ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಉಪನೋಂದಣಿ ಕಚೇರಿಯಲ್ಲಿ ಖಾಸಗಿ ನೌಕರರ ಕಾರುಬಾರು ಹೆಚ್ಚಾಗಿದೆ. ಇದಕ್ಕೆ ಸಂಬಂಧಪಟ್ಟ ಇಲಾಖೆಯ ಸಚಿವರು ಲಗಾಮು ಹಾಕಬೇಕು ಎಂದು ಕರ್ನಾಟಕ ರಾಜ್ಯ ರೈತಸಂಘದ ಮುಖಂಡ ಕಿರಂಗೂರು ಪಾಪು ಆಗ್ರಹಿಸಿದ್ದಾರೆ.
ಈ ಸಂಬಂಧ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಕೋಟ್ಯಂತರ ರೂ.ರಿಜಿಸ್ಟ್ರರ್, ಕ್ರಯ, ಭೋಗ್ಯ ವಗೈರೆ, ಅಮೂಲ್ಯವಾದ ಹಳೆ ಕ್ರಯಪತ್ರಗಳಿಂದ ಹಾಗೂ ಇ.ಸಿ., ಮಾಡ್‌ಗೇಜ್ ಮಾಡಿಸಲು ದಿನನಿತ್ಯ ರೈತರು, ಸಾರ್ವಜನಿಕರಿಂದ ಗಿಜಿಗುಟ್ಟುವ ಶ್ರೀರಂಗಪಟ್ಟಣ ಉಪನೋಂದಣಾ ಕಛೇರಿಯಲ್ಲಿ ಸರ್ಕಾರಿ ನೌಕರರಾಗಿ 2-3 ಜನ ಮಾತ್ರ ಕರ್ತವ್ಯನಿರ್ವಹಿಸುತ್ತಿದ್ದಾರೆ. ಕಚೇರಿಯಲ್ಲಿ ಖಾಸಗಿ ನೌಕರರೇ ತುಂಬಿತುಳುಕುತ್ತಿದ್ದಾರೆ. ಅವರದ್ದೇ ಕಾರುಬಾರಾಗಿದೆ. ಇವರಿಂದ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ ಎಂದು ಆರೋಪಿಸಿದ್ದಾರೆ.
ಖಾಸಗಿಯವರನ್ನು ನೇಮಕಾತಿ ಮಾಡಲು ಆದೇಶ ಕೊಟ್ಟಿರುವವರು ಯಾರು? ಇವರಿಗೆ ಯಾರು ಸಂಬಳ ನೀಡುತ್ತಾರೆ ಎಂಬುದನ್ನು ಉಪನೋಂದಾಣಾಧಿಕಾರಿಗಳು ಬಹಿರಂಗಪಡಿಸಬೇಕು ಎಂದು ಕಿರಂಗೂರು ಪಾಪು ಒತ್ತಾಯಿಸಿದ್ದಾರೆ.
ರೈತರಿಗೆ ಹಾಗೂ ಸಾರ್ವಜನಿಕರಿಗೆ ಯಾವುದೇ ಮೂಲಭೂತ ಸೌಕರ್ಯಗಳು ಇನ್ನೂ ಮರೀಚಿಕೆಯಾಗಿವೆ. ಉಪನೋಂದಾಣಾಧಿಕಾರಿ ಮಂಜುದರ್ಶಿನಿ ಜಿ. ಇವರು ರೈತರ, ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಲು ಸೌಜನ್ಯ ತೋರುತ್ತಿಲ್ಲ. ಅವರನ್ನು ನಿಂತುಕೊಂಡೇ ಮಾತನಾಡಿಸುವ ಪ್ರವೃತ್ತಿ ಬೆಳೆಸಿಕೊಂಡಿದ್ದಾರೆ. ಖಾಸಗಿ ನೌಕರರು ಅಲ್ಲಿ ಬಾಸ್‌ಗಳಂತೆ ವರ್ತಿಸುತ್ತಾರೆ ಎಂದು ಕಿಡಿಕಾರಿದ್ದಾರೆ.

