- ಅಣ್ಣಪ್ಪ ಬೆಟ್ಟದ ಬಳಿ ಸೇರಿದ್ದ ಸಾವಿರಾರು ಮಂದಿ; ಬಿಗಿ ಪೊಲೀಸ್ ಬಂದೋಬಸ್ತ್
- ಆರೋಪ ಹೊತ್ತ ಮಲ್ಲಿಕ್ ಜೈನ್, ಉದಯ್ ಜೈನ್ ಹಾಗೂ ಧೀರಜ್ ಜೈನ್ ಭಾಗಿ
ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ಸಂತೋಷ್ ರಾವ್ ನಿರ್ದೋಷಿ ಎಂದು ತೀರ್ಪು ಬಂದ ಬಳಿಕ ನೈಜ ಅಪರಾಧಿಗಳ ಪತ್ತೆಗೆ ದಿನಕ್ಕೊಂದು ಕಡೆ ಪ್ರತಿಭಟನೆ ನಡೆಯುತ್ತಿದೆ. ಅಲ್ಲದೇ, ಈ ನಡುವೆ ಒಂದೊಂದು ಬೆಳವಣಿಗೆ ನಡೆಯುತ್ತಿದೆ.
ಹನ್ನೊಂದು ವರ್ಷಗಳ ಬಳಿಕ ಮತ್ತೆ ಮುನ್ನೆಲೆಗೆ ಬಂದಿರುವ ಧರ್ಮಸ್ಥಳದ ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣವು ಇದೀಗ ಮಂಜುನಾಥನ ಸನ್ನಿಧಿಯಲ್ಲಿರುವ ಅಣ್ಣಪ್ಪನ ಬೆಟ್ಟದವರೆಗೆ ತಲುಪಿದೆ.
ಇಂದು(ಭಾನುವಾರ) ನೇತ್ರಾವತಿಯಿಂದ ಧರ್ಮಸ್ಥಳದವರೆಗೆ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ವತಿಯಿಂದ ಪಾದಯಾತ್ರೆ ಹಮ್ಮಿಕೊಂಡಿತ್ತು. ಇದರಲ್ಲಿ ಭಾಗವಹಿಸಿದ್ದ ಸೌಜನ್ಯ ತಾಯಿ ಕುಸುಮಾವತಿ ಹಾಗೂ ಕುಟುಂಬದ ಸದಸ್ಯರು ಭಾಗವಹಿಸಿದ್ದರು. ಆ ಬಳಿಕ ಪಾದಯಾತ್ರೆಯು ಧರ್ಮಸ್ಥಳದ ಅಣ್ಣಪ್ಪ ಸ್ವಾಮಿ ಬೆಟ್ಟದ ಮುಂಭಾಗಕ್ಕೆ ತಲುಪಿತು. ಇದೇ ವೇಳೆ ಆರೋಪ ಹೊತ್ತವರು ಕೂಡ ಅಣ್ಣಪ್ಪನ ಬೆಟ್ಟಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದಾರೆ.

ಅಣ್ಣಪ್ಪ ಸ್ವಾಮಿ ಬೆಟ್ಟದ ಮುಂಭಾಗ ಕಣ್ಣೀರಿಟ್ಟ ಸೌಜನ್ಯ ತಾಯಿ ಕುಸುಮಾವತಿ, ಕಾಣಿಕೆ ಹಾಕಿ ಪ್ರಾರ್ಥನೆ ಸಲ್ಲಿಸಿದರು. ವಿಹಿಂಪ, ಬಜರಂಗದಳ ಮುಖಂಡರ ಜೊತೆಗೂಡಿ ನೈಜ ಆರೋಪಿಗಳ ಪತ್ತೆ ಮಾಡಿಕೊಡುವಂತೆ ಬೇಡಿಕೊಂಡರು. ಕುಸುಮಾವತಿ ಪ್ರಾರ್ಥನೆಯ ಬಳಿಕ ಸೌಜನ್ಯ ತಾಯಿ ಆರೋಪಿಸಿದವರು ಕೂಡ ಪ್ರಾರ್ಥನೆ ಸಲ್ಲಿಸಲು ಬಂದಿದ್ದಾರೆ.
ಆರೋಪ ಹೊತ್ತಿರುವ ಮಲ್ಲಿಕ್ ಜೈನ್, ಉದಯ್ ಜೈನ್ ಹಾಗೂ ಧೀರಜ್ ಕೆಲ್ಲ ಕೂಡ ಬೆಟ್ಟದ ಮುಂಭಾಗ ಬಂದು, ಆಣೆ ಪ್ರಮಾಣದ ಬದಲಾಗಿ ಪ್ರಾರ್ಥನೆ ಸಲ್ಲಿಸಿದರು.

ಕೈ ಮುಗಿದುಕೊಂಡು ಹೇಳಿಕೆ ನೀಡಿದ ಧೀರಜ್ ಜೈನ್, ‘ಧರ್ಮಸ್ಥಳ ಕ್ಷೇತ್ರದ ಪರಿಸರದಲ್ಲಿ ಒಂದು ಮರಣ ಸಂಭವಿಸಿದೆ. ಈ ಪ್ರಕರಣಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ. ನಾವು ನಿರ್ದೋಷಿಗಳೆಂದು ನ್ಯಾಯಾಲಯದಲ್ಲಿ ಸಾಬೀತಾಗಿದೆ. ನಮಗೂ ಕುಟುಂಬ, ಬಂಧುವರ್ಗವಿದೆ. ಆದರೆ ವಿನಾಕಾರಣ ನಮ್ಮ ಹೆಸರನ್ನು ಸಮಾಜದಲ್ಲಿ ಹಾಳುಗೆಡವಲಾಗುತ್ತಿದೆ. ಇದಕ್ಕೆ ದೇವರೆ ತಕ್ಕ ಶಿಕ್ಷೆ ನೀಡಬೇಕು. ನಾವು ಯಾವುದೇ ತಪ್ಪು ಮಾಡಿಲ್ಲ.ನಮ್ಮ ಮೇಲೆ ಆರೋಪ ಮಾಡುವವರಿಗೆ ದೇವರು ಸರಿಯಾದ ಶಿಕ್ಷೆ ನೀಡಲಿ’ ಎಂದು ಪ್ರಾರ್ಥನೆ ಸಲ್ಲಿಸಿದರು.
ಈ ವೇಳೆ ಸಾವಿರಾರು ಜನರು ಜಮಾಯಿಸಿದ್ದರಿಂದ ಬೆಟ್ಟದ ಮುಂಭಾಗ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಈ ಹಿನ್ನೆಲೆಯಲ್ಲಿ ಧರ್ಮಸ್ಥಳ ಅಣ್ಣಪ್ಪ ಸ್ವಾಮಿ ಬೆಟ್ಟದ ಮುಂಭಾಗ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು.
ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಶ್ಯಂತ್ ಅವರೇ ಮೇಲುಸ್ತುವಾರಿ ನೋಡಿಕೊಂಡಿದ್ದರು. ಅಣ್ಣಪ್ಪ ಸ್ವಾಮಿ ಬೆಟ್ಟದ ಮುಂಭಾಗ ಬ್ಯಾರಿಕೇಡ್ ಅಳವಡಿಕೆ ಮಾಡಲಾಗಿತ್ತು. ಸೌಜನ್ಯ ತಾಯಿ ಅಣ್ಣಪ್ಪ ಸ್ವಾಮಿ ಬೆಟ್ಟದ ಬಳಿ ಬರುವಾಗ ಗೊಂದಲ ಆಗದಂತೆ ಕ್ರಮ ವಹಿಸಲಾಗಿತ್ತು.