ಬಿಜೆಪಿ ಶಾಸಕ ಮುನಿರತ್ನರ ಅನಾರಿಕ ವರ್ತನೆಯನ್ನು ನಾಗರಿಕ ಸಮಾಜ ಒಪ್ಪಲು ಸಾಧ್ಯವಿಲ್ಲ. ಇವತ್ತು ರಾಷ್ಟ್ರದಲ್ಲಿ ಯಾವ ರೀತಿಯ ಸಮಾಜವನ್ನು ಕಟ್ಟಿ ಬೆಳೆಸುತ್ತಿದ್ದೇವೆ ಎಂದರೆ ಹೇಸಿಗೆ ಅನಿಸುತ್ತೆ ಎಂದು ಪ್ರಜ್ಞಾವಂತರ ವೇದಿಕೆಯ ಸಂಚಾಲಕ ಸಿ ಎಸ್ ವೆಂಕಟೇಶ ಆಕ್ರೋಶ ವ್ಯಕ್ತಪಡಿಸಿದರು.
ಬೆಂಗಳೂರಿನ ರಾಜರಾಜೇಶ್ವರಿ ನಗರದ ಶಾಸಕರಾದ ಮುನಿರತ್ನ ಒಕ್ಕಲಿಗ ಸಮುದಾಯ ಹಾಗೂ ದಲಿತ ಸಮುದಾಯದ ಬಗ್ಗೆ ಕೆಟ್ಟದಾಗಿ ಮಾತನಾಡಿ ಜಾತಿ ನಿಂದನೆ ಮಾಡಿರುವುದನ್ನು ಖಂಡಿಸಿ ಪ್ರತಿಭಟನಾಕಾರರು ಶ್ರೀರಂಗಪಟ್ಟಣ ತಾಲೂಕು ಕಚೇರಿಯ ಅಂಬೇಡ್ಕರ್ ಪ್ರತಿಮೆಯ ಹತ್ತಿರದಿಂದ ಕುವೆಂಪು ಸರ್ಕಲ್ ತನಕ ಮೆರವಣಿಗೆ ಮಾಡಿದರು. ನಂತರ ಮಾನವ ಸರಪಳಿ ರಚಿಸಿ ರಸ್ತೆ ತಡೆ ನಡೆಸಿದರು. ಶಾಸಕನ ಅನಾಗರಿಕ ವರ್ತನೆಯ ಎದುರು ಸಾಂಕೇತಿಕವಾಗಿ ಎಲ್ಲಾ ಪ್ರಗತಿಪರ ಸಂಘಟನೆಗಳು ಮತ್ತು ರೈತ ಸಂಘ ಒಟ್ಟುಗೂಡಿ ಪ್ರತಿಭಟನೆ ಹಮ್ಮಿಕೊಂಡಿದ್ದರು.
ಪ್ರತಿಭಟನೆಯಲ್ಲಿ ಮಾತನಾಡಿದ ಸಿ ಎಸ್ ವೆಂಕಟೇಶ್ , ಸಂವಿಧಾನ ಜಾರಿಗೆ ಬಂದು 75 ವರ್ಷ ಆಗಿದೆ. ಆರ್ಟಿಕಲ್ 17ರಲ್ಲಿ ಒಂದು ಪದವನ್ನು ಬಳಸಬಾರದು ಅಂತ ಶಾಸನ ಮಾಡಿದೆ. ಪ್ರತಿ ಹಳ್ಳಿ ಹಳ್ಳಿಯಲ್ಲೂ ಯಾವ ಪದ ಬಳಸಬಾರದು ಅಂತ ಜನರಿಗೆ ಗೊತ್ತಿದೆ. ಯಾರೂ ಕೂಡ ಆ ಪದ ಬಳಕೆ ಮಾಡುತ್ತಾ ಇಲ್ಲ. ಅಂಥದರಲ್ಲಿ ಸಂವಿಧಾನದ ಪ್ರಕಾರ ಪ್ರಮಾಣವಚನ ಸ್ವೀಕರಿಸಿದ ಒಬ್ಬ ಜನಪ್ರತಿನಿಧಿ ಶಾಸನ ರೂಪಿಸುವಂತಹ ವ್ಯಕ್ತಿ. ಇವತ್ತು ನಿರ್ಬಂಧಿತ ಪದ ಬಳಕೆ ಮಾಡುತ್ತಾನೆ. ಆತ ಎಂತಹ ಕೀಳು ಅನಾಗರಿಕ ವ್ಯಕ್ತಿ ಆಗಿರಬೇಕು ಎಂದು ಹರಿಹಾಯ್ದರು.
ಈ ಸಂದರ್ಭದಲ್ಲಿ ಶ್ರೀರಂಗಪಟ್ಟಣ ತಾಲೂಕು ರೈತ ಸಂಘದ ನೇತೃತ್ವದಲ್ಲಿ ರೈತ ಸಂಘದ ಪದಾಧಿಕಾರಿಗಳಾದ ಪಾಂಡು, ಜಯರಾಮೇಗೌಡ, ಚಿಕ್ಕತಮ್ಮೇಗೌಡ, ಡಿಎಸ್ಎಸ್ ಒಕ್ಕೂಟದ ಗಂಜಾಂ ರವಿಚಂದ್ರ, ಹೊನ್ನಪ್ಪ, ಪ್ರಿಯಾ ರಮೇಶ್, ಚಂದ್ರಣ್ಣ, ಕುಬೇರ, ಅಪ್ಪಾಜಿ, ಮಾದೇಶ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.
