ಕಬ್ಬಿಗೆ ವೈಜ್ಞಾನಿಕ ಬೆಲೆ ನಿಗದಿಪಡಿಸುವುದು, ಸಕ್ಕರೆ ಬೆಲೆ ಪರಿಷ್ಕರಣೆ, ಕಳೆದ ಸಾಲಿನ ಟನ್‌ಗೆ ₹50 ಬಾಕಿ ಪಾವತಿ, ರಾಜ್ಯ ಸರ್ಕಾರದಿಂದ ರಾಜ್ಯ ಸಲಹಾ ಬೆಲೆ (ಎಸ್‌ಎಪಿ) ಕಾಯ್ದೆ ಜಾರಿ, ರೈತರ ಕೃಷಿ ಸಾಲಮನ್ನಾ ಹಾಗೂ ಹಾಲಿನ ದರ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಶ್ರೀರಂಗಪಟ್ಟಣ ತಾಲ್ಲೂಕಿನ ಗಣಂಗೂರು ಟೋಲ್ ಬಳಿ ಮೈಸೂರು-ಬೆಂಗಳೂರು ರಾಷ್ಟ್ರೀಯ ಎಕ್ಸ್‌ಪ್ರೆಸ್ ಹೆದ್ದಾರಿಯನ್ನು ತಡೆದು ಬೃಹತ್ ಪ್ರತಿಭಟನೆ ನಡೆಸಲಾಯಿತು.
ಕಬ್ಬು ಬೆಳೆಗಾರರ ಸಮಸ್ಯೆಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಆಗ್ರಹಿಸಿದ ರೈತರು, ಕಬ್ಬಿನ ಬೆಲೆ ನಿಗದಿಯಲ್ಲಿನ ಅವೈಜ್ಞಾನಿಕ ಮಾನದಂಡಗಳು, ಸಕ್ಕರೆ ಕಾರ್ಖಾನೆಗಳ ಕಾರ್ಯವೈಖರಿ ಹಾಗೂ ರೈತರಿಗೆ ಸಿಗಬೇಕಾದ ಉಪ ಉತ್ಪನ್ನಗಳ ಲಾಭದ ಪಾಲಿನ ಪಾವತಿಯಲ್ಲಿ ಆಗುತ್ತಿರುವ ಅನ್ಯಾಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಉತ್ಪಾದನಾ ವೆಚ್ಚ ಹೆಚ್ಚಳ, ರೈತರ ಆದಾಯಕ್ಕೆ ಕುತ್ತು
ಭಾರತದ ಆರ್ಥಿಕ ಬೆಳವಣಿಗೆಯಲ್ಲಿ ಕಬ್ಬು ಪ್ರಮುಖ ವಾಣಿಜ್ಯ ಬೆಳೆಯಾಗಿದೆ. ಸಕ್ಕರೆ ಮತ್ತು ಅದರ ಉಪ ಉತ್ಪನ್ನಗಳ ವಹಿವಾಟಿನಿಂದ ಕೇಂದ್ರ ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ತೆರಿಗೆ ಆದಾಯ ದೊರೆಯುತ್ತಿದೆ. ಆದರೆ, ಈ ಉದ್ಯಮದ ಬೆನ್ನೆಲುಬಾಗಿರುವ ಕಬ್ಬು ಬೆಳೆಗಾರರ ಆರ್ಥಿಕ ಪರಿಸ್ಥಿತಿ ಮಾತ್ರ ಸುಧಾರಿಸುತ್ತಿಲ್ಲ. ಕೃಷಿ ವೆಚ್ಚ ನಿರಂತರವಾಗಿ ಹೆಚ್ಚುತ್ತಿದ್ದರೂ, ಅದಕ್ಕೆ ಅನುಗುಣವಾಗಿ ಕಬ್ಬಿನ ಬೆಲೆ ಹೆಚ್ಚಳವಾಗುತ್ತಿಲ್ಲ ಎಂದು ರೈತ ಸಂಘ ಕಳವಳ ವ್ಯಕ್ತಪಡಿಸಿದೆ.
