14 ವರ್ಷದ ದಲಿತ ಸಮುದಾಯದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಪೋಷಕರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಸಂಧಾನಕ್ಕೆ ಒಪ್ಪದ ಕುಟುಂಬ ಮತ್ತು ದಲಿತ ಕುಟುಂಬಗಳಿಗೆ ಸವರ್ಣೀಯರು ಸಾಮಾಜಿಕ ಬಹಿಷ್ಕಾರ ಹಾಕಿರುವ ಘಟನೆ ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಬಪ್ಪರಗಾ ಗ್ರಾಮದಲ್ಲಿ ನಡೆದಿತ್ತು.
ಈ ವಿಚಾರವು ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿದ್ದಂತೆಯೇ ಎಚ್ಚೆತ್ತ ಯಾದಗಿರಿ ಜಿಲ್ಲಾಡಳಿತವು ಗ್ರಾಮಕ್ಕೆ ಭೇಟಿ ನೀಡಿ, ಶಾಂತಿ ಸಭೆ ನಡೆಸಿತು.
ಸವರ್ಣೀಯರಿಂದ ದಲಿತರಿಗೆ ಬಹಿಷ್ಕಾರ ಹಾಕಿರುವ ವಿಚಾರ ತಿಳಿದು ಜಿಲ್ಲಾಧಿಕಾರಿ ಡಾ.ಸುಶೀಲಾ ಬಿ. ಅವರ ನಿರ್ದೇಶನ ಮೇರೆಗೆ ಅಧಿಕಾರಿಗಳು ಶುಕ್ರವಾರ ಸಂಜೆ ಗ್ರಾಮಕ್ಕೆ ಭೇಟಿ ನೀಡಿದ ಪೊಲೀಸ್ ಅಧಿಕಾರಿಗಳ ಸಹಿತ ಹಿರಿಯ ಅಧಿಕಾರಿಗಳು, ಎರಡೂ ಸಮುದಾಯಗಳ ನಡುವೆ ಶಾಂತಿ ಸಭೆ ನಡೆಸಿದ್ದಾರೆ.

“ಅಸ್ಪೃಶ್ಯತೆ ಆಚರಣೆ, ಸಾಮಾಜಿಕ ಬಹಿಷ್ಕಾರ ಹಾಕುವುದು ದೇಶದ ಕಾನೂನಿನ ಉಲ್ಲಂಘನೆಯಾಗಿದೆ. ಈ ರೀತಿಯ ನಡೆಯು ಮುಂದಿನ ದಿನಗಳಲ್ಲಿ ನಡೆಯಬಾರದು. ಜಾತಿ ಪದ್ಧತಿ ಹೋಗಲಾಡಿಸಿ ಸಹಬಾಳ್ವೆಯ ಜೀವನಕ್ಕೆ ಜನರು ಮುಂದಾಗಬೇಕು” ಎಂದು ಪೊಲೀಸ್ ಅಧಿಕಾರಿಗಳು ಕಿವಿಮಾತು ಹೇಳಿದ್ದಾರೆ.
ಇದಕ್ಕೆ ಸ್ಪಂದಿಸಿರುವ ಗ್ರಾಮಸ್ಥರು ತಪ್ಪನ್ನು ತಿದ್ದಿಕೊಂಡು ಕೂಡಿ ಬಾಳುವುದಾಗಿ ಹೇಳಿದ್ದಾರೆ. ಶಾಂತಿ ಸಭೆಯ ಬಳಿಕ ಪರಸ್ಪರ ಎರಡೂ ಸಮುದಾಯದ ಜನರನ್ನು ಹಸ್ತಲಾಘವ ನಡೆಸಿದ ಅಧಿಕಾರಿಗಳು, ಗ್ರಾಮದಲ್ಲಿ ಶಾಂತಿಯಿಂದ ಜೀವನ ಸಾಗಿಸಲು ತಿಳಿಸಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ. ಸಂಗೀತಾ, ಸಹಾಯಕ ಆಯುಕ್ತ ಹಂಪಣ್ಣ ಸಜ್ಜನ್, ಹುಣಸಗಿ ತಹಶೀಲ್ದಾರ್ ಬಸವಲಿಂಗಪ್ಪ ನಾಯ್ಕೋಡಿ, ಸಮಾಜ ಕಲ್ಯಾಣ ಇಲಾಖೆ ಹಾಗೂ ಇನ್ನಿತರ ಇಲಾಖೆಯ ಅಧಿಕಾರಿಗಳು ಶಾಂತಿ ಸಭೆಯಲ್ಲಿದ್ದರು.
ಘಟನೆಯ ಹಿನ್ನೆಲೆ ಏನು?
