ʼಈ ದಿನʼ ವಿಶೇಷ ಸಂದರ್ಶನ ಭಾಗ-1 | ‘ಮಣಿಪುರವನ್ನು ಒಡೆದರೆ, ನಾವು ಭಾರತವನ್ನೇ ಒಡೆಯುತ್ತೇವೆ’- ತೌನೋಜಮ್ ಬೃಂದಾ

Date:

 ಜನಾಂಗೀಯ ಹಿಂಸಾಚಾರ ಪೀಡಿತ ಮಣಿಪುರದಿಂದ ಈ ದಿನ.ಕಾಮ್‌ ಪ್ರತ್ಯಕ್ಷ ವರದಿ ಸರಣಿಯಲ್ಲಿ
‘ಫೈರ್ ಬ್ರ್ಯಾಂಡ್’ ಮಾಜಿ ಪೊಲೀಸ್‌ ಅಧಿಕಾರಿ ತೌನೋಜಮ್ ಬೃಂದಾ ಅವರ ವಿಶೇಷ ಸಂದರ್ಶನ.

ತೌನೋಜಮ್‌ ಬೃಂದಾ ಕೆಚ್ಚೆದೆಯ ಪೊಲೀಸ್ ಅಧಿಕಾರಿಯೆಂದು ಹೆಸರಾದವರು. ‘ಖದ್ದು ಮಣಿಪುರದ ಮುಖ್ಯಮಂತ್ರಿ ಬಿರೇನ್ ಸಿಂಗ್ ಡ್ರಗ್ ಮಾಫಿಯಾದ ಭಾಗʼ ಎಂದು ಅಳುಕದೆ ಆರೋಪಿಸಿದವರು. ಇತ್ತೀಚೆಗೆ ಖಾಕಿ ತ್ಯಜಿಸಿ ಖಾದಿ ಧರಿಸಿದ್ದಾರೆ. ರಾಜಕೀಯ ಪ್ರವೇಶಿಸಿದ್ದಾರೆ. ಜನಾಂಗೀಯ ಘರ್ಷಣೆಗಳ ನೆತ್ತರಿನಿಂದ ನೆಂದಿರುವ ಈ ನೆಲದ ಕೆಂಪು ತೇವ ಆರುತ್ತಿಲ್ಲ. ಡ್ರಗ್ ಮಾಫಿಯಾ ಮತ್ತು ರಾಜಕಾರಣದ ನಡುವೆ ಅಪವಿತ್ರ ಮೈತ್ರಿ ಈಗಲೂ ದುಷ್ಟ ಬಲಿಷ್ಠ. ಹೀಗಾಗಿ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಬೇಕೆಂಬುದು ಬೃಂದಾ ಆಗ್ರಹ. ದ್ವೇಷ, ರಕ್ತಪಾತದಿಂದ ವಿಶ್ವದ ಗಮನ ಸೆಳೆದಿರುವ ಈಶಾನ್ಯದ ಈ ಪುಟ್ಟ ರಾಜ್ಯದ ತಳಮಳ ತಳ್ಳಂಕಗಳ ಕುರಿತು ತಮ್ಮ ಅಭಿಪ್ರಾಯವನ್ನು ‘ಈ ದಿನ.ಕಾಮ್‌’ದೊಂದಿಗೆ ಹಂಚಿಕೊಂಡಿದ್ದಾರೆ.

ಪ್ರಶ್ನೆ:ಮಣಿಪುರದಲ್ಲಿ ನಡೆಯುತ್ತಿರುವುದಾದರೂ ಏನು? ಈ ಹಿಂಸೆ- ದ್ವೇಷ ಪೂರ್ವ ನಿಯೋಜಿತವೇ? ಅಫೀಮು ಜಾಲಗಳೇ ಈ ಬಿಕ್ಕಟ್ಟಿನ ಮೂಲವೆಂದು ನೀವು ಹೇಳಿದ್ದೀರಿ. ಡ್ರಗ್ಸ್ ಪರ ಮತ್ತು ಡ್ರಗ್ಸ್ ವಿರೋಧಿ ಗುಂಪುಗಳು ಈ ಹಿಂಸೆಯ ಸೂತ್ರಧಾರಿಗಳೇ?
ಮಣಿಪುರ ಹಿಂಸೆಯ ಬೇರುಗಳು ದಶಕಗಳಷ್ಟು ಹಳೆಯವು. 70 ವರ್ಷಗಳಿಂದ ಸರ್ಕಾರದ ದುಷ್ಟ ನೀತಿಗಳು ಜನತೆಯನ್ನು ಜನಾಂಗೀಯವಾಗಿ ಒಡೆಯುತ್ತಲೇ ಬಂದಿವೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ಮ್ಯಾನ್ಮಾರ್ ಮೂಲದ ಉಗ್ರಗಾಮಿಗಳ ಬೆನ್ನು ತಟ್ಟಿ ಬಳಸಿಕೊಳ್ಳುತ್ತಿವೆ. ಮೂಲಭೂತ ಹಕ್ಕುಗಳನ್ನು ಕಿತ್ತುಕೊಳ್ಳುವ ನೀತಿಗಳು ಜಾರಿಯಾಗಿವೆ. ದೆಹಲಿಯಿಂದ ಬರುವ ಅನುದಾನ ಮತ್ತು ಹಣಕಾಸನ್ನು ಲೂಟಿ ಮಾಡಿವೆ. ಈ ಅನುದಾನಗಳು ಜನರನ್ನು ತಲುಪುವುದೇ ಇಲ್ಲ. ಜನತೆಯ ಬಡತನ ನೀಗಿಲ್ಲ ಮಾತ್ರವಲ್ಲ, ಮೂಲಭೂತ ಅಗತ್ಯಗಳಿಂದಲೂ ಅವರನ್ನು ವಂಚಿಸಲಾಗಿದೆ. ಸಾಲದೆಂಬಂತೆ, 1980ರ ದಶಕದ ಅಂತ್ಯದ ಹೊತ್ತಿಗೆ ಮಾದಕದ್ರವ್ಯ ದಂಧೆ ಮಣಿಪುರಕ್ಕೆ ಲಗ್ಗೆಯಿಟ್ಟಿತು. ಕುಕಿ ತೀವ್ರವಾದಿಗಳ ಹೆಚ್ಚಳದೊಂದಿಗೆ, ಡ್ರಗ್ಸ್ ನ ಆಮದು ಹಾಗೂ ರಾಜ್ಯದಲ್ಲೇ ಬೆಳೆಯಲಾಗುತ್ತಿದ್ದ ಅಫೀಮು– ಇವೆರಡರ ಹೆಚ್ಚಳದಿಂದಾಗಿ ಡ್ರಗ್ಸ್ ಜಾಲ ದೊಡ್ಡದಾಗಿ ಬೆಳೆಯಿತು. ಆದಕಾರಣ, ಉಗ್ರಗಾಮಿ ಗುಂಪುಗಳು ಮತ್ತು ಡ್ರಗ್ಸ್ ನಡುವಿನ ಸಂಬಂಧವನ್ನೂ; ಮ್ಯಾನ್ಮಾರ್‌ನಿಂದ ಮಣಿಪುರ ಮತ್ತು ಈಶಾನ್ಯ ರಾಜ್ಯಗಳಿಗೆ ಡ್ರಗ್ಸ್‌ನ ಒಳಹರಿವಿಗೆ ಅವಕಾಶ ನೀಡಿದಂತಹ ಪ್ರಭುತ್ವದ ಪಾತ್ರವನ್ನೂಇಲ್ಲಿ ನಾವು ಕಾಣಬಹುದಾಗಿದೆ. ಕುಕಿ ಉಗ್ರಗಾಮಿಗಳು ನಂಬರ್ ಗೇಮ್ ಆಡುತ್ತಿದ್ದಾರೆ. ಅವರ ಜನಸಂಖ್ಯೆ ಸ್ಥಿರಗೊಂಡಾಗ, ಮಾದಕ ದ್ರವ್ಯ ದಂಧೆಯಿಂದ ಹರಿದು ಬಂದ ಹಣದಿಂದ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿದರು. ನಂತರದಲ್ಲಿ ಈ ಕೋಮುವಾದಿ ಸಂಕಥನಗಳನ್ನು ಹರಿಬಿಟ್ಟರು. ಕುಕಿ ಸಮುದಾಯದ ಎಲ್ಲಾ ಸಂಕಟ-ದುಃಖಗಳಿಗೆ ಮೈತೇಯಿಗಳನ್ನು ಸಾಮೂಹಿಕವಾಗಿ ದೂಷಿಸಲಾಗುತ್ತಿದೆ. ಈ ದೂಷಣೆಯೇ ಇಡೀ ಪ್ರಕರಣಕ್ಕೆ ಕಾರಣ. ಇದು ಡ್ರಗ್ ಮಾಫಿಯಾ ಪ್ರಚೋದಿತ ಸರ್ಕಾರದ ಕೆಟ್ಟ ನೀತಿಗಳು ಹಾಗೂ ನಿಷ್ಕ್ರಿಯತೆಯ ಪರಿಣಾಮ.

