ವಿಧಾನ ಪರಿಷತ್ತಿನ ಈಶಾನ್ಯ ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿ ಗೆಲುವಿನ ಓಟಕ್ಕೆ ತಡೆ ಹಾಕಲು ಕಾಂಗ್ರೆಸ್ ಪಣತೊಟ್ಟಿದ್ದರೆ, ನಾಲ್ಕು ಬಾರಿ ಪರಿಷತ್ತಿನ ಸದಸ್ಯರಾಗಿ ಆಯ್ಕೆಯಾಗಿರುವ ಬಿಜೆಪಿ ಅಭ್ಯರ್ಥಿ ಶಶೀಲ್ ನಮೋಶಿ ಮತ್ತೊಮ್ಮೆ ಗೆಲುವಿನ ದಡ ಸೇರಲು ಕಸರತ್ತು ನಡೆಸಿದ್ದಾರೆ. ಬಿಜೆಪಿ–ಜೆಡಿಎಸ್ ಮೈತ್ರಿಕೂಟದ ಬೆಂಬಲ ನಮೋಶಿಗೆ ಬಲ ತುಂಬಿದ್ದರೆ, ಬಿಜೆಪಿ ಭದ್ರಕೋಟೆ ಭೇದಿಸುವ ಉಮೇದಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶರಣಪ್ಪ ಮಟ್ಟೂರ ಚುನಾವಣಾ ಕಣದಲ್ಲಿದ್ದಾರೆ.
ಕಳೆದ ಮೂರು ದಶಕಗಳಲ್ಲಿ ನಡೆದ ಐದು ಚುನಾವಣೆಗಳಲ್ಲಿ ನಾಲ್ಕರಲ್ಲಿ ಬಿಜೆಪಿ ಜಯಭೇರಿ ಬಾರಿಸಿರುವುದು ಈಶಾನ್ಯ ಶಿಕ್ಷಕರ ಕ್ಷೇತ್ರದಲ್ಲಿ ಪಕ್ಷದ ಪ್ರಾಬಲ್ಯಕ್ಕೆ ಸಾಕ್ಷಿಯಾಗಿದೆ. 1996 ರಿಂದ 2020ರವರೆಗಿನ ಚುನಾವಣೆಗಳಲ್ಲಿ ಬಿಜೆಪಿ ನಾಲ್ಕು ಬಾರಿ ಹಾಗೂ ಕಾಂಗ್ರೆಸ್ ಒಂದು ಬಾರಿ ಗೆಲುವು ಸಾಧಿಸಿವೆ. ಈ ಪೈಕಿ ಶಶೀಲ್ ನಮೋಶಿ ನಾಲ್ಕು ಬಾರಿ ಗೆದ್ದು, ಇದೀಗ ಐದನೇ ಬಾರಿಗೆ ಆಯ್ಕೆಯಾಗುವ ಗುರಿ ಹೊಂದಿದ್ದಾರೆ. ಬಿಜೆಪಿ-ಜೆಡಿಎಸ್ ಮೈತ್ರಿ ಅವರ ಗೆಲುವಿನ ಲೆಕ್ಕಾಚಾರಕ್ಕೆ ಮತ್ತಷ್ಟು ಬಲ ನೀಡಿದೆ.
ಕಲಬುರಗಿಯ ಹೈದರಾಬಾದ್ ಶಿಕ್ಷಣ ಸೊಸೈಟಿಯ ಅಧ್ಯಕ್ಷರೂ ಆಗಿರುವ ಹಾಲಿ ವಿಧಾನ ಪರಿಷತ್ ಸದಸ್ಯ ಶಶೀಲ್ ನಮೋಶಿ ಬಿಜೆಪಿ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ರಾಯಚೂರು ಮೂಲದ ವಕೀಲ ಶರಣಪ್ಪ ಮಟ್ಟೂರ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದು, ಈ ಹಿಂದೆ ನಮೋಶಿ ವಿರುದ್ಧ ಗೆಲುವು ಸಾಧಿಸಿದ್ದ ಅನುಭವ ಹೊಂದಿದ್ದಾರೆ. 2014ರ ಚುನಾವಣೆಯಲ್ಲಿ ನಮೋಶಿಯನ್ನು ಸೋಲಿಸಿದ್ದ ಮಟ್ಟೂರ, 2020ರ ಚುನಾವಣೆಯಲ್ಲಿ ಪರಾಭವಗೊಂಡಿದ್ದರು. ಈ ಬಾರಿ ಗೆಲುವು ಸಾಧಿಸಬೇಕೆಂಬ ಗುರಿಯೊಂದಿಗೆ ಕಾಂಗ್ರೆಸ್ ನಾಯಕರು ಅವರ ಪರವಾಗಿ ಪ್ರಚಾರ ನಡೆಸುತ್ತಿದ್ದಾರೆ.
