ವಿಜಯಪುರ ಜಿಲ್ಲೆ ಸಿಂಧಗಿ ತಾಲೂಕಿನ ಅಂಗನವಾಡಿಗಳ ಸ್ಥಿತಿಗತಿ ಹೇಗಿದೆ ಎಂದು ‘ಈ ದಿನ.ಕಾಮ್’ ರಿಯಾಲಿಟಿ ಚೆಕ್ ಮಾಡಿದಾಗ ತಾಲ್ಲೂಕಿನ ಒಟ್ಟು 177 ಅಂಗನವಾಡಿಗಳ ಪೈಕಿ 66 ಅಂಗನವಾಡಿಗಳು ಬಾಡಿಗೆ ಕಟ್ಟಡಗಳಲ್ಲಿವೆ ಎಂಬ ಅಂಶ ಬೆಳಕಿಗೆ ಬಂದಿದೆ.
“ನಾನು ಅಂಗನವಾಡಿ ಕೆಲಸಕ್ಕೆ ಸೇರಿದ್ದು 2018ರಲ್ಲಿ. ಅಲ್ಲಿಂದ ಇಲ್ಲಿಯವರೆಗೂ ಅದೇ ಬಾಡಿಗೆ ಕಟ್ಟಡದಲ್ಲಿ ಅಂಗನವಾಡಿ ನಡೀತಿದೆ. ಗ್ರಾಮದಲ್ಲಿ ಒಂದು ಸ್ವಂತ ಕಟ್ಟಡ ನಿರ್ಮಿಸಲು ಅವಕಾಶ ಮಾಡಿ ಕೊಡಿ ಎಂದು ಗ್ರಾಮ ಪಂಚಾಯತ್ ಅಧ್ಯಕ್ಷರಿಂದ ಹಿಡಿದು ಎಲ್ಲ ಸದಸ್ಯರಲ್ಲಿ ವಿನಂತಿಸಿದ್ದೆವು. ಎಲ್ಲಿಯೂ ಕಟ್ಟಡ ನಿರ್ಮಿಸಲು ಜಾಗವಿಲ್ಲ ಅಂತಾನೇ ಹೇಳ್ತಿದ್ದಾರೆ”.
ಹೀಗಂತ ನಮ್ಮೊಂದಿಗೆ ನೋವು ತೋಡಿಕೊಂಡವರು ವಿಜಯಪುರ ಜಿಲ್ಲೆ ಸಿಂಧಗಿ ತಾಲೂಕಿನ ಬಬಲೇಶ್ವರ ಅಂಗನವಾಡಿ ಕೇಂದ್ರ -2ರ ಅಂಗನವಾಡಿ ಶಿಕ್ಷಕಿ ದುಗ್ಗಮ್ಮ ದಾನನ್ನವರ್.
ಹೌದು, ಇದು ಕೇವಲ ಒಂದು ಅಂಗನವಾಡಿಯ ಕಥೆಯಲ್ಲ. ರಾಜ್ಯದ ಹಲವು ಜಿಲ್ಲೆಗಳಲ್ಲಿರುವ ಬಹುತೇಕ ಅಂಗನವಾಡಿಗಳ ಕಥೆ.
ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರವು ಇತ್ತೀಚೆಗೆ ಅಂಗನವಾಡಿಗಳಲ್ಲಿ ಎಲ್‌ಕೆಜಿ-ಯುಕೆಜಿ ತರಗತಿಯನ್ನು ಆರಂಭಿಸುವ ತೀರ್ಮಾನ ಮಾಡಿದೆ. ಆದರೆ ರಾಜ್ಯದಲ್ಲಿ ಬಹುತೇಕ ಅಂಗನವಾಡಿಗಳು ಬಾಡಿಗೆ ಕಟ್ಟಡದಲ್ಲಿ ಮೂಲಭೂತ ಸೌಕರ್ಯ ಇಲ್ಲದೆ ನಡೆಯುತ್ತಿವೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ.
