ಕರ್ನಾಟಕದ ಗ್ರಾಮೀಣ ಭಾಗದ 4, 5 ಮತ್ತು 6ನೇ ತರಗತಿಯ ಸರ್ಕಾರಿ ಶಾಲಾ ಮಕ್ಕಳು ಗಣಿತದ ಲೆಕ್ಕದಲ್ಲಿ ಹಿಂದುಳಿದಿದ್ದಾರೆ. ಸಂಕಲನ, ವ್ಯವಕಲನ, ಗುಣಾಕಾರ, ಭಾಗಾಕಾರ ಮಾಡಲು ಅವರಿಗೆ ಸಾಧ್ಯವಾಗುತ್ತಿಲ್ಲ ಎಂದು ವರದಿಯಾಗಿದೆ.
ಬೆಂಗಳೂರಿನ ಅಕ್ಷರ ಫೌಂಡೇಶನ್ ರಾಜ್ಯಾದ್ಯಂತ 2,625 ಗ್ರಾಮ ಪಂಚಾಯತಿ ವ್ಯಾಪ್ತಿಗಳಲ್ಲಿ 2022ರ ನವೆಂಬರ್‌ನಿಂದ 2023ರ ಮಾರ್ಚ್‌ವರೆಗೆ ಸಮೀಕ್ಷೆ ನಡೆಸಿದೆ. 4ರಿಂದ 6ನೇ ತರಗತಿ ವರೆಗಿನ 3,12,550 ಮಕ್ಕಳನ್ನು ಸಮೀಕ್ಷೆಗೆ ಒಳಪಡಿಸಿದೆ. ವಿದ್ಯಾರ್ಥಿಗಳಿಗೆ ತಮ್ಮ ಪ್ರಸ್ತುತ ತರಗತಿಗಳಿಗಿಂತ ಹಿಂದಿನ ತರಗತಿಯ ವಿಷಯಗಳ ಮೇಲೆ ಸಮೀಕ್ಷೆ ನಡೆಸಲಾಗಿದೆ. ಆದರೆ, ವಿದ್ಯಾರ್ಥಿಗಳು ಅವುಗಳಲ್ಲಿಯೂ ಹಿಂದುಳಿದಿದ್ದಾರೆ ಎಂಬುದನ್ನು ಸಮೀಕ್ಷೆ ಕಂಡುಕೊಂಡಿದೆ.
“ಕೊರೊನಾ ನಂತರದಲ್ಲಿ ಸರ್ಕಾರಿ ಶಾಲೆಗಳಿಗೆ ದಾಖಲಾತಿ ಹೆಚ್ಚುತ್ತಿದ್ದರೂ, ವಿದ್ಯಾರ್ಥಿಗಳ ಕಲಿಕೆಯಲ್ಲಿ ಭಾರೀ ಅತಂರ ಕಂಡುಬರುತ್ತಿದೆ. ಇದು ಗಂಭೀರ ಸಮಸ್ಯೆಯನ್ನು ಎತ್ತಿ ತೋರಿಸಿದೆ. ಚಿತ್ರದುರ್ಗ, ಬಳ್ಳಾರಿ, ರಾಯಚೂರು ಮತ್ತು ಕಲಬುರಗಿ ಜಿಲ್ಲೆಗಳು ಅತ್ಯಂತ ಕಳಪೆ ಪ್ರದರ್ಶನ ನೀಡಿವೆ. ಈ ಜಿಲ್ಲೆಗಳ ವಿದ್ಯಾರ್ಥಿಗಳು ಪರೀಕ್ಷೆಗಳಲ್ಲಿ ಉತ್ತೀರ್ಣರಾಗಲು ಸರಾಸರಿ ಅಂಕವನ್ನು ಗಳಿಸಿಲು ವಿಫಲರಾಗಿದ್ದಾರೆ” ಎಂದು ಸಮೀಕ್ಷಾ ವರದಿ ಹೇಳಿದೆ.
4ನೇ ತರಗತಿಯಲ್ಲಿ 1,03,962ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರಶ್ನೆ ಪತ್ರಿಕೆ ಹೊಂದಿಸಲು 3ನೇ ತರಗತಿಯ ಶಾಲಾ ಪಠ್ಯಕ್ರಮವನ್ನು ಬಳಸಲಾಗಿತ್ತು. ಆದಾಗ್ಯೂ, ಆ ಮಕ್ಕಳಲ್ಲಿ ಕೇವಲ 40% ಮಾತ್ರ ಗುಣಾಕಾರ ಮತ್ತು ಭಾಗಾಕಾರ ಲೆಕ್ಕವನ್ನು ಸರಿಪಡಿಸುವ ಸಾಮರ್ಥ್ಯ ಹೊಂದಿದ್ದಾರೆ. 5 ಮತ್ತು 6ನೇ ತರಗತಿಯ ಹೆಚ್ಚಿನ ವಿದ್ಯಾರ್ಥಿಗಳು ಕೂಡ ಗಣಿತದಲ್ಲಿ ಹಿಂದುಳಿದಿದ್ದಾರೆ ಎಂದು ಸಮೀಕ್ಷೆ ಹೇಳಿದೆ.
