ಕಂದಾಯ ಮತ್ತು ಅರಣ್ಯ ಭೂಮಿ ಒತ್ತುವರಿ ತೆರವಿಗೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು, ಆದೇಶವನ್ನು ಖಂಡಿಸಿ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ವಿಧಾನಸಭಾ ಕ್ಷೇತ್ರದ ಬಂದ್‌ಗೆ ಕರೆಕೊಡಲಾಗಿದೆ. ಶನಿವಾರ ನಡೆಯಲಿರುವ ಬಂದ್‌ಗೆ ಮಲೆನಾಡು ನಾಗರಿಕ ರೈತ ಹಿತರಕ್ಷಣಾ ಸಮಿತಿ ಕರೆಕೊಟ್ಟಿದ್ದು, ಬಿಜೆಪಿ-ಜೆಡಿಎಸ್ ಬೆಂಬಲ ಸೂಚಿಸಿವೆ.
ಶೃಂಗೇರಿ ಕ್ಷೇತ್ರ ವ್ಯಾಪ್ತಿಯಲ್ಲಿರುವ ಶೃಂಗೇರಿ, ಕೊಪ್ಪ, ಎನ್.ಆರ್ ಪುರ ತಾಲೂಕುಗಳು ಶನಿವಾರ ಬಂದ್ ಆಗಲಿವೆ. ತುರ್ತು ಸೇವೆ ಹೊರತುಪಡಿಸಿ ಇನ್ನುಳಿದ ಸೇವೆಗಳನ್ನು ಬಂದ್ ಮಾಡಲು ನಿರ್ಧಾರಿಸಲಾಗಿದೆ ಎಂದು ಸಮಿತಿ ಹೇಳಿದೆ.
ಮಲೆನಾಡು ಭಾಗದಲ್ಲಿ ಸುರಿದ ಮಳೆಯಿಂದ ಸಾಲು ಸಾಲು ಅನಾಹುತಗಳು ಎದುರಾಗುತ್ತಿವೆ. ಗುಡ್ಡ ಕುಸಿತ, ಭೂ ಕುಸಿತದಂತಹ ಘಟನೆಗಳು ಹೆಚ್ಚಾಗುತ್ತಿವೆ. ಇಂತಹ ಘಟನೆಗಳಿಗೆ ಭೂ ಒತ್ತುವರಿಯೇ ಕಾರಣವೆಂದು ಹೇಳಲಾಗುತ್ತಿದ್ದು, ಕಂದಾಯ ಮತ್ತು ಅರಣ್ಯ ಭೂಮಿ ಒತ್ತುವರಿ ತೆರವಿಗೆ ರಾಜ್ಯ ಸರ್ಕಾರ ಆದೇಶಿಸಿದೆ. ಒಂದು ತಿಂಗಳೊಳಗೆ ಒತ್ತುವರಿ ತೆರವು ಮಾಡಲು ಜಿಲ್ಲಾಡಳಿತ, ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದೆ.
ರಾಜ್ಯ ಸರ್ಕಾರದ ಆದೇಶಕ್ಕೆ ಚಿಕ್ಕಮಗಳೂರು ಜಿಲ್ಲೆಯಾದ್ಯಂತ ವಿರೋಧ ವ್ಯಕ್ತವಾಗುತ್ತಿದೆ. ರೈತರ ತೋಟಗಳ ತೆರವಿಗೂ ಮುನ್ನ ಪ್ರಭಾವಿಗಳ ತೋಟ, ರೆಸಾರ್ಟ್, ಹೋಂ ಸ್ಟೇಗಳನ್ನು ತೆರವು ಮಾಡುವಂತೆ ರೈತ ಹಿತರಕ್ಷಣಾ ವೇದಿಕೆ ಆಗ್ರಹಿಸಿದೆ. ಶನಿವಾರ ಬಂದ್‌ಗೆ ಕರೆಕೊಟ್ಟಿದೆ.