ವಿಜಯಪುರ ಜಿಲ್ಲೆ ಸಿಂಧಗಿ ತಾಲೂಕಿನ ಅಂಗನವಾಡಿಗಳ ಸ್ಥಿತಿಗತಿ ಹೇಗಿದೆ ಎಂದು ‘ಈ ದಿನ.ಕಾಮ್’ ರಿಯಾಲಿಟಿ ಚೆಕ್ ಮಾಡಿತು. ಸದ್ಯ ಈ ತಾಲೂಕಿನಲ್ಲಿ ಒಟ್ಟು 177 ಅಂಗನವಾಡಿಗಳಿದೆ. ಈ ಪೈಕಿ 66 ಅಂಗನವಾಡಿಗಳು ಬಾಡಿಗೆ ಕಟ್ಟಡಗಳಲ್ಲಿವೆ ಎಂಬ ಅಂಶ ಬೆಳಕಿಗೆ ಬಂದಿದೆ.

ಈ ದಿನ.ಕಾಮ್ ತಂಡ ಸಿಂಧಗಿ ತಾಲೂಕಿನ ಬಬಲೇಶ್ವರ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ಹಲವಾರು ಸಮಸ್ಯೆಗಳನ್ನು ಎದುರಿಸಿಕೊಂಡೇ ಅಂಗನವಾಡಿ ಶಿಕ್ಷಕಿಯರು ದಿನದೂಡುತ್ತಿರುವುದು ಕಂಡುಬಂತು.
ಅಂಗನವಾಡಿ ಶಿಕ್ಷಕಿ ದುಗ್ಗಮ್ಮ ದಾನನ್ನವರ್ ಮಾತನಾಡಿ, “ನಮ್ಮ ಅಂಗನವಾಡಿ ಕೇಂದ್ರಕ್ಕೆ ಸ್ವಂತ ಕಟ್ಟಡವಿಲ್ಲ. ಸರಿಸುಮಾರು ಎಂಟು ವರ್ಷಗಳಿಂದ ಬಾಡಿಗೆ ಮನೆಯಲ್ಲಿ ನಡೆಯುತ್ತಿದೆ. ಬಾಡಿಗೆ ಮನೆಯು ಊರಿನ ಹೊರಭಾಗದಲ್ಲಿ ಇರುವುದರಿಂದ ಮಕ್ಕಳ ಸಂಖ್ಯೆ ಕೂಡ ಕಡಿಮೆ ಇದೆ. ಒಂದು ವೇಳೆ ಮಳೆ ಬಂದರೆ ಇಲ್ಲಿಗೆ ಬರುವ ರಸ್ತೆಯು ಸಂಪೂರ್ಣ ನೀರಿನಿಂದ ಆವೃತವಾಗಿರುತ್ತದೆ. ಇದಕ್ಕೆ ಪಾಲಕರು ಮಕ್ಕಳನ್ನು ಅಂಗನವಾಡಿ ಕೇಂದ್ರಕ್ಕೆ ಕಳಿಸಲು ಹಿಂದೆ ಮುಂದೆ ನೋಡುತ್ತಿದ್ದಾರೆ” ಎಂದು ತಿಳಿಸಿದರು.
“ಬಾಡಿಗೆ ಮನೆಯಲ್ಲಿ ನಡೆಯುತ್ತಿರುವುದರಿಂದ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ಶೌಚಾಲಯ, ಆಟಿಕೆ ಸಾಮಾನುಗಳನ್ನು ಇಡಲು ಕೂಡ ಸ್ಥಳವಿಲ್ಲ” ಎಂದು ಶಿಕ್ಷಕಿ ದುಗ್ಗಮ್ಮ ಬೇಸರ ವ್ಯಕ್ತಪಡಿಸಿದರು.