ರಸಗೊಬ್ಬರ, ಕೀಟನಾಶಕ, ಕೃಷಿ ಯಂತ್ರೋಪಕರಣಗಳು ಹಾಗೂ ಇತರ ಕೃಷಿ ಒಳಸುರಿಗಳ ಬೆಲೆ ವರ್ಷದಿಂದ ವರ್ಷಕ್ಕೆ ಏರುತ್ತಿದೆ. ಇದರಿಂದ ಕಬ್ಬು ಉತ್ಪಾದನಾ ವೆಚ್ಚ ಹೆಚ್ಚುತ್ತಿದ್ದು, ರೈತರು ಸಾಲದ ಸುಳಿಗೆ ಸಿಲುಕುತ್ತಿದ್ದಾರೆ. ಸಾಲಬಾಧೆಯಿಂದ ಮಂಡ್ಯ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಕಬ್ಬು ಬೆಳೆಗಾರರು ಆತ್ಮಹತ್ಯೆ ಮಾಡಿಕೊಂಡಿರುವುದು ಕೃಷಿ ಕ್ಷೇತ್ರದ ಗಂಭೀರ ಸ್ಥಿತಿಗೆ ಸಾಕ್ಷಿಯಾಗಿದೆ ಎಂದು ಸಂಘಟನೆ ತಿಳಿಸಿದೆ.

ಕಬ್ಬು ಬೆಳೆಗಾರರಿಗೆ ನ್ಯಾಯಯುತ ಬೆಲೆ ದೊರೆಯದ ಕಾರಣ ಪ್ರತಿ ವರ್ಷವೂ ಹೋರಾಟ ನಡೆಸಬೇಕಾದ ಅನಿವಾರ್ಯತೆ ಎದುರಾಗಿದೆ. ರೈತರು ಬೀದಿಗಿಳಿದಾಗ ಸರ್ಕಾರಗಳು ಮಾತುಕತೆ ನಡೆಸುತ್ತವೆಯೇ ಹೊರತು, ಸಮಸ್ಯೆಗಳ ಮೂಲವನ್ನು ಪರಿಹರಿಸುವಲ್ಲಿ ವಿಫಲವಾಗುತ್ತಿವೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಶೇ 8.5ರ ಬದಲು ಶೇ 10.25 ಇಳುವರಿ ಮಾನದಂಡಕ್ಕೆ ಆಕ್ಷೇಪ
ಕೇಂದ್ರ ಸರ್ಕಾರ ಕಬ್ಬಿನ ನ್ಯಾಯಯುತ ಮತ್ತು ಲಾಭದಾಯಕ ಬೆಲೆ (ಎಫ್‌ಆರ್‌ಪಿ) ನಿಗದಿಪಡಿಸುವಾಗ ಇಳುವರಿಯ ಮಾನದಂಡವನ್ನು ಶೇ 8.5ರಿಂದ ಶೇ 10.25ಕ್ಕೆ ಹೆಚ್ಚಿಸಿರುವುದರಿಂದ ರೈತರಿಗೆ ಅನ್ಯಾಯವಾಗುತ್ತಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಆಕ್ಷೇಪಿಸಿದೆ.
