ಜಾತಿ ಮತ್ತು ಧರ್ಮದ ಹೆಸರಿನಲ್ಲಿ ಕೋಮ ಭಾವನೆ ಕೆರಳಿಸುವ, ಸಮಾಜದ ಸಾಮರಸ್ಯ ಕದಡುವ ವಿಚ್ಛಿದ್ರಕಾರಿ ದುಷ್ಟ ಶಕ್ತಿಗಳ ವಿರುದ್ಧ ಕವಿಗಳು ತಮ್ಮ ಸಾಹಿತ್ಯದಲ್ಲಿ ಪ್ರತಿರೋಧ ಒಡ್ಡಬೇಕು ಎಂದು ಜಿಲ್ಲಾ ಯುವ ಬರಹಗಾರರ ಬಳಗದ ಅಧ್ಯಕ್ಷ ಹಾಗೂ ಸಾಹಿತಿ ಟಿ. ಸತೀಶ್ ಜವರೇಗೌಡ ಕರೆ ನೀಡಿದರು.
ಶ್ರೀರಂಗಪಟ್ಟಣ ತಾಲೂಕು ಚುಟುಕು ಸಾಹಿತ್ಯ ಪರಿಷತ್ತಿನ ವತಿಯಿಂದ ಬಾಬುರಾಯನ ಕೊಪ್ಪಲಿನ ಮಣಿಕರ್ಣಿಕಾ ಗುಂಜಾ ಲಕ್ಷ್ಮಿನರಸಿಂಹಸ್ವಾಮಿ ದೇವಾಲಯದ ಆವರಣದಲ್ಲಿ ನಡೆದ ಕವಿ ಮತ್ತು ಶಿಕ್ಷಕ ಕೊ.ನಾ. ಪುರುಷೋತ್ತಮ ಅವರ ‘ಸುಲಗ್ನ ಸಾವಧಾನ’ ಹನಿಗವನ ಸಂಕಲನ ಲೋಕಾರ್ಪಣೆ ಹಾಗೂ ಜಿಲ್ಲಾ ಮಟ್ಟದ ಕವಿಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಭಾವೈಕ್ಯತೆ, ಸಾಮರಸ್ಯ, ಸೌಹಾರ್ದತೆ, ವಿಶ್ವ ಮಾನವತೆ ವರ್ತಮಾನದ ಬದುಕಿಗೆ ಅಗತ್ಯವಿರುವ ಜೀವನ ಮೌಲ್ಯಗಳು. ಕನ್ನಡ ಸಾಹಿತ್ಯ ಪರಂಪರೆಯು ತನ್ನ ಒಡಲಲ್ಲಿ ಈ ಮೌಲ್ಯಗಳನ್ನು ಜತನ ಮಾಡಿಕೊಂಡು ಬಂದಿದೆ. ಅದಕ್ಕೆ ಕನ್ನಡ ನೆಲ ಸರ್ವಜನಾಂಗದ ಶಾಂತಿಯ ತೋಟವಾಗಿದೆ. ಶೀ ಶಾಂತಿಯ ತೋಟಕ್ಕೆ ಬೆಂಕಿ ಹಚ್ಚುವವ, ಸಮಾಜವನ್ನು ವಿಘಟಿಸುವ ಕೋಮುವಾದಿಗಳ ವಿರುದ್ದ ಸಾಹಿತ್ಯ ಪ್ರತಿಭಟಿಸುವ ಮೂಲಕ ತನ್ನ ಸಾಮಾಜಿಕ ಹೊಣೆಗಾರಿಕೆಯನ್ನು ಮೆರೆಯಬೇಕು ಎಂದರು.

ಬಿಎಂಶ್ರೀ, ಪುತಿನ, ಸುಜನಾ, ಕೆ.ಎಸ್.ನ., ಎಂ.ಎಲ್. ಶ್ರೀಕಂಠೇಶಗೌಡ, ಎ.ಎನ್. ಮೂರ್ತಿರಾಯ, ಹೆಚ್.ಎಲ್. ನಾಗೇಗೌಡ, ಬೆಸಗರಹಳ್ಳಿ ರಾಮಣ್ಣ, ಪ್ರೊ. ಎಚ್.ಎಲ್. ಕೇಶವಮೂರ್ತಿ ಪ್ರತಿಭಾವಂತ ಸಾಹಿತಿಗಳಾಗಿ ಮಂಡ್ಯದ ನೆಲಕ್ಕೆ ಕೀರ್ತಿ ತಂದವರು. ಜನಮನದಲ್ಲಿ ಸಾಹಿತ್ಯದ ಅಭಿರುಚಿಯನ್ನು ಒಡಮೂಡಿಸಿದವರು. ಇವರ ಹಾಗೆಯೇ ಜಿಲ್ಲೆಯ ಸಮಕಾಲೀನ ಯುವ ಕವಿಗಳು ಸತತ ಅಧ್ಯಯನ ಮತ್ತು ಬರವಣಿಗೆಯ ಮೂಲಕ ಸಾಹಿತ್ಯ ಕೃಷಿಗೆ ಮುಂದಾಗಬೇಕು ಎಂದು ಸಲಹೆ ನೀಡಿದರು.