‘ಯಾರೂ ಕಿವಿಗೆ ಹಾಕಿಕೊಳ್ಳುತ್ತಿಲ್ಲ’
ಈ ದಿನ.ಕಾಮ್ ಜೊತೆಗೆ ಮಾತನಾಡಿದ ಪೋಷಕರೊಬ್ಬರು, “ನಮ್ಮ ಮಕ್ಕಳನ್ನು ಕಳುಹಿಸುತ್ತಿರುವ ಅಂಗನವಾಡಿ ಬಾಡಿಗೆ ಮನೆಯೊಂದರಲ್ಲಿದೆ. ಅಂಗನವಾಡಿ ಬರುವುದಕ್ಕೆ ಸರಿಯಾದ ರಸ್ತೆ ಕೂಡ ಇಲ್ಲ. ಹಾಗಾಗಿ, ಮಳೆ ಬಂದರೆ ಇಲ್ಲಿಗೆ ಕಳುಹಿಸಲೂ ಕೂಡ ಭಯವಾಗುತ್ತದೆ. ಅಂಗನವಾಡಿಗೊಂದು ಕಟ್ಟಡ ನಿರ್ಮಿಸಿಕೊಂಡಿ ಅಂತ ಗ್ರಾಮ ಪಂಚಾಯತ್‌ನವರಿಗೆ ತಿಳಿಸಿದರೂ ಕೂಡ ಯಾರೂ ಕಿವಿಗೆ ಹಾಕಿಕೊಳ್ಳುತ್ತಿಲ್ಲ” ಎನ್ನುತ್ತಾರೆ ಬಬಲೇಶ್ವರದ ಪೋಷಕಿ ರಾಜಶ್ರೀ.

ಹೆಸರಿಗಷ್ಟೇ ಶೌಚಾಲಯ!
ಗಣಿಹಾರದ ಗ್ರಾಮದ ಅಂಗನವಾಡಿಯನ್ನು ಗಮನಿಸಿದರೆ ಮೂಲಭೂತ ಸೌಕರ್ಯಗಳೇ ಇಲ್ಲ. ಹೆಸರಿಗೊಂದು ಮಕ್ಕಳಿಗೆ ಶೌಚಾಲಯವಿದ್ದು, ಅಲ್ಲಿಗೆ ಮಕ್ಕಳನ್ನು ಕಳುಹಿಸಲು ಹಿಂದೆ-ಮುಂದೆ ನೋಡಬೇಕಾದ ಪರಿಸ್ಥಿತಿ ಅಂಗನವಾಡಿ ಸಹಾಯಕಿಯರದ್ದು.
ಇದನ್ನು ಓದಿದ್ದೀರಾ? ಅಂಗನವಾಡಿ ನೇಮಕಾತಿ | ಡಿಸೆಂಬರ್‌ನೊಳಗೆ ಪೂರ್ಣಗೊಳಿಸಲು ಸಿಎಂ ಸೂಚನೆ
ಶೌಚಾಲಯವೊಂದನ್ನು ಕಟ್ಟಿದ್ದಾರೆ. ಆದರೆ ಅದಕ್ಕೆ ಸಣ್ಣ ಮಕ್ಕಳು ಹೋಗುವುದು ಕೂಡ ಕಷ್ಟವಾಗುತ್ತದೆ. ಎರಡು ಸಣ್ಣ ಕಟ್ಟಡದ ನಡುವೆ ಉಳಿದಿದ್ದ ಇಕ್ಕಟ್ಟಿನ ಜಾಗದಲ್ಲೇ ಶೌಚಾಲಯ ಕಟ್ಟಲಾಗಿದೆ. ಸರಿಯಾಗಿ ಬಳಸಲೂ ಆಗದೆ, ಸುತ್ತಮುತ್ತಲೂ ಪೊದೆ ಬೆಳೆದಿದೆ.

ಇನ್ನು ಅಂಗನವಾಡಿ ಕಟ್ಟಡದ ಗೋಡೆಯನ್ನು ಗಮನಿಸಿದರೆ ಸಾಕು, ಸುಣ್ಣ-ಬಣ್ಣ ಕಾಣದೇ ಎಷ್ಟು ವರ್ಷಗಳು ಆಗಿದೆಯೋ ಎಂಬುದು ಅಲ್ಲಿನ ಗ್ರಾಮಸ್ಥರಿಗೂ ನೆನಪಿರಲಿಕ್ಕಿಲ್ಲ.