ಸ್ವಾಮಿನಾಥನ್ ಆಯೋಗದ ಶಿಫಾರಸಿನಂತೆ ಕಬ್ಬು ಉತ್ಪಾದನಾ ವೆಚ್ಚಕ್ಕೆ ಶೇ 50ರಷ್ಟು ಹೆಚ್ಚುವರಿ ಬೆಲೆ ಸೇರಿಸಿ ದರ ನಿಗದಿಪಡಿಸಬೇಕು. ರಂಗರಾಜನ್ ಸಮಿತಿಯ ಶಿಫಾರಸಿನಂತೆ ಸಕ್ಕರೆ ಹಾಗೂ ಕಬ್ಬಿನ ಉಪ ಉತ್ಪನ್ನಗಳಿಂದ ದೊರೆಯುವ ಆದಾಯದಲ್ಲಿ ರೈತರಿಗೆ ನ್ಯಾಯಯುತ ಪಾಲು ಸಿಗಬೇಕು. ಆದರೆ, ಕೇಂದ್ರದ ಸಕ್ಕರೆ ನೀತಿ ಮತ್ತು ಕಾರ್ಖಾನೆಗಳ ಕಾರ್ಯವೈಖರಿಯಿಂದ ರೈತರಿಗೆ ನಷ್ಟವಾಗುತ್ತಿದೆ ಎಂದು ಸಂಘಟನೆ ದೂರಿದೆ.
ಕೆಲವು ಸಕ್ಕರೆ ಕಾರ್ಖಾನೆಗಳು ಕಬ್ಬಿನ ತೂಕ ಮತ್ತು ಸಕ್ಕರೆ ಇಳುವರಿ ಲೆಕ್ಕಾಚಾರದಲ್ಲಿ ಅನ್ಯಾಯ ಎಸಗುತ್ತಿವೆ. ರೈತರಿಗೆ ಪಾವತಿಸಬೇಕಾದ ಹಣವನ್ನು ಬಾಕಿ ಉಳಿಸಿಕೊಳ್ಳುತ್ತಿವೆ ಎಂಬ ಆರೋಪಗಳೂ ಕೇಳಿಬಂದಿವೆ. ಇಂತಹ ಸಮಸ್ಯೆಗಳಿಗೆ ಕಡಿವಾಣ ಹಾಕಲು ಸರ್ಕಾರಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಯಿತು.
ಟನ್‌ಗೆ ₹6,150 ಬೆಲೆ ನೀಡಲು ಆಗ್ರಹ
ಕಬ್ಬು ಉತ್ಪಾದನೆಗೆ ಪ್ರತಿ ಟನ್‌ಗೆ ಸುಮಾರು ₹4,100 ವೆಚ್ಚವಾಗುತ್ತಿದೆ ಎಂದು ಅಂದಾಜಿಸಿರುವ ರೈತ ಸಂಘ, ಸ್ವಾಮಿನಾಥನ್ ಆಯೋಗದ ಶಿಫಾರಸಿನಂತೆ ಉತ್ಪಾದನಾ ವೆಚ್ಚಕ್ಕೆ ಶೇ 50ರಷ್ಟು ಹೆಚ್ಚುವರಿ ಬೆಲೆ ಸೇರಿಸಿ ಪ್ರತಿ ಟನ್ ಕಬ್ಬಿಗೆ ₹6,150 ನಿಗದಿಪಡಿಸಬೇಕು ಎಂದು ಆಗ್ರಹಿಸಿದೆ. ಇದರೊಂದಿಗೆ ಸಕ್ಕರೆಯನ್ನು ಅಗತ್ಯ ವಸ್ತುಗಳ ಪಟ್ಟಿಯಿಂದ ಹೊರತಂದು ಬೆಲೆ ನೀತಿಯನ್ನು ಪರಿಷ್ಕರಿಸಬೇಕು. ಗ್ರಾಹಕರಿಗೆ ಕಡಿಮೆ ದರದಲ್ಲಿ ಸಕ್ಕರೆ ಲಭ್ಯವಾಗುವಂತೆ ನೋಡಿಕೊಳ್ಳುವುದರ ಜೊತೆಗೆ ವಾಣಿಜ್ಯ ಬಳಕೆಯ ಸಕ್ಕರೆಗೆ ಪ್ರತ್ಯೇಕ ವಾಣಿಜ್ಯ ಬೆಲೆ ನಿಗದಿಪಡಿಸಬೇಕು ಎಂದು ಒತ್ತಾಯಿಸಿದೆ.

