ಸರಕಾರಿ ಭೂಮಿ ಅಥವಾ ಅತಿಕ್ರಮಿತ ಭೂಮಿಯನ್ನು ಖರೀದಿಸಿ ಮೋಸ ಹೋಗದಂತೆ ಜನರನ್ನು ಎಚ್ಚರಿಸಲು ಕಂದಾಯ ಇಲಾಖೆಯ ಅಡಿಯಲ್ಲಿ ‘ದಿಶಾಂಕ್’ ಎಂಬ ಆಂಡ್ರಾಯ್ಡ್ ಆ್ಯಪ್ ಇದೆ. ಭೂಗಳ್ಳರು, ಅತಿಕ್ರಮಣಕಾರರ ಹಾವಳಿ ತಡೆಗೂ ಇದು ನೆರವಾಗುವ ಉದ್ದೇಶದಿಂದ ಇದನ್ನು ಕರ್ನಾಟಕ ಸರ್ಕಾರವು ಮಾರ್ಚ್ 2018ರಿಂದ ರಾಜ್ಯ ಜಾರಿಗೆ ತಂದಿದೆ. ಸರಳವಾಗಿ ಹೇಳಬೇಕೆಂದರೆ ಇದು ಭೂನಕ್ಷೆ ತಿಳಿಸುವ ಸರ್ಕಾರಿ ಸ್ವಾಮ್ಯದ ಆ್ಯಪ್ ಇದಾಗಿದ್ದು, ಸರ್ವೆ ಇಲಾಖೆಯ ಅತ್ಯುತ್ತಮ ತಂತ್ರಾಂಶವಾಗಿದೆ. ಇದು ರಾಜ್ಯದ 30 ಜಿಲ್ಲೆಗಳ ಪ್ರತಿಭೂಭಾಗದ ಮಾಹಿತಿ, ಸರ್ವೆ ನಂಬರ್ ಒಳಗೊಂಡಿದೆ.
ಆದರೆ, ಸರ್ಕಾರದ ಈ ‘ದಿಶಾಂಕ್ ಆ್ಯಪ್’ನಲ್ಲಿ ಇಡೀ ಗ್ರಾಮವೇ ನಾಪತ್ತೆಯಾಗಿದೆ ಎಂದರೆ ನೀವು ನಂಬಬೇಕು. ಇಡೀ ಗ್ರಾಮವೇ ನಕ್ಷೆಯಲ್ಲಿ ದಿಶಾಂಕ್ ಆ್ಯಪ್‌ನಲ್ಲಿ ಇಲ್ಲ ಎಂಬ ವಿಚಾರ ತಿಳಿದಿರುವ ಗ್ರಾಮಸ್ಥರು, ಆತಂಕಕ್ಕೀಡಾಗಿದ್ದಾರೆ. ಹೇಳಲು ಹೊರಟಿರುವುದು ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಕಮತೂರು ಗ್ರಾಮದ ಕಥೆ.

ಸಂಡೂರು ತಾಲೂಕಿನ ಕಮತೂರು ಗ್ರಾಮದಲ್ಲಿ ಸುಮಾರು 400 ಕುಟುಂಬಗಳು ಜೀವನ ಸಾಗಿಸುತ್ತಿವೆ. ಆದರೆ ಸರಕಾರದ ನಕ್ಷೆಯಲ್ಲಿ ಈ ಗ್ರಾಮವು ಹೆಸರು ಸೇರ್ಪಡೆಯಾಗಿಲ್ಲ. ಜೊತೆಗೆ ಇಲ್ಲಿನ ಗ್ರಾಮದವರು ಮೂಲಭೂತ ಸೌಲಭ್ಯದಿಂದಲೂ ವಂಚಿತರಾಗಿದ್ದಾರೆ.