“35 ವರ್ಷದ ಹಳೆಯ ಕಟ್ಟಡವಿದ್ದು, ಮಳೆ ಬಂದರೆ ನೀರು ಸೋರುತ್ತದೆ. ಮಕ್ಕಳಿಗೆ ಅನಿವಾರ್ಯವಾಗಿ ರಜೆ ಕೊಡಬೇಕಾದ ಪರಿಸ್ಥಿತಿ ಇದೆ. ಕಟ್ಟಡವಿದ್ದರೂ ಕಡ್ಡಿ ಪೊಟ್ಟಣದಂತೆ ಇರುವ ಈ ಕಟ್ಟಡದಲ್ಲಿ ಮಕ್ಕಳ ಆಹಾರ ಪದಾರ್ಥಗಳನ್ನು ಇಡಲು ಜಾಗವಿಲ್ಲ. ಅವುಗಳನ್ನು ಬೇರೆ ಸ್ಥಳಗಳಿಗೆ ಸ್ಥಳಾಂತರ ಮಾಡಲು ಕೂಡ ಸರಿಯಾದ ವ್ಯವಸ್ಥೆ ಇಲ್ಲ. ಇದ್ದ ಜಾಗದಲ್ಲೇ ಇಟ್ಟುಕೊಳ್ಳುತ್ತಿರುವುದರಿಂದ ಹಾಳಾಗುವಂತ ಪರಿಸ್ಥಿತಿ ನಿರ್ಮಾಣವಾಗಿದೆ” ಎನ್ನುತ್ತಾರೆ ಗಣಿಹಾರ ಗ್ರಾಮದಲ್ಲಿರುವ ಅಂಗನವಾಡಿಯ ಸಹಾಯಕಿ ಸುನೀತಾ.
ಉಸಿರುಗಟ್ಟುವಂತಹ ಕೊಠಡಿಯಲ್ಲಿ ಅಂಗನವಾಡಿ ಕೇಂದ್ರ
ಇನ್ನು ರಾಂಪುರ ಗ್ರಾಮದಲ್ಲೊಂದು ಅಂಗನವಾಡಿ ಕೇಂದ್ರ ಇದೆ. ಅದನ್ನು ನಡೆಸುತ್ತಿರುವುದು ಮುಸ್ಲಿಂ ಸಮುದಾಯದ ದರ್ಗಾವೊಂದರ ಮೂಲೆಯಲ್ಲಿರುವ ಸಣ್ಣ ಕೊಠಡಿಯಲ್ಲಿ. ಕೊಠಡಿಯ ಒಳಗಡೆ ಎಲ್ಲ ಮಕ್ಕಳನ್ನು ಕುಳ್ಳಿರಿಸಿಕೊಳ್ಳಲು ಸಾಕಷ್ಟು ಜಾಗವಿಲ್ಲದ ಕಾರಣ ವರಾಂಡದಲ್ಲಿರುವ ಮರವೊಂದರ ಕೆಳಗೆ ಕೂರಿಸಿಕೊಳ್ಳುತ್ತಾರೆ. ಈ ಎಲ್ಲ ಸಮಸ್ಯೆಯ ನಡುವೆಯೂ ನಡಸಲೇಬೇಕಾದ ದುಸ್ಥಿತಿ ಅಂಗನವಾಡಿ ಶಿಕ್ಷಕಿಯರದ್ದು. ಈ ಕೇಂದ್ರವನ್ನು ಸುಮಾರು 15 ವರ್ಷದಿಂದ ನಡೆಸುತ್ತಾ ಬಂದಿದ್ದಾರೆ.
ಮಂಜೂರಾದರೂ ದೊರೆಯದ ಕಟ್ಟಡ ಭಾಗ್ಯ
ರಾಂಪುರ ಗ್ರಾಮದಲ್ಲಿ ಅಂಗನವಾಡಿಗೆ ಸ್ವಂತ ಕಟ್ಟಡಕ್ಕೆ ಕಳೆದ ವರ್ಷ ಜಾಗ ಮಂಜೂರು ಮಾಡಲಾಗಿದೆ. ಕಟ್ಟಡದ ಕಾಮಗಾರಿ ಕೂಡ ಪ್ರಾರಂಭಿಸಲಾಗಿದೆಯಾದರೂ, ಅರ್ಧದಲ್ಲೇ ಕುಂಠಿತಗೊಂಡಿದೆ.