ಪ್ರಶ್ನೆ: ಹಾಗಾದರೆ ಇದು ಜನಾಂಗೀಯ ಕಲಹ ಅಲ್ಲವೇ?
ಇಲ್ಲ, ಇದು ಜನಾಂಗೀಯ ಕಲಹ ಅಲ್ಲ. ಮಣಿಪುರದ ಹಿತಾಸಕ್ತಿಗಳನ್ನು ರಕ್ಷಿಸುವ ಸಂಪೂರ್ಣ ಸಾಮೂಹಿಕ ಜವಾಬ್ದಾರಿಯನ್ನು ಮೈತೇಯಿಗಳ ಮೇಲೆ ಹೊರಿಸಲಾಗಿದೆ. ಜನರಲ್ಲಿ ಎರಡು ಗುಂಪುಗಳಿವೆ- ರಾಜ್ಯದ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುವಂತೆ ಮಾಡಲು ಬಯಸುವವರು ಮತ್ತು ರಾಜ್ಯವನ್ನು ಉಳಿಸಲು ಬಯಸುವವರು. ರಾಜ್ಯವನ್ನು ಯಾರು ಪ್ರೀತಿಸ್ತಾರೆ, ಯಾರು ಪ್ರೀತಿಸೋದಿಲ್ಲ ಅಂತ ಗುರುತಿಸುವುದು ಯಾವುದೇ ಸಂವೇದನಾಶೀಲ ವ್ಯಕ್ತಿಗೆ ತುಂಬಾ ಸುಲಭ.

ಪ್ರಶ್ನೆ: ರಾಜಕಾರಣಿಗಳಿಗೂ ಡ್ರಗ್ ಮಾಫಿಯಾಗೂ ಸಂಬಂಧವಿದೆ ಅಂತ ನೀವು ಹೇಳಿದ್ದೀರಿ. ಮಾದಕ ದ್ರವ್ಯ ದಂಧೆಕೋರರ ಭಯೋತ್ಪಾದನೆಯ ಸ್ಥಿತಿಗತಿ ವಿವರಿಸಬಹುದೇ? ಇವುಗಳಲ್ಲಿ ರಾಜಕಾರಣಿಗಳ ಪಾತ್ರ ಎಷ್ಟು?
ಡ್ರಗ್ಸ್ ಮಾಫಿಯಾದಲ್ಲಿ ರಾಜಕಾರಣಿಗಳು ಭಾಗಿಯಾಗಿರುವ ಹಲವು ಪ್ರಕರಣಗಳಿವೆ. ಅನೇಕರು ಈ ಬಗ್ಗೆ ವಿಚಾರಣೆಗಳನ್ನು ಎದುರಿಸುತ್ತಿದ್ದಾರೆ ಕೂಡ. ‘ಸಸ್ಪೆನ್ಶನ್ ಆಫ್ ಆಪರೇಷನ್’ (SOO) ಅಡಿಯಲ್ಲಿ ಬರುವ ಕುಕಿ ಉಗ್ರಗಾಮಿ ಗುಂಪುಗಳು ಮತ್ತು SOO ಅಡಿಯಲ್ಲಿ ಇಲ್ಲದ (ಪೋಷಕ ಗುಂಪುಗಳ ಬೇರೆ ಬೇರೆ ವಿಭಾಗಗಳು) ಮಾದಕ ವಸ್ತುಗಳ ಜಾಲದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಉಗ್ರಗಾಮಿ ಗುಂಪುಗಳು ಭಾರತ ಸರ್ಕಾರ ಹಾಗೂ ಮಣಿಪುರ ಸರ್ಕಾರದೊಂದಿಗೆ ಕದನ ವಿರಾಮ ಒಪ್ಪಂದಗಳಿಗೆ ಒಳಪಟ್ಟಿವೆ. ಈ ಗುಂಪುಗಳನ್ನು ಮಣಿಪುರ ಸರ್ಕಾರ ಬಂಧಿಸಿದೆ ಎಂದು ಹೇಳಲಾಗುತ್ತೆ. ಆದರೆ, ಅದೇ ಜನರು ಹೆದ್ದಾರಿಗಳಲ್ಲಿ ಮುಕ್ತವಾಗಿ ‘ತೆರಿಗೆ’ ಸಂಗ್ರಹಿಸುತ್ತಿರುವುದು, ಮಾನವ ಕಳ್ಳಸಾಗಣೆಯಲ್ಲಿ ತೊಡಗಿಸಿಕೊಂಡಿರುವುದು, ಗಸಗಸೆ (ಅಫೀಮು) ಬೆಳೆಯ ಕಾವಲಿಗೆ ನಿಲ್ಲುವುದು, ‘ಡ್ರಗ್ ಕಾರ್ಟೆಲ್’ಗಳಿಂದ ತೆರಿಗೆ ವಸೂಲಿ ಮಾಡುತ್ತಿರುವುದನ್ನು ನೋಡಿದರೆ – ಮಾದಕ ದ್ರವ್ಯದ ಜಾಲ ಎಲ್ಲಡೆ ಹಬ್ಬಿರುವುದರಲ್ಲಿ ಪ್ರಭುತ್ವದ ಪಾತ್ರವನ್ನು ನೀವು ಕಾಣಬಹುದು. ಏಕೆಂದರೆ, ಸರ್ಕಾರ ಬಂಧಿಸಿರುವ ಯಾರೇ ಆದರೂ ಸರ್ಕಾರದ ಅರಿವಿಲ್ಲದೆ ಸಶಸ್ತ್ರವಾಗಿ ರಾಜ್ಯದಲ್ಲಿ ಮುಕ್ತವಾಗಿ ತಿರುಗಾಡಲು ಸಾಧ್ಯವೇ ಇಲ್ಲ.

