ಕೇಂದ್ರ ಮತ್ತು ರಾಜ್ಯ ಸರ್ಕಾರದ ಜನ ವಿರೋಧಿ ನೀತಿ ಖಂಡಿಸಿ ಎಸ್‌ಯುಸಿಐ ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆ ನಡೆಸಿದರು.
ಬಳ್ಳಾರಿ ನಗರದ ಗಾಂಧಿ ಭವನದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ನಡೆದ ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳು, ರೈತ,ಕಾರ್ಮಿಕರ ಜನವಿರೋಧಿ ನೀತಿಗಳ ವಿರುದ್ಧ ಘೋಷಣೆ ಕೂಗಿದರು.
ಎಸ್‌ಯುಸಿಐ ಜಿಲ್ಲಾ ಕಾರ್ಯದರ್ಶಿ ರಾಧಾಕೃಷ್ಣ ಉಪಾಧ್ಯಾ ಮಾತನಾಡಿ “ಶಿಕ್ಷಣ, ಆರೋಗ್ಯ ಕ್ಷೇತ್ರಗಳು ಖಾಸಗೀಕರಣಗೊಂಡು ಜನಗಳ ಕೈಗೆಟುಕದಂತಾಗಿವೆ. ಉದ್ಯೋಗವಿಲ್ಲದೆ ಯುವಜನತೆ ಪರದಾಡುತ್ತಿದ್ದಾರೆ. ವರ್ಷಕ್ಕೆ 2 ಕೋಟಿ ಉದ್ಯೋಗದ ಭರವಸೆ ನೀಡಿದ ಕೇಂದ್ರ ಮೋದಿ ಸರ್ಕಾರ ಈಗ ಅದರ ಬಗ್ಗೆ ಮಾತೇ ಎತ್ತುತ್ತಿಲ್ಲ. ಇನ್ನು ಕಾಯಂ ಉದ್ಯೋಗದ ಮಾತು ಕನಸಾಗಿಯೇ ಉಳಿದಿದೆ. ಏರುತ್ತಿರುವ ಅಗತ್ಯ ವಸ್ತುಗಳ ಬೆಲೆಗಳು ಇಳಿಯುವ ಸೂಚನೆಯೇ ಕಾಣುತ್ತಿಲ್ಲ. ಇದರಿಂದಾಗಿ ಜನತೆಯ ಬದುಕು ಬೀದಿಗೆ ಬರುವಂತಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎಸ್‌ಯುಸಿಐ (ಸಿ) ಜಿಲ್ಲಾ ಸಮಿತಿ ಸದಸ್ಯ ಎಂ.ಎನ್.ಮಂಜುಳಾ ಮಾತನಾಡಿ, “ಬೇಟಿ ಬಚಾವೋ ಬೇಟಿ ಪಡಾವೋ, ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎನ್ನುವ ಕೇಂದ್ರ ಸರ್ಕಾರದ ಯೋಜನೆಗಳು ಬರೀ ಘೋಷಣೆಗಳಾಗಿವೆ. ಪ್ರತಿನಿತ್ಯ ಹೆಚ್ಚುತ್ತಿರುವ ಮಹಿಳೆಯರ, ದಲಿತರ, ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ ತಡೆಯಲು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ.ಬದಲಾಗಿ ಜಾತಿ-ಧರ್ಮದಂತಹ ಭಾವನಾತ್ಮಕ ವಿಷಯಗಳನ್ನು ಮುನ್ನಲೆಗೆ ತಂದು ಜನರ ನೈಜ ಸಮಸ್ಯೆಗಳನ್ನು ಮರೆಮಾಚುತ್ತಿದೆ” ಎಂದು ಕಿಡಿಕಾರಿದರು.
“ರಾಜ್ಯದಲ್ಲಿ ಬರ ಆವರಿಸಿದೆ. ಕುಡಿಯಲು ನೀರಿಲ್ಲದೆ ಜನಗಳು ಪರದಾಡುವಂತಾಗಿದೆ. ಬೆಳೆದ ಬೆಳೆ ಕೈಗೆ ಬಾರದೆ ರೈತರು ಕಂಗಾಲಾಗಿದ್ದಾರೆ. ರೈತರ ಬೆಳೆಗಳಿಗೆ ಬೆಂಬಲ ಬೆಲೆ ವಿಷಯದಲ್ಲಿ ಕೇಂದ್ರ ಸರ್ಕಾರ ನೀಡಿದ ಭರವಸೆ ಗಾಳಿಗೆ ತೂರಿದೆ. ನರೇಗಾ ಯೋಜನೆ ಕೂಡ ಸರಿಯಾಗಿ ಅನುಷ್ಠಾನಗೊಳ್ಳದ ಪರಿಣಾಮ ಕೂಲಿ ಕಾರ್ಮಿಕರ ಬದುಕು ಆಧೋಗತಿಗೆ ತಲುಪಿದೆ. ಕಾರ್ಮಿಕ ಸಂಹಿತೆಗಳನ್ನು ಜಾರಿಗೆ ತರುವುದರ ಮೂಲಕ ಕೇಂದ್ರ ಸರ್ಕಾರ ಕಾರ್ಮಿಕರ ಹಕ್ಕು ಕಸಿದುಕೊಳ್ಳುತ್ತಿದೆ” ಎಂದು ಪ್ರತಿಭಟನಾಕಾರರು ದೂರಿದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಒಂದೇ ಕುಟುಂಬದ ನಾಲ್ವರ ಸಜೀವ ದಹನ ಪ್ರಕರಣ; ಅಪರಾಧಿಗೆ ಜೀವಾವಧಿ ಶಿಕ್ಷೆ
ಪ್ರತಿಭಟನೆಯಲ್ಲಿ ಜಿಲ್ಲಾ ಸಮಿತಿ ಸದಸ್ಯ ಡಾ.ಪ್ರಮೋದ, ಜಿಲ್ಲಾ ಸಮಿತಿ ಸದಸ್ಯರಾದ ನಾಗಲಕ್ಷ್ಮಿ, ಸೋಮಶೇಖರ್ ಗೌಡ, ಶಾಂತ, ಗೋವಿಂದ ಪದಾಧಿಕಾರಿಗಳಾದ ನಾಗರತ್ನ, ಪಂಪಾಪತಿ ಕೋಳೂರು, ಹನುಮಪ್ಪ, ಈಶ್ವರಿ, ಜಗದೀಶ್ , ರಾಜ, ವಿಜಯಲಕ್ಷ್ಮಿ, ರವಿಕಿರಣ್, ನರಸಣ್ಣ ಸೇರಿದಂತೆ ಇತರರಿದ್ದರು.