ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 28 ಕ್ಷೇತ್ರವನ್ನು ಗೆಲ್ಲುವುದು ಖಚಿತ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದರು.
ತುಮಕೂರಿನಲ್ಲಿ ಬಿಜೆಪಿ ಆಯೋಜಿಸಿದ್ದ ರಾಜ್ಯ ಮಟ್ಟದ ಶಕ್ತಿವಂದನಾ ಅಭಿಯಾನದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. “ಚುನಾವಣೆಗೆ ಟಿಕೆಟ್ ಹಂಚಿಕೆ ವಿಚಾರ ಸದ್ಯದಲ್ಲೇ ಹೈಮಾಂಡ್ ಮಟ್ಟದಲ್ಲಿ ಚರ್ಚೆಯಾಗಿ ತೀರ್ಮಾನವಾಗಲಿದೆ. ಮಾಜಿ ಸಚಿವ ವಿ ಸೋಮಣ್ಣ ತುಮಕೂರಿನಲ್ಲಿ ಸ್ಪರ್ಧಿಸಲು ವರಿಷ್ಠರು ಒಪ್ಪಿಗೆ ಸೂಚಿಸಿದರೆ, ನಮ್ಮದೇನು ಅಭ್ಯಂತರವಿಲ್ಲ” ಎಂದಿದ್ದಾರೆ.
“ಸೋಮಣ್ಣನವರು ಹಿರಿಯರಿದ್ದಾರೆ. ಪಕ್ಷ ಒಟ್ಟಾಗಿ ಕೂತು ಚರ್ಚೆ ಮಾಡಲಿದೆ. ರಾಜ್ಯದ 28 ಕ್ಷೇತ್ರಗಳಲ್ಲೂ ಅಭ್ಯರ್ಥಿಗಳನ್ನು ಕಾರ್ಯಕರ್ತರ ಅಭಿಪ್ರಾಯವನ್ನು ಸಂಗ್ರಹಿಸಿಯೇ ವರಿಷ್ಠರು ತೀರ್ಮಾನ ಮಾಡುತ್ತಾರೆ. ತುಮಕೂರು ಜಿಲ್ಲೆಗೆ ಸೋಮಣ್ಣ ಅವರು ಸ್ಪರ್ಧಿಸುವ ವಿಚಾರವೂ ಕೂಡ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿದ ನಂತರ ತೀರ್ಮಾನ ಮಾಡಲಾಗುತ್ತದೆ” ಎಂದು ತಿಳಿಸಿದರು.
“ಶಕ್ತಿವಂದನಾ ಅಭಿಯಾನದ ಮೂಲಕ ಇಡೀ ದೇಶದಲ್ಲಿರುವ ಮಹಿಳೆಯರ ಸಬಲೀಕರಣ ಮಾಡುವುದಾಗಿದೆ. ಮಹಿಳಾ ಸಬಲೀಕರಣ ದೃಷ್ಟಿಯಿಂದ ಅನೇಕ ಯೋಜನೆಗಳನ್ನು ನರೇಂದ್ರ ಮೋದಿ ಅವರು ಕೊಟ್ಟಿದ್ದಾರೆ. ಅವರ ಕಾರ್ಯಕ್ರಮಗಳನ್ನು ಪ್ರತಿಯೊಬ್ಬರಿಗೂ ತಲುಪಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ” ಎಂದರು.
“ಈ ದೇಶದಲ್ಲಿ ಸ್ತ್ರೀ ಸಮಾನತೆ ಬಗ್ಗೆ 12ನೇ ಶತಮಾನದಲ್ಲಿ ಅಕ್ಕಮಹಾದೇವಿ ಮೊಟ್ಟ ಮೊದಲ ಬಾರಿಗೆ ಧ್ವನಿ ಎತ್ತಿದ್ದರು. ಆದರೆ, ಈ ದೇಶದಲ್ಲಿ ನಿರಂತರವಾಗಿ ದೇಶದ ಚುಕ್ಕಾಣಿ ಹಿಡಿದಿದ್ದ ಇಂದಿರಾಗಾಂಧಿ ಅವರು ಸ್ತೀ ಅಭಿವೃದ್ಧಿಗೆ ಯಾವುದೇ ಕೊಡುಗೆ ನೀಡಿಲ್ಲ. ಸುದೀರ್ಘವಾಗಿ ಆಡಳಿತ ನಡೆಸಿದ್ದರೂ ಕೂಡ ಸ್ತ್ರೀ ಶೋಷಣೆ ತಡೆಗಟ್ಟಲು, ಸ್ತ್ರೀ ಅಭಿವೃದ್ಧಿ ಮಾಡಲು ಸಾಧ್ಯವಾಗಲಿಲ್ಲ. ಆದರೆ ಎಲ್ಲ ಸ್ತ್ರೀಯರಿಗೂ ಸಮಾನತೆ ಸಿಗಬೇಕೆಂಬ ಕೈಂಕರ್ಯ ತೊಟ್ಟಿರುವ ನರೇಂದ್ರ ಮೋದಿ ಅವರು ದೇಶದ ಅಭಿವೃದ್ಧಿಗೆ, ಸ್ತ್ರೀಯರ ಸಮಾನತೆಗೆ ದುಡಿಯುತ್ತಿದ್ದಾರೆ” ಎಂದರು.