ಪ್ರಶ್ನೆ: ಮುಖ್ಯಮಂತ್ರಿ ಬಿರೇನ್ ಸಿಂಗ್ ಈ ಡ್ರಗ್ ಕಾರ್ಟೆಲ್‌ನಲ್ಲಿ ಸಂಪೂರ್ಣವಾಗಿ ಭಾಗಿಯಾಗಿದ್ದಾರೆ ಎಂದು ನೀವು ನೇರವಾಗಿ ಆರೋಪಿಸಿದ್ದೀರಿ. ಅವರ ಪತ್ನಿಯ ಹೆಸರೂ ಕೇಳಿಬರುತ್ತಿದೆ. ಹಾಗಾದರೆ ಅವರಿಗೂ ಈ ಮಾದಕ ವಸ್ತುಗಳ ಜಾಲಕ್ಕೂ ಏನು ಸಂಬಂಧ ?
ಮಣಿಪುರ ಇಂದು ಅತಿದೊಡ್ಡ ಬಿಕ್ಕಟ್ಟಿನಲ್ಲಿದೆ. ನಾವು ಮಣಿಪುರವನ್ನು ಉಳಿಸಿಕೊಳ್ಳುತ್ತೇವೋ ಇಲ್ಲವೋ ಎಂಬುದು ನಾವು ಇಂದು ತೆಗೆದುಕೊಳ್ಳುವ ನಿರ್ಧಾರಗಳನ್ನು ಅವಲಂಬಿಸಿರುತ್ತದೆ. ಡ್ರಗ್ ಮಾಫಿಯಾ ಮತ್ತು ಮಣಿಪುರದ ಸಂಪೂರ್ಣ ಹಿತಾಸಕ್ತಿಯನ್ನು ಒಳಗೊಂಡಿರುವ ಈ ಬಿಕ್ಕಟ್ಟಿನ ನಡುವೆ ರಾಜ್ಯದ ಅಭಿವೃದ್ಧಿಯ ಬಗ್ಗೆ ನೈಜ ಆಸಕ್ತಿಯುಳ್ಳ ಜನರನ್ನು ನಾವು ಗುರುತಿಸಬೇಕಾಗಿದೆ. ಈ ಹುಚ್ಚಾಟದ ಸಮಸ್ಯೆಯ ವಿರುದ್ಧ ಸಮರ್ಥ ಮತ್ತು ಪ್ರಾಮಾಣಿಕ ನಾಯಕತ್ವವಿಲ್ಲದೆ ಹೋರಾಡಲು ಸಾಧ್ಯವಿಲ್ಲ. ಚಂಡೇಲ್ ಜಿಲ್ಲೆ ರಾಜ್ಯದಲ್ಲಿಯೇ ಅತಿ ಹೆಚ್ಚು ಅಫೀಮು ಬೆಳೆಯುವ ಪ್ರದೇಶಗಳಲ್ಲಿ ಒಂದು. ಇದು ಮುಖ್ಯಮಂತ್ರಿ ಬಿರೇನ್ ಸಿಂಗರ ಎರಡನೇ ಪತ್ನಿಯ (ಒಲೈಸ್) ವಿಧಾನಸಭಾ ಕ್ಷೇತ್ರ. ಅಲ್ಲಿಂದ ಚುನಾಯಿತರಾಗಿದ್ದಾರೆ. ಮಾದಕ ವಸ್ತುಗಳ ಬಗ್ಗೆ ಪ್ರಾಮಾಣಿಕವಾದ ವಿರೋಧವಿದ್ದಿದ್ದರೆ, ಚಂಡೇಲ್ ಈ ಹೊತ್ತಿಗೆ ಅಫೀಮುಮುಕ್ತವಾಗಿ ಸ್ವಚ್ಛವಾಗಿರಬೇಕಿತ್ತು. ಚಂಡೇಲ್, ಚೂರಾಚಾಂದಪುರ ಮತ್ತು ಸೇನಾಪತಿ ಜಿಲ್ಲೆಗಳು ಅಫೀಮು ಬೆಳೆಯಿಂದ ಅತಿಹೆಚ್ಚು ಹಾನಿಗೊಳಗಾಗಿವೆ. ಸಿಂಗ್ ಅವರ ಪತ್ನಿಯ ಕ್ಷೇತ್ರದಲ್ಲಿ ಕುಕಿಗಳ ಪ್ರಾಬಲ್ಯವಿದೆ. ಅವರು ಆಯ್ಕೆಯಾದದ್ದು ಕುಕಿಗಳ ಮತಗಳಿಂದಲೇ. ಹೆಂಡತಿಯ ಹಿತದ ವಿರುದ್ಧ ಗಂಡ ಕ್ರಮ ತೆಗೆದುಕೊಳ್ಳಲ್ಲ ಅಂತ ಸ್ವಾಭಾವಿಕವಾಗಿಯೇ ಅರ್ಥ ಮಾಡಿಕೊಳ್ಳಬಹುದು.

ಪ್ರಶ್ನೆ: ಕೇಂದ್ರ ಸರ್ಕಾರಕ್ಕೆ ಈ ಎಲ್ಲ ಮಾಹಿತಿಯಿದೆ. ಆದರೂ ಕಣ್ಣುಮುಚ್ಚಿ ಕುಳಿತಿದೆ ಅಂತ ಹೇಳಿದ್ದೀರಿ…
ಡ್ರಗ್ ದಂಧೆಯಲ್ಲಿ ತೊಡಗಿರುವವರು ಅವರ ಜನರೇ… ಇದು ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದೆ. ರಾಜ್ಯದಲ್ಲಿ ಏನು ನಡೆಯುತ್ತಿದೆ ಅನ್ನೋ ಬಗ್ಗೆ ಪದೇ ಪದೇ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದ್ದೇವೆ. ಭವಿಷ್ಯದಲ್ಲಿ ಏನಾಗಬಹುದು ಅಂತ ನಾವು ಊಹಿಸಿದ್ದೆವು. ಇದು ಅಧಿಕಾರಿಗಳಿಗೂ ಚೆನ್ನಾಗಿ ಗೊತ್ತು. ಅವರ ಆಸಕ್ತಿಯೇನಿದ್ದರೂ ಅಧಿಕಾರ ಉಳಿಸಿಕೊಳ್ಳುವ ಬಗ್ಗೆ ಮಾತ್ರ. ಆದ್ದರಿಂದ ಅವರು ತಲೆ ಕೆಡಿಸಿಕೊಂಡಿಲ್ಲ.