ಸ್ಮಯೋರ ಕಂಪನಿ ಹಾಗೂ ಇನ್ನೂ ಒಂದೆರಡು ಕಂಪನಿಗಳ ಗಣಿನಾಡು ಕೊನೆಯ ಭಾಗದಲ್ಲಿರುವ ಗ್ರಾಮವೇ ಕಮತೂರು ಗ್ರಾಮವಾಗಿದೆ. ಇಲ್ಲಿನ ಜನರು ಕಂಪನಿ ಟಿಪ್ಪರ್‌ಗಳ ಧೂಳಿನಿಂದ, ಕಂಪನಿ ನಡೆಸುತ್ತಿರುವ ಬ್ಲಾಸ್ಟ್‌ನ ಶಬ್ದದಿಂದ ಬೇಸತ್ತು ಸಾಕಷ್ಟು ಕುಟುಂಬಗಳು ಬೀದಿ ಪಾಲಾಗಿ ಊರು ತೊರೆದಿದ್ದಾರೆ ಎನ್ನುತ್ತಾರೆ ಗ್ರಾಮದವರು.
ಇದರ ಬಗ್ಗೆ ಗ್ರಾಮದ ನಿವಾಸಿ ಮಾಳಗಿ ಪನ್ನೆಪ್ಪ ಮಾತನಾಡಿ, “ಇಡೀ ಗ್ರಾಮದಲ್ಲಿ ಜನರ ಭೂಮಿಗಳನ್ನು ನಕ್ಷೆಯಲ್ಲಿ ತೋರಿಸುತ್ತಿಲ್ಲ. ಇಲ್ಲಿರುವ ಯಾವುದೇ ದಿಶಾಂಕ್ ಆ್ಯಪ್‌ನಲ್ಲಿ ಬರುತ್ತಿಲ್ಲ ನಾವು ಇಲ್ಲಿ ಸ್ವಂತ ಮನೆ ಎಂದು ಇದ್ದರು ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎನ್ನುವು ಆತಂಕದಲ್ಲಿದ್ದೇವೆ. ಸ್ಮಯೋರ ಕಂಪನಿಯವರು ಕೆಲವು ಜಮೀನಗಳನ್ನು ತಮ್ಮ ಹೆಸರು ಮೇಲೆ ನೋಂದಾಯಿಸಿಕೊಂಡಿದ್ದಾರೆ. ಹಾಗಾಗಿ ಕಮತೂರು ಗ್ರಾಮವು ಸರ್ವೇ ಸೆಟ್ಟಲ್ಮೆಂಟ್ ನಕ್ಷೆಯಲ್ಲಿ ತೋರಿಸಬೇಕು” ಎಂದು ಒತ್ತಾಯಿಸಿದ್ದಾರೆ.
ಹಿಂದೆ ಕೆಲವರ ಹೆಸರಿನಲ್ಲಿದ್ದ ಜಮೀನುಗಳು 2014ರಲ್ಲಿ ಸ್ಮಯೋರ ಕಂಪನಿಯು ತನ್ನ ಹೆಸರಲ್ಲಿ ಪಹಣಿ ಪಡೆದುಕೊಂಡಿದೆ. ಕಂಪನಿಯವರಿಂದ ನಮ್ಮ ಮೇಲೆ ದಬ್ಬಾಳಿಕೆ, ದೌರ್ಜನ್ಯ ಮುಂದುವರೆಯುತ್ತಿದೆ. ನಾವು ಮೂಲಭೂತ ಸೌಕರ್ಯದಿಂದ ನಾವು ವಂಚಿತರಾಗಿದ್ದೇವೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.