“ನರೇಂದ್ರ ಮೋದಿ ಅವರು 2047ನೇ ಇಸವಿಗೆ ವಿಕಸಿತ ಭಾರತವಾಗಿ ದೇಶ ಹೊರಹೊಮ್ಮುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ಮಹಿಳೆಯರ ಸಹಕಾರ ಸಿಗಬೇಕು. ಮಹಿಳೆಯರು ಆಯಾ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಣಬೇಕೆಂಬ ನಿಟ್ಟಿನಲ್ಲಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ” ಎಂದರು.
“ರಾಷ್ಟ್ರದ ಅತ್ಯುತ್ತಮ ಸ್ಥಾನಮಾನವಾದ ರಾಷ್ಟ್ರಪತಿ ಹುದ್ದೆಗೆ ದಲಿತ ಮಹಿಳೆ ದ್ರೌಪತಿ ಮುರ್ಮು ಅವರನ್ನು ಬಿಜೆಪಿ ಸರ್ಕಾರ ಕೂರಿಸಿದೆ. ಮುಂದಿನ ದಿನಗಳಲ್ಲಿ ರಾಜಕೀಯದಲ್ಲಿ ಮಹಿಳೆಯರಿಗೆ ಶೇ.33 ರಷ್ಟು ಲೋಕಸಭೆ, ವಿಧಾನಸಭೆಯಲ್ಲಿ ಮೀಸಲಾತಿ ಕಲ್ಪಿಸಲು ಚಿಂತನೆ ನಡೆದಿದೆ. ಈ ಸಂಬಂಧ ವಿಶೇಷ ಅಧಿವೇಶನ ಕರೆದು ತೀರ್ಮಾನ ತೆಗೆದುಕೊಳ್ಳಲಾಗಿದೆ” ಎಂದರು.
“2047ರ ವೇಳೆಗೆ ಭಾರತವನ್ನು ಬಲಿಷ್ಟ ರಾಷ್ಟ್ರವಾಗಿ ನಿರ್ಮಾಣ ಮಾಡಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಶ್ರಮಿಸುತ್ತಿದ್ದಾರೆ. ದೇಶದಲ್ಲಿ ನಾಲ್ಕು ಜಾತಿಗಳಿವೆ. ಒಂದು ರೈತ, ಬಡವ, ಮಹಿಳೆ ಹಾಗೂ ಯುವಜನಾಂಗ. ಇವರೆಲ್ಲರ ಸಹಕಾರದಿಂದ ಈ ದೇಶ ಅಭಿವೃದ್ಧಿ ಕಾಣಲು ಸಾಧ್ಯ” ಎಂದರು.
“ಬಿಜೆಪಿ ಅಂದರೆ ಅಲ್ಪಸಂಖ್ಯಾತ ವಿರೋಧಿ ಎಂಬುದಾಗಿ ವಿರೋಧ ಪಕ್ಷದವರು ಬಿಂಬಿಸುತ್ತಿದ್ದಾರೆ. ಆದರೆ, ತ್ರಿವಳಿ ತಲಾಕ್ ಒಡೆದು ಹಾಕುವ ಮೂಲಕ ಅಲ್ಪಸಂಖ್ಯಾತರಿಗೂ ನ್ಯಾಯ ಒದಗಿಸುವ ಕೆಲಸವನ್ನು ಪ್ರಧಾನಿ ನರೇಂದ್ರ ಮೋದಿ ಮಾಡಿದ್ದಾರೆ” ಎಂದರು.
ಈ ಸುದ್ದಿ ಓದಿದ್ದೀರಾ? ಮಂಡ್ಯ | ಕೆರಗೋಡು ಧ್ವಜ ವಿವಾದ; ಸಾಮಾಜಿಕ ಜಾಲತಾಣಗಳ ಮೇಲೆ ಜಿಲ್ಲಾಡಳಿತ ನಿಗಾ
ಕಾರ್ಯಕ್ರಮದಲ್ಲಿ ಶಾಸಕರುಗಳಾದ ಶಶಿಕಲಾ ಜೊಲ್ಲೆ, ಜ್ಯೋತಿಗಣೇಶ್, ಬಿಜೆಪಿ ಜಿಲ್ಲಾಧ್ಯಕ್ಷ ರವಿಶಂಕರ್ ಹೆಬ್ಬಾಕ, ವಿಧಾನ ಪರಿಷತ್ ಸದಸ್ಯರುಗಳಾದ ಚಿದಾನಂದ ಗೌಡ, ಮಧುಗಿರಿ ಅಧ್ಯಕ್ಷ ಹನುಮಂತೇಗೌಡ, ಡಿ ಕೃಷ್ಣಕುಮಾರ್, ಎಚ್ ಡಿ ರಾಜೇಶ್‌ಗೌಡ, ರಾಜ್ಯ ಮಹಿಳಾ ಮೋರ್ಚಾ ಅಧ್ಯಕ್ಷೆ ಮಂಜುಳ, ರಾಜ್ಯ ಸಹ ಸಂಚಾಲಕಿ ಗೀತಾ, ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶಿಲ್ಪ, ರಾಜ್ಯ ಉಪಾಧ್ಯಕ್ಷೆ ಶರಣಮ್ಮ, ಅಂಬಿಕಾ ಹುಲಿನಾಯ್ಕರ್, ನವೀನ್, ವಿನಯ್ ಬಿದರೆ ಸೇರಿದಂತೆ ಇತರರು ಇದ್ದರು.