ವಿಜಯಪುರ ಜಿಲ್ಲೆ ಸಿಂಧಗಿಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯಲ್ಲಿ ಅಂಗನವಾಡಿ ಮೇಲ್ವಿಚಾರಕಿಯರು, ಕಾರ್ಯಕರ್ತೆಯರು ಹಾಗೂ ಸಹಾಯಕರಿಗೆ ಮೊಬೈಲ್ ಫೋನ್, ಸಮವಸ್ತ್ರ ಹಾಗೂ ಫಲಾನುಭವಿಗಳಿಗೆ ಔಷಧಿ ಕಿಟ್ ವಿತರಣಾ ಕಾರ್ಯಕ್ರಮವು ಜರುಗಿತು.
ಈ ವೇಳೆ ಮಾತನಾಡಿದ ಶಾಸಕ ಅಶೋಕ್ ಎಂ ಮನಗೂಳಿ, ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ತಳಮಟ್ಟದಲ್ಲಿ ಕಡಿಮೆ ಗೌರವಧನದಲ್ಲಿ ತುಂಬಾ ಕಷ್ಟಪಟ್ಟು ಶ್ರಮಿಸುತ್ತಿದ್ದಾರೆ. ಮಹಿಳಾ ಮತ್ತು ಮಕ್ಕಳ ಇಲಾಖೆಗಳಿಗೆ ಮಾತೃ ಇಲಾಖೆಯಾಗಿದೆ” ಎಂದರು.
“ಕರ್ನಾಟಕ ಸರ್ಕಾರವು ಅಂಗನವಾಡಿ ಮೇಲ್ವಿಚಾರಕಿಯರಿಗೆ, ಕಾರ್ಯಕರ್ತರಿಗೆ ಹಾಗೂ ಫಲಾನುಭವಿಗಳಾದ ಮಕ್ಕಳಿಗೆ ಮತ್ತು ಗರ್ಭಿಣಿ ಬಾಣಂತಿಯರ ಹಿತದೃಷ್ಟಿಯಿಂದ ಮೊಬೈಲ್ ಫೋನ್, ಔಷಧಿ ಕಿಟ್, ತೂಕದ ಯಂತ್ರಗಳು ಕಾರ್ಯಕರ್ತರಿಗೆ ಮತ್ತು ಸಹಾಯಕರಿಗೆ ಸಮವಸ್ತ್ರ ಮತ್ತು ಮಕ್ಕಳ ಬೌದ್ಧಿಕ ಬೆಳವಣಿಗೆಗಾಗಿ
ಮಕ್ಕಳ ಪ್ರಪಂಚ ಪುಸ್ತಕಗಳನ್ನು ವಿತರಿಸುತ್ತಿರುವುದು ತುಂಬಾ ಹೆಮ್ಮೆಯ ವಿಷಯ” ಎಂದರು.
ಸಿಂಧಗಿಯ 5 ಕುಟುಂಬಗಳಿಗೆ ಸುಕನ್ಯಾ ಸಮೃದ್ಧಿ ಯೋಜನೆಯ ಪಾಸ್ ಪುಸ್ತಕಗಳನ್ನು ವಿತರಿಸಿದರು. ಹೆಣ್ಣು ಮಕ್ಕಳ ಲಿಂಗಾನುಪಾತ, ಸಾಕ್ಷರತೆ ಹೆಚ್ಷಿಸುವ ಪ್ರಯುಕ್ತ ಜಾರಿಯಾಗಿರುವ ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆ ಅಡಿ ತಿಳುವಳಿಕೆ ಮೂಡಿಸಲು ಭಿತ್ತಿಪತ್ರಗಳನ್ನು ಬಿಡುಗಡೆಗೊಳಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ಕೆ.ಕೆ ಚೌಹಾಣ್ ಮಾತನಾಡಿದರು. ಕಾರ್ಯಕ್ರಮವನ್ನು ಜಯಶ್ರೀ ದೊಡ್ಡಮನಿ ನಿರ್ವಹಿಸಿದರು.
ಇದನ್ನು ಓದಿದ್ದೀರಾ? ಖ್ಯಾತ ನಿರೂಪಕಿ ಅಪರ್ಣಾ ಇನ್ನಿಲ್ಲ
ಅಂಗನವಾಡಿ ಸಂಘಟನೆಯ ಪದಾಧಿಕಾರಿಗಳಾದ ಸರಸ್ವತಿ ಮಠ, ಪ್ರತಿಭಾ ಕುರುಡೆ, ಮೇಲ್ವಿಚಾರಕಿಯರು, ಸಿಬ್ಬಂದಿ ವರ್ಗ ಹಾಗೂ ಸಿಂಧಗಿ ವಿಧಾನಸಭಾ ಕ್ಷೇತ್ರದ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಹಾಗೂ ಇತರರು ಉಪಸ್ಥಿತರಿದ್ದರು.
