ಭಾಲ್ಕಿ ತಾಲೂಕಿನ ಗ್ರಾಮವೊಂದರ ಸರ್ಕಾರಿ ಶಾಲೆಯ ಶಿಕ್ಷಕರೊಬ್ಬರು ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ವಿವಾಹವಾಗಿದ್ದಾರೆ. ಆ ಶಿಕ್ಷಕನ ವಿರುದ್ಧ ಬಾಲ್ಯ ವಿವಾಹ ತಡೆ ಕಾಯ್ದೆಯಡಿ ಮೇಹಕರ್ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಶಿಕ್ಷಕನನ್ನು ಅಮಾನತು ಮಾಡಿ ಡಿಡಿಪಿಐ ಸಲೀಂ ಪಾಶಾ ಸೋಮವಾರ ಆದೇಶಿಸಿದ್ದಾರೆ.
ಶಿಕ್ಷಕನ ಕರ್ತವ್ಯಲೋಪ, ದುರ್ನಡತೆಯಿಂದ ಶಿಕ್ಷಣ ಇಲಾಖೆ ಮುಜುಗರಕ್ಕೆ ಒಳಗಾಗಿದೆ. ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಹಾಗೂ ಮೇಲ್ಮನವಿ) ನಿಯಮಾವಳಿ 1957ರ ನಿಯಮಗಳನ್ವಯ ತಕ್ಷಣದಿಂದ ಜಾರಿಗೆ ಬರುವಂತೆ ಶಿಕ್ಷಕನಿಗೆ ಅಮಾನತು ಮಾಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಏನಿದು ಪ್ರಕರಣ:
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ (ಜಿಪಿಟಿ) ಶಿಕ್ಷಕ ಸೇವೆ ಸಲ್ಲಿಸುವ ಅದೇ ಊರಿನ ಅಪ್ರಾಪ್ತೆ ಬಾಲಕಿಯೊಂದಿಗೆ ಮದುವೆಯಾಗಿದ್ದಾರೆ. ಅವರ ವಿರುದ್ಧ ಭಾಲ್ಕಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಬಾಲ್ಯ ವಿವಾಹ ಕಾಯ್ದೆಯಡಿ ದೂರು ದಾಖಲಿಸಿದ್ದರು.