ಕಬ್ಬು ಬೆಳೆಗಾರರ ಹಿತಾಸಕ್ತಿಯನ್ನು ರಕ್ಷಿಸಲು ತಮಿಳುನಾಡಿನ ಮಾದರಿಯಲ್ಲಿ ಕರ್ನಾಟಕದಲ್ಲಿಯೂ ಎಸ್‌ಎಪಿ ಕಾಯ್ದೆ ಜಾರಿಗೆ ತರಬೇಕು. ಕಳೆದ ಸಾಲಿನಲ್ಲಿ ಪಾವತಿಸಬೇಕಾದ ಟನ್‌ಗೆ ₹50ರ ಬಾಕಿಯನ್ನು ಸಕ್ಕರೆ ಕಾರ್ಖಾನೆಗಳು ಕೂಡಲೇ ಪಾವತಿಸುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಯಿತು.
ಉಪ ಉತ್ಪನ್ನಗಳ ಲಾಭದಲ್ಲಿ ರೈತರಿಗೆ ಪಾಲು ನೀಡಲಿ
ರಂಗರಾಜನ್ ಸಮಿತಿಯ ಶಿಫಾರಸಿನಂತೆ ಕಬ್ಬಿನಿಂದ ಉತ್ಪಾದಿಸುವ ಸಕ್ಕರೆ, ಎಥನಾಲ್ ಸೇರಿದಂತೆ ವಿವಿಧ ಉಪ ಉತ್ಪನ್ನಗಳಿಂದ ದೊರೆಯುವ ಲಾಭದಲ್ಲಿ ರೈತರಿಗೆ ನ್ಯಾಯಯುತ ಪಾಲು ದೊರೆಯುವಂತೆ ಕ್ರಮ ಕೈಗೊಳ್ಳಬೇಕು ಎಂದು ರೈತ ಸಂಘ ಒತ್ತಾಯಿಸಿದೆ.
ಎಥನಾಲ್ ಉತ್ಪಾದನೆಗೆ ಕಬ್ಬಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಕಬ್ಬು ಬೆಂಕಿ ಅನಾಹುತಕ್ಕೆ ಒಳಗಾಗಿ ಸುಟ್ಟಾಗ ಅದನ್ನು ಪ್ರಕೃತಿ ವಿಕೋಪವೆಂದು ಪರಿಗಣಿಸಿ ಪರಿಹಾರ ನೀಡಲು ರಾಜ್ಯ ವಿಪತ್ತು ಪ್ರತಿಕ್ರಿಯಾ ನಿಧಿ (ಎಸ್‌ಡಿಆರ್‌ಎಫ್) ಮತ್ತು ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯಾ ನಿಧಿ (ಎನ್‌ಡಿಆರ್‌ಎಫ್) ವ್ಯಾಪ್ತಿಗೆ ತರಬೇಕು ಎಂದು ಆಗ್ರಹಿಸಿದೆ. ಉತ್ತರ ಕರ್ನಾಟಕದಲ್ಲಿ ಜಾರಿಯಲ್ಲಿರುವ ಮಾದರಿಯಲ್ಲಿ ದಕ್ಷಿಣ ಕರ್ನಾಟಕದಲ್ಲಿಯೂ ಎಕ್ಸ್‌ಫೀಲ್ಡ್ ಪದ್ಧತಿಯನ್ನು ಜಾರಿಗೊಳಿಸಬೇಕು. ಕಬ್ಬು ಬೆಳೆಗಾರರಿಗೆ ತೂಕ, ಸಾಗಣೆ ಹಾಗೂ ಬೆಲೆ ಪಾವತಿಯಲ್ಲಿ ಯಾವುದೇ ರೀತಿಯ ಅನ್ಯಾಯವಾಗದಂತೆ ಸರ್ಕಾರ ಸೂಕ್ತ ವ್ಯವಸ್ಥೆ ರೂಪಿಸಬೇಕು ಎಂದು ಒತ್ತಾಯಿಸಲಾಯಿತು.
