ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಸಕ್ತ ಸಾಲಿನ ಆಯವ್ಯಯವನ್ನು ಶುಕ್ರವಾರ ಮಂಡಿಸುವ ಮೂಲಕ ತಮ್ಮ ರಾಜಕೀಯ ಜೀವನದಲ್ಲಿ 14ನೇ ದಾಖಲೆ ಬಜೆಟ್ ಮಂಡಿಸಿದ್ದು, ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಗೆ ಗಣನೀಯ ಕೊಡುಗೆ ನೀಡಿದ್ದಾರೆ.
ಬಜೆಟ್ ಭಾಷಣದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಬಗ್ಗೆ ಪ್ರಸ್ತಾಪಿಸಿ, “ಶಿಕ್ಷಣವು ವಿಮೋಚನಾ ಶಕ್ತಿಯಾಗಿದೆ ಮತ್ತು ನಮ್ಮ ಕಾಲದಲ್ಲಿ ಜನತಂತ್ರವನ್ನು ಸ್ಥಾಪಿಸುವ ಶಕ್ತಿಯೂ ಆಗಿದೆ; ಶಿಕ್ಷಣವು ಜಾತಿ ಮತ್ತು ವರ್ಗದ ನಿರ್ಬಂಧಗಳನ್ನು ತೊಲಗಿಸಿ, ಹುಟ್ಟಿನಿಂದ ಅಥವಾ ಇನ್ನಾವುದೇ ಪರಿಸ್ಥಿತಿಯಿಂದ ಉದ್ಭವಿಸಿದ ಅಸಮಾನತೆಗಳನ್ನು ನಿವಾರಿಸುತ್ತದೆ” ಎಂದು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ಶಿಕ್ಷಣ ಬಗ್ಗೆ ಹೇಳಿರುವ ಮಾತನ್ನು ಉಲ್ಲೇಖಿಸಿದರು.
ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಗೆ ಬಜೆಟ್‌ನಲ್ಲಿ ಸಿಕ್ಕ ಕೊಡುಗೆ
- ಶಿಕ್ಷಣವು ಬಾಂಧವ್ಯ, ಭ್ರಾತೃತ್ವ, ಸಾಮರಸ್ಯ ಮತ್ತು ಸಹಬಾಳ್ವೆಯ ಮನೋಭಾವ ಮೂಡಿಸುವಂತಿರಬೇಕು. ಈ ಆಶಯಕ್ಕೆ ವಿರುದ್ಧವಾದ ಪಠ್ಯಗಳನ್ನು ಹಿಂದಿನ ಸರ್ಕಾರವು ಪಠ್ಯ ಪರಿಷ್ಕರಣೆಯಲ್ಲಿ ಸೇರ್ಪಡೆಗೊಳಿಸಿದ್ದು, ಅವುಗಳನ್ನು ಪ್ರಸಕ್ತ ಸಾಲಿನಿಂದಲೇ ಕೈಬಿಡಲು ಕ್ರಮಕೈಗೊಳ್ಳಲಾಗಿದೆ.
- ರಾಜ್ಯದ ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಉತ್ತಮ ಸೌಲಭ್ಯಗಳನ್ನು ನೀಡಲು ಶಾಲಾ ಕೊಠಡಿಗಳಿಗೆ 310 ಕೋಟಿ ರೂ.ಗಳು ಹಾಗೂ ಪದವಿ ಪೂರ್ವ ಕಾಲೇಜು ಕೊಠಡಿಗಳಿಗೆ 240 ಕೋಟಿ ರೂ. ಸೇರಿದಂತೆ ಒಟ್ಟು 550 ಕೋಟಿ ರೂ.ಗಳ ವೆಚ್ಚದಲ್ಲಿ 8,311 ಕೊಠಡಿಗಳ ನಿರ್ಮಾಣ ಕಾಮಗಾರಿಗಳನ್ನು ಶೀಘ್ರದಲ್ಲಿಯೇ ಪೂರ್ಣಗೊಳಿಸಲಾಗುವುದು.