ಪ್ರಶ್ನೆ: ಡ್ರಗ್ಸ್ ದಂಧೆಯಲ್ಲಿ ಗೃಹ ಸಚಿವ ಅಮಿತ್ ಶಾ ಅವರ ಪುತ್ರ ಜಯ್ ಶಾ ಹೆಸರು ಕೂಡ ಕೇಳಿ ಬಂದಿದೆಯಲ್ಲಾ. ಅಲ್ಲದೇ, ಅವರು ಮಣಿಪುರಕ್ಕೆ ಆಗಾಗ್ಗೆ ಭೇಟಿ ನೀಡುತ್ತಾರೆ ಎಂಬ ಗಂಭೀರ ಆರೋಪಗಳೂ ಇವೆಯಲ್ಲಾ…
ಮಣಿಪುರದ ಭ್ರಷ್ಟ ಸರ್ಕಾರವನ್ನು ಜಯ್ ಶಾ ರಕ್ಷಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ ಈ ಆರೋಪಗಳ ಸತ್ಯಾಸತ್ಯತೆ ಬಗ್ಗೆ ನನಗೆ ಗೊತ್ತಿಲ್ಲ.

ಪ್ರಶ್ನೆ: ನಿಮ್ಮ ಪ್ರಕಾರ ಕೇಂದ್ರ ಸರ್ಕಾರದ ಅಂತಿಮ ಗುರಿಯೇನು?
ಮಣಿಪುರವನ್ನು ಒಡೆಯುವ ಕಾರ್ಯಸೂಚಿಯೊಂದಿಗೆ ಹೊರಗಿನಿಂದ ಬಂದಿರುವ ನುಸುಳುಕೋರರೊಂದಿಗೆ ಕೇಂದ್ರ ಮಾತುಕತೆ ನಡೆಸುತ್ತಿದೆ. ಇದು ಖಂಡಿತವಾಗಿಯೂ ಮಣಿಪುರ ಮತ್ತು ಭಾರತದ ನಡುವಿನ ಸಂಬಂಧವನ್ನು ಹಾಳುಗೆಡವುತ್ತದೆ. ಇದು ವಿಲೀನ ಒಪ್ಪಂದದ ಇತ್ಯರ್ಥ (Settlement of Merger Agreement) ಮತ್ತು ಸಾರ್ವಭೌಮತ್ವದ ಮರುಸ್ಥಾಪನೆಯ (Restoration of Sovereignty) ಬಗ್ಗೆ ನಾವು ಎತ್ತುತ್ತಿರುವ ಸಮಸ್ಯೆಯನ್ನು ಮತ್ತಷ್ಟು ಉಲ್ಬಣಗೊಳಿಸಲಿದೆ. ಮೈತೇಯಿಗಳು ಖಂಡಿತವಾಗಿಯೂ ಸಿಡಿದು ನಿಲ್ಲುತ್ತಾರೆ.

ಪ್ರಶ್ನೆ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮೈತೇಯಿಗಳ ಪರವಾಗಿವೆ ಎಂಬ ಸಾಮಾನ್ಯ ಅನಿಸಿಕೆ ಇದೆ…
ಕೇಂದ್ರ ಸರ್ಕಾರವು ಮಣಿಪುರದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಸಂಖ್ಯೆಯ ಕೇಂದ್ರೀಯ ಪಡೆಗಳನ್ನು ನಿಯೋಜಿಸಿದೆ. ಇವರು ಮೈತೇಯಿ ಪ್ರತಿಭಟನಾಕಾರರ ಮೇಲೆ ಮಾತ್ರವೇ ಅಶ್ರುವಾಯು, ರಬ್ಬರ್ ಗುಂಡುಗಳನ್ನು ಹಾರಿಸುತ್ತಿದ್ದಾರೆ, ಲಾಠಿಪ್ರಹಾರ ನಡೆಸುತ್ತಿದ್ದಾರೆ. ಕುಕಿ ಪ್ರತಿಭಟನಾಕಾರರನ್ನು ಅವರು ಇದೇ ರೀತಿ ನಡೆಸಿಕೊಳ್ಳುತ್ತಿರುವುದನ್ನು ನೀವು ಕಾಣಲು ಸಾಧ್ಯವಿಲ್ಲ. ಕೇಂದ್ರ ಸರ್ಕಾರ ಮೈತೇಯಿಗಳ ಪರವಾಗಿದೆಯೋ, ಇಲ್ಲವೋ ಅಂತ ನೀವೇ ತೀರ್ಮಾನಿಸಬಹುದು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರಡೂ ಕುಕಿಗಳನ್ನು ಬೆಂಬಲಿಸುತ್ತಿವೆ. ಕಾನೂನು ಸುವ್ಯವಸ್ಥೆ ಕಾಪಾಡುವುದು ರಾಜ್ಯ ಸರ್ಕಾರದ ಜವಾಬ್ದಾರಿ. ಕಳೆದ ಮೂರು ತಿಂಗಳಿನಿಂದ ಮಣಿಪುರದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಇಡೀ ಪ್ರಕರಣದ ಸಂಪೂರ್ಣ ಜವಾಬ್ದಾರಿ ರಾಜ್ಯ ಸರ್ಕಾರವೇ ಹೊರಬೇಕು. ಎರಡೂ ಸಮುದಾಯಗಳ ಜನರು ಸಶಸ್ತ್ರರಾಗಿರುವುದು ರಾಜ್ಯದ ವೈಫಲ್ಯದಿಂದಾಗಿ. ಸರ್ಕಾರ ಎರಡೂ ಸಮುದಾಯಗಳ ಜನರ ಜೀವ ಮತ್ತು ಆಸ್ತಿಯನ್ನು ರಕ್ಷಿಸುವಲ್ಲಿ ವಿಫಲವಾಗಿದೆ. ಸಮುದಾಯಗಳು ಪರಸ್ಪರರ ವಿರುದ್ಧ ಹೋರಾಡುವಾಗ ತಮ್ಮನ್ನು ತಾವು ರಕ್ಷಿಸಿಕೊಳ್ಳುವುದನ್ನು ಬಿಟ್ಟು ಬೇರೆ ದಾರಿಯಿಲ್ಲ. ಜನರು ಶಸ್ತ್ರಾಸ್ತ್ರಗಳನ್ನು ಹಿಡಿಯಬೇಕಾದ ಅನಿವಾರ್ಯತೆಯನ್ನು ಸೃಷ್ಟಿಸಲಾಗಿದೆ.