ಸಕ್ಕರೆ ಕಾರ್ಖಾನೆಗಳ ಪುನಶ್ಚೇತನಕ್ಕೆ ವಿಶೇಷ ಪ್ಯಾಕೇಜ್

ಮಂಡ್ಯ ಜಿಲ್ಲೆಯ ಸಕ್ಕರೆ ಉದ್ಯಮಕ್ಕೆ ಪುನಶ್ಚೇತನ ನೀಡುವ ನಿಟ್ಟಿನಲ್ಲಿ ಮೈಶುಗರ್ ಕಾರ್ಖಾನೆಗೆ ರಾಜ್ಯ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದು ರೈತ ಸಂಘ ಆಗ್ರಹಿಸಿದೆ. ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆಯ ಆಸ್ತಿಯನ್ನು ರಕ್ಷಿಸಲು ಷೇರುದಾರರ ಸಮಿತಿ ರಚಿಸಬೇಕು. ಷೇರುದಾರರಿಗೆ ಪಾವತಿಸಬೇಕಿರುವ ಪಿಎಫ್ ಮತ್ತು ಆರ್‌ಡಿಇ ಮೊತ್ತವನ್ನು ಕೂಡಲೇ ಪಾವತಿಸಬೇಕು. ಬಹುದಿನಗಳಿಂದ ಸ್ಥಗಿತಗೊಂಡಿರುವ ಚುಂಚನಕಟ್ಟೆ ಶ್ರೀರಾಮ ಸಕ್ಕರೆ ಕಾರ್ಖಾನೆಯನ್ನು ಪುನರಾರಂಭಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಯಿತು.
ರೈತರ ಸಾಲಮನ್ನಾ, ಹಾಲಿನ ದರ ಹೆಚ್ಚಳಕ್ಕೆ ಒತ್ತಾಯ
ರಾಜ್ಯವು ತೀವ್ರ ಬರಗಾಲಕ್ಕೆ ತುತ್ತಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಶೇ 50ರ ಅನುಪಾತದಲ್ಲಿ ರೈತರ ಕೃಷಿ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು, ರೈತರ ಆದಾಯ ಹೆಚ್ಚಳ ಹಾಗೂ ಹೈನುಗಾರಿಕೆಯನ್ನು ಉಳಿಸುವ ಉದ್ದೇಶದಿಂದ ಹಾಲಿನ ಖರೀದಿ ದರ ಹೆಚ್ಚಿಸುವುದಾಗಿ ರಾಜ್ಯ ಸರ್ಕಾರ ನೀಡಿರುವ ಭರವಸೆಯನ್ನು ಕೂಡಲೇ ಈಡೇರಿಸಬೇಕು ಎಂದು ಆಗ್ರಹಿಸಲಾಯಿತು. ಇದರೊಂದಿಗೆ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಬೇಕು. ಈ ಪ್ರಕ್ರಿಯೆಯಲ್ಲಿನ ಅಕ್ರಮಗಳಿಗೆ ಕಾರಣರಾಗಿದ್ದಾರೆ ಎಂದು ಸಂಘಟನೆ ಆರೋಪಿಸಿರುವ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಹುದ್ದೆಯಿಂದ ವಜಾಗೊಳಿಸಬೇಕು ಹಾಗೂ ಆರೋಪಗಳ ಕುರಿತು ನ್ಯಾಯಾಂಗ ತನಿಖೆ ನಡೆಸಬೇಕು ಎಂಬ ಬೇಡಿಕೆಯನ್ನೂ ಮುಂದಿಡಲಾಯಿತು.