ಕಚೇರಿಯಲ್ಲಿ ಸೂಕ್ತ ಭದ್ರತೆ ಇಲ್ಲ. ಕೋಟ್ಯಾಂತರ ರೂ.ಗಳ ಸರ್ಕಾರಿ ವಹಿವಾಟು ನಡೆಯುವ ಸ್ಥಳದಲ್ಲಿ ಒಂದು ಸಿ.ಸಿ.ಕ್ಯಾಮರಾ ಇಲ್ಲ. ಕಡತಗಳಿಗೆ ಸರ್ಕಾರಿ ನೌಕರರಿಂದ ಭದ್ರತೆ ವ್ಯವಸ್ಥೆ ಇಲ್ಲ. ಮೂಲ್ಯವಾದ ದಾಖಲೆಗಳನ್ನು ಖಾಸಗಿ ನೌಕರರ ಕೈಗೆ ಕೊಟ್ಟುಬಿಟ್ಟಿದ್ದಾರೆ. ಇವರು ರಿಯಲ್ ಎಸ್ಟೇಟ್ ಉದ್ಯಮಿಗಳು, ರಾಜಕಾರಣಿಗಳು, ಅವರ ಹಿತ ಕಾಯುವವರಿಗೆ ಕೂಡಲೇ ಬೇಕಾದ ದಾಖಲೆಗಳನ್ನು ಕ್ಷಣಮಾತ್ರದಲ್ಲೆ ನೀಡುತ್ತಾರೆ. ಬಡರೈತರು, ಸಾರ್ವಜನಿಕರು ಅರ್ಜಿ ಕೊಟ್ಟರೆ, ಮಾಹಿತಿ ಕೇಳಿದರೆ ಅವರಿಗೆ ಒಂದಲ್ಲಾ ಒಂದು ಸಬೂಬು ಹೇಳಿ ಸಾಗ ಹಾಕುವ ಕೆಲಸವನ್ನು ದಿನನಿತ್ಯವೂ ಮಾಡುತ್ತಾ ಬರುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಇದನ್ನು ಓದಿದ್ದೀರಾ? ಕ್ಷೌರ ಮಾಡಲು ನಿರಾಕರಿಸಿದ ಮುದುಕಪ್ಪ ಹಡಪದ್ ಆಸ್ತಿ ಮುಟ್ಟುಗೋಲು ಹಾಕಬೇಕು : ಮಾದಿಗ ಸಮುದಾಯ ಒತ್ತಾಯ
ಯಾವ ಯಾವ ವಿಭಾಗಗಳಲ್ಲಿ ಕೆಲಸ ನಿರ್ವಹಿಸುತ್ತಾರೆ ಎಂಬ ಬಗ್ಗೆ ಫಲಕಗಳಿಲ್ಲ. ಖಾಸಗಿ ನೌಕರರು ಯಾರು? ಸರ್ಕಾರಿ ನೌಕರರು ಯಾರು ಎಂಬುದೇ ಗೊತ್ತಾಗುವುದಿಲ್ಲ. ಮಧ್ಯವರ್ತಿಗಳ ಹಾವಳಿ ವಿಪರೀತವಾಗಿದೆ. ಇ.ಸಿ. ಹಾಗೂ ಹಳೆ ನೋಂದಣಿ ಕ್ರಯಪತ್ರಗಳು ನೀಡುವ ಸ್ಥಳದಲ್ಲಿ ಲಂಗುಲಗಾಮಿಲ್ಲದೆ ಭ್ರಷ್ಟಾಚಾರ ವ್ಯಾಪಕವಾಗಿ ನಡೆಯುತ್ತಿದೆ. ತಾಲೂಕು ಉಪನೋಂದಣಾಧಿಕಾರಿಗಳು ಸುಮಾರು ವರ್ಷಗಳಿಂದಲೂ ಇಲ್ಲಿಯೇ ಜಂಡಾ ಹೂಡಿದ್ದಾರೆ. ಅವರನ್ನು ಕೂಡಲೇ ವರ್ಗಾವಣೆ ಮಾಡಬೇಕು ಎಂದು ಕಂದಾಯ ಸಚಿವರನ್ನು ರೈತ ಮುಖಂಡ ಒತ್ತಾಯಿಸಿದ್ದಾರೆ.
ಕಚೇರಿಗೆ ಅಗತ್ಯವಿರುವ ಸರ್ಕಾರಿ ನೌಕರರನ್ನು ಮಾತ್ರ ಕೂಡಲೇ ನೇಮಕ ಮಾಡಬೇಕು. ಕಚೇರಿಗೆ ಮೂಲಭೂತ ಸೌಕರ್ಯಗಳನ್ನು ಕೂಡಲೇ ಒದಗಿಸಬೇಕು ಎಂದು ಕ್ಷೇತ್ರದ ಶಾಸಕ ಹಾಗೂ ಜಿಲ್ಲಾ ಉಪನೋಂದಣಾಧಿಕಾರಿಯವರಿಗೂ ಗಮನಕ್ಕೆ ತರಲಾಗಿದೆ. ಕೂಡಲೇ ಕಂದಾಯ ಮಂತ್ರಿ ಕೃಷ್ಣಭೈರೇಗೌಡರು ಈ ಬಗ್ಗೆ ಸೂಕ್ತ ಕ್ರಮ ವಹಿಸಬೇಕು ಎಂದು ಕರ್ನಾಟಕ ರಾಜ್ಯ ರೈತಸಂಘದ ಮುಖಂಡ ಕಿರಂಗೂರು ಪಾಪು ಆಗ್ರಹಿಸಿದ್ದಾರೆ.
