ಸಿಡಿಲು ಬಡಿದ ಪರಿಣಾಮ ದಿನಸಿ ಅಂಗಡಿಯೊಂದು ಸುಟ್ಟು ಕರಕಲಾದ ಘಟನೆ ಮಂಗಳೂರು ನಗರ ಹೊರವಲಯದ ಮುನ್ನೂರು ಗ್ರಾಮದ ರಾಣಿಪುರದಲ್ಲಿ ನಡೆದಿದೆ.
ರಾಣಿಪುರ ಚರ್ಚ್ ಎದುರಿನ ಪೀಟರ್ ಆಪೊಸು ಎಂಬವರ ದಿನಸಿ ಅಂಗಡಿಗೆ ಸಿಡಿಲು ಬಡಿದಿದ್ದು, ಸುಟ್ಟು ಕರಕಲಾಗಿದೆ.
ಘಟನೆಯ ವೇಳೆ ಪೀಟರ್ ಮತ್ತು ಮನೆಯವರು ನಿದ್ರೆಯಲ್ಲಿದ್ದರು. ದಾರಿಹೋಕರೊಬ್ಬರು ಅಂಗಡಿಗೆ ಬೆಂಕಿ ಬಿದ್ದಿರುವುದನ್ನು ಕಂಡು ಮನೆ ಮಂದಿಗೆ ತಿಳಿಸಿದ್ದಾರೆ.
ತಕ್ಷಣ ಎಚ್ಚೆತ್ತ ಪೀಟರ್ ಕುಟುಂಬ ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದು, ಸ್ಥಳಕ್ಕೆ ದೌಡಾಯಿಸಿದ ಸಿಬ್ಬಂದಿ, ಮನೆಗೆ ವ್ಯಾಪಿಸುತ್ತಿದ್ದ ಬೆಂಕಿಯನ್ನು ನಂದಿಸಿದ್ದಾರೆ.
ಈ ಘಟನೆಯಿಂದ ಮೂರು ರೆಫ್ರಿಜರೇಟರ್ ಸಹಿತ ಲಕ್ಷಾಂತರ ರೂಪಾಯಿ ಮೌಲ್ಯದ ದಿನಸಿ ದಾಸ್ತಾನು ಸುಟ್ಟು ಕರಕಲಾಗಿದೆ. ಇತರ ಇಲೆಕ್ಟ್ರಾನಿಕ್ ಉಪಕರಣಗಳು ಕೆಟ್ಟು ಹೋಗಿವೆ. ಅಂಗಡಿ, ಮನೆ ಒಟ್ಟಿಗೆ ಇದ್ದ ಕಟ್ಟಡದ ಗೋಡೆ ಬಿರುಕು ಬಿಟ್ಟಿದೆ. ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.