ಸಾಹಿತ್ಯ ಯಾವಾಗಲೂ ಕಾಲತೀತವಾಗಿರಬೇಕು. ಸಾಂದರ್ಭಿಕವಾಗಿ ಬರೆದ ಬರಹವಾದರೂ ಸಾರ್ವತ್ರಿಕವಾಗಿರಬೇಕು. ಈ ದಿಕ್ಕಿನಲ್ಲಿ ಕವಿಗಳು ಯಾವುದೇ ಜಾತಿ, ಮತ, ಧರ್ಮ, ಪಂಥ, ಪಕ್ಷಗಳಿಗೆ ಬಂಧಿಯಾಗಬಾರದು. ಎಲ್ಲ ಮಿತಿಗಳನ್ನೂ ಚೌಕಟ್ಟುಗಳನ್ನು ಮೀರಿ ಅನುಭವ ನಿಷ್ಠವಾದ, ಜೀವಪರವಾದ ಸಾಹಿತ್ಯ ಕೃಷಿಯ ಮೂಲಕ ಸಮಾಜದ ಸ್ವಾಸ್ಥ್ಯವನ್ನು ಕಾಯಬೇಕು. ಜನಮನದಲ್ಲಿ ಸಾಮರಸ್ಯದ, ವೈಚಾರಿಕತೆಯ ಬೀಜಗಳನ್ನು ಬಿತ್ತಬೇಕು ಎಂದರು.
ಪುಸ್ತಕ ಲೋಕಾರ್ಪಣೆ ಮಾಡಿದ ಸಾಹಿತಿ ಬಲ್ಲೇನಹಳ್ಳಿ ಮಂಜುನಾಥ್ ಮಾತನಾಡಿ, ಇಂದು ಪುಸ್ತಕ ಪ್ರಕಟಣೆ ಮತ್ತು ಮಾರಾಟ ತುಂಬಾ ಕಷ್ಟವಾಗಿದೆ. ಈ ಬವಣೆಯಲ್ಲಿ ಕವಿಯ ಶಕ್ತಿ ಸೋರಿ ಹೋಗುತ್ತಿದೆ. ಆದ್ದರಿಂದ ಓದುಗರು ಪುಸ್ತಕಗಳನ್ನು ಖರೀದಿಸಿ ಓದಿ, ಪ್ರತಿಕ್ರಿಯೆ ನೀಡುವ ಮೂಲಕ ಸಾಹಿತಿಗಳ ಬೆಂಬಲಕ್ಕೆ ನಿಲ್ಲಬೇಕು ಎಂದರು.
ಕವಿ ಕೊ.ನಾ. ಪುರುಷೋತ್ತಮ ಅವರಲ್ಲಿ ಮುಗ್ಧತೆ ಮತ್ತು ಸೂಕ್ಷ್ಮತೆಯಿದೆ. ಪ್ರಾಸ ಮತ್ತು ಪಂಚ್ ಮೂಲಕ ಹನಿಗವನಗಳನ್ನು ಉತ್ತಮವಾಗಿ ರಚಿಸಬಲ್ಲ ಪ್ರತಿಭಾವಂತ ಕವಿ. ಬದುಕನ್ನು ಅವಲೋಕಿಸಿ ಹಲವು ಅತ್ಯುತ್ತಮವಾದ ಹನಿಗವನಗಳನ್ನು ರಚಿಸಿದ್ದಾರೆ. ಈ ಸಂಕಲನ ಕವಿಯ ಮಾಗಿದ ಮನಸ್ಸನ ಪ್ರತಿಬಿಂಬ ಎಂದು ಬಣ್ಣಿಸಿದರು.
ಕವಯತ್ರಿ ಎಂ.ಯು. ಶ್ವೇತ ಕವನ ಸಂಕಲನ ಕುರಿತು ಮಾತನಾಡಿದರು. ಸಮಾಜ ಸೇವಕ ಬಿ.ಎಂ. ಸುಬ್ರಹ್ಮಣ್ಯ ಅಧ್ಯಕ್ಷತೆ ವಹಿಸಿದ್ದರು. ಶ್ರೀರಂಗಪಟ್ಟಣ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿದ್ದಲಿಂಗು, ಸಾಹಿತಿ ಮಾರೇನಹಳ್ಳಿ ಲೋಕೇಶ್, ಹನಿಗವನ ಸಂಕಲನದ ರಚನಕಾರ ಕೊ.ನಸ. ಪುರುಷೋತ್ತಮ, ಸಾಹಿತಿ ಸಯ್ಯದ್ ಖಾನ್ ಬಾಬು, ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕದಲಗೆರೆ ಜಯರಾಮ್ ಉಪಸ್ಥಿತರಿದ್ದರು.
ಇದನ್ನು ಓದಿದ್ದೀರಾ? ಕಾರ್ಕಳದಲ್ಲಿ ದಾರುಣ ಘಟನೆ : ಲಾರಿ- ಬೈಕ್ ಮಧ್ಯೆ ಭೀಕರ ಅಪಘಾತ; ಒಂದೇ ಕುಟುಂಬದ ನಾಲ್ವರ ಸಾವು
ಇದೇ ಸಂದರ್ಭದಲ್ಲಿ ನಡೆದ ಕವಿಗೋಷ್ಠಿಯಲ್ಲಿ ಲೋಕೇಶ್ ಕಲ್ಕುಣಿ, ಎನ್. ಧನಂಜಯ, ವಡಿಯಾಂಡಹಳ್ಳಿ ಅಶ್ವಿನಿ, ಸಿಂಗಾಪುರ ಲಕ್ಷ್ಮೇಗೌಡ, ದಾಸ್ ಬಲ್ಲೇನಹಳ್ಳಿ, ಹೆಚ್.ಪಿ. ತೇಜಸ್, ಪೂಜಾ ಶ್ರೀನಿವಾಸ್, ಪುನೀತ್ ಭಾಸ್ಕರ್ ಮೊದಲಾದವರು ತಮ್ಮ ಕವನಗಳನ್ನು ವಾಚಿಸದರು. ಮೂರು ಉತ್ತಮ ಜೋಡಿಗಳಿಗೆ ದಾಂಪತ್ಯ ಅನುಸಂಧಾನ ಪ್ರಶಸ್ತಿ ಪ್ರದಾನ ಮಾಡಲಾಯಿತು.