ಪ್ರಶ್ನೆ: ಇದು ರಾಷ್ಟ್ರೀಯ ಭದ್ರತೆಯ ಬಿಕ್ಕಟ್ಟಿಗೆ ಎಡೆಮಾಡಿಕೊಟ್ಟಿದೆ ಎಂದು ಹೇಳಿದ್ದೀರಿ. ಅದು ಹೇಗೆ ?
ನಾವು (ಮೈತೇಯಿಗಳು ಮತ್ತು ಕುಕಿಗಳು) ಪರಸ್ಪರರ ವಿರುದ್ಧ ಎಸಗುತ್ತಿರುವ ಕ್ರೌರ್ಯವನ್ನು ಊಹಿಸಲೂ ಸಾಧ್ಯವಿಲ್ಲ. ಜನರನ್ನು ಜೀವಂತ ಕತ್ತರಿಸಲಾಗುತ್ತಿದೆ – ಜೀವಂತ ಹೂಳಲಾಗುತ್ತಿದೆ. ಕಣ್ಣುಗುಡ್ಡೆಗಳನ್ನು ಕಿತ್ತುಹಾಕಲಾಗುತ್ತಿದೆ. ಕರುಳುಗಳನ್ನು ಕತ್ತರಿಸಿ ಹಾಕಲಾಗುತ್ತಿದೆ. ಮಹಿಳೆಯರ ಮೇಲೆ ಅತ್ಯಾಚಾರಗಳನ್ನು ಎಸಗಿ ಮೆರವಣಿಗೆಗಳನ್ನು ನಡೆಸಲಾಗುತ್ತಿದೆ. ಈ ಮಟ್ಟದ ಕ್ರೌರ್ಯದ ಬಗ್ಗೆ ನಾವು ಕಥೆಗಳಲ್ಲಿ – ಪುರಾಣಗಳಲ್ಲಿ ಕೇಳಿರುತ್ತೇವೆ ಹೊರತು ಆಧುನಿಕ ಜಗತ್ತಿನಲ್ಲಿಲ್ಲ. ಈ ರೀತಿಯ ಕ್ರೌರ್ಯವು ಡ್ರಗ್ ಮಾಫಿಯಾದಿಂದ ಪ್ರಚೋದನೆಗೆ ಒಳಗಾಗಿ ಸರ್ಕಾರಿ ವ್ಯವಸ್ಥೆ ದೀರ್ಘಕಾಲ ವಿಫಲಗೊಂಡದ್ದರ ಪರಿಣಾಮ. ರಾಜ್ಯದ ಎಲ್ಲ ಪ್ರಮುಖ ಅಂಗಗಳ ಮೇಲೂ ಡ್ರಗ್ಸ್ ದಂಧೆ ನಿಯಂತ್ರಣ ಸಾಧಿಸಿದೆ ಎಂಬುದನ್ನು ಭಾರತ ಸರ್ಕಾರ ಅರಿತುಕೊಳ್ಳಬೇಕು. ಇಂದಲ್ಲ ನಾಳೆ, ಅಂತಿಮವಾಗಿ ಅರಿಯುತ್ತಾರೆ. ಆದರೆ, ಅದಕ್ಕೆ ಭಾರೀ ಬೆಲೆ ತೆರಬೇಕಾಗುತ್ತದೆ. ಇಂದು ನಡೆಯುತ್ತಿರುವ ಎಲ್ಲದರ ಮುನ್ಸೂಚನೆಯನ್ನು ನಾವು ಬಹಳ ಹಿಂದೆಯೇ ನೀಡಿದ್ದೆವು. ಹಾಗೂ ಇಂದು ನಾನು ಯಾವುದರ ಮುನ್ಸೂಚನೆ ನೀಡುತ್ತಿದ್ದೇನೋ, ಅದು ಮುಂಬರುವ ದಿನಗಳಲ್ಲಿ ಸಂಭವಿಸಲಿದೆ.

ಪ್ರಶ್ನೆ: ಇದು ಎರಡು ಅಥವಾ ಮೂರು ವರ್ಷಗಳಿಗಿಂತ ಹೆಚ್ಚು ಕಾಲ ನಡೆಯುವ ದೀರ್ಘಾವಧಿ ಯುದ್ಧವಾಗಲಿದೆ ಅನ್ನೋ ಮಾತುಗಳು ಕೇಳುಬರುತ್ತಿವೆ…
ಎರಡೂ ಸಮುದಾಯಗಳಿಗೆ ಉಂಟಾದ ಹಾನಿ ಅತ್ಯಂತ ದೊಡ್ಡಮಟ್ಟದ್ದು. ಹೀಗಾಗಿ ಇದು ನಿಸ್ಸಂಶಯವಾಗಿ ದೀರ್ಘಕಾಲದ ಯುದ್ಧವಾಗಲಿದೆ. ಈ ಬಿಕ್ಕಟ್ಟಿನಿಂದ ರಾತ್ರೋರಾತ್ರಿ ಹೊರಬರಲು ಸಾಧ್ಯವಿಲ್ಲ. ಯುದ್ಧವು ಕೊನೆಗೊಳ್ಳಲು ಮತ್ತು ಜನರ ಗಾಯಗಳು ಮಾಯಲು; ಸಹಜ ಸ್ಥಿತಿಗೆ ಮರಳಲು ಬಹಳ ಸಮಯ ತೆಗೆದುಕೊಳ್ಳುತ್ತದೆ. ಸತ್ಯ ಮತ್ತು ಸಾಮರಸ್ಯ ಈ ಪ್ರಕ್ರಿಯೆಯನ್ನು ಆಗುಮಾಡಬೇಕು. ಇದರ ಪ್ರಾರಂಭ ಪ್ರಾಮಾಣಿಕ ಮತ್ತು ಜವಾಬ್ದಾರಿಯುತ ಸರ್ಕಾರದಿಂದಾಗಬೇಕು. ಸತ್ಯ ಮತ್ತು ಸಾಮರಸ್ಯವಿಲ್ಲದೆ ಸಮುದಾಯಗಳ ಗಾಯಗಳು ಮಾಯುವುದು ಅತ್ಯಂತ ಕಷ್ಟಕರವಾಗಿರುತ್ತದೆ.

ಪ್ರಶ್ನೆ: ಎರಡೂ ಸಮುದಾಯಗಳು ಶಾಂತಿ ಸ್ಥಾಪನೆಗೆ ಆಗ್ರಹಿಸುತ್ತಿವೆ. ಆದರೆ ಮೈತೇಯಿಗಳಿಂದ ದಮನಕ್ಕೊಳಗಾದ ಕುಕಿಗಳು ಪ್ರಬಲ ಸಮುದಾಯದೊಂದಿಗೆ ಬದುಕಲು ಬಯಸುತ್ತಿಲ್ಲ ಎಂಬುದು ಸ್ಪಷ್ಟವಾಗಿದೆ. ಹೀಗಿರುವಾಗ, ಇದು ಜನಾಂಗೀಯ ಕಲಹವಲ್ಲ ಎಂದು ಹೇಗೆ ಹೇಳುತ್ತೀರಿ?
ಡ್ರಗ್ ದಂಧೆಯ ಶಕ್ತಿ ಅಗಾಧ. ಸಾರ್ವಜನಿಕ ಅಭಿಪ್ರಾಯವನ್ನು ಪ್ರಭಾವಿಸುವಷ್ಟು ಶಕ್ತಿಯುತ. ಕುಕಿಗಳು ತಮ್ಮ ಎಲ್ಲಾ ಸಮಸ್ಯೆಗಳಿಗೆ ಮೈತೇಯಿಗಳನ್ನು ದೂಷಿಸುತ್ತಿದ್ದಾರೆ. ನಾವು ಅವರನ್ನು ನಿಜವಾಗಿಯೂ ಶೋಷಿಸಿದ್ದರೆ, ಅವರು ಅದನ್ನು ಅಂಕಿ ಅಂಶಗಳ ಸಹಿತ ಪ್ರಸ್ತುತ ಪಡಿಸಬೇಕೇ ವಿನಾ ಕೇವಲ ಕಥನಗಳಾಗಿ ಅಲ್ಲ. ಇದು ರಾಷ್ಟ್ರೀಯ ಭದ್ರತೆಯನ್ನು ಒಳಗೊಂಡಿರುವ ಸಮಸ್ಯೆ. ಹೀಗಾಗಿ ಕೇವಲ ಕಥನಗಳು ಕೆಲಸ ಮಾಡುವುದಿಲ್ಲ.