ಏಳು ಜಿಲ್ಲೆಗಳಲ್ಲಿ ಚುನಾವಣೆ
ಕರ್ನಾಟಕದ ಈಶಾನ್ಯ ಶಿಕ್ಷಕರ ಕ್ಷೇತ್ರವು ಕಲಬುರಗಿ, ಬೀದರ್, ಯಾದಗಿರಿ, ರಾಯಚೂರು, ಬಳ್ಳಾರಿ, ಕೊಪ್ಪಳ ಹಾಗೂ ವಿಜಯನಗರ ಜಿಲ್ಲೆಗಳನ್ನು ಒಳಗೊಂಡಿದೆ. ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳಲ್ಲಿ ಒಟ್ಟು 34,784 ಮತದಾರರಿದ್ದಾರೆ.ಕಾಂಗ್ರೆಸ್, ಬಿಜೆಪಿ, ಆಮ್ ಆದ್ಮಿ ಪಕ್ಷ, ಜನತಾ ದಳ (ಸಂಯುಕ್ತ) ಹಾಗೂ ಪಕ್ಷೇತರರು ಸೇರಿ ಒಟ್ಟು 13 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಬಿಜೆಪಿ ಅಭ್ಯರ್ಥಿ ಶಶೀಲ್ ನಮೋಶಿ ಮತ್ತು ಕಾಂಗ್ರೆಸ್ ಅಭ್ಯರ್ಥಿ ಶರಣಪ್ಪ ಮಟ್ಟೂರ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ.
ಕಾಂಗ್ರೆಸ್ ಒಂದು ವರ್ಷದ ಮೊದಲೇ ಅಭ್ಯರ್ಥಿಯನ್ನು ಘೋಷಿಸಿ ಚುನಾವಣಾ ಸಿದ್ಧತೆ ಆರಂಭಿಸಿತ್ತು. ಮತದಾರರ ನೋಂದಣಿ ಪ್ರಕ್ರಿಯೆಯಿಂದಲೇ ಶಿಕ್ಷಕರನ್ನು ತಲುಪಲು ಪಕ್ಷ ಪ್ರಯತ್ನಿಸಿತು. ಮತ್ತೊಂದೆಡೆ, ಕಲಬುರಗಿಯವರೇ ಆಗಿರುವ ನಮೋಶಿ ಕ್ಷೇತ್ರದ ಶಿಕ್ಷಕರು ಹಾಗೂ ಶಿಕ್ಷಣ ಸಂಸ್ಥೆಗಳೊಂದಿಗೆ ಉತ್ತಮ ಸಂಪರ್ಕ ಹೊಂದಿದ್ದು, ಚುನಾವಣೆ ಘೋಷಣೆಯಾಗುವ ಮೊದಲಿನಿಂದಲೇ ವಿವಿಧ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡು ಮತ್ತೊಮ್ಮೆ ಬೆಂಬಲಿಸುವಂತೆ ಮನವಿ ಮಾಡಿದ್ದರು.
ಘಟಾನುಘಟಿ ನಾಯಕರಿಂದ ಪ್ರಚಾರ
ಈಶಾನ್ಯ ಶಿಕ್ಷಕರ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಕಾಂಗ್ರೆಸ್ ಶಾಸಕರು, ಸಂಸದರು ಹಾಗೂ ರಾಜ್ಯ ಸರ್ಕಾರದ ಸಾಧನೆಗಳನ್ನು ಮುಂದಿಟ್ಟುಕೊಂಡು ಪಕ್ಷ ಮತಯಾಚಿಸುತ್ತಿದೆ. ಸಚಿವರಾದ ಪ್ರಿಯಾಂಕ್ ಖರ್ಗೆ, ಈಶ್ವರ ಖಂಡ್ರೆ, ಶರಣಪ್ರಕಾಶ ಪಾಟೀಲ್, ಡಾ. ಅಜಯ್ ಸಿಂಗ್ ಮತ್ತು ಶಿವರಾಜ ತಂಗಡಗಿ ಸೇರಿದಂತೆ ಹಲವು ನಾಯಕರು ಮಟ್ಟೂರ ಗೆಲುವಿಗೆ ಕಾರ್ಯತಂತ್ರ ರೂಪಿಸಿದ್ದಾರೆ.

ಕಾಂಗ್ರೆಸ್ ನಾಯಕರು ಕ್ಷೇತ್ರದಲ್ಲಿ ಪ್ರಚಾರ ನಡೆಸುತ್ತಿದ್ದರೆ, ಬಿಜೆಪಿ ಪರವಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ನಮೋಶಿ ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಭಾಗವಹಿಸಿ ಪ್ರಚಾರಕ್ಕೆ ಚಾಲನೆ ನೀಡಿದ್ದರು. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಸೇರಿದಂತೆ ಪಕ್ಷದ ಮುಖಂಡರು ಮತ್ತೊಮ್ಮೆ ಕ್ಷೇತ್ರದಲ್ಲಿ ಕಮಲ ಅರಳಿಸಲು ಪ್ರಯತ್ನಿಸುತ್ತಿದ್ದಾರೆ. ಜೆಡಿಎಸ್ ನಾಯಕರ ಬೆಂಬಲವೂ ಬಿಜೆಪಿ ಅಭ್ಯರ್ಥಿಯ ಬಲ ಹೆಚ್ಚಿಸಿದೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ತವರು ಜಿಲ್ಲೆ ಕಲಬುರಗಿಯಲ್ಲೇ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸುವುದು ಪಕ್ಷದ ನಾಯಕರಿಗೆ ಪ್ರತಿಷ್ಠೆಯ ವಿಷಯವಾಗಿದೆ. ರಾಜ್ಯದಲ್ಲಿಯೂ ಕಾಂಗ್ರೆಸ್ ಆಡಳಿತದಲ್ಲಿರುವುದರಿಂದ ಸರ್ಕಾರದ ಸಾಧನೆಗಳನ್ನು ಮತದಾರರ ಮುಂದಿಡುವ ಮೂಲಕ ಗೆಲುವು ಸಾಧಿಸುವ ವಿಶ್ವಾಸದಲ್ಲಿ ಪಕ್ಷವಿದೆ. 2020ರಲ್ಲಿ ನಮೋಶಿ ವಿರುದ್ಧ ಸೋತಿದ್ದ ಶರಣಪ್ಪ ಮಟ್ಟೂರ ಅವರನ್ನು ಈ ಬಾರಿ ಗೆಲ್ಲಿಸಲೇಬೇಕೆಂಬ ಹಠ ಕಾಂಗ್ರೆಸ್ ನಾಯಕರಲ್ಲಿದೆ.
ಶಿಕ್ಷಕರ ಸಮಸ್ಯೆಗಳೇ ಪ್ರಮುಖ ಅಜೆಂಡಾ
ಶಿಕ್ಷಕರ ನೇಮಕಾತಿ, ಬಡ್ತಿ, ವರ್ಗಾವಣೆ, ವೇತನ ತಾರತಮ್ಯ, ಖಾಸಗಿ ಶಾಲಾ-ಕಾಲೇಜುಗಳ ಸಮಸ್ಯೆಗಳು ಹಾಗೂ ಹಳೆಯ ಪಿಂಚಣಿ ಯೋಜನೆ ಜಾರಿ ಸೇರಿದಂತೆ ಹಲವು ವಿಚಾರಗಳು ಚುನಾವಣಾ ಪ್ರಚಾರದ ಪ್ರಮುಖ ಅಜೆಂಡಾಗಳಾಗಿವೆ. ಶಿಕ್ಷಕರ ವೃತ್ತಿ ಸಂಬಂಧಿತ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಭರವಸೆಗಳ ಮೂಲಕ ಅಭ್ಯರ್ಥಿಗಳು ಮತದಾರರನ್ನು ಸೆಳೆಯಲು ಪ್ರಯತ್ನಿಸುತ್ತಿದ್ದಾರೆ.
ಏಳು ಜಿಲ್ಲೆಗಳ ಒಟ್ಟು ಮತದಾರರಲ್ಲಿ 20,040 ಪುರುಷ ಶಿಕ್ಷಕ ಮತದಾರರಿದ್ದಾರೆ. ಅಭ್ಯರ್ಥಿಗಳ ಗೆಲುವಿನಲ್ಲಿ ಅವರ ಮತಗಳು ನಿರ್ಣಾಯಕ ಪಾತ್ರ ವಹಿಸುವ ಸಾಧ್ಯತೆಯಿದೆ. ಅದರಲ್ಲೂ ಕಲಬುರಗಿ ಜಿಲ್ಲೆಯಲ್ಲಿ 10 ಸಾವಿರಕ್ಕೂ ಅಧಿಕ ಸಂಖ್ಯೆಯ ಮತದಾರರಿರುವುದರಿಂದ ಅಭ್ಯರ್ಥಿಗಳು ಈ ಜಿಲ್ಲೆಯ ಮೇಲೆ ಹೆಚ್ಚಿನ ಗಮನ ಕೇಂದ್ರೀಕರಿಸಿದ್ದಾರೆ. ʼಚಿಂತಕರ ಚಾವಡಿʼ ಎಂದೇ ಕರೆಯಲಾಗುವ ವಿಧಾನ ಪರಿಷತ್ತಿಗೆ ಸುಶಿಕ್ಷಿತ ಮತದಾರರು ಯಾರನ್ನು ಆಯ್ಕೆ ಮಾಡಿ ಕಳಿಹಿಸುತ್ತಾರೆ ಎಂಬ ಕುತೂಹಲ ಮೂಡಿಸಿದೆ.
