ದಾವಣಗೆರೆಯ ಜಿಲ್ಲೆಯ ತಾಲೂಕು ಕೇಂದ್ರ ಜಗಳೂರು ನಗರದ ಸಂತೆ ಮೈದಾನ ತರಕಾರಿ ಮಾರುಕಟ್ಟೆಯಲ್ಲಿ ಬೀಡಾಡಿ ದನಗಳ ದಂಡು ಬೀಡುಬಿಟ್ಟಿದೆ, ತರಕಾರಿ ಮಾರುಕಟ್ಟೆ ದುಃಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ. ಸಾಮಾನ್ಯವಾಗಿ ವಾರದ ಸಂತೆ ಎಂದರೆ ಹೆಂಗಸರು, ಮಕ್ಕಳು, ವೃದ್ಧರಾದಿಯಾಗಿ ಸಂತೆಗೆ ಬಂದು ದವಸ ಧಾನ್ಯ ತರಕಾರಿ ಹಣ್ಣು ಖರೀದಿಸುವುದು ವಾಡಿಕೆ. ಆದರೆ ಜಗಳೂರಿನ ವಾರದ ಸಂತೆಗೆ ಬರುವ ಗ್ರಾಹಕರು ಆತಂಕದಲ್ಲಿ ಅಡ್ಡಾಡುವಂತಾಗಿದೆ.
ಇಲ್ಲಿನ ಬೀಡಾಡಿ ದನಗಳ ಹಾವಳಿಯಿಂದ ಸಾರ್ವಜನಿಕರು ನಗರದಲ್ಲಿ ಮತ್ತು ಹೆಚ್ಚಿನದಾಗಿ ವಾರದ ಸಂತೆಯಲ್ಲಿ ಖರೀದಿಸಲು ಜೀವವನ್ನು ಅಂಗೈಯಲ್ಲಿ ಹಿಡಿದುಕೊಂಡು ಓಡಾಡುವ ಸ್ಥಿತಿ ನಿರ್ಮಾಣವಾಗಿದೆ. ಇದು ಇತ್ತೀಚಿನದಲ್ಲ ಸುಮಾರು ವರ್ಷಗಳಿಂದ ಹೀಗೆಯೇ ನಡೆದುಕೊಂಡು ಬಂದಿದ್ದು, ಇದನ್ನು ಪಟ್ಟಣ ಪಂಚಾಯಿತಿ ಮತ್ತು ಇತರ ಅಧಿಕಾರಿಗಳ ಗಮನಕ್ಕೆ ತಂದರೂ ಪರಿಹರಿಸದೆ ನಿರ್ಲಕ್ಷ ವಹಿಸಿದ್ದಾರೆಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.
ಪಟ್ಟಣದ ಆಯಿಲ್ ಮಿಲ್ ಮುಂಭಾಗದಲ್ಲಿ ಪ್ರತಿ ಶನಿವಾರ ವಾರದ ಸಂತೆ ನಡೆಯುತ್ತದೆ. ಜಗಳೂರು ನಗರ ಸೇರಿದಂತೆ ತಾಲೂಕಿನ ಸುತ್ತಮುತ್ತಲಿನ ಹಲವು ಹಳ್ಳಿಗಳಿಂದ ವ್ಯಾಪಾರಸ್ಥರು ಮತ್ತು ಗ್ರಾಹಕರು ಸಂತೆಗೆ ಬರುವ ವಾಡಿಕೆ ಇದೆ. ಆದರೆ ಈ ಸಂತೆಯಲ್ಲಿ ಬೀಡಾಡಿ ದನಗಳ ಹಾವಳಿ ಹೆಚ್ಚಾಗಿದ್ದು, ಹತ್ತಾರು ಎಮ್ಮೆಗಳು ಎಲ್ಲೆಂದರಲ್ಲಿ ಓಡಾಡುತ್ತಾ ಒಂದಕ್ಕೊಂದು ತಿವಿದುಕೊಂಡು ಗಲಾಟೆ ಮಾಡುತ್ತಾ ಜನರಿಗೆ, ತರಕಾರಿ ಮಾರುವವರಿಗೆ ತೊಂದರೆ ಕೊಡುತ್ತವೆ.

ತರಕಾರಿಯ ಬೆಲೆ ಗಗನಕ್ಕೇರಿರುವ ಈ ಕಾಲದಲ್ಲಿ ಸಂತೆ ಮೈದಾನದಲ್ಲಿ ಸೂಕ್ತ ವ್ಯವಸ್ಥೆಗಳಿಲ್ಲದೆ ವ್ಯಾಪಾರಸ್ಥರು ತರಕಾರಿಗಳನ್ನು ನೆಲದ ಮೇಲೆ ಹಾಕಿಕೊಂಡು ಮಾರುತ್ತಿದ್ದು, ಸ್ವಲ್ಪ ಆಚೆ-ಈಚೆ ಗಮನ ಹರಿಸಿದರೂ ದುಬಾರಿ ತರಕಾರಿಗಳನ್ನು ದನಗಳು ಸಲೀಸಾಗಿ ತಿಂದು ಹೋಗುತ್ತವೆ. ತರಕಾರಿ ಖರೀದಿಸುವವರನ್ನು ಗುದ್ದಿ ಹೋಗುತ್ತವೆ. ಸಂತೆಯಲ್ಲಿ ಓಡಾಡುವಾಗ ಸಾರ್ವಜನಿಕರನ್ನು ದನಗಳಿಂದ ತಿವಿಸಿಕೊಂಡು ಓಡಾಡುವ ಪರಿಸ್ಥಿತಿ ಎದುರಾಗಿದೆ.