ಪ್ರಶ್ನೆ: ನಿರಾಶ್ರಿತರೆಂದು ಗುರುತಿಸಲ್ಪಟ್ಟಿರುವ ಕುಕಿಗಳು ಭಾರತವನ್ನು ಒಪ್ಪಿಕೊಂಡಿದ್ದಾರೆ. ಆದರೆ ಮೈತೇಯಿಗಳು ಈಗಲೂ ದೇಶದೊಂದಿಗೆ ಗುರುತಿಸಿಕೊಳ್ಳುತ್ತಿಲ್ಲವಲ್ಲಾ..
ಮೈತೇಯಿ ಮೂಲ ನಿವಾಸಿ ಸಮುದಾಯಗಳಲ್ಲಿ ಒಂದಾಗಿದೆ. ನಾವು ನಮ್ಮ ಭೂಮಿಯನ್ನು ಪ್ರೀತಿಸುತ್ತೇವೆ – ಇದು ನಮ್ಮ ತಾಯಿನಾಡು ಅಥವಾ ಹೃದಯನಾಡು. ಭಾರತ ಸರ್ಕಾರವು 1949 ರಿಂದ ಮಣಿಪುರವನ್ನು ನಡೆಸಿಕೊಳ್ಳುತ್ತಿರುವ ರೀತಿಯನ್ನು ನಾಡಿನ ಬಗ್ಗೆ ಗೌರವ ಇಟ್ಟುಕೊಂಡಿರುವ ಯಾರೂ ಒಪ್ಪಲು ಸಾಧ್ಯವಿಲ್ಲ. ಆದರೆ, ಮ್ಯಾನ್ಮಾರ್‌ನಿಂದ ಕರೆತರಲಾಗಿರುವ ಜನರು ಭಾರತಕ್ಕೆ ನಿಷ್ಠರಾಗಿರುವ ಸೋಗನ್ನು ಧರಿಸಲೇಬೇಕಾಗುತ್ತದೆ. ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಅವರು ಭಾರತದ ಬೆಂಬಲವನ್ನು ಪಡೆಯಲೇಬೇಕು. ಇದು ತಮ್ಮ ಹಿತಾಸಕ್ತಿಯನ್ನು ಕಾಪಾಡಿಕೊಳ್ಳಲು ಅವರು ಆಡುತ್ತಿರುವ ಆಟ ಅಷ್ಟೆ. ಮಣಿಪುರದ ಮೂಲನಿವಾಸಿಗಳ ನ್ಯಾಯ ಸಮ್ಮತ ಬೇಡಿಕೆಗಳನ್ನು, ಮಾನ್ಯತೆಯನ್ನು ಹಾಳುಗೆಡವಲು ಅವರನ್ನು ಎತ್ತಿಕಟ್ಟಲಾಗುತ್ತಿದೆ. ಇದು ಹೊಸದೇನಲ್ಲ. ಈ ರೀತಿಯ ಆಟಗಳು ನಮ್ಮ ಮೇಲೆ ಯಾವುದೇ ರೀತಿಯಲ್ಲಿ ಪರಿಣಾಮ ಬೀರುವುದಿಲ್ಲ. ನಿಜವಾದ ಸಮಸ್ಯೆಗಳೆಂದರೆ ಜನರ ಬಡತನ ಹಾಗೂ ಪಕ್ಷಪಾತಿಯಾದ ಕೆಟ್ಟ ಆಡಳಿತ.

ಪ್ರಶ್ನೆ:ಭಾರತದ ಭಾಗವಾಗಿ ಗುರುತಿಸಿಕೊಳ್ಳಲು ಬಯಸದ ಮಣಿಪುರಿಗಳು ಕೇಂದ್ರ ಸರ್ಕಾರದ ಅನುದಾನಗಳನ್ನು ಅನುಭವಿಸುತ್ತಿದ್ದಾರಲ್ಲಾ…
ಈ ಹಣಕಾಸು-ಅನುದಾನಗಳು ಭಾರತ ಸರ್ಕಾರವು ಇಲ್ಲಿ ನೆಟ್ಟಿರುವ ಕೈಗೊಂಬೆಗಳ ಜೇಬುಗಳನ್ನು ಸೇರುತ್ತಿವೆ. ಮಣಿಪುರದ ಹಣೆಬರಹದ ಬಗ್ಗೆ ಒಮ್ಮೆ ಯೋಚಿಸಿ. ಭಾರತ ಒಕ್ಕೂಟದೊಂದಿಗೆ ವಿಲೀನಗೊಂಡಾಗಿನಿಂದ, ಅಂದರೆ 77 ವರ್ಷಗಳ ಕಾಲ ರಾಜ್ಯ ಕಷ್ಟನಷ್ಟವನ್ನೇ ಅನುಭವಿಸಿದೆ. ಜನಾಂಗೀಯತೆಯ ಆಧಾರದ ಮೇಲೆ ಜನರನ್ನು ವಿಭಜಿಸಲಾಗಿದೆ. ಈ ಒಡಕುಗಳ ಕತೆಯೇನು? ಪರಿಸ್ಥಿತಿ ಹೀಗಿರುವಾಗ ನಾವು ಅದರ ಭಾಗವಾಗಬೇಕೆಂದು ಭಾರತವು ಹೇಗೆ ನಿರೀಕ್ಷಿಸುತ್ತದೆ? ತಾರತಮ್ಯ ಇಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ. ಗುಜರಾತ್ ಮತ್ತು ಮಹಾರಾಷ್ಟ್ರದಂತಹ ರಾಜ್ಯಗಳನ್ನು ಭಾರತ ಸರ್ಕಾರ ಹೇಗೆ ನಡೆಸಿಕೊಂಡಿದೆ ಮತ್ತು ಈಶಾನ್ಯ ರಾಜ್ಯಗಳು ಹಾಗೂ ಮಣಿಪುರವನ್ನು ಹೇಗೆ ನಡೆಸಿಕೊಂಡಿದೆ ಎಂಬುದನ್ನು ಗಮನಿಸಿ. ನೀವು ಬಯಸುವ ಮಟ್ಟಕ್ಕೆ ಭಾರತೀಯರೆಂದು ನಾವು ಭಾವಿಸದಿರುವುದಕ್ಕೆ ನಮ್ಮನ್ನು ದೂಷಿಸಬಹುದೇ?

