ಮೇ ತಿಂಗಳ ಆರಂಭದಲ್ಲಿ ಒಂದು ವಾರ ಪ್ರತಿ ಸಂಜೆ ನಿರಂತರವಾಗಿ ಮಳೆ ಕಂಡ ಬೆಂಗಳೂರಿಗೆ ಈಗ ಧಗೆಯ ಬೇಗೆ ಕಾಡಲಾರಂಭಿಸಿದೆ. ನಗರದಲ್ಲಿ 33.1 ಡಿಗ್ರಿ ಸೆಲ್ಸಿಯಸ್ ತಾಪಮಾನವಿರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ. ನಾಶವಾಗುತ್ತಿರುವ ಸಸ್ಯ ಸಂಕುಲ, ಎಗ್ಗಿಲ್ಲದೆ ಓಡುತ್ತಿರುವ ನಗರೀಕರಣದ ಪರಿಣಾಮದಿಂದ ನಗರದಲ್ಲಿ ಶಾಖ ಹೆಚ್ಚುತ್ತಿದೆ ಎಂದು ತಜ್ಞರು ಹೇಳಿದ್ದಾರೆ.
“ವರ್ಷದಿಂದ ವರ್ಷಕ್ಕೆ ಮರಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಮರಗಳನ್ನು ಕಡಿಯುವುದರಿಂದ ಸಸ್ಯ ವ್ಯವಸ್ಥೆ ಹಿಡಿದಿಡುತ್ತಿದ್ದ ಶಾಖ ನೇರವಾಗಿ ನಮ್ಮನ್ನು ತಲುಪುತ್ತಿದೆ. ಮರಗಳಿಗಿಂತ ಎತ್ತರಕ್ಕೆ ಕಟ್ಟಡಗಳೇ ಬೆಳೆಯುತ್ತಿವೆ. ಭೂಮಿ ಮತ್ತು ಕಟ್ಟಡಗಳು ಬಿಸಿಯಾಗುತ್ತಿವೆ. ಮನೆಗಳ ಗೋಡೆಗಳು ಹೊರಗಿನ ಗಾಳಿಗಿಂತ ಹೆಚ್ಚು ಬಿಸಿಯಾಗುತ್ತಿವೆ ಮತ್ತು ಅವುಗಳ ಶಾಖವನ್ನು ಮರು-ಹೊರಸೂಸುತ್ತವೆ ಎಂದು ಗಾಂಧಿ ಕೃಷಿ ವಿಜ್ಞಾನ ಕೇಂದ್ರದ ಕೃಷಿ ಹವಾಮಾನ ವಿಭಾಗದ ಮುಖ್ಯಸ್ಥ ಎಂ.ಎನ್ ತಿಮ್ಮೇಗೌಡ ಹೇಳಿದ್ದಾರೆ.
“ದಶಕಗಳ ಹಿಂದೆ ನಾವೆಲ್ಲರೂ 8 ಕಿ.ಮೀ ನಡೆದುಕೊಂಡು ಶಾಲೆಗೆ ಹೋಗುತ್ತಿದ್ದೆವು. ಎಂದಿಗೂ ಬೆವರು ಸುರಿಯುತ್ತಿರಲಿಲ್ಲ. ಆದರೆ, ಈಗ 500 ಮೀ. ನಡೆಯುವುದೇ ಕಷ್ಟವಾಗಿದೆ. ಕೆಲವು ವರ್ಷಗಳ ಹಿಂದೆಯೂ ತಾಪಮಾನ 35 ಡಿಗ್ರಿ ಸೆಲ್ಸಿಯಸ್ ಮುಟ್ಟಿತ್ತು. ಆಗಲೂ ಇಷ್ಟು ಶಾಖವಿರಲಿಲ್ಲ” ಎಂದು ಅವರು ವಿವರಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ?: ಬೆಂಗಳೂರು ಅಂದು-ಇಂದು – 1 | ಬದಲಾಗುತ್ತಿರುವ ಬೆಂದಕಾಳೂರು ಹಿಂದೆ ಹೇಗಿತ್ತು; ಇಲ್ಲಿ ನೋಡಿ!
“ಬೃಹತ್ ಕಾಂಕ್ರೀಟೀಕರಣದಿಂದಾಗಿ ನಗರಗಳು ಶಾಖ ದ್ವೀಪಗಳಾಗುತ್ತಿವೆ. ಇದು ಜಾಗತಿಕ ತಾಪಮಾನ ಏರಿಕೆಯ ಪರಿಣಾಮಗಳಿಂದ ಮತ್ತಷ್ಟು ಶಾಖ ಹೆಚ್ಚುತ್ತಿದೆ. ತಾಪಮಾನವು 32 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಾದರೆ, ಮನುಷ್ಯರು ಅಸ್ವಸ್ಥತೆಯನ್ನು ಅನುಭವಿಸಬೇಕಾಗುತ್ತದೆ” ಎಂದು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಹ್ಯೂಮನ್ ಸೆಟ್ಲ್‌ಮೆಂಟ್‌ನ ಪರಿಸರ ಮತ್ತು ಸುಸ್ಥಿರತೆಯ ಡೀನ್ ಜಗದೀಶ್ ಕೃಷ್ಣಸ್ವಾಮಿ ಹೇಳಿದ್ದಾರೆ.