- ವಿದ್ಯಾರ್ಥಿಗಳ ಶಿಕ್ಷಣ ಮತ್ತು ಆರೋಗ್ಯದ ದೃಷ್ಟಿಯಿಂದ, ಮಕ್ಕಳ ಸಂಖ್ಯೆಗೆ ಅನುಗುಣವಾಗಿ, ಕಡಿಮೆ ಶೌಚಾಲಯಗಳಿರುವ 5,775 ಶಾಲೆಗಳಲ್ಲಿ ಹಾಗೂ 150 ಕಾಲೇಜುಗಳಲ್ಲಿ ಶೌಚಾಲಯ ಘಟಕಗಳನ್ನು ನರೇಗಾ ಯೋಜನೆಯ ಸಂಯೋಜನೆಯೊಂದಿಗೆ 200 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುವುದು.
- ಹಳೆಯ ಶಾಲಾ ಕಾಲೇಜು ಕಟ್ಟಡಗಳು ಹಾಗೂ ಮಳೆಯಿಂದಾಗಿ ಶಿಥಿಲಗೊಂಡಿರುವ 3,833 ಶಾಲೆಗಳು ಹಾಗೂ 724 ಪದವಿ ಪೂರ್ವ ಕಾಲೇಜು ಕೊಠಡಿಗಳನ್ನು 100 ಕೋಟಿ ರೂ.ಗಳ ವೆಚ್ಚದಲ್ಲಿ ದುರಸ್ತಿಗೊಳಿಸುವ ಮೂಲಕ ಬಳಕೆಗೆ ಯೋಗ್ಯಗೊಳಿಸಲಾಗುವುದು.
- ರಾಜ್ಯದ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ನಿರ್ವಹಣೆಗಾಗಿ ನೀಡುತ್ತಿರುವ ಅನುದಾನವನ್ನು ಕನಿಷ್ಠ 20,000 ರೂ. ದಿಂದ 45,000 ರೂ. ಗಳವರೆಗೆ ಹೆಚ್ಚಿಸಿ 47,722 ಶಾಲೆಗಳು ಹಾಗೂ 1,231 ಪದವಿ ಪೂರ್ವ ಕಾಲೇಜುಗಳ ನಿರ್ವಹಣೆಗಾಗಿ ಒಟ್ಟಾರೆಯಾಗಿ 153 ಕೋಟಿ ರೂ. ಅನುದಾನ ಒದಗಿಸಲಾಗುವುದು.
- ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ 1 ರಿಂದ 8 ನೇ ತರಗತಿಯ ವಿದ್ಯಾರ್ಥಿಗಳಿಗೆ ವಾರದಲ್ಲಿ ಒಂದು ಬಾರಿ ಮೊಟ್ಟೆ/ ಶೇಂಗಾ ಚಿಕ್ಕಿ/ ಬಾಳೆಹಣ್ಣನ್ನು ವಿತರಿಸಲಾಗುತ್ತಿದ್ದು, ಈಗ ವಾರದಲ್ಲಿ ಎರಡು ದಿವಸ ವಿತರಿಸಲಾಗುವುದು. ಪ್ರಸಕ್ತ ಸಾಲಿನಿಂದ ಈ ಯೋಜನೆಯನ್ನು 9 ಮತ್ತು 10ನೇ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೂ ವಿಸ್ತರಿಸಿ 280 ಕೋಟಿ ರೂ.ಗಳ ವೆಚ್ಚದಲ್ಲಿ 60 ಲಕ್ಷ ಮಕ್ಕಳಿಗೆ ಒದಗಿಸಲಾಗುವುದು.