“ಹೊಸದಾಗಿ ಮಂಜೂರಾಗಿರುವ ಕಟ್ಟಡದ ಜಾಗವು ಈಗ ಹಂದಿ ಮತ್ತು ಬೀದಿನಾಯಿಗಳ ವಾಸಸ್ಥಾನವಾಗಿ ಮಾರ್ಪಟ್ಟಿದೆ. ಅಂಗನವಾಡಿ ಕೇಂದ್ರದ ಮಕ್ಕಳು ಆಟವಾಡುವ ಜಾಗವು ಪ್ರಾಣಿಗಳಿಗೆ ಆಸರೆಯಾಗಿದೆ. ಕಟ್ಟಡದ ಕಾಮಗಾರಿ ಪ್ರಕ್ರಿಯೆ ಕುಂಠಿತಗೊಂಡಿರುವುದರಿಂದ ತುಂಬಾ ಸಮಸ್ಯೆಯಾಗುತ್ತಿದೆ” ಎನ್ನುತ್ತಾರೆ ರಾಂಪುರದ ಅಂಗನವಾಡಿಯ ಶಿಕ್ಷಕಿ ವಿದ್ಯಾ.
ಸಿಂಧಗಿ ತಾಲೂಕಿನಲ್ಲಿ ಒಟ್ಟು 177 ಅಂಗನವಾಡಿ ಕೇಂದ್ರಗಳ ಪೈಕಿ ಸ್ವಂತ ಕಟ್ಟಡದಲ್ಲಿ 88 ಕೇಂದ್ರಗಳು ಕಾರ್ಯಾಚರಿಸುತ್ತಿದೆ. 66 ಬಾಡಿಗೆ ಕಟ್ಟಡಗಳಲ್ಲಿವೆ. ಮೂರು ಅಂಗನವಾಡಿ ಕೇಂದ್ರಗಳು ಗ್ರಾಮ ಪಂಚಾಯತಿಯಲ್ಲಿಯೇ ನಡೆಯುತ್ತಿವೆ. ಸಮುದಾಯ ಭವನಗಳಲ್ಲಿ ಎಂಟು ಅಂಗನವಾಡಿ ಕೇಂದ್ರಗಳು ನಡೆಯುತ್ತಿವೆ. ಇತರೆ ಕಟ್ಟಡದಲ್ಲಿ ಮೂರು ಅಂಗನವಾಡಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಮಾಹಿತಿ ದೊರಕಿದೆ.
ಅಂಗನವಾಡಿಗಳ ದುಸ್ಥಿತಿಯ ಬಗ್ಗೆ ಮಾತನಾಡಿರುವ ಸಿಐಟಿಯು ತಾಲೂಕು ಅಧ್ಯಕ್ಷರಾದ ಸರಸ್ವತಿ ಕೊರವಾರ, “ಅಂಗನವಾಡಿಗಳಿಗೆ ಬೇಕಾದ ಸೂಕ್ತ ಕಟ್ಟಡವನ್ನು ನಿರ್ಮಿಸಲು ಜಾಗವನ್ನು ಗುರುತಿಸುವಂತೆ ಶಿಕ್ಷಕಿ ಮತ್ತು ಸಹಾಯಕಿಯರಿಗೆ ತಿಳಿಸಿದ್ದೇವೆ. ಎಲ್ಲಿ ಜಾಗ ಸಿಗುತ್ತದೆಯೋ ಅಂತಹ ಸ್ಥಳದಲ್ಲಿ ಸ್ವಂತ ಕಟ್ಟಡವನ್ನು ನಿರ್ಮಿಸುವುದಕ್ಕೆ ಮೇಲಾಧಿಕಾರಿಗಳ ಗಮನಕ್ಕೆ ತರುವ ಕೆಲಸ ಮಾಡುತ್ತಿದ್ದೇವೆ” ಎಂದರು.