ಇಲ್ಲಿ ಯಾವ ಶಾಸಕರೂ, ಸಂಸದರು ಕೂಡ ನಮ್ಮ ಸಮಸ್ಯೆ ಬಗ್ಗೆ ಕೇಳುವುದಿಲ್ಲ. ಬಗೆಹರಿಸಲು ಕೂಡ ಮುಂದಾಗುತ್ತಿಲ್ಲ. ಇಡೀ ಗ್ರಾಮವೇ ನಕ್ಷೆಯಲ್ಲಿ ಬರಬೇಕು. ಯಾರ ಜಮೀನು ಯಾರದು ಎಂದು ಗುರುತಿಸೋಕೆ ಆಗಬೇಕು. ಇದಕ್ಕಾಗಿ ಕಂದಾಯ ಇಲಾಖೆ ಸರ್ವೇ ಮಾಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಸರ್ವೆ ಮಾಡಿ, ಸರಿಯಾದ ಜಮೀನಿನ ಬಗ್ಗೆ ಮಾಹಿತಿ ನೀಡದೇ ಇದ್ದರೆ ಮುಂದಿನ ದಿನಗಳಲ್ಲಿ ಕಂಪನಿ ಹಾಗೂ ಗ್ರಾಮಸ್ಥರ ಮಧ್ಯೆ ದೊಡ್ಡ ಮಟ್ಟದಲ್ಲಿ ಗಲಾಟೆ ಸಂಭವಿಸಬಹುದು ಎಂದು ಕೆಲವು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.
ಏನಿದು ದಿಶಾಂಕ್ ಆ್ಯಪ್?
ಮೆಗಾ ಲ್ಯಾಂಡ್ ರೆಕಾರ್ಡ್ ಡಿಜಿಟಲೀಕರಣ ಕಾರ್ಯಕ್ರಮದ ಅಡಿಯಲ್ಲಿ, ಕರ್ನಾಟಕ ಸರ್ಕಾರವು ಮಾರ್ಚ್ 2018 ರಲ್ಲಿ ದಿಶಾಂಕ್ ಎಂಬ ಅಪ್ಲಿಕೇಶನ್ ಮೂಲಕ ಭೂಮಿ ಮತ್ತು ಆಸ್ತಿಯ ಪ್ರಮುಖ ವಿವರಗಳನ್ನು ಒದಗಿಸಲು ಅಪ್ಲಿಕೇಶನ್ ಅನ್ನು ಪ್ರಾರಂಭಿಸಿತ್ತು. ಈ ಅಪ್ಲಿಕೇಶನ್ ಅನ್ನು ಪ್ರಾರಂಭಿಸಲು ರಾಜ್ಯದ ಪ್ರಾಥಮಿಕ ಉದ್ದೇಶವೆಂದರೆ ಕರ್ನಾಟಕದಲ್ಲಿ ಆಸ್ತಿ-ಸಂಬಂಧಿತ ವಂಚನೆಗಳ ಸಂಖ್ಯೆಯನ್ನು ಕಡಿಮೆ ಮಾಡುವುದು ಮತ್ತು ಆಸ್ತಿ ಖರೀದಿದಾರರು ಮತ್ತು ಹೂಡಿಕೆದಾರರಿಗೆ ಭೂ ದಾಖಲೆಗಳಿಗೆ ಸುಲಭ ಪ್ರವೇಶವನ್ನು ಒದಗಿಸುವುದು. ಅಪ್ಲಿಕೇಶನ್‌ನ ಅಧಿಕೃತ ಹೆಸರು ದಿಶಾಂಕ್ ಆಗಿದ್ದರೂ, ಇದನ್ನು ಕೆಲವೊಮ್ಮೆ ದಿಶಾಕ್ ಅಪ್ಲಿಕೇಶನ್ ಎಂದು ಸಹ ಉಚ್ಚರಿಸಲಾಗುತ್ತದೆ.
ಇದನ್ನು ರೂಪಿಸಿದವರು ಬೆಂಗಳೂರಿನ ಸರ್ವೇ ಕಮಿಶನರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಐಎಎಸ್ ಅಧಿಕಾರಿ ಮುನೀಶ್ ಮೌದ್ಗಿಲ್.

ರಫಿ ಗುರುಗುಂಟ
ಗುಲಬರ್ಗಾ ವಿವಿಯಿಂದ ಪತ್ರಿಕೋದ್ಯಮದಲ್ಲಿ ಎಂ ಎ ಪದವಿ, ಕಲ್ಯಾಣ ಕರ್ನಾಟಕ ವಲಯ ಕೋರ್ಡಿನೇಟರ್