ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಅಶೋಕ್ ಗ್ಯಾಸ್ ಏಜೆನ್ಸಿಯವರು ಹೆಚ್ಚುವರಿ ಹಣ ವಸೂಲಿ ಮಾಡುತ್ತಿರುವುದಲ್ಲದೇ, ಡೋರ್ ಡೆಲಿವರಿ ಮಾಡಲು ನಿರಾಕರಣೆ ಮಾಡುತ್ತಿರುವುದಾಗಿ ಗ್ರಾಹಕರು ದೂರಿದ್ದಾರೆ.
ಅಶೋಕ್ ಗ್ಯಾಸ್ ಏಜೆನ್ಸಿಯವರ ಆಟಾಟೋಪ ಹೆಚ್ಚಾಗಿದೆ. ಡೋರ್ ಡೆಲಿವರಿ ಕೊಡುವುದಿಲ್ಲ. 45 ರೂ ಹೆಚ್ಚುವರಿ ಹಣ ವಸೂಲಿ ಮಾಡುತ್ತಾರೆ. ನಾವು ಊರ ಮುಂದಿನಿಂದ ಇನ್ನೊಂದು ಗಾಡಿಯಲ್ಲಿ ಇಲ್ಲವೇ ಹೆಗಲ ಮೇಲೆ ಹೊತ್ತುಕೊಂಡು ಮನೆಗೆ ಹೋಗಬೇಕು ಎಂದು ಚಿನ್ನಾಯಕನಹಳ್ಳಿ ಆಟೋ ಚಂದ್ರು ಎಂಬುವವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚಿನ್ನನಾಯಕನಹಳ್ಳಿ ಊರಿಗೆ ಡೆಲಿವರಿ ಕೊಡುವ ಗ್ಯಾಸ್ ಏಜೆನ್ಸಿಯ ಡ್ರೈವರ್ ಮಾತನಾಡಿ, ಏಜೆನ್ಸಿಯ ನಿರ್ದೇಶನದಂತೆ ಹೆಚ್ಚುವರಿ ಹಣ ಪಡೆದಿರುತ್ತೇನೆ. ಏಜೆನ್ಸಿ ಕೊಡುವ ಬಾಡಿಗೆ ಹಣ ಸಾಲುವುದಿಲ್ಲ ಆದ್ದರಿಂದ ಗ್ರಾಹಕರ ಬಳಿ ಹೆಚ್ಚುವರಿ ಹಣ ಪಡೆದಿದ್ದೇನೆ. ಬಂದು ಗ್ಯಾಸ್ ಏಜೆನ್ಸಿಯ ಕಚೇರಿಯಲ್ಲಿ ದೂರು ಕೊಡಲಿ ಅವರು ತೀರ್ಮಾನ ಮಾಡಿದಂತೆ ನಡೆಯುತ್ತೇನೆ ಎಂದು ಹೇಳಿದರು.
ಅಶೋಕ್ ಗ್ಯಾಸ್ ಏಜೆನ್ಸಿಯ ಕಚೇರಿಗೆ ಫೋನ್ ಮಾಡಿ ಮಾತನಾಡಿದಾಗ, ಒಂದು ಊರಿನಲ್ಲಿ ನಿಗದಿ ಮಾಡಿದ ಜಾಗಕ್ಕೆ ಮಾತ್ರ ಡೆಲಿವರಿ ಕೊಡುತ್ತೇವೆ. ಯಾವ ಗ್ರಾಹಕರಿಗೆ ತೊಂದರೆಯಾಗುತ್ತಿದೆಯೋ ಅವರಿಗೆ ಬೇಡ ಅನ್ನಿಸುವುದಾದರೆ ಗ್ಯಾಸ್ ಏಜೆನ್ಸಿಯನ್ನು ಬದಲಾವಣೆ ಮಾಡಿಕೊಳ್ಳಲಿ ಎಂದು ಉಡಾಫೆಯ ಉತ್ತರ ಕೊಟ್ಟು ಫೋನ್ ಕಟ್ ಮಾಡಿದರು.
ಇದನ್ನು ಓದಿದ್ದೀರಾ? ಗೋಕಾಕ್ | ಕೋ ಆಪರೇಟಿವ್ ಬ್ಯಾಂಕ್ ಅವ್ಯವಹಾರ: 14 ಆರೋಪಿಗಳ ಆಸ್ತಿ ಮುಟ್ಟುಗೋಲು; ಎಸ್‌ಪಿ
ಶ್ರೀರಂಗಪಟ್ಟಣ ಆಹಾರ ಶಾಖೆಯ ನಿರೀಕ್ಷಕರಾದ ರಮಾ ಮಾತನಾಡಿ, ತೊಂದರೆ ಆಗಿರುವ ಗ್ರಾಹಕರು ತಮಗೆ ದೂರು ಕೊಟ್ಟಲ್ಲಿ ಏಜೆನ್ಸಿಯವರಿಗೆ ನೋಟಿಸ್ ನೀಡಿ, ವಿಚಾರಣೆ ಮಾಡಿ ಕ್ರಮ ಕೈಗೊಳ್ಳಲಾಗುವುದು ಎಂದರು.