ಸಿಂಧಗಿ ತಾಲೂಕಿನ ಸಿಡಿಪಿಓ ಶಂಭುಲಿಂಗ ಹಿರೇಮಠ್ ಮಾತನಾಡಿ, “ಅಂಗನವಾಡಿ ಕೇಂದ್ರಗಳಲ್ಲಿ ಮೂಲಭೂತ ಸೌಕರ್ಯವಿಲ್ಲದಿರುವ ಸಮಸ್ಯೆಗಳು ನಮ್ಮ ಗಮನಕ್ಕೂ ಬಂದಿದೆ. ಎಲ್ಲ ಅಂಗನವಾಡಿಗಳ ಪಟ್ಟಿಯನ್ನು ಪರಿಶೀಲಿಸಿ, ಆ ಸಮಸ್ಯೆಗಳನ್ನು ಹೇಗೆ ಬಗೆಹರಿಸಬೇಕು ಎಂಬ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು” ಎಂದರು.
ಸಿಂಧಗಿ ಪುರಸಭೆ ಮುಖ್ಯ ಅಧಿಕಾರಿ ಸುರೇಶ್ ನಾಯಕ ಮಾತನಾಡಿ, “ನಮ್ಮ ವ್ಯಾಪ್ತಿಯಲ್ಲಿ ಬರುವ ಅಂಗನವಾಡಿ ಕೇಂದ್ರಗಳಲ್ಲಿನ ಸಮಸ್ಯೆಗಳ ಬಗ್ಗೆ ಮನವಿ ಬಂದಲ್ಲಿ ಕ್ರಮ ಕೈಗೊಳ್ಳುತ್ತೇವೆ” ಎಂದು ಹೇಳಿದರು.

ತಾಲೂಕಿನಲ್ಲಿ 88 ಅಂಗನವಾಡಿ ಕೇಂದ್ರಗಳು ಸ್ವಂತ ಕಟ್ಟಡವನ್ನು ಹೊಂದಿದ್ದರೂ ಕೂಡ ಮೂಲಭೂತ ಸೌಕರ್ಯಗಳ ಕೊರತೆ ಇದೆ. ಕೆಲವೊಂದು ಕಟ್ಟಡಗಳಲ್ಲಿ ಬಿರುಕು ಕೂಡ ಕಾಣಿಸಿವೆ. ಕೆಲವು ಅಂಗನವಾಡಿ ಕೇಂದ್ರಗಳಲ್ಲಿ ಶೌಚಾಲಯಗಳೇ ಇಲ್ಲ. ಕೆಲವು ಕಡೆಗಳಲ್ಲಿ ಮಕ್ಕಳಿಗೆ ಆಟಕ್ಕೆ ಬೇಕಾದ ಸ್ಥಳ ಇಲ್ಲ. ಹಲವು ಇಲ್ಲಗಳ ನಡುವೆಯೇ ಅಂಗನವಾಡಿಗಳು ಕಾರ್ಯಾಚರಣೆ ನಡೆಸುತ್ತಾ ಬಂದಿದೆ.
ರಾಜ್ಯ ಸರ್ಕಾರವು ಈಗ ಅಂಗನವಾಡಿಗಳಲ್ಲಿ ಎಲ್‌ಕೆಜಿ-ಯುಕೆಜಿ ತರಗತಿ ಆರಂಭಿಸುವ ತೀರ್ಮಾನಕ್ಕೆ ಬಂದಿದೆ. ಆದರೆ ಅದಕ್ಕೂ ಮುನ್ನ ಬಾಡಿಗೆ ಕಟ್ಟಡದಲ್ಲಿರುವ ಅಂಗನವಾಡಿ ಕೇಂದ್ರಗಳಿಗೆ ಸರ್ಕಾರ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು, ಮೂಲಭೂತ ಸೌಕರ್ಯವಿರುವ ಸ್ವಂತ ಕಟ್ಟಡವನ್ನು ನಿರ್ಮಿಸಿ, ಮುಕ್ತಿ ನೀಡುವರೇ ಎಂದು ಕಾದುನೋಡಬೇಕಿದೆ.