ಪ್ರಶ್ನೆ: ವಿಭಜನೆಯಾದರೆ ಮೈತೇಯಿಗಳಿಗೆ ಮುಂದಿನ ದಿಕ್ಕೇನು?
ಇವು ನ್ಯಾಯಸಮ್ಮತ ಒತ್ತಾಯಗಳಲ್ಲ. ಆದ್ದರಿಂದ ಈ ವಿಭಜನೆಯು ನಡೆಯುವುದಿಲ್ಲ. ಮೊದಲು ನಾವು ಎನ್‌.ಆರ್‌.ಸಿ ನಡೆಸಬೇಕು. ನಾವು ಮಿಜೋರಾಂ ಮತ್ತು ನಾಗಾಲ್ಯಾಂಡ್‌ನ ಎಲ್ಲಾ ಗಡಿಗಳನ್ನು ನಿರ್ಬಂಧಿಸಬೇಕು. ನಂತರ ಎಲ್ಲ ಮೂರು ರಾಜ್ಯಗಳಲ್ಲಿ ಎನ್‌.ಆರ್‌.ಸಿ ನಡೆಸಬೇಕು. ಆಗ ಎಲ್ಲರ ಹಿನ್ನೆಲೆ, ಅಸ್ಮಿತೆಗಳು ನಿಚ್ಚಳವಾಗುತ್ತವೆ. ಆ ಬಳಿಕ ಆಡಳಿತದಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ. ಕೇಂದ್ರವು ಮಣಿಪುರದ ವಿಚಾರದಲ್ಲಿ ದುಸ್ಸಾಹಸಗಳಿಗೇನಾದರೂ ಕೈಹಾಕಿದರೆ ಅದು ಅಪಾಯಕಾರಿಯಾಗಿ ಪರಿಣಮಿಸಲಿದೆ. ಮೈತೇಯಿಗಳು ಇದನ್ನು ತಮ್ಮ ಕೊನೆ ಉಸಿರಿರುವವರೆಗೂ ವಿರೋಧಿಸುತ್ತಾರೆ. ಬಫರ್ ವಲಯಗಳು ಈಗಾಗಲೇ ಕಣಿವೆ ಮತ್ತು ಬೆಟ್ಟಗಳ ನಡುವೆ ವಿಭಜಕ ರೇಖೆಯನ್ನು ಎಳೆದಿವೆ. ಬಹುಸಂಖ್ಯಾತ ಸಮುದಾಯಕ್ಕೆ ವಿಲೀನ ಒಪ್ಪಂದದ ಸಮಸ್ಯೆಯನ್ನು ಇತ್ಯರ್ಥಪಡಿಸಲು (Settlement of Merger Agreement) ಮತ್ತು ಸಾರ್ವಭೌಮತ್ವವನ್ನು ಮರುಸ್ಥಾಪಿಸಲು (Restoration of Sovereignty) ಒತ್ತಾಯಿಸುವುದನ್ನು ಬಿಟ್ಟು ಬೇರೆ ಆಯ್ಕೆಗಳು ಉಳಿಯುವುದಿಲ್ಲ. ಹೀಗೇನಾದರೂ ಆದರೆ, ಭಾರತ ಒಡೆದು ಹೋಗುತ್ತದೆ. ಒಂದೋ ಭಾರತವು ಮಣಿಪುರವನ್ನು ಒಡೆಯುತ್ತದೆ. ಇಲ್ಲವಾದರೆ, ಮಣಿಪುರವೇ ಭಾರತವನ್ನು ಒಡೆದುಹಾಕುತ್ತದೆ. ಇದು ವಿಧಿ ಲಿಖಿತ.

ಪ್ರಶ್ನೆ: ಮತ್ತಷ್ಟೂ ರಕ್ತಪಾತ ನಡೆಯಲಿದೆಯೇ?
ಪರಿಸ್ಥಿತಿ ಅದಕ್ಕಿಂತಲೂ ಭಯಾನಕವಾಗಿರಲಿದೆ. ಮೈತೇಯಿಗಳು ಸಾರ್ವಭೌಮತ್ವವನ್ನು ಕೋರಿದಾಗ ಭಾರತಕ್ಕೆ ಅದು ದೊಡ್ಡ ಸಂಕಟವಾಗಲಿದೆ. ಏಕೆಂದರೆ, ವಿಲೀನ ಒಪ್ಪಂದದ ಇತ್ಯರ್ಥಕ್ಕೆ (Settlement of Merger Agreement) ಬೇಡಿಕೆಯಿಡಬೇಕಾದ ಪರಿಸ್ಥಿತಿ ಸೃಷ್ಟಿಯಾಗಿದೆ.

ಪ್ರಶ್ನೆ: ಕೇಂದ್ರವು ಈ ದಿಕ್ಕಿನತ್ತ ಹೆಜ್ಜೆ ಇಡುತ್ತದೆ ಎಂದು ನೀವು ಭಾವಿಸುತ್ತೀರಾ?
ಕೇಂದ್ರ ಸರ್ಕಾರ ಬರ್ಮಾ ವಲಸಿಗರು / ನುಸುಳುಕೋರರ ಮಾತನ್ನು ಕೇಳಿಸಿಕೊಳ್ಳಬಹುದಾದರೆ ನಮ್ಮ ಮಾತನ್ನು ಏಕೆ ಕೇಳುತ್ತಿಲ್ಲ? ಮಣಿಪುರದಲ್ಲಿ ಹಲವು ಬರ್ಮೀಯರು ಇದ್ದಾರೆ. ಅವರನ್ನು ಮಣಿಪುರ ಮತ್ತು ಈಶಾನ್ಯ ರಾಜ್ಯಗಳಿಂದ ಹೊರಹಾಕಲೇಬೇಕು. ಇಲ್ಲವಾದರೆ ರಾಷ್ಟ್ರಕ್ಕೆ ದೊಡ್ಡ ಅಪಾಯ ಕಾದಿದೆ. ವಿಪರ್ಯಾಸವೆಂದರೆ, ಭಾರತ ಇವರೊಂದಿಗೆ ಮಾತುಕತೆ ನಡೆಸುತ್ತಿದೆ. ಆದ್ದರಿಂದ ಮೈತೇಯಿಗಳಿಗೆ ಯಾವುದೇ ಆಯ್ಕೆಗಳು ಉಳಿದಿಲ್ಲ. ನಮ್ಮ ಸಾರ್ವಭೌಮತ್ವವನ್ನು ಪುನಃಸ್ಥಾಪಿಸಲು ಶಸ್ತ್ರಾಸ್ತ್ರ ಹೋರಾಟವೊಂದೇ ಮಾರ್ಗವಾಗುತ್ತದೆ ಹಾಗೂ ಅದು ನಮಗೆ ಸಮರ್ಥನೀಯ ಕೂಡ.

ಪ್ರಶ್ನೆ: ಹಲವಾರು ಸಶಸ್ತ್ರ/ ಪ್ರತ್ಯೇಕತಾವಾದಿ ಗುಂಪುಗಳು ಹೆದರಿಸಿ-ಬೆದರಿಸಿ ತಮ್ಮ ಕಾರ್ಯನಿರ್ವಹಿಸುತ್ತಿವೆ. ಇಷ್ಟೆಲ್ಲಾ ಗುಂಪುಗಳ ತಿಕ್ಕಾಟದ ನಡುವೆಯೂ ಎಂದಾದರೂ ಪರಿಹಾರ ದೊರೆಯುತ್ತದೆ ಎಂಬ ಭರವಸೆ ಇದೆಯೇ?

