ಹಿರಿಯ ರೈತ ನಾಯಕ ದಲ್ಲೇವಾಲ ಅವರ ಪ್ರಾಣ ಉಳಿಸಲು ಆಗ್ರಹಿಸಿ ಕೇಂದ್ರ ಕೃಷಿ ಸಚಿವರಿಗೆ ಕಪ್ಪು ಬಾವುಟದ ಸ್ವಾಗತ ಕೋರಿ ಪ್ರತಿಭಟನೆ ನಡೆಸಲು ಸಂಯುಕ್ತ ಹೋರಾಟ ಕರ್ನಾಟಕ ವೇದಿಕೆ ನಿರ್ಧರಿಸಿದೆ.
ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ಶಿವಮೊಗ್ಗ ಜಿಲ್ಲೆ ಸಾಗರಕ್ಕೆ ಶನಿವಾರ (ಜ.18) ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಶುಕ್ರವಾರ ಆನ್ ಲೈನ್ ಮೂಲಕ ತುರ್ತು ಸಂಯುಕ್ತ ಹೋರಾಟ ಕರ್ನಾಟಕ ವೇದಿಕೆ ಪದಾಧಿಕಾರಿಗಳು ಸಭೆ ಸೇರಿ ಕೇಂದ್ರ ಕೃಷಿ ಸಚಿವರನ್ನು ಕಪ್ಪು ಪ್ರದರ್ಶನ ಮೂಲಕ ಸ್ವಾಗತಿಸಲು ನಿರ್ಧರಿಸಿದ್ದಾರೆ.
ಸಭೆಯಲ್ಲಿ ರೈತ ನಾಯಕರಾದ ಬಡಗಲಪುರ ನಾಗೇಂದ್ರ, ಹೆಚ್ ಆರ್ ಬಸವರಾಜಪ್ಪ, ಎಸ್ ಆರ್ ಹಿರೇಮಠ್, ಕೆ ವಿ ಭಟ್, ನೂರ್ ಶ್ರೀಧರ್, ಟಿ ಯಶವಂತ, ವಸಂತ ಭಾಗವಹಿಸಿದ್ದರು.
“ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಖಾತರಿಗೆ ಕಾನೂನು, ಸಾಲ ಮನ್ನಾ, ಕೃಷಿ ಮಾರುಕಟ್ಟೆ ಕುರಿತ ರಾಷ್ಟ್ರೀಯ ನೀತಿ ಚೌಕಟ್ಟು ವಾಪಸ್ಸಾತಿ ಸೇರಿದಂತೆ ಐತಿಹಾಸಿಕ ದೆಹಲಿ ಹೋರಾಟದ ಹಕ್ಕೊತ್ತಾಯಗಳನ್ನು ಈಡೇರಿಸುವಂತೆ ಆಗ್ರಹಿಸಿ ಅಮರಣಾಂತ ಉಪವಾಸ ನಡೆಸುತ್ತಿರುವ ಹಿರಿಯ ರೈತ ನಾಯಕ ದಲ್ಲೇವಾಲ ಅವರ ಪ್ರಾಣವನ್ನು ಉಳಿಸಲು ಕೇಂದ್ರ ಸರ್ಕಾರ ಆಸಕ್ತಿ ವಹಿಸದೆ ಅತೀವ ನಿರ್ಲಕ್ಷ್ಯ ತೋರಿ ಇಡೀ ದೇಶದ ರೈತಾಪಿ ಸಮುದಾಯಕ್ಕೆ ಅವಮಾನ ಎಸಗಿದೆ. ಈ ಹಿನ್ನೆಲೆಯಲ್ಲಿ ಸಾಗರಕ್ಕೆ ಭೇಟಿ ನೀಡುತ್ತಿರುವ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ರವರಿಗೆ ಕಪ್ಪು ಬಾವುಟದ ಸ್ವಾಗತ ಕೋರುವ ಮೂಲಕ ಪ್ರತಿಭಟಿಸಲು ಸಭೆ ತೀರ್ಮಾನಿಸಿದೆ” ಎಂದು ಸಂಯುಕ್ತ ಹೋರಾಟ ಕರ್ನಾಟಕ ವೇದಿಕೆ ಪ್ರಕಟಣೆಯಲ್ಲಿ ತಿಳಿಸಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ರೂಪಾಯಿ ಮೌಲ್ಯ ಕುಸಿತವೂ, ವಿಶ್ವಗುರುವಿನತ್ತ ಮೋದಿ ಭಾರತವೂ
“ಅತ್ಯಂತ ಕಷ್ಟದಲ್ಲಿ ಇರುವ ಅಡಿಕೆ ಬೆಳೆಗಾರರ ಸಮಾವೇಶಕ್ಕೆ ಕೇಂದ್ರ ಕೃಷಿ ಸಚಿವರು ಬರುವುದು ಮತ್ತು ಈ ಬೆಳೆಗಾರರ ಅಹವಾಲು ಆಲಿಸುವುದು ಸ್ವಾಗತಾರ್ಹ ವಿಷಯ ಆಗಿದ್ದರೂ ಇಡೀ ದೇಶದ ಕೃಷಿ ಉಳಿಸಲು ಹಾಗೂ ರೈತರನ್ನು ಕಾಪಾಡಲು ದಲ್ಲೆವಾಲರವರ ಉಪವಾಸ ಸತ್ಯಾಗ್ರಹ ಕೊನೆಗಾಣಿಸಲು ಅಗತ್ಯ ಕ್ರಮ ಕೈಗೊಳ್ಳುವುದು ಕೂಡ ಬಹಳ ಮುಖ್ಯ ವಾಗಿದೆ. ಆದರೆ, ಕೇಂದ್ರ ಕೃಷಿ ಸಚಿವರು ಹಾಗೂ ಕೇಂದ್ರ ಸರ್ಕಾರ ದಲ್ಲೇವಾಲರವರ ಪ್ರಾಣ ಉಳಿಸಲು ಕ್ರಮ ಕೈಗೊಳ್ಳದೇ ರೈತ ಸಮುದಾಯವನ್ನು ಅಪಮಾನಿಸುತ್ತಿದೆ ಮತ್ತು ಕೆರಳಿಸುತ್ತಿದೆ” ಎಂದು ಪದಾಧಿಕಾರಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಪ್ರತಿಭಟನೆಯಲ್ಲಿ ಶಿವಮೊಗ್ಗ ಹಾಗೂ ಸುತ್ತಲಿನ ಜಿಲ್ಲೆ ಗಳ ಸಂಯಕ್ತ ಹೋರಾಟ ಕರ್ನಾಟಕದ ಎಲ್ಲಾ ಸಹಭಾಗಿ ಸಂಘಟನೆಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕೇಂದ್ರ ಕೃಷಿ ಸಚಿವರಿಗೆ ರೈತ ಸಮುದಾಯದ ಆಕ್ರೋಶವನ್ನು ವ್ಯಕ್ತಪಡಿಸಬೇಕು” ಎಂದು ಸಭೆ ವಿನಂತಿಸಿದೆ.
ಪ್ರತಿಭಟನೆ ಸ್ಥಳ ,ವೇಳೆ ಮತ್ತಿತರ ಅಗತ್ಯ ಮಾಹಿತಿಗಾಗಿ ರಾಜ್ಯ ರೈತ ಸಂಘ ರಾಜ್ಯ ಪ್ರಧಾನ ಕಾರ್ಯದರ್ಶಿ ವಸಂತ ಅವರನ್ನು (ಮೊ.78925 39141) ಅವರನ್ನು ಸಂಪರ್ಕಿಸಿ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