ಬಹಳಷ್ಟು ಮಂದಿಗೆ ತಿವಿದು ಗಾಯ ಮಾಡಿರುವ ಉದಾಹರಣೆಗಳಿವೆ. ಇತ್ತೀಚಿಗೆ ಪಟ್ಟಣದ ಶಾಂತಮ್ಮ ಎನ್ನುವ ಮಹಿಳೆ ತರಕಾರಿ ಖರೀದಿಸುವಾಗ ಹಿಂಬದಿಯಿಂದ ಬಂದ ನಾಲ್ಕೈದು ಎಮ್ಮೆಗಳು ಮಹಿಳೆಯನ್ನು ಕೆಡವಿ ತುಳಿದುಹೋದ ಹಿನ್ನೆಲೆಯಲ್ಲಿ ಅವರು ತೀವ್ರ ಗಾಯಗೊಂಡಿದ್ದು, ಅಲ್ಲಿನ ಕೆಲವು ವ್ಯಾಪಾರಿಗಳು ಅವರನ್ನು ರಕ್ಷಿಸಿ ಉಪಚರಿಸಿ ಆಸ್ಪತ್ರೆಗೆ ಕಳಿಸಿಕೊಟ್ಟಿರುವ ಘಟನೆಯೂ ಜರುಗಿದೆ.
ತಾಲೂಕು ಕೇಂದ್ರದ ಈ ಸಂತೆಯಲ್ಲಿ ವ್ಯಾಪಾರಿಗಳಿಗೆ ಕುಳಿತುಕೊಳ್ಳಲು ಕಟ್ಟೆ ಇಲ್ಲ ಮತ್ತು ಖರೀದಿಸಲು ಬರುವವರಿಗೆ ಸೂಕ್ತ ವ್ಯವಸ್ಥೆ ಇಲ್ಲ, ಸರಿಯಾದ ರಸ್ತೆ ಇಲ್ಲ. ಎಲ್ಲೆಂದರಲ್ಲಿ ನೆಲದ ಮೇಲೆ ಕುಳಿತು ವ್ಯಾಪಾರ ಮಾಡುವ ಪರಿಸ್ಥಿತಿ ಇದೆ. ಮಳೆ ಬಂದರೆ ಇಲ್ಲಿನ ಪರಿಸ್ಥಿತಿ ಅಯೋಮಯವಾಗುತ್ತದೆ. ಸಂತೆಯಲ್ಲಿ ಶೌಚಾಲಯ ವ್ಯವಸ್ಥೆ ಇಲ್ಲದೆ ಸುತ್ತಮುತ್ತ ಇರುವ ಗಿಡಗಳನ್ನು ವ್ಯಾಪಾರಿಗಳು ಇತರರು ಆಶ್ರಯಿಸುವಂತಾಗಿದೆ.
ವರ್ಷಕ್ಕೊಮ್ಮೆ ಸಂತೆಯನ್ನು ಹರಾಜು ಮಾಡಿ ಹಣ ಪಡೆದುಕೊಳ್ಳುವ ಪಟ್ಟಣ ಪಂಚಾಯಿತಿಯವರು ಮೂಲಭೂತ ಸೌಕರ್ಯ ಕಲ್ಪಿಸಲು ಮುಂದಾಗಿಲ್ಲ, ಹಣ ಪಡೆದುಕೊಂಡ ತಕ್ಷಣ ತಮಗೂ ಸಂತೆಮೈದಾನಕ್ಕೂ ಸಂಬಂಧವೇ ಇಲ್ಲದಂತೆ ವರ್ತಿಸುತ್ತಾರೆ ಎಂಬುದು ಸಾರ್ವಜನಿಕರ ಆರೋಪವಾಗಿದೆ. ಒಂದು ದಿನದ ಸಂತೆಗೆ ವ್ಯಾಪಾರಿಗಳಿಂದ 50 ರಿಂದ 100ರ ವರೆಗೂ ವಸೂಲು ಮಾಡುವ ಹರಾಜುದಾರರು ಮತ್ತು ಪಟ್ಟಣ ಪಂಚಾಯತ್ ಅಧಿಕಾರಿಗಳು ಸಂತೆ ಮೈದಾನಕ್ಕೆ, ವ್ಯಾಪಾರಿಗಳಿಗೆ ಯಾವುದೇ ಸೌಲಭ್ಯ ಕಲ್ಪಿಸಿಲ್ಲ.