ಮಣಿಪುರದಲ್ಲಿ ಸಶಸ್ತ್ರ ಗುಂಪುಗಳು ನಮ್ಮನ್ನು ಮದ್ದು-ಗುಂಡುಗಳಿಂದ ಬೆದರಿಸುವುದಿಲ್ಲ. ಆದಾಗ್ಯೂ, ಇದಕ್ಕೆ ಸೂಕ್ತ ಪರಿಹಾರ ಸಿಗುವುದು ಬಿಡುವುದು ಕಳೆದ 70 ವರ್ಷಗಳಿಂದ ಪ್ರತಿಫಲ ಮತ್ತು ಶಿಕ್ಷೆಯ ನೀತಿಯನ್ನೇ (Carrot and Stick Policy) ಅನುಸರಿಸುತ್ತಿರುವ ಭಾರತ ಸರ್ಕಾರವನ್ನು ಅವಲಂಬಿಸಿರುತ್ತದೆ. ಈ ನೀತಿ ಇನ್ನು ಮುಂದೆ ನಡೆಯುವುದಿಲ್ಲ. ಮಣಿಪುರ ಮತ್ತು ಭಾರತ ಈಗ ಮುಖಾಮುಖಿಯಾಗಲೇಬೇಕು. ಮಣಿಪುರವನ್ನು ಉಳಿಸಿಕೊಂಡು ಅದರ ಗಡಿಯನ್ನು ಕಾಪಾಡಿಕೊಳ್ಳಬೇಕು ಇಲ್ಲವೇ ಅವರು ರಾಜ್ಯವನ್ನು ಒಡೆಯಲು ಪ್ರಯತ್ನಿಸಬೇಕು. ಮಣಿಪುರವನ್ನು ಒಡೆದರೆ, ನಾವು ಭಾರತವನ್ನು ಒಡೆಯುತ್ತೇವೆ. ಮೈತೇಯಿಗಳು ಏನೆಲ್ಲಾ ಮಾಡಬಹುದು ಎಂಬುದಕ್ಕೆ ನಮ್ಮ ಇತಿಹಾಸ ಸಾಕ್ಷಿಯಾಗಿದೆ.

ʼಈ ದಿನʼ ವಿಶೇಷ ಸಂದರ್ಶನ ಭಾಗ-2 | ‘ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಮ್ಮ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿವೆ- ತೌನೋಜಮ್‌ ಬೃಂದಾ

ಅಶ್ವಿನಿ ವೈ ಎಸ್‌
+ posts

ಪತ್ರಕರ್ತೆ

ಪೋಸ್ಟ್ ಹಂಚಿಕೊಳ್ಳಿ:

4 COMMENTS

  1. ಇಲ್ಲಿ ಹೆಚ್ಚು ಅತ್ಯಾಚಾರಕ್ಕೆ ಒಳಗಾದವರು ಕುಕ್ಕಿಗಳು. ಇವರು ಹೇಳುವುದು ಮೈತ್ರೇಯಿಗಳು ಕಷ್ಟದಲ್ಲಿ ಇದ್ದಾರೆಂದು. ಮೈತೇಯಿಗಳಲ್ಲಿ ಇರುವ ಎರಡು ಸಂಘಟನೆಗಳ ಬಗ್ಗೆ ಪ್ರಶ್ನೆಯೂ ಇಲ್ಲ ಪ್ರತಿಕ್ರಿಯೆಗಳು ಇಲ್ಲ. ಇದು ಜನಾಂಗೀಯ ದ್ವೇಷದಿಂದ ಉಂಟಾದ ಗಲಭೆ. ಇವರು ಮರೆಮಾಚಿ ವಿಷಯವನ್ನು ಬೇರೆಡೆ ಸೆಳೆಯಲು ಪ್ರಯತ್ನಿಸುತ್ತಿದ್ದಾರೆ.

  2. Why she’s not talking about Meities & their activities? From what we read, meities are majority and Kukis are lesser in number. All along political power is wielded by dominant Meities, who have more MLAs and have been controlling political power and government. Why isn’t she talking about HC decision to consider meities as STs? Are the Meities bent on displacing all Kukis from the larger and mineral rich hilly regions so that Meities in the valley region can reap the benefits? If Manipur isn’t ethnic clash why CM Biren Singh and Modi are silent? This lady isn’t speaking about truth and the ground reality as we know from what we read!! Your interviewer should have asked searching questions!!!

  3. Deep complexity of the crisis is clear from her statements but however she doesn’t seem to be honest and impartial in her analysis of the horrifying situation. Her aggressive stance as far as “taking up arms” would never do any justice to the long awaited effective crisis control process.

  4. North East statea have been neglected from development since independence and for youths if they won’t get good job they have to choosen wrong way of earning so centeral govt should develop bsuch state and provide job and basic needs to them other wise they fight each other in the name of caste /religion let govt take good decision solve problems of that state

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೆ.ಎಂ.ಎಸ್ ಎಂಬ ಸಮಾಜಮುಖಿ : ಎನ್. ಗಾಯತ್ರಿ ಬರೆಹ

ಸಮಾಜದ ಶಾಂತಿಗೆ ಭಂಗ ತರುವ ಘಟನೆಗಳು, ದೌರ್ಜನ್ಯಗಳು ನಡೆದ ಸಂದರ್ಭದಲ್ಲಿ ಕೊಂಚವೂ...

ʼಈ ದಿನʼ ವಿಶೇಷ | ಇಲ್ಲ, ಇಲ್ಲ, ನೆಹರೂ ನಿವೃತ್ತರಾಗುವುದಿಲ್ಲ…

ಇಂದು ಭಾರತದ ಮೊದಲ ಪ್ರಧಾನಿ ಜವಾಹರಲಾಲ್‌ ನೆಹರೂ ಅವರ ಜನ್ಮದಿನ. ಓರ್ವ...

ಸ್ವಾವಲಂಬಿ ಲಿಂಗತ್ವ ಅಲ್ಪಸಂಖ್ಯಾತರೊಬ್ಬರ ಬದುಕು ಮರುನಿರ್ಮಾಣಕ್ಕೆ ಬೇಕಿದೆ ನಿಮ್ಮ ನೆರವು

ಕಷ್ಟಗಳನ್ನೆ ಮೆಟ್ಟಿಲಾಗಿ ಮಾಡಿಕೊಂಡವರು ತಮ್ಮ ಕಾಲ ಮೇಲೆ ತಾವು ನಿಲ್ಲುತ್ತಾರೆ ಎಂಬುದಕ್ಕೆ...

ಶವ ರಾಜಕಾರಣ | ರಾಜಕೀಯ ಲಾಭಕ್ಕಾಗಿ ಕೊಲೆಗಳನ್ನು ಬಳಸಿಕೊಂಡವರ ಕರಾಳ ಮುಖ

ನವೆಂಬರ್‌ 6ರ ರಾತ್ರಿ ಪರಿಚಿತರಿಂದಲೇ ಕೊಲೆಯಾದ ಪುತ್ತೂರಿನ ಅಕ್ಷಯ್‌ ಕಲ್ಲೇಗನ ಮೃತದೇಹ...