ಈ ವಿಶೇಷ ವರದಿ ಓದಿದ್ದೀರಾ? ‘ಟಿಪ್ಪು ನಿಜ ಕನಸು’ಗಳಿಂದ ‘ಗಾಂಧೀ ಹತ್ಯೆಯ ಸತ್ಯ’ದವರೆಗೆ: ಇತಿಹಾಸ ತಿರುಚುವಿಕೆಯ ಸುತ್ತ ಮತ್ತೆ ವಿವಾದ
ಪ್ರತಿಭಟನೆಯಲ್ಲಿ ಸಚಿವ ಎನ್. ಚಲುವರಾಯಸ್ವಾಮಿ, ಶಾಸಕರಾದ ರಮೇಶ್ ಬಂಡಿ ಸಿದ್ದೇಗೌಡ ಮತ್ತು ದರ್ಶನ್ ಪುಟ್ಟಣ್ಣಯ್ಯ, ಜಿಲ್ಲಾಧಿಕಾರಿ ಡಾ. ಕುಮಾರ, ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ದಲಿತ ಸಂಚಾಲಕ ಗುರುಪ್ರಸಾದ್ ಕೆರಗೂಡು, ಹಿರಿಯ ಮುಖಂಡರಾದ ಜೆ.ಎಂ. ವೀರಸಂಗಯ್ಯ ಮತ್ತು ಎ. ಗೋವಿಂದರಾಜ್, ಮಂಡ್ಯ ಜಿಲ್ಲಾಧ್ಯಕ್ಷ ಎ.ಎಲ್. ಕೆಂಪೂಗೌಡ, ಹಿರಿಯ ಮುಖಂಡರಾದ ಹೊನ್ನೂರು ಪ್ರಕಾಶ್, ಹಳ್ಳಿಕೆರೆಹುಂಡಿ ಭಾಗ್ಯರಾಜ್, ಮಂಜು ಕಿರಣ್, ಕೆ. ಮಲ್ಲಯ್ಯ, ವಿಭಾಗೀಯ ಉಪಾಧ್ಯಕ್ಷ ಬೋರಾಪುರ ಶಂಕರೇಗೌಡ, ವಿಭಾಗೀಯ ಕಾರ್ಯದರ್ಶಿ ಸಿದ್ದರಾಜು, ವಿಭಾಗೀಯ ಸಂಘಟನಾ ಕಾರ್ಯದರ್ಶಿ ಹೊಸಕೋಟೆ ಬಸವರಾಜ್, ಮಹಿಳಾ ಕಾರ್ಯಾಧ್ಯಕ್ಷೆ ಯದುಶೈಲ ಸಂಪತ್, ಮಹಿಳಾ ಪ್ರಧಾನ ಕಾರ್ಯದರ್ಶಿಯರಾದ ರಮ್ಯಾ ರಾಮಣ್ಣ, ನೇತ್ರಾವತಿ, ರಾಜ್ಯ ರೈತ ಸಂಘದ ಖಾಯಂ ಆಹ್ವಾನಿತರಾದ ಕೆ.ಟಿ. ಗೋವಿಂದೇಗೌಡ, ಎಂ.ವಿ. ರಾಜೇಗೌಡ, ಕೆ.ಆರ್. ಜಯರಾಮ್, ಕೆನ್ನಾಳು ನಾಗರಾಜ್ ಸೇರಿದಂತೆ ಮಂಡ್ಯ, ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳ ಜಿಲ್ಲಾ ಹಾಗೂ ತಾಲ್ಲೂಕು ಪದಾಧಿಕಾರಿಗಳು, ಮಹಿಳಾ ಮತ್ತು ಯುವ ಘಟಕಗಳ ಪದಾಧಿಕಾರಿಗಳು, ಕನ್ನಡಪರ ಹಾಗೂ ಇತರ ಪ್ರಗತಿಪರ ಚಳವಳಿಗಳ ಮುಖಂಡರು ಸೇರಿದಂತೆ ಸಾವಿರಾರು ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.