ಸಮೀಕ್ಷೆಯಲ್ಲಿ ಬೆಳಗಾವಿ, ಮಂಡ್ಯ, ತುಮಕೂರು ಮತ್ತು ಹಾವೇರಿ ಜಿಲ್ಲೆಗಳಲ್ಲಿ ಉತ್ತಮ ಪ್ರದರ್ಶನ ಕಂಡುಬಂದಿದೆ. ಬಳ್ಳಾರಿ, ಚಿತ್ರದುರ್ಗ ಮತ್ತು ಕಲಬುರಗಿ ಜಿಲ್ಲೆಗಳು ಹಿಂದುಳಿದಿವೆ ಎಂದು ಹೇಳಿದೆ.
ಈ ಸುದ್ದಿ ಓದಿದ್ದೀರಾ?: ಕನಿಷ್ಠ ಜನರ ಈ ಪ್ರಶ್ನೆಗಳಿಗಾದರೂ ಉತ್ತರ ನೀಡುವರೇ ಪ್ರಧಾನಿ ಮೋದಿ?
ಅಕ್ಷರ ಫೌಂಡೇಶನ್‌ನ ಅಧ್ಯಕ್ಷ ಅಶೋಕ್ ಕಾಮತ್ ಮಾತನಾಡಿ, “ಗಣಿತವು ಪ್ರತಿಯೊಬ್ಬರಿಗೂ ಪ್ರಮುಖ ವಿಶ್ಲೇಷಣಾತ್ಮಕ ಸಾಧನವಾಗಿದೆ. ಗಣಿತ ಗೊತ್ತಿಲ್ಲದ ಮಕ್ಕಳು ಬಹಳಷ್ಟು ಅವಕಾಶಗಳನ್ನು ಕಳೆದುಕೊಳ್ಳುತ್ತಾರೆ. ಕಲಿಕೆಯನ್ನು ಸುಲಭಗೊಳಿಸಬಲ್ಲ ಶಾಲಾ ವಾತಾವರಣವನ್ನು ನಿರ್ಮಿಸುವ ಕಡೆಗೆ ನಾವು ಹೆಚ್ಚಿನ ಗಮನ ಕೊಡಬೇಕು. ಫಲಿತಾಂಶದ ಮೇಲೆ ಕೇಂದ್ರೀಕರಿಸಬಾರದು” ಎಂದು ಹೇಳಿದ್ದಾರೆ.
“ಗಣಿತವನ್ನು ಕಲಿಸುವ ಶಿಕ್ಷಕರಿಗೂ ಬಹಳಷ್ಟು ಜನರು ಭಯಪಡುತ್ತಾರೆ. ಪ್ರಸ್ತುತ, ಮಕ್ಕಳಿಗೆ ಪಠ್ಯಪುಸ್ತಕ ಜ್ಞಾನವನ್ನು ವರ್ಗಾಯಿಸಲು ಉತ್ತಮವಾದ ಯಾವುದೇ ಪರಿಣಾಮಕಾರಿ ವಿಧಾನಗಳಿಲ್ಲ. ಗಣಿತವನ್ನು ಉತ್ತಮವಾಗಿ ಕಲಿಸಲು ಪ್ರಾಥಮಿಕವಾಗಿ ನಮಗೆ ಮಣಿಗಳು, ಅಬ್ಯಾಕಸ್, ಬೇಸ್ 10 ಬ್ಲಾಕ್‌ಗಳಂತಹ ಪರಿಣಾಮಕಾರಿ ಸಾಧನಗಳು ಬೇಕಾಗುತ್ತವೆ; ಜೊತೆಗೆ ಮೌಲ್ಯದ ಪಟ್ಟಿಗಳು, ಭಿನ್ನರಾಶಿ ಪಟ್ಟಿಗಳು ಕಲಿಕೆಯನ್ನು ಸುಲಭಗೊಳಿಸುತ್ತವೆ. ಮಾತ್ರವಲ್ಲದೆ, ಮೋಜಿನಿಂದ ಕಲಿಯಲು ನೆರವಾಗುತ್ತವೆ” ಎಂದು ಅವರು ಹೇಳಿದರು.