ಕಣದಲ್ಲಿ 13 ಅಭ್ಯರ್ಥಿಗಳು
ಶರಣಪ್ಪ ಮಟ್ಟೂರ (ಕಾಂಗ್ರೆಸ್), ಶಶೀಲ್ ನಮೋಶಿ (ಬಿಜೆಪಿ), ಸೈಬಣ್ಣಾ ಜಮಾದಾರ (ಆಮ್ ಆದ್ಮ ಪಕ್ಷ), ಪ್ರೊ.ಎಸ್.ಎಲ್.ಪಾಟೀಲ (ಜನತಾ ದಳ (ಸಂಯುಕ್ತ) ಹಾಗೂ ಪಕ್ಷೇತರ ಅಭ್ಯರ್ಥಿಗಳಾದ ಕವಿರಾಜ, ತುಳಸಪ್ಪ ದಾಸರ, ಮೆಹಬೂಬ್ ವಂಟೇಲಿ, ರಾಜಕುಮಾರ, ರಾಜು, ಶರಣಬಸಪ್ಪ, ಶಶಿಧರ, ಶಿವಶಂಕರ ಹಾಗೂ ಸುರೇಶ ಅವರು ಕಣದಲ್ಲಿದ್ದಾರೆ.
ಅ. 23ರಂದು ಮತದಾನ; 27ರಂದು ಮತ ಎಣಿಕೆ
ಕರ್ನಾಟಕ ವಿಧಾನ ಪರಿಷತ್ತಿನ ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಮತ ಚಲಾಯಿಸಲು ಅನುಕೂಲವಾಗುವಂತೆ ಕ್ಷೇತ್ರದ ನೋಂದಾಯಿತ ಮತದಾರರಿಗೆ ಅಕ್ಟೋಬರ್ 23ರಂದು ರಜೆ ಘೋಷಿಸಲಾಗಿದೆ. ಅಂದು ಬೆಳಿಗ್ಗೆ 8ರಿಂದ ಸಂಜೆ 4 ಗಂಟೆಯವರೆಗೆ ಮತದಾನ ನಡೆಯಲಿದೆ. ಮತ ಎಣಿಕೆ ಕಾರ್ಯವು ಅಕ್ಟೋಬರ್ 27ರಂದು ಬೆಳಿಗ್ಗೆ 8 ಗಂಟೆಯಿಂದ ಕಲಬುರಗಿಯ ಗುಲಬರ್ಗಾ ವಿಶ್ವವಿದ್ಯಾಲಯದ ಗಣಿತ ವಿಭಾಗದ ಭಾಸ್ಕರ ಸಭಾಂಗಣದಲ್ಲಿ ನಡೆಯಲಿದೆ ಎಂದು ಕ್ಷೇತ್ರದ ಚುನಾವಣಾಧಿಕಾರಿಯೂ ಆಗಿರುವ ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತೆ ಜಹೀರಾ ನಸೀಮ್ ತಿಳಿಸಿದ್ದಾರೆ.
ಇದನ್ನೂ ಓದಿ : ವಚನ ಕಲ್ಯಾಣ | ಕೂಡಲಸಂಗಮದೇವಾ, ಮರಣವೆ ಮಹಾನವಮಿ!
ಬಿಜೆಪಿ ತನ್ನ ಸಾಂಪ್ರದಾಯಿಕ ಪ್ರಾಬಲ್ಯವನ್ನು ಉಳಿಸಿಕೊಳ್ಳುತ್ತದೆಯೇ ಅಥವಾ ಕಾಂಗ್ರೆಸ್ ಹೊಸ ರಾಜಕೀಯ ಲೆಕ್ಕಾಚಾರದೊಂದಿಗೆ ಕ್ಷೇತ್ರವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತದೆಯೇ ಎಂಬುದಕ್ಕೆ ಮತದಾರರ ತೀರ್ಪು ಉತ್ತರ ನೀಡಲಿದೆ. ಮತದಾರ ಯಾರಿಗೆ ಒಲಿಯುತ್ತಾನೆ ಎಂಬುದು ಕಾದು ನೋಡಬೇಕಷ್ಟೇ!


ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.