ಸ್ಥಳೀಯ ಸಂತೆ ವ್ಯಾಪಾರಿ ಸಲೀಂ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಇತ್ತೀಚಿನ ದಿನಗಳಲ್ಲಿ ಬೀಡಾಡಿ ದನಗಳು ಮತ್ತು ಹಂದಿಗಳ ಹಾವಳಿ ಸಂತೆ ಮೈದಾನದಲ್ಲಿ ಹೆಚ್ಚಾಗಿದ್ದು, ವ್ಯಾಪಾರಸ್ಥರಿಗೆ ಮತ್ತು ಖರೀದಿಸುವವರಿಗೆ ತೊಂದರೆ ಕೊಡುತ್ತಿವೆ. ದುಬಾರಿ ತರಕಾರಿಗಳನ್ನು ಸದ್ದಿಲ್ಲದೆ ತಿಂದು ಹೋಗುತ್ತಿದ್ದು, ನಮಗೆ ನಷ್ಟವಾಗುತ್ತಿದೆ. ಬೇರೆ ತಾಲೂಕುಗಳ ಸಾಮಾನ್ಯ ನಗರಗಳಲ್ಲೂ ಕೂಡ ಸಂತೆ ಮೈದಾನಗಳು ವ್ಯವಸ್ಥಿತವಾಗಿವೆ. ಆದರೆ, ತಾಲೂಕು ಕೇಂದ್ರವಾದರೂ ಕೂಡ ಜಗಳೂರಿನಲ್ಲಿ ವ್ಯವಸ್ಥಿತವಾಗಿಲ್ಲದೆ ಎಲ್ಲರೂ ತೊಂದರೆ ಅನುಭವಿಸುವಂತಾಗಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದನ್ನೂ ಓದಿದ್ದೀರಾ? ಗದಗ | ಈ ದಿನ.ಕಾಮ್ ಫಲಶ್ರುತಿ: ಅಲೆಮಾರಿ ಸಮುದಾಯ ಸ್ಥಳಕ್ಕೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳ ಭೇಟಿ
“ಹಲವು ಬಾರಿ ಈ ದನಗಳ ಕುರಿತು ಪಟ್ಟಣ ಪಂಚಾಯತ್ ಮತ್ತು ಆಡಳಿತಕ್ಕೆ ದೂರು ನೀಡಿದರೂ ದನಗಳ ಮಾಲೀಕರಿಗೆ ನೋಟಿಸ್ ನೀಡಿ ಅವುಗಳನ್ನು ನಿಯಂತ್ರಣದಲ್ಲಿಡಲು ಪಟ್ಟಣ ಪಂಚಾಯತ್ ವಿಫಲವಾಗಿದೆ. ಇಲ್ಲಿ ದನಗಳಷ್ಟೇ ಅಲ್ಲದೆ ಗುಂಪಾಗಿ ಬರುವ ನಾಯಿಗಳು, ಹಂದಿಗಳೂ ಕೂಡ ಸಂತೆ ಮೈದಾನ ಹಾಗೂ ನಗರದ ತುಂಬಾ, ಮುಖ್ಯ ರಸ್ತೆಗಳಲ್ಲಿ ಕೂಡ ನಿರ್ಭಯವಾಗಿ ಓಡಾಡಿಕೊಂಡು ರಸ್ತೆಯ ಇಕ್ಕೆಲಗಳಲ್ಲಿ, ರಸ್ತೆ ಮಧ್ಯದಲ್ಲಿ ಮಲಗಿರುತ್ತವೆ. ಇದರಿಂದ ರಸ್ತೆಯಲ್ಲಿ ಓಡಾಡುವ ವಾಹನ ಸವಾರರೂ ಕೂಡ ಭಯದಲ್ಲಿ ಸಂಚರಿಸುವಂತಾಗಿದೆ. ಈ ಬೀಡಾಡಿ ದನಗಳನ್ನು ಗೋಶಾಲೆಗೆ ಕಳಿಸದೆ ತಮಗೆ ಸಂಬಂಧವಿಲ್ಲದಂತೆ ಅಧಿಕಾರಿಗಳು ತೀವ್ರ ನಿರ್ಲಕ್ಷಕ್ಕೆ, ಮೌನಕ್ಕೆ ಶರಣಾಗಿದ್ದಾರೆ” ಎಂಬುದು ಸಾರ್ವಜನಿಕರ ಆರೋಪ.
ಪಟ್ಟಣ ಪಂಚಾಯತ್ ಆಡಳಿತ, ಸ್ಥಳೀಯ ಅಧಿಕಾರಿಗಳು, ಶಾಸಕರು ಈಗಲಾದರೂ ಎಚ್ಚೆತ್ತುಕೊಂಡು ಇದಕ್ಕೆ ಸೂಕ್ತ ರಕ್ಷಣೆ ಮತ್ತು ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಎಂದು ಸಾರ್ವಜನಿಕರ ಒತ್ತಾಯವಾಗಿದೆ.

ವಿನಾಯಕ್ ಚಿಕ್ಕಂದವಾಡಿ
ದಾವಣಗೆರೆ, ಚಿತ್ರದುರ್ಗ ಜಿಲ್ಲಾ ಸಂಯೋಜಕರು