ಹಾಸನದ ವೈದ್ಯಕೀಯ ಕಾಲೇಜು ಆಸ್ಪತ್ರೆ(ಹಿಮ್ಸ್)ನಲ್ಲಿ ಭಾನುವಾರ ಮಧ್ಯಾಹ್ನ ಬೆಂಕಿ ಅವಘಡ ಸಂಭವಿಸಿದ್ದು, ಸಿಬ್ಬಂದಿಯ ಸಮಯ ಪ್ರಜ್ಞೆಯಿಂದ ಭಾರೀ ಅನಾಹುತ ತಪ್ಪಿದಂತಾಗಿದೆ.
ಹಾಸನದ ಜಿಲ್ಲಾಸ್ಪತ್ರೆಯೂ ಆಗಿರುವ ಹಿಮ್ಸ್‌ನ ನವಜಾತ ಶಿಶುಗಳ ಐಸಿಯು ವಾರ್ಡಿನ ಹವಾ ನಿಯಂತ್ರಿತ ಸಿಲಿಂಡರ್‍ನ ಸ್ಟೆಬಿಲೈಸರ್ ಸ್ಫೋಟಗೊಂಡ ಪರಿಣಾಮ ಈ ಘಟನೆ ನಡೆದಿದೆ.
ವಾರ್ಡಿನಲ್ಲಿದ್ದ 24 ಶಿಶುಗಳನ್ನು ಕೂಡಲೇ ಬೇರೆಡೆಗೆ ಸ್ಥಳಾಂತರಿಸಿದ ಪರಿಣಾಮ ಹೆಚ್ಚಿನ ಅವಘಡ ಸಂಭವಿಸಿಲ್ಲ ಎಂದು ತಿಳಿದುಬಂದಿದೆ. ಘಟನೆಯಿಂದಾಗಿ ನವಜಾತ ಶಿಶುಗಳ ಪೋಷಕರು ಆತಂಕಿತರಾಗಿದ್ದರು.

ಈ ಬಗ್ಗೆ ಈ ದಿನ.ಕಾಮ್ ಜೊತೆಗೆ ಮಾತನಾಡಿದ ಹಿಮ್ಸ್‌ನ ವೈದ್ಯಕೀಯ ಅಧೀಕ್ಷಕ ಡಾ. ಕೃಷ್ಣಮೂರ್ತಿ, “ಮಧ್ಯಾಹ್ನ ಹವಾನಿಯಂತ್ರಿತ ಸಿಲಿಂಡರ್ ನ ಸ್ಟೆಬಿಲೈಸರ್ ಸ್ಫೋಟಗೊಂಡಿದೆ. ಇದರಿಂದ ವಾರ್ಡಿನಲ್ಲಿ ಹೊಗೆ ತುಂಬಿಕೊಂಡಿತ್ತು. ತತ್ ಕ್ಷಣವೇ ವಾರ್ಡ್ ನ ಕಿಟಕಿ ಬಾಗಿಲಿನ ಗಾಜುಗಳನ್ನು ಒಡೆದು ಐಸಿಯುನಲ್ಲಿದ್ದ 24 ನವಜಾತ ಶಿಶುಗಳು ಬೇರೆಡೆಗೆ ಸ್ಥಳಾಂತರಿಸಲಾಗಿದೆ. ಎಲ್ಲ ಶಿಶುಗಳು ಸುರಕ್ಷಿತವಾಗಿವೆ. ಪೋಷಕರು ಆತಂಕಿತರಾಗುವ ಅವಶ್ಯಕತೆ ಇಲ್ಲ” ಎಂದು ತಿಳಿಸಿದರು.
ಸ್ಥಳಕ್ಕೆ ಹಿಮ್ಸ್‌ನ ನಿರ್ದೇಶಕ ಡಾ.ರವಿಕುಮಾರ್ ಸೇರಿದಂತೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.