ಪ್ರಸಕ್ತ ಸಾಲಿನ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಐದನೇ ರ‍್ಯಾಂಕ್ ಗಳಿಸಿದ್ದ ಬೀದರ್ ಜಿಲ್ಲೆಯ ಭಾಲ್ಕಿಯ ಸೂರ್ಯೋದಯ ಪಬ್ಲಿಕ್ ಶಾಲೆಯ ವಿದ್ಯಾರ್ಥಿನಿ ದೇವಿ ಮಲ್ಲಿಕಾರ್ಜುನ ಸೀತಾ, ಪತ್ರಿಕೆಯ ಮರು ಮೌಲ್ಯಮಾಪನದ ಬಳಿಕ ರಾಜ್ಯಕ್ಕೆ ಮೂರನೇ ರ‍್ಯಾಂಕ್ ಪಡೆದಿದ್ದಾರೆ.
ದೇವಿ ಮೊದಲು ಶೇ 99.36 ರಷ್ಟು ಅಂಕ ಗಳಿಸಿದ್ದರು. ಅವರಿಗೆ ಹಿಂದಿ ವಿಷಯದಲ್ಲಿ 98 ಅಂಕಗಳು ಬಂದಿದ್ದವು. ಆದರೆ, ಇದರಿಂದ ತೃಪ್ತರಾಗದ ಅವರು ಹಿಂದಿ ವಿಷಯದ ಮರು ಮೌಲ್ಯಮಾಪನಕ್ಕಾಗಿ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಗೆ ಅರ್ಜಿ ಸಲ್ಲಿಸಿದ್ದರು.
ಮರು ಮೌಲ್ಯಮಾಪನದ ನಂತರ ಅವರಿಗೆ ಎರಡು ಅಂಕ ಹೆಚ್ಚಾಗಿ ಹಿಂದಿಯಲ್ಲಿ 100ಕ್ಕೆ 100 ಅಂಕ ಬಂದಿವೆ. ಈಗ ವಿದ್ಯಾರ್ಥಿನಿಯ ಒಟ್ಟಾರೆ ಫಲಿತಾಂಶ ಶೇ 99.68ಕ್ಕೆ ಏರಿಕೆಯಾಗಿದ್ದು, ರ‍್ಯಾಂಕ್‌ನಲ್ಲೂ ಎರಡು ಸ್ಥಾನ ಜಿಗಿತ ಕಂಡಿದ್ದಾರೆ.
ಈ ಬಾರಿಯ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ದೇವಿ 625 ಅಂಕಗಳ ಪೈಕಿ 623 ಅಂಕ ಗಳಿಸಿ ಅಮೋಘ ಸಾಧನೆ ಮಾಡಿದ್ದಾರೆ. ಶಾಲೆ ಫಲಿತಾಂಶದಲ್ಲಿ ಸತತ ಎರಡನೇ ವರ್ಷವೂ ಕಲಬುರಗಿ ವಿಭಾಗದಲ್ಲಿ ಮೊದಲ ಸ್ಥಾನದಲ್ಲಿದೆ ಎಂದು ಶಾಲೆಯ ಅಧ್ಯಕ್ಷ ಸಂತೋಷ ಖಂಡ್ರೆ ತಿಳಿಸಿದ್ದಾರೆ.
ವಿದ್ಯಾರ್ಥಿ ಸಾಧನೆಗೆ ಶಾಲೆಯ ಕಾರ್ಯದರ್ಶಿ ಉಷಾ ಖಂಡ್ರೆ, ಪ್ರಾಚಾರ್ಯ ಅನಿಲ್ ಪಾಟೀಲ, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಸಂತಸ ವ್ಯಕ್ತಪಡಿಸಿದ್ದಾರೆ.