ಹುಲಸೂರ ತಾಲೂಕಿನ ಮಿರಕಲ್ ತಾಂಡಾ ಜನರು ಸಾಗುವಳಿ ಮಾಡಿಕೊಂಡು ಬರುತ್ತಿರುವ ಕೃಷಿ ಭೂಮಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಒತ್ತುವರಿ ಮಾಡುತ್ತಿರುವುದನ್ನು ಕೂಡಲೇ ತಡೆ ಹಿಡಿಯಬೇಕೆಂದು ಆಗ್ರಹಿಸಿ ರೈತರು ಪ್ರತಿಭಟನೆ ನಡೆಸಿದರು.
ಈ ಕುರಿತು ಹುಲಸೂರ್ ಪಟ್ಟಣದ ತಹಸೀಲ್ ಕಚೇರಿ ಮುಂಭಾಗದಲ್ಲಿ ಜಮಾಯಿಸಿದ ರೈತರು ಭಾರತೀಯ ದಲಿತ ಪ್ಯಾಂಥರ್ ನೇತ್ರತ್ವದಲ್ಲಿ ತಹಸೀಲ್ದಾರ್ ಶಿವಾನಂದ ಮೇತ್ರೆ ಅವರಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದರು.
ʼಹಲವು ವರ್ಷಗಳಿಂದ ಉಳುಮೆ ಮಾಡಿಕೊಂಡು ಬರುತ್ತಿರುವ ಸಿ.ಫಾರಂ ಮಂಜೂರಾತಿಯ ಕೃಷಿ ಭೂಮಿಯನ್ನು ಏಕಾಏಕಿಯಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಅನಧಿಕೃತವಾಗಿ ಒತ್ತುವರಿ ಮಾಡಿಕೊಳ್ಳಲು ಮುಂದಾಗಿದ್ದಾರೆ. ಕೆಲವು ದಿನಗಳಿಂದ ನಮ್ಮ ಭೂಮಿಯಲ್ಲಿ ಬೆಳೆದ ಬೆಳೆ ನಾಶಪಡಿಸಿ ಬೋಲ್ಡೊಜರ್‌ದಿಂದ ಗುಂಡಿ ಅಗೆಯುತ್ತಿದ್ದಾರೆ. ಇದರಿಂದ ನಮಗೆ ಭೂಮಿ ಕಳೆದುಕೊಳ್ಳುವ ಆತಂಕ ಶುರುವಾಗಿದೆʼ ಎಂದು ಗೋಳು ತೋಡಿಕೊಂಡರು.
ʼನಮ್ಮ ಬದುಕಿಗೆ ಆಧಾರ ಆಗಿರುವ ಉಳುಮೆ ಭೂಮಿ ಕಸಿದುಕೊಂಡರೆ ನಾವು ಜೀವನ ಸಾಗಿಸಲು ಸಾಧ್ಯವಿಲ್ಲ. ಯಾವುದೇ ಮಾಹಿತಿ ನೀಡದೇ ಭೂಮಿ ಕಸಿದುಕೊಂಡರೆ ನಾವು ಬೀದಿಪಾಲಾಗುತ್ತೇವೆ. ಹೀಗಾಗಿ ಕೂಡಲೇ ಅರಣ್ಯ ಇಲಾಖೆಯಿಂದ ನಡೆಯುತ್ತಿರುವ ಭೂಮಿ ಒತ್ತುವರಿ ಕೂಡಲೇ ತಡೆಹಿಡಿಯಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ರೈತರು ಎಚ್ಚರಿಸಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಮನರೇಗಾ ಮಾನವ ದಿನ 200ಕ್ಕೆ ಹೆಚ್ಚಿಸಲು ಗ್ರಾಕೂಸ್ ಆಗ್ರಹ
ಈ ಸಂದರ್ಭದಲ್ಲಿ ಭಾರತೀಯ ದಲಿತ ಪ್ಯಾಂಥರ್ ತಾಲೂಕಾಧ್ಯಕ್ಷ ಅಶೋಕ ಸಿಂಧೆ, ಅಶೋಕ ಹಾಲಹಳ್ಳಿ, ದೇವಾನಂದ ಟೋಳೆ, ಸತಿಷ ಗಾಯಕವಾಡ, ದತ್ತಾ ಮೋರೆ, ಲೋಕೇಶ ಮೋರೆ, ಅಶೋಕ ಕಾಂಬಳೆ, ಸುಭಾಷ ರಾಠೋಡ್ ಸೇರಿದಂತೆ ಮಿರಕಲ್ ತಾಂಡಾದ ರೈತರು ಇದ್ದರು.