ಬಪ್ಪರಗಾ ಗ್ರಾಮದ 15 ವರ್ಷದ ಬಾಲಕಿಯನ್ನು ಮದುವೆಯಾಗುವುದಾಗಿ ಪುಸಲಾಯಿಸಿದ್ದ ಪ್ರಬಲ ಜಾತಿಯ ಯುವಕನೊಬ್ಬ ಆಕೆಯ ಜತೆಗೆ ಲೈಂಗಿಕ ಸಂಪರ್ಕ ಬೆಳೆಸಿದ್ದ. ಆಕೆ 5 ತಿಂಗಳ ಗರ್ಭಿಣಿಯಾಗಿದ್ದು, ಮದುವೆಯಾಗಲು ನಿರಾಕರಿಸಿದ್ದ.
ಈ ಸಂಬಂಧ ಒಂದು ತಿಂಗಳ ಹಿಂದೆ ನಾರಾಯಣಪುರ ಪೋಲಿಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಬಾಲಕಿ ತಾಯಿ ಪ್ರಕರಣ ದಾಖಲಿಸಿದ್ದರು. ಈ ಬಗ್ಗೆ ತಮ್ಮೆದುರು ಸಂಧಾನಕ್ಕೆ ಬರುವ ಬದಲು ನೇರವಾಗಿ ಠಾಣೆಗೆ ತೆರಳಿ ದೂರು ದಾಖಲಿಸಿದ್ದಕ್ಕೆ ಆಕ್ರೋಶಗೊಂಡಿದ್ದ ಸವರ್ಣೀಯರು, ಇಡೀ ದಲಿತ ಸಮುದಾಯಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಿದ್ದರು. ಬಹಿಷ್ಕಾರ ಕುರಿತ ಧ್ವನಿಮುದ್ರಿಕೆ (ವಾಯ್ಸ್ ಮೆಸೇಜ್) ವೈರಲ್ ಆಗಿತ್ತು.
ಇದನ್ನು ಓದಿದ್ದೀರಾ? ಕೊಪ್ಪಳ | ಮಾದಿಗ ಯುವಕನನ್ನು ಕಂಬಕ್ಕೆ ಕಟ್ಟಿ ಮಾರಣಾಂತಿಕ ಹಲ್ಲೆ: ತಡವಾಗಿ ಬೆಳಕಿಗೆ ಬಂದ ಪ್ರಕರಣ
ಪರಿಶಿಷ್ಟ ಸಮುದಾಯದ ಜನರ ಜೊತೆಗೆ ಯಾವುದೇ ರೀತಿಯ ವ್ಯವಹಾರ ಮಾಡದಂತೆ ಎಲ್ಲ ಅಂಗಡಿಗಳಿಗೆ ತಾಕೀತು ಮಾಡಿ, ನಮಗೆ ಸಾಮಾಜಿಕ ಬಹಿಷ್ಕಾರ ಹಾಕಿದ್ದರು. ದಿನಸಿ ಪದಾರ್ಥವಷ್ಟೇ ಅಲ್ಲ, ಶಾಲಾ ಮಕ್ಕಳಿಗೆ ಪೆನ್ನು, ನೋಟ್‌ಬುಕ್ ಸೇರಿದಂತೆ ಯಾವುದೇ ಸಾಮಗ್ರಿಗಳನ್ನೂ ಮಾರಾಟ ಮಾಡುತ್ತಿಲ್ಲ ಎಂದು ಬಪ್ಪರಗಿ ಗ್ರಾಮದ ದಲಿತರು ತಿಳಿಸಿದ್ದರು. ಈ ಬಗ್ಗೆ ಮಾಧ್ಯಮಗಳಲ್ಲಿ ವರದಿ ಬಿತ್ತರವಾಗುತ್ತಿದ್ದಂತೆಯೇ, ಎಚ್ಚೆತ್ತ ಜಿಲ್ಲಾಡಳಿತವು ಶಾಂತಿ ಸಭೆ ನಡೆಸಿದೆ.

ದಲಿತರ ಮೇಲೆ ಹಲ್ಲೆ ದೌರ್ಜನ್ಯ ನಡೆದಾಗಲೆಲ್ಲ ಜಿಲ್ಲಾಡಳಿತಗಳು ಸಂಧಾನ ನಡೆಸಿ ಅಲ್ಲಲ್ಲಿಯೇ ಮುಚ್ಚಿ ಹಾಕಿ ಸವರ್ಣೀಯರಿಗೆ ಶಿಕ್ಷೆಗಳು ಆಗದಂತೆ ವ್ಯವಸ್ಥಿತ ಕಾರ್ಯಾಚಣೆ ನಡೆಸಲಾಗುತ್ತದೆ. ಇದರಿಂದ ಇಂತಹ ಘಟನೆಗಳು ನಡೆಯುತ್ತಲೇ ಇರುತ್ತವೆ. ಆರೋಪಿಗೆ ಕಠಿಣ ಶಿಕ್ಷೆ ಆಗಲೇ ಬೇಕು. ದಲಿತರು ಹೆದರಿದಷ್ಟೂ ಹೆದರಿಸುತ್ತಾರೆ. ಬೌದ್ಧ ಧರ್ಮದ ಆಚರಣೆ ಒಂದೇ ನಮ್ಮನ್ನು ಸವರ್ಣೀಯರಿಂದ ರಕ್ಷಿಸಲು ಇರುವ ಆಯುಧ.