ಮನಸ್ಸು ಕೊಡಿ ಎಂದು ಕೇಳಿಕೊಳ್ಳುತ್ತೇನೆ. ಇಂದು ನಾನು ನಿಮ್ಮ ಮುಂದೆ ನಿಂತುಕೊಳ್ಳಲು ನಮ್ಮಪ್ಪನೇ ಕಾರಣ. ನಾನು ಪ್ರತಿ ದಿನ ನಮ್ಮಪ್ಪ, ನಮ್ಮಮ್ಮನನ್ನು ನೆನಪಿಸಿಕೊಳ್ಳುತ್ತಿರುತ್ತೇನೆ. ರಣಧೀರ ನಮ್ಮಪ್ಪ, ಪ್ರೀತಿ ಹೇಳಿಕೊಟ್ಟಿದ್ದು ನಮ್ಮಮ್ಮ. ರಾಜ್ಯದ ಜನತೆಯ ಮುಖದಲ್ಲಿ ಪ್ರೀತಿ, ನಗು ನೋಡಿದಾಗ ನಮ್ಮ ತಂದೆ ತಾಯಿ ನೆನಪಾಗುತ್ತಾರೆ. ಸಂತೋಷ ಅಂದರೆ ನಮ್ಮ ಮುಖದಲ್ಲಿ ಬರುವ ನಗು ಅಲ್ಲ, ನಮ್ಮಿಂದ ಇನ್ನೊಬ್ಬರ ಮುಖದಲ್ಲಿ ಬರುವ ನಗು ಎಂದು ನಮ್ಮಪ್ಪ ಹೇಳಿ ಕೊಟ್ಟಿದ್ದರು. ಒಂದು ಊರಿಗೆ ಇತಿಹಾಸ ಇದ್ದರೆ ಮಾತ್ರ ಅದು ಒಂದು ಶಿವಮೊಗ್ಗ ಆಗಲು ಸಾಧ್ಯ ಎಂದು ಬಣ್ಣಿಸಿದರು.
ನಾನು ‘ಶಾಂತಿ ಕ್ರಾಂತಿ’ ಸಿನಿಮಾ ಮಾಡಿ ಅದು ಕಲೆಕ್ಷನ್ ಕಡಿಮೆ ಮಾಡುವಾಗ ಅಂದು ಸಿಎಂ ಆಗಿದ್ದ ಬಂಗಾರಪ್ಪನವರ ಬಳಿ ಹೋಗಿ ಶೇ.100ರಷ್ಟು ಟಾಕ್ಸ್ ಫ್ರೀ ಕೊಡಿ ಎಂದು ಕೇಳಿದ್ದೆ. ಅವರು ಯಾಕೆ ಫ್ರೀ ಕೊಡಬೇಕು ಎಂದು ಕೇಳಿದಾಗ, ನಾನು ಚಿತ್ರವನ್ನು ಮಕ್ಕಳಿಗಾಗಿಯೇ ಮಾಡಿದ್ದು ಎಂದು ಬೆಳಗ್ಗೆ ಹೇಳಿದೆ, ಅವರು ಮಧ್ಯಾಹ್ನದ ವೇಳೆಗಾಗಲೇ ಟಾಕ್ಸ್ ಫ್ರೀ ಮಾಡಿಸಿ ಕೊಟ್ಟರು ಎಂದು ಬಂಗಾರಪ್ಪನವರನ್ನು ರವಿಚಂದ್ರನ್ ನೆನಪಿಸಿಕೊಂಡರು.ಅದೇ ರೀತಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪನವರು ಸಹ ಎಲ್ಲಿಯೇ ಕಂಡರೂ ಸಹ ಪ್ರೀತಿಯಿಂದ ಮಾತನಾಡಿಸುತ್ತಾರೆ. ನಮ್ಮ ತಾಯಿ ತೀರಿ ಹೋದಾಗ ಅವರೇ ಮೊದಲು ಫೋನ್ ಮಾಡಿ ಏನಾದರೂ ಸಹಾಯ ಬೇಕೇ ಎಂದು ಕೇಳಿದ್ದರು ಎಂದರು.
ಇನ್ನು ಸಾಧು ಕೋಕಿಲರಿಂದ ಸಂಗೀತ ಸಂಜೆ ಕಾರ್ಯಕ್ರಮ :
ಯುವ ದಸರಾ ಅಂಗವಾಗಿ ಬಹುಮುಖ ಪ್ರತಿಭೆ ಸಾಧು ಕೋಕಿಲ ಅವರ ಸಂಗೀತ ಸಂಜೆ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಅವರು ವೇದಿಕೆಗೆ ಬರುವ ಮುನ್ನ ಹಾಡುಗಾರ ಚನ್ನಪ್ಪ ಸೇರಿದಂತೆ ಇತರರು ತಮ್ಮ ಕಲೆಯನ್ನು ಪ್ರದರ್ಶಿಸಿದರು. ನಂತರ ಎಂಟ್ರಿ ಕೊಟ್ಟ ಸಾಧು ಅವರು ‘ರಕ್ತಕಣ್ಣಿರು’ ಚಿತ್ರದ ಡೇಂಜರ್ ಎನ್ನುವ ಹಾಡನ್ನು ಹಾಡುತ್ತಾ ವೇದಿಕೆಗೆ ಆಗಮಿಸಿದರು. ನಂತರ ‘ನಿನೊಂದು ಮುಗಿಯದ ಮೌನ’ ಎಂಬ ಗೀತೆಯನ್ನು ಹಾಡಿದರು. ವೇದಿಕೆ ಮೇಲೆ ಕಚಗುಳಿ ಮಾತಿನಿಂದ ಶಿವಮೊಗ್ಗ ಜನತೆಯನ್ನು ನಗುವಿನ ಕಡಲಲ್ಲಿ ತೇಲಿಸಿದರು.





