ದಕ್ಷಿಣ ಕನ್ನಡ ಜಿಲ್ಲೆಯ ಕುಡುಪು ಮಾಬ್ ಲಿಂಚಿಂಗ್, ಹತ್ಯೆ ಪ್ರಕರಣವನ್ನು ಮಂಗಳೂರು ಕಮಿಷನರೇಟ್ ಪೊಲೀಸರು ಮುಚ್ಚಿಹಾಕಲು ಪ್ರಜ್ಞಾಪೂರ್ವಕ ಪ್ರಯತ್ನ ನಡೆಸಿತ್ತು ಎಂಬುದಕ್ಕೆ ಈ ಪ್ರಕರಣದಲ್ಲಿ ದಾಖಲಾಗಿರುವ ಎಫ್‌ಐಆರ್‌ನಲ್ಲಿರುವ ಹಲವು ಅಂಶಗಳೇ ಪ್ರಬಲ ಸಾಕ್ಷಿಯಾಗಿ ಕಾಣುತ್ತಿದೆ. ಹಾಗಾಗಿ, ಈ ಪ್ರಕರಣವನ್ನು ರಾಜ್ಯ ಸರಕಾರ ಗಂಭೀರವಾಗಿ ಪರಿಗಣಿಸಿ, ಜಿಲ್ಲೆಯ ಹೊರಗಿನ ಪ್ರಾಮಾಣಿಕ ಅಧಿಕಾರಿ ತನಿಖೆ ನಡೆಸುವಂತೆ ಆಗಬೇಕು ಎಂದು ಸಿಪಿಐಎಂ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ಒತ್ತಾಯಿಸಿದ್ದಾರೆ.
ಈ ಬಗ್ಗೆ ಹೇಳಿಕೆ ನೀಡಿರುವ ಅವರು, “ಕುಡುಪು ಸಾಮ್ರಾಟ್ ಮೈದಾನದಲ್ಲಿ 27.04.2025 ರ ಸಂಜೆ ಮೂರು ಗಂಟೆಗೆ ಮಾಬ್ ಲಿಂಚಿಂಗ್ ಗೆ ಅಪರಿಚಿತ ವ್ಯಕ್ತಿಯೋರ್ವ ಬಲಿಯಾಗಿದ್ದಾನೆ ಎಂಬ ಸುದ್ದಿ ವಾಮಂಜೂರು ಪೊಲೀಸ್ ಠಾಣೆಗೆ ಗಂಟೆಯ ಒಳಗಡೆ ತಲುಪಿತ್ತು. ಅದರಂತೆ ಐದು ಗಂಟೆಯ ಆಸುಪಾಸು ಪೊಲೀಸರು ಹೊಡೆತಗಳಿಂದ ಜರ್ಜರಿತ ಗೊಂಡ ಮೃತ ದೇಹ ಬಿದ್ದದ್ದ ಸ್ಥಳವನ್ನೂ ತಲುಪಿದ್ದಾರೆ. ಅಷ್ಟು ಹೊತ್ತಿಗೆ ಪೊಲೀಸರಿಗೆ ನಡೆದಿರುವ ಘಟನೆಯ ಪೂರ್ತಿ ವಿವರ ಮನದಟ್ಟಾಗಿದೆ” ಎಂದು ತಿಳಿಸಿದ್ದಾರೆ.
