ಕರ್ನಾಟಕದ ದಕ್ಷಿಣ ಒಳನಾಡು ಮತ್ತು ಮಲೆನಾಡಿನ ಏಳು ಜಿಲ್ಲೆಗಳಲ್ಲಿ ಭಾನುವಾರ ಹವಾಮಾನ ವೈಪರೀತ್ಯ ಕಂಡುಬಂದಿದ್ದು, ಗರಿಷ್ಠ ತಾಪಮಾನ 37 ಡಿಗ್ರಿಗೆ ದಾಟಿದೆ. ಕೊಡಗಿನಲ್ಲಿ 38.2 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಕರ್ನಾಟಕದ ದಕ್ಷಿಣ ಒಳನಾಡು ಮತ್ತು ಮಲೆನಾಡಿನ 7 ಜಿಲ್ಲೆಗಳ ಉಷ್ಣಾಂಶ ಭಾನುವಾರ 37 ಡಿಗ್ರಿ ಸೆಲ್ಸಿಯಸ್‌ಗೆ ಏರಿಕೆಯಾಗಿದೆ. ಮಲೆನಾಡು ಜಿಲ್ಲೆಗಳಾದ ಕೊಡಗಿನಲ್ಲಿ 38.2 ಡಿಗ್ರಿ ಸೆಲ್ಸಿಯಸ್, ಶಿವಮೊಗ್ಗದಲ್ಲಿ 39.2 ಮತ್ತು ಚಿಕ್ಕಮಗಳೂರಿನಲ್ಲಿ 38.9 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗಿದೆ.
ಕೊಡಗು ಜಿಲ್ಲೆಯ ತಾಪಮಾನವು ಭಾನುವಾರ ಸಾಮಾನ್ಯ ತಾಪಮಾನಕ್ಕಿಂತ ಸುಮಾರು ಒಂಬತ್ತು ಡಿಗ್ರಿ ಹೆಚ್ಚಾಗಿದ್ದು, ಕೊಡಗು ಜಿಲ್ಲೆಯಲ್ಲಿ ಮಾರ್ಚ್ ವೇಳೆ ಸರಾಸರಿ ಗರಿಷ್ಠ ತಾಪಮಾನ 29.8 ಡಿಗ್ರಿ ಸೆಲ್ಸಿಯಸ್ ಆಗಿದೆ ಎಂದು ಐಎಂಡಿ ತಿಳಿಸಿದೆ.
ಫೆಬ್ರವರಿಯಲ್ಲಿ ದಾಖಲೆಯ ತಾಪಮಾನದ ನಂತರ, ಮೈಸೂರು ಜಿಲ್ಲೆಯಲ್ಲಿಯೂ ಬಿಸಿಗಾಳಿ ಹೆಚ್ಚಾಗಿದೆ. ಇದರಿಂದಾಗಿ ಮಹಾಶಿವರಾತ್ರಿ ವೇಳೆ ಬರಬೇಕಿದ್ದ ಮಳೆ ಕೈತಪ್ಪಿದೆ. ತಾಪಮಾನವು ಏರುತ್ತಿರುವುದರಿಂದ ಮೈಸೂರಿನಲ್ಲಿ ಗರಿಷ್ಠ ಉಷ್ಣಾಂಶ 39 ಡಿಗ್ರಿ ಸೆಲ್ಸಿಯಸ್‌ಗೆ ದಾಟಿದೆ.
ಈ ಸುದ್ದಿ ಓದಿದ್ದೀರಾ? ಹವಾಮಾನ ವರದಿ | ಬೆಂಗಳೂರು, ದಕ್ಷಿಣ ಒಳನಾಡಿನಲ್ಲಿ ಮುಂಗಾರಿಗೂ ಮೊದಲೇ ಮಳೆ ಬೀಳುವ ಸಾಧ್ಯತೆ
ಜಿಲ್ಲೆಯ ತಲಕಾಡು ಹೋಬಳಿಯಲ್ಲಿ 39.1 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ(ಕೆಎಸ್ಎನ್‌ಡಿಎಂಸಿ) ಅಂಕಿ ಅಂಶಗಳು ತಿಳಿಸಿವೆ.
ಫೆಬ್ರವರಿ ವೇಳೆ ಮೈಸೂರಿನಲ್ಲಿ ಮೂರು ಬಾರಿ 35 ಡಿಗ್ರಿ ಗರಿಷ್ಠ ತಾಪಮಾನ ಏರಿಕೆಯಾಗಿತ್ತು. ಮುಂಗಾರು ಪೂರ್ವ ಮಳೆ ಬೀಳದಿದ್ದರೆ ಮುಂದಿನ ದಿನಗಳಲ್ಲಿ ತಾಪಮಾನವು 40 ಡಿಗ್ರಿಗೂ ದಾಟಬಹುದು ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.