- ಮಕ್ಕಳಲ್ಲಿ ಉಂಟಾಗಿರುವ ಕಲಿಕಾ ನ್ಯೂನತೆಯನ್ನು ಹೋಗಲಾಡಿಸಲು ಸುಮಾರು 33 ಲಕ್ಷ ವಿದ್ಯಾರ್ಥಿಗಳಿಗೆ 80 ಕೋಟಿ ರೂ.ಗಳ ವೆಚ್ಚದಲ್ಲಿ ಕಲಿಕಾ ಬಲವರ್ಧನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು. ʻಮರುಸಿಂಚನʼ ಎಂಬ ಹೊಸ ಯೋಜನೆಯಡಿಯಲ್ಲಿ ಕಲಿಕೆಯಲ್ಲಿ ಹಿಂದುಳಿದ ಒಂದೂವರೆ ಲಕ್ಷ ವಿದ್ಯಾರ್ಥಿಗಳನ್ನು ಪ್ರೌಢ ಹಂತದ ಪರೀಕ್ಷೆಗಳಿಗೆ ಸಜ್ಜುಗೊಳಿಸಲು ವಿಶೇಷ ತರಬೇತಿಯನ್ನು ನೀಡಲಾಗುವುದು.
- ಶಾಲಾ ಶಿಕ್ಷಣ ಇಲಾಖೆಯಲ್ಲಿನ ವಿವಿಧ ಕಾರ್ಯಕ್ರಮಗಳನ್ನು ನಿರ್ವಹಿಸುವ ಸ್ಯಾಟ್ಸ್ ತಂತ್ರಾಂಶವನ್ನು SATS 2.0 ಎಂದು ಉನ್ನತೀಕರಿಸಲಾಗುವುದು.
- ಹೊಸ ಕಲ್ಪನೆಯನ್ನು ವಾಸ್ತವಕ್ಕೆ ತರಲು ವಿದ್ಯಾರ್ಥಿಗಳಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಲು ಮಾಧ್ಯಮಿಕ ಮತ್ತು ಪದವಿ ಪೂರ್ವ ಕಾಲೇಜುಗಳಲ್ಲಿ ಇನ್ನೋವೇಶನ್ ಲ್ಯಾಬ್‌ಗಳನ್ನು ಸ್ಥಾಪಿಸಲಾಗುವುದು.
2023-24ನೇ ಸಾಲಿನಲ್ಲಿ ರಾಜ್ಯದ ಪ್ರತಿ ಕಂದಾಯ ವಿಭಾಗದಲ್ಲಿ ನಾಲ್ಕು ಪ್ರಯೋಗಾಲಯಗಳನ್ನು ಎರಡು ಕೋಟಿ ರೂ.ಗಳ ವೆಚ್ಚದಲ್ಲಿ ಸ್ಥಾಪಿಸಲಾಗುವುದು. - ಶಿಕ್ಷಣ ಇಲಾಖೆ ಮತ್ತು ಅರಣ್ಯ ಇಲಾಖೆಯ ಸಹಭಾಗಿತ್ವದಲ್ಲಿ ಸ್ಥಳಾವಕಾಶವುಳ್ಳ ಶಾಲೆಗಳ ಸುತ್ತಮುತ್ತ ಒಂದು ವರ್ಷದ ಕಾಲಾವಧಿಯಲ್ಲಿ 50 ಲಕ್ಷ ಸಸಿಗಳನ್ನು ನೆಡುವ ವಿನೂತನ ʻಸಸ್ಯ ಶ್ಯಾಮಲʼ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು.
- ರಾಜ್ಯದ ಸಾಹಿತಿಗಳ ಹಾಗೂ ಪ್ರಕಾಶಕರ ಬೇಡಿಕೆಗಳಿಗೆ ಸ್ಪಂದಿಸಿ ಸಾರ್ವಜನಿಕ ಗ್ರಂಥಾಲಯಗಳಿಗೆ ಉತ್ತಮ ಪುಸ್ತಕಗಳನ್ನು ಖರೀದಿಸಲು ಪ್ರಸಕ್ತ ಸಾಲಿನಲ್ಲಿ 10 ಕೋಟಿ ರೂ. ಅನುದಾನ ಒದಗಿಸಲಾಗುವುದು.