“ಘಟನೆಯ ಎಲ್ಲ ವಿಷಯ ಕಮಿಷನರ್ ಅವರಿಗೂ ಸಹಜವಾಗಿಯೇ ತಲುಪಿದೆ. ಹಲ್ಲೆಕೋರ ಗುಂಪಿನ ನಾಯಕ, ಬಿಜೆಪಿ ಪ್ರಭಾವಿ ಮುಖಂಡ ರವೀಂದ್ರ ನಾಯಕ್, ಮಂಜುನಾಥ್ ಮತ್ತಿತರರು ಸ್ಥಳೀಯ ಶಾಸಕರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವುದು, ಮಾಬ್ ಲಿಂಚಿಂಗ್ ದೊಡ್ಡ ಸುದ್ದಿಯಾಗಿ ರಾಷ್ಟ್ರ ಮಟ್ಟದಲ್ಲಿ ಗಮನಸೆಳೆದರೆ ಕಮಿಷನರ್‌ಗೆ ಕಳಂಕ ಬರುವುದು ಎಂಬಿತ್ಯಾದಿ ಕಾರಣಗಳಿಗೆ ಪೊಲೀಸರು ಪ್ರಕರಣವನ್ನು ದುರ್ಬಲಗೊಳಿಸುವ, ಸಾಧ್ಯವಾದರೆ ಮುಚ್ಚಿಹಾಕುವ ತೀರ್ಮಾನಕ್ಕೆ ಬಂದಿದ್ದಾರೆ” ಎಂದು ಮುನೀರ್ ಕಾಟಿಪಳ್ಳ ಗಂಭೀರ ಆರೋಪ ಮಾಡಿದ್ದಾರೆ.
“ಮಾಬ್ ಲಿಂಚಿಂಗ್‌ನಲ್ಲಿ ಪ್ರಮುಖ ಪಾತ್ರ ವಹಿಸಿದ ಮಂಜುನಾಥ ಎಂಬಾತನಿಂದಲೆ “ಅಪರಿಚಿತ ಶವ ಪತ್ತೆ” ಎಂದು ದೂರು ಬರೆಸಿಕೊಂಡು ಯಡಿಆರ್ ದಾಖಲಿಸಿದ್ದಾರೆ. ಘಟನೆಯ ಪೂರ್ತಿ ವಿವರ ಗೊತ್ತಿದ್ದರೂ “ಯಾವುದೋ ನಶೆ(ಅಮಲು) ಯಿಂದ ಬಿದ್ದು, ಅಥವಾ ಯಾರೊಂದಿಗೊ ಜಗಳ ಆಡಿ, ಉರುಳಿ ಬಿದ್ದು ಮೃತಪಟ್ಟಿರಬಹುದು, ಮೈಯಲ್ಲಿ ತರಚಿದ ಸಾಮಾನ್ಯ ಗಾಯಗಳಿವೆ” ಎಂದು ಲುಕ್ ಔಟ್ ಪ್ರಕಟನೆ ಕೊಟ್ಟು ಕೈತೊಳೆದುಕೊಳ್ಳಲು ಯತ್ನಿಸಿದ್ದಾರೆ” ಎಂದು ತಿಳಿಸಿದ್ದಾರೆ.

ಮಾಬ್ ಲಿಂಚಿಂಗ್ ನಡೆದಿರುವ ಕುರಿತು ಮಾಧ್ಯಮಗಳ ಪ್ರತಿನಿಧಿಗಳಿಗೆ ಸುದ್ದಿ ತಲುಪಿ, ಪೊಲೀಸ್ ಕಮೀಷನರ್ ಅವರಲ್ಲಿ ಈ ಕುರಿತು ಮಾಹಿತಿ, ಸ್ಪಷ್ಟೀಕರಣವನ್ನು ಸತತವಾಗಿ ಕೇಳಿದರೂ, “ವದಂತಿಗಳಿಗೆ ಕಿವಿಗೊಡಬೇಡಿ, ಕಾಯಿರಿ” ಎಂಬ ಒಂದು ಲೈನ್‌ನ ಉತ್ತರವನ್ನು ನೀಡಿ, 36 ತಾಸುಗಳ ಕಾಲ ಮೌನವೃತ ಪಾಲಿಸಿದ್ದಾರೆ. ಮರು ದಿವಸ (28 ಎಪ್ರಿಲ್) ಕೆಲವು ಸಾಮಾಜಿಕ ಕಾರ್ಯಕರ್ತರು, ರಾಜಕೀಯ ಮುಖಂಡರು ಈ ಕುರಿತು ಧ್ವನಿ ಎತ್ತಿದ ತರುವಾಯ, ಸಾಮಾಜಿಕ ಜಾಲತಾಣದಲ್ಲಿ, ರಾಜ್ಯಮಟ್ಟದಲ್ಲಿ ಚರ್ಚೆಗಳು ಶುರುವಾದ ಮೇಲೆಯಷ್ಟೆ ಕಮಿಷನರ್ ಅಗರ್ವಾಲ್ ಪೋಸ್ಟ್ ಮಾರ್ಟಂ ನಡೆಸಿ, ಅದರ ವರದಿಯ ಆಧಾರದಲ್ಲಿ ಕೊಲೆ, ಮಾಬ್ ಲಿಂಚಿಂಗ್ ಸೆಕ್ಷನ್ ಅಡಿ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಈ ಎಫ್‌ಐಆರ್ ದಾಖಲಾಗುವಾಗ ಘಟನೆ ನಡೆದು 32 ತಾಸು ದಾಟಿತ್ತು” ಎಂದು ಮುನೀರ್ ತಿಳಿಸಿದ್ದಾರೆ.
ಎಫ್‌ಐಆರ್ ದಾಖಲಿಸಲು ಎರಡನೇ ದೂರುದಾರರಾಗಿ ಪೊಲೀಸರು ಆಯ್ಕೆ ಮಾಡಿದ್ದು, ಮಾಬ್ ಲಿಂಚಿಂಗ್ ಮಾಡಿದ ಅದೇ ಕುಖ್ಯಾತ ಕೋಮುವಾದಿ ಗ್ಯಾಂಗ್‌ನ ಒಡನಾಟದಲ್ಲಿ ಇರುವ, ಆಪ್ತನೆ ಆಗಿರುವ ಕೇಶವ ಎಂಬಾತನನ್ನು. ಆತ ನೀಡಿದ ದೂರಿನಲ್ಲಿ, ಪೊಲೀಸರು ಮೊದಲು ದೂರು ಬರೆಸಿಕೊಂಡ ಮಂಜುನಾಥ್ ಈ ಗುಂಪು ಹತ್ಯಾ ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಓರ್ವನಾಗಿದ್ದಾತ ಈಗ ಬಂಧಿಸಲ್ಪಟ್ಟಿದ್ದಾನೆ. ಕೇಶವ ನೀಡಿನ ದೂರಿನ ಪ್ರಕಾರ ಎಫ್‌ಐಆರ್‌ನಲ್ಲಿ “ಅಪರಿಚಿತ ವ್ಯಕ್ತಿಯೊಬ್ಬ “ಪಾಕಿಸ್ತಾನ, ಪಾಕಿಸ್ತಾನ”(ಜಿಂದಾಬಾದ್ ಹಾಕಿದ್ದಾನೆ ಎಂದು ಇಲ್ಲ) ಎಂದು ಬೊಬ್ಬೆ ಹೊಡೆಯುತ್ತಾ ಮೈದಾನದ ಕಡೆಗೆ ಧಾವಿಸಿ ಬರುತ್ತಿದ್ದ. ಇದನ್ನು ಗಮನಿಸಿದ ಮಂಜುನಾಥ, ಸಚಿನ್ ಮತ್ತಿತರರು ಆತ ಪಾಕಿಸ್ತಾನ… ಎಂದು ಬೊಬ್ಬೆ ಹಾಕುತ್ತಿದ್ದಾನೆ, ಬಿಡಬಾರದು ಎಂದು ನನ್ನಲ್ಲಿ ಹೇಳಿದರು. ಬೆನ್ನಟ್ಟಿ ಹೋಗಿ ಗುಂಪಾಗಿ ಥಳಿಸಿದರು, ಮರದ ತುಂಡಿನಿಂದ, ಕಾಲಿನಿಂದ ಹೊಡೆದು ತುಳಿದು ಸಾಯಿಸಿದರು, ನಾನು ತಡೆಯಲು ಯತ್ನಿಸಿದರೆ, ನನಗೆ ಗದರಿಸಿದರು. ನಾನು ಸ್ಥಳದಿಂದ ತೆರಳಿದೆ. ರಾತ್ರಿ ಮನೆಯಲ್ಲಿದ್ದಾಗ ಈ ಕುರಿತು ಸ್ವತಃ ಮಂಜುನಾಥ ಶವ ಪತ್ತೆಯಾಗಿರುವ ಕುರಿತು ಪೊಲೀಸ್ ದೂರು ನೀಡಿರುವುದು ನನಗೆ ತಿಳಿದು ಬಂತು” ಎಂದು ದಾಖಲಿಸಲಾಗಿದೆ.
ಗುಂಪು ಹತ್ಯೆ ನಡೆದ ತರುವಾಯದ 32 ಗಂಟೆಗಳ ಅವಧಿಯಲ್ಲಿ ನಡೆದಿರುವ ಈ ಎಲ್ಲ ಬೆಳವಣಿಗೆಗಳ ಕುರಿತು ಪ್ರತ್ಯೇಕ ತನಿಖೆ ನಡೆಯಬೇಕಿದೆ. ಗುಂಪು ಹತ್ಯೆ ನಡೆದಿರುವುದು, ಅದರಲ್ಲಿ ಭಾಗಿಯಾಗಿರುವ ಗುಂಪಿನ ಪೂರ್ಣ ಮಾಹಿತಿ ಇದ್ದೂ, ಅದೇ ಗುಂಪಿನ ಪ್ರಧಾನ ವ್ಯಕ್ತಿಯಿಂದಲೆ ಪ್ರಥಮವಾಗಿ ಪೊಲೀಸ್ ಇಲಾಖೆ ದೂರು ಬರೆಸಿಕೊಂಡದ್ದು, ದುರ್ಬಲವಾದ ಯುಡಿಆರ್, ಗೊಂದಲದ ಲುಕ್ ಔಟ್ ಪ್ರಕಟಟನೆ ಹೊರಡಿಸಿದ್ದು, 36 ಗಂಟೆಗಳ ಕಾಲ ಪೊಲೀಸ್ ಕಮಿಷನರ್ ಮಾಧ್ಯಮದವರಿಗೂ ಮಾಹಿತಿ ನೀಡದೆ ಮೌನ ವಹಿಸಿದ್ದು, ಎರಡನೇ ದಿನ ಸಾರ್ವಜನಿಕರು ಬಲವಾಗಿ ಪ್ರಶ್ನಿಸತೊಡಗಿದ ತರುವಾಯವಷ್ಟೆ ಪೋಸ್ಟ್ ಮಾರ್ಟಂ ಮಾಡಿಸಿದ್ದು, ಎರಡನೆಯ ದೂರುದಾರನಾಗಿ ಗುಂಪು ಹತ್ಯೆಯ ತಂಡದ ಒಡನಾಟದಲ್ಲಿರುವ ಕೇಶವ ಎಂಬಾತನನ್ನು ಆಯ್ಕೆ ಮಾಡಿಕೊಂಡದ್ದು, ಆತ 30 ಗಂಟೆಗಳ ತರುವಾಯ ನೀಡಿದ ದೂರಿನಲ್ಲಿ ಪಾಕಿಸ್ತಾನದ ಉಲ್ಲೇಖ ಇರುವುದು ಪೊಲೀಸ್ ಇಲಾಖೆ ಪ್ರಕರಣವನ್ನು ಮುಚ್ಚಿಹಾಕುವ, ಮಾಬ್ ಲಿಂಚಿಂಗ್‌ನ ಕೋಮುವಾದಿ ಗೂಂಡಾ ಪಡೆಯನ್ನು ರಕ್ಷಿಸುವ ಪ್ರಜ್ಞಾಪೂರ್ವಕ ಪ್ರಯತ್ನ ನಡೆಸಿದೆ ಎಂಬುದಕ್ಕೆ ಪ್ರಬಲ ಸಾಕ್ಷ್ಯಗಳನ್ನು ಒದಗಿಸುತ್ತದೆ. ಪೊಲೀಸರಿಗೆ ಇಂತಹ ಅತಿ ಗಂಭೀರ ಪ್ರಕರಣದಲ್ಲಿ ದೂರು ಬರೆಸಿಕೊಳ್ಳಲು ಪ್ರಕರಣದಲ್ಲಿ ಭಾಗಿಯಾದ ಗುಂಪಿನ ಸದಸ್ಯರಲ್ಲದೆ ಬೇರೆ ಯಾರೂ ಸಿಗಲಿಲ್ಲವೆ, ಸುವೋ-ಮೋಟೊ ದೂರು ದಾಖಲಿಸಿಕೊಳ್ಳುವ ಸಾಧ್ಯತೆಯು ಇರಲಿಲ್ಲವೆ? ಎಂದು ಮುನೀರ್ ಕಾಟಿಪಳ್ಳ ಪ್ರಶ್ನಿಸಿದ್ದಾರೆ.
ಇದನ್ನು ಓದಿದ್ದೀರಾ? ಮಂಗಳೂರು ಘಟನೆ | ‘ಪಾಕಿಸ್ತಾನ್ ಜಿಂದಾಬಾದ್’ ಹೇಳಿಕೆ ನನ್ನದಲ್ಲ, ಕೊಲೆ ಆರೋಪಿಗಳದ್ದು: ಗೃಹ ಸಚಿವ ಪರಮೇಶ್ವರ್
ಈ ಎಲ್ಲಾ ಅಂಶಗಳನ್ನು ರಾಜ್ಯ ಸರಕಾರ ಗಂಭೀರವಾಗಿ ಪರಿಗಣಿಸಬೇಕು, ಜಿಲ್ಲೆಯ ಹೊರಗಿನ ಹಿರಿಯ, ಪ್ರಾಮಾಣಿಕ, ವಿಶ್ವಾಸಾರ್ಹ, ಐಪಿಎಸ್ ಅಧಿಕಾರಿಯ ನೇತೃತ್ವದಲ್ಲಿ ಈ ಪ್ರಕರಣ ತನಿಖೆಗೆ ವಿಶೇಷ ತನಿಖಾ ತಂಡ ನೇಮಿಸಬೇಕು. ಹಾಗೆಯೇ, ಪ್ರಕರಣ ಮುಚ್ಚಿ ಹಾಕಲು ಪೊಲೀಸ್ ಇಲಾಖೆ ನಡೆಸಿರುವ ಪ್ರಯತ್ನಗಳನ್ನು ಬಯಲಿಗೆಳೆಯಲು ಪ್ರತ್ಯೇಕ ತನಿಖೆ ನಡೆಸಬೇಕು ಎಂದು ಸಿಪಿಐಎಂ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಆಗ್ರಹಿಸುತ್ತದೆ. ಗಂಭೀರ ಕರ್ತವ್ಯ ಲೋಪ ಎಸಗಿರುವ ವಾಮಂಜೂರು ಠಾಣಾಧಿಕಾರಿ ಶಿವ ಪ್ರಸಾದ್, ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಅವರನ್ನು ಅಮಾನತುಗಳಿಸಬೇಕು ಎಂಬುದು ನಮ್ಮ ಒತ್ತಾಯವಾಗಿದೆ ಎಂದು ಸಿಪಿಐಎಂ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ತಿಳಿಸಿದ್ದಾರೆ.