ಕಾಣೆಯಾಗಿದ್ದ ವ್ಯಕ್ತಿಯೊಬ್ಬರ ಅಸ್ಥಿಪಂಜರ ಮೂರು ವರ್ಷದ ಬಳಿಕ ಆತನ ಮನೆಯಲ್ಲೇ ಪತ್ತೆಯಾದ ಘಟನೆ ಧಾರವಾಡದ ಮಾಳಮಡ್ಡಿ ಬಡಾವಣೆಯಲ್ಲಿ ನಡೆದಿದೆ.
ಅಸ್ಥಿಪಂಜರವಾಗಿ ಪತ್ತೆಯಾದ ವ್ಯಕ್ತಿಯನ್ನು ಚಂದ್ರಶೇಖರ್ ಎಂದು ಗುರುತಿಸಲಾಗಿದೆ. ಮೃತ ಚಂದ್ರಶೇಖರ್ ಮೂರು ವರ್ಷಗಳಿಂದ ನಾಪತ್ತೆಯಾಗಿದ್ದರು. ಆದರೆ ಮನೆಯಲ್ಲಿ ಮಲಗಿದ್ದಲ್ಲೇ ಮೃತಪಟ್ಟ ಸ್ಥಿತಿಯಲ್ಲಿ ಅಸ್ಥಿಪಂಜರ ಸಿಕ್ಕಿದೆ.
ಕಳೆದ ತಿಂಗಳು ಚಂದ್ರಶೇಖರ್ ಕಾಣೆಯಾಗಿರುವ ಬಗ್ಗೆ ಧಾರವಾಡ ವಿದ್ಯಾಗಿರಿ ಠಾಣೆಯಲ್ಲಿ ವ್ಯಕ್ತಿಯೊಬ್ಬರು ದೂರು ಕೊಟ್ಟಿದ್ದರು. ಬಳಿಕ ಪೊಲೀಸ್ ಚಂದ್ರಶೇಖರ್ಗಾಗಿ ಎಲ್ಲೆಡೆ ಶೋಧ ನಡೆಸಿದ್ದರು.
ಪೊಲೀಸರು ಚಂದ್ರಶೇಖರ್ ಮನೆಗೆ ಹೋಗಿದ್ದಾಗ, ಅಸ್ಥಿಪಂಜರವಾಗಿ ಕಂಡುಬಂದಿದೆ. ಪತ್ನಿಯ ಸಾವಿನ ನಂತರ ಚಂದ್ರಶೇಖರ್ ಮನೆಯಲ್ಲಿ ಒಬ್ಬರೇ ಇರುತ್ತಿದ್ದರು. ಅದಾದ ಬಳಿಕ ಕೋವಿಡ್ ಬಂದಿತ್ತು. ಕೋವಿಡ್ ವೇಳೆ ಇವರು ಸಾವನ್ನಪ್ಪಿರುವ ಬಗ್ಗೆ ಶಂಕೆ ಮೂಡಿದೆ.
ಮೃತ ವ್ಯಕ್ತಿಯ ಸಂಬಂಧಿಕರು ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಇರುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಹೀಗಾಗಿ ಯಾರೂ ಈ ಬಗ್ಗೆ ಮಾಹಿತಿ ಪಡೆದಿರಲಿಲ್ಲ. ಸದ್ಯ ಅಸ್ಥಿಪಂಜರ ವಶಕ್ಕೆ ಪಡೆದಿರುವ ಪೊಲೀಸರು, ಮುಂದಿನ ಕ್ರಮ ಜರುಗಿಸಿದ